logo
ಕನ್ನಡ ಸುದ್ದಿ  /  ಕರ್ನಾಟಕ  /  Power Tariff Hike: ಹೆಚ್ಚಿಸಿದ ವಿದ್ಯುತ್‌ ದರ ಪಾವತಿ ಕಷ್ಟ: ಚೆಸ್ಕಾಂಗೆ ಮನವರಿಕೆ ಮಾಡಿಕೊಟ್ಟ ಕೈಗಾರಿಕೋದ್ಯಮಿಗಳು

Power Tariff Hike: ಹೆಚ್ಚಿಸಿದ ವಿದ್ಯುತ್‌ ದರ ಪಾವತಿ ಕಷ್ಟ: ಚೆಸ್ಕಾಂಗೆ ಮನವರಿಕೆ ಮಾಡಿಕೊಟ್ಟ ಕೈಗಾರಿಕೋದ್ಯಮಿಗಳು

HT Kannada Desk HT Kannada

Jun 16, 2023 10:48 AM IST

google News

ಮೈಸೂರಿನಲ್ಲಿ ಚೆಸ್ಕಾಂ ಎಂಡಿ ಅವರನ್ನು ಭೇಟಿ ಮಾಡಿದ ಕೈಗಾರಿಕೋದ್ಯಮಿಗಳು ವಿದ್ಯುತ್‌ ದರ ಏರಿಕೆ ಕುರಿತು ಚರ್ಚಿಸಿದರು.

    • ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲಾ ಕೈಗಾರಿಕೆಗಳ ಸಂಘದ ಪ್ರತಿನಿಧಿಗಳು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪೆನಿ( ಚೆಸ್ಕಾಂ) ಎಂಡಿ ಜಯವಿಭವಸ್ವಾಮಿ ಅವರನ್ನು ಭೇಟಿ ಮಾಡಿ ವಿದ್ಯುತ್ ದರ ಹೆಚ್ಚಳದ ಇರುವ ಗೊಂದಲದ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.
ಮೈಸೂರಿನಲ್ಲಿ ಚೆಸ್ಕಾಂ ಎಂಡಿ ಅವರನ್ನು ಭೇಟಿ ಮಾಡಿದ ಕೈಗಾರಿಕೋದ್ಯಮಿಗಳು ವಿದ್ಯುತ್‌ ದರ ಏರಿಕೆ ಕುರಿತು ಚರ್ಚಿಸಿದರು.
ಮೈಸೂರಿನಲ್ಲಿ ಚೆಸ್ಕಾಂ ಎಂಡಿ ಅವರನ್ನು ಭೇಟಿ ಮಾಡಿದ ಕೈಗಾರಿಕೋದ್ಯಮಿಗಳು ವಿದ್ಯುತ್‌ ದರ ಏರಿಕೆ ಕುರಿತು ಚರ್ಚಿಸಿದರು.

ಮೈಸೂರು: ವಿದ್ಯುತ್‌ ದರ ಏರಿಕೆ ಕುರಿತು ಒಂದು ವಾರದೊಳಗೆ ಸರ್ಕಾರದಿಂದ ಸೂಕ್ತ ನಿರ್ಣಯ ಬರುವ ನಿರೀಕ್ಷೆಯಲ್ಲಿದ್ದೇವೆ. ನಮಗೆ ವಿದ್ಯುತ್‌ ದರ ಪಾವತಿಸಲು ಆಗುವುದಿಲ್ಲ.

ಇದು ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲಾ ಕೈಗಾರಿಕೆಗಳ ಸಂಘದ ಪ್ರತಿನಿಧಿಗಳು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪೆನಿ( ಚೆಸ್ಕಾಂ) ಪ್ರಮುಖರ ಎದುರು ವ್ಯಕ್ತಪಡಿಸಿದ ಅಭಿಪ್ರಾಯ.

ಸಂಘದ ಅಧ್ಯಕ್ಷ, ಮಾಜಿ ಶಾಸಕ ವಾಸು ಅವರ ನೇತೃತ್ವದಲ್ಲಿ ಹಲವು ಕೈಗಾರಿಕೋದ್ಯಮಿಗಳು ಚೆಸ್ಕಾಂ ಎಂಡಿ ಜಯವಿಭವಸ್ವಾಮಿ ಅವರನ್ನು ಭೇಟಿ ಮಾಡಿ ಒಂದೂವರೆ ಗಂಟೆಗೂ ಅಧಿಕ ಅವಧಿ ನೆಡೆದ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿದರು.

ಚೆಸ್ಕಾಂ ಎಂ ಡಿ ಮತ್ತು ಅಧಿಕಾರಿಗಳು ವಿದ್ಯುತ್ ದರ ಹೆಚ್ಚಳದ ಬಗ್ಗೆ ಕೈಗಾರಿಕೋದ್ಯಮಿಗಳಿಗೆ ಇರುವ ಗೊಂದಲದ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.

ಚೆಸ್ಕಾಂ ಇತಿಹಾಸದಲ್ಲಿ ಮೊದಲ ಬಾರಿಗೆ ಅತ್ಯಂತ ಹೆಚ್ಚು ವಿದ್ಯುತ್ ದರ ಏರಿಕೆ ಯಾದ ಜೂನ್ 2023 ರ ಬಿಲ್ಲಿನ ಹೆಚ್ಚುವರಿ ದರದ ಮೊತ್ತ ಪಾವತಿಸಲು ಸಾಧ್ಯವಿಲ್ಲ. ಅದರ ಬದಲು ಕೈಗಾರಿಕೆಗಳನ್ನು ಮುಚ್ಚುವುದೇ ಉತ್ತಮ ಎನ್ನುವ ಅಭಿಪ್ರಾಯವನ್ನು ಬಹುತೇಕರು ವ್ಯಕ್ತಪಡಿಸಿದರು.

ಉದ್ಯಮಿಗಳು ಕ್ರಾಸ್ ಸಬ್ಸಿಡಿ ಸಹಿತ ವಿದ್ಯುತ್ ದರ ಪಾವತಿಸುತ್ತಿದ್ದೇವೆ.ಆದರೆ ನಮಗೇ ಇಷ್ಟು ಹೆಚ್ಚಳ ಮಾಡಿದರೆ ಬಿಲ್ ಕಟ್ಟುವುದು ಹೇಗೆ? ಎಂದು ಪ್ರಶ್ನಿಸುತ್ತಲೇ ಸರ್ಕಾರದಿಂದ ಎಲ್ಲಾ ವಿದ್ಯುತ್ ಗ್ರಾಹಕರ ಪರವಾದ ಆದೇಶ ಬರುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬಾರದೆಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಎಂಡಿ, ವಿದ್ಯುತ್ ಉತ್ಪಾದನಾ ಘಟಕಗಳ ಕಲ್ಲಿದ್ದಲು ಖರೀದಿ ದರದ ಹೊರೆಯನ್ನು ವಿದ್ಯುತ್ ಸರಬರಾಜು ಕಂಪನಿಯೇ ಭರಿಸಬೇಕಾಗುತ್ತದೆ . ಹಿಂದಿನ ತಿಂಗಳುಗಳ ಇಂಧನ ವ್ಯತ್ಯಾಸದ ಶುಲ್ಕ ತಾಂತ್ರಿಕ ಕಾರಣಗಳಿಂದ ವಸೂಲು ಮಾಡಲಾಗಿಲ್ಲ. ಜೂನ್ ತಿಂಗಳಲ್ಲಿ ಅನಿವಾರ್ಯವಾಗಿ ಮಾಡಬೇಕಾಗಿದೆ . ಮುಂದಿನ ತಿಂಗಳು ಈ ಪ್ರಮಾಣದ ಇಂಧನ ಶುಲ್ಕ ವಸೂಲಿ ಮಾಡಲಾಗುವುದಿಲ್ಲ. ನಮ್ಮ ಪರಿಸ್ಥಿತಿ ಅರ್ಥೈಸಿಕೊಂಡು ಉದ್ಯಮಿಗಳು ಸಹಕರಿಸಿ ಎಂದು ಕೋರಿದರು.

ಗೃಹ ಜ್ಯೋತಿ 200 ಯುನಿಟ್ ಉಚಿತ ನೀಡುವುದಕ್ಕೆ ಈ ಇಂಧನ ದರ ಏರಿಕೆಗೆ ಯಾವುದೇ ರೀತಿಯ ಸಂಬಂಧವಿಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ವಿದ್ಯುತ್ ದರ ಕಡಿಮೆ ಇದೆ. ಕರ್ನಾಟಕ ರಾಜ್ಯಕ್ಕಿಂತ ಮಹಾರಾಷ್ಟ್ರದಲ್ಲಿ ಹೆಚ್ಚಿನ ವಿದ್ಯುತ್ ದರ ಇದೆ ಎಂದು ವಿವರಿಸಿದರು.

ಮೈಸೂರು ಕೈಗಾರಿಕೆಗಳ ಸಂಘ ದ ಅಧ್ಯಕ್ಷ ವಾಸು ಅವರು ಚೆಸ್ಕಾಂ ಇಂಧನ ಹೊಂದಾಣಿಕೆ ಶುಲ್ಕ 2.42 ರೂಪಾಯಿ ,ವಿದ್ಯುತ್ ದರ 70 ಪೈಸೆ ಏರಿಕೆ ಯಾಗಿರುವುದರ ಬಗ್ಗೆ ಒಂದುವಾರದಲ್ಲಿ ನಿರ್ಣಯ ಕೈಗೊಳ್ಳೋಣ. ವಿದ್ಯುತ್ ಸರಬರಾಜು ಕಾಯಿದೆ ಪರಿಣಿತರು ,ಕಾನೂನು ತಜ್ಞರು ಹಾಗೂ ಪ್ರಮುಖ ಉದ್ಯಮಿ ಗಳೊಡನೆ ಸಮಾಲೋಚಿಸಿ ಒಂದು ವಾರದಲ್ಲಿ ವಿದ್ಯುತ್ ದರ ಏರಿಕೆ ಸಮಸ್ಯೆ ಗೆ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸೋಣ ಎಂದು ಸಲಹೆ ನೀಡಿದರು.

ಇದನ್ನೂ ಓದಿರಿ..

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ