logo
ಕನ್ನಡ ಸುದ್ದಿ  /  ಕರ್ನಾಟಕ  /  Mysuru Dasara 2023 Live: ಇಂದಿನಿಂದ ಮೈಸೂರು ದಸರಾ ಸಡಗರ: ತೆರೆದುಕೊಳ್ಳಲಿದೆ ಕರ್ನಾಟಕದ ವೈಭವದ ಲೋಕ
ಹತ್ತು ದಿನಗಳ ಮೈಸೂರು ಸಡಗರಕ್ಕೆ ಭಾನುವಾರ ಚಾಲನೆ ಸಿಗಲಿದೆ.

Mysuru Dasara 2023 Live: ಇಂದಿನಿಂದ ಮೈಸೂರು ದಸರಾ ಸಡಗರ: ತೆರೆದುಕೊಳ್ಳಲಿದೆ ಕರ್ನಾಟಕದ ವೈಭವದ ಲೋಕ

Oct 15, 2023 09:09 PM IST

Mysore Dasara 2023 Live Update ನವರಾತ್ರಿ ಹಬ್ಬದ ಸಡಗರ ಶುರುವಾಗಿದೆ. ಕರ್ನಾಟಕದಲ್ಲಿ ದಸರಾ ಎಂದರೆ ಮೈಸೂರು ಎನ್ನುವಷ್ಟರ ಮಟ್ಟಿಗೆ ಅದರ ವೈಭವ, ಸಂಭ್ರಮ. ಮೈಸೂರು ದಸರಾ ಉದ್ಘಾಟನೆಯೊಂದಿಗೆ ಹತ್ತು ದಿನಗಳ ನಿರಂತರ, ಭಿನ್ನ ಚಟುವಟಿಕೆಗಳು ಅನಾವರಣಗೊಳ್ಳುತ್ತವೆ. ಈ ಬಾರಿಯೂ ಬರದ ನಡುವೆ ಸಾಂಪ್ರದಾಯಿಕವಾಗಿ ದಸರಾ ಆಚರಣೆ ನಡೆಸಲಾಗುತ್ತಿದೆ.

Oct 15, 2023 08:16 PM IST

ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವ ವಿಖ್ಯಾತ ದಸರಾ ಪ್ರಯುಕ್ತ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.

ಬಳಿಕ ಡಾ.ಪದ್ಮಾಮೂರ್ತಿ ಅವರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ.ಎಸ್.ಶ್ರೀವತ್ಸ ಅವರು ಅಧ್ಯಕ್ಷತೆ ವಹಿಸಿದ್ದರು. ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ದೀಪಾಲಂಕಾರವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಮಹಾಪೌರರಾದ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತು ಶಾಸಕರುಗಳು ಉಪಸ್ಥಿತರಿದ್ದರು.

Oct 15, 2023 07:01 PM IST

ದಸರಾ ಪುಸ್ತಕ ಮೇಳಕ್ಕೆ ಚಾಲನೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ-2023 ಸಂಯುಕ್ತಾಶ್ರಯದಲ್ಲಿ ಮೈಸೂರು ದಸರಾ ಮಹೋತ್ಸವ -2023ರ ಅಂಗವಾಗಿ “ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ – 2023”ನ್ನು ಮೈಸೂರು ವಿವಿ ಓವಲ್ ಗ್ರೌಂಡ್ ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಉದ್ಘಾಟನೆ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ ಹಾಗೂ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್ ಉಪಸ್ಥಿತರಿದ್ದರು.

Oct 15, 2023 06:44 PM IST

ದಸರಾ ಆನೆಗಳಿಗೆ ಪೂಜೆ

ಶ್ರೀರಂಗಪಟ್ಟಣ ದಸರಾ ಹಿನ್ನಲೆ ಆಗಮಿಸಿರುವ ಮೂರು ಆನೆಗಳಿಗೆ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಹತ್ತಿರ ಶಾಸಕ ಎ.ಬಿ.ರಮೇಶ ಬಂಡೀಸಿದ್ದೇಗೌಡ ಅವರು ಭಾನುವಾರ ಸಂಜೆ ಪೂಜೆ ಸಲ್ಲಿಸಿದರು.

ಮಹೇಂದ್ರ, ವರಲಕ್ಷ್ಮಿ, ಹಾಗೂ ವಿಜಯಾ ಮೂರು ಆನೆಗಳಿಗೆ ಜಿಲ್ಲಾಡಳಿತದಿಂದ ಬೆಲ್ಲ, ಕಬ್ಬು ಮುಂತಾದ ಆಹಾರದ ವ್ಯವಸ್ಥೆ ಮಾಡಲಾಗಿದೆ.

Oct 15, 2023 06:19 PM IST

ಮೈಸೂರಲ್ಲಿ ಕುಸ್ತಿ ಆಡಿಸಿ ಪಂದ್ಯಾವಳಿ ಉದ್ಘಾಟಿಸಿದ ಸಿಎಂ

Oct 15, 2023 06:15 PM IST

ದಸರಾ: ನಾಡಿನ ದೇವತೆಗಳಿಗೆ ಮೊದಲ ದಿನದ ಅಲಂಕಾರ

ನವರಾತ್ರಿಯ ಮೊದಲ ದಿನವಾದ ಭಾನುವಾರ ಕರ್ನಾಟಕದ ಹಲವು ದೇಗುಲಗಳಲ್ಲಿ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.

ಮೈಸೂರಿನ ಚಾಮುಂಡಿಬೆಟ್ಟ, ಬಾದಾಮಿಯ ಬನಶಂಕರಿ, ಕೊಲ್ಲೂರು ಮೂಕಾಂಬಿಕೆ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಅಲಂಕಾರ ಗಮನ ಸೆಳೆದವು

Oct 15, 2023 06:13 PM IST

ದಸರಾ ಕುಸ್ತಿ ಪಂದ್ಯಾವಳಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು:ನಗರ ವಸ್ತು ಪ್ರದರ್ಶನ ಪ್ರಾಧಿಕಾರದ ದೇವರಾಜು ಅರಸು ವಿವಿದೋದೇಶ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದಸರಾ ಕುಸ್ತಿ ಪಂದ್ಯಾವಳಿಯನ್ನು ಕುಸ್ತಿ ಗಧೆಯನ್ನು ಎತ್ತುವ ಮೂಲಕ ಮುಖ್ಯ ಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

ದಾವಣಗೆರೆಯ ಪೈಲ್ವಾನ್ ಕಾರ್ತಿಕ್ ಕಾಟೆ v/s ದೆಹಲಿಯ ಪೈಲ್ವಾನ್ವಿ ವಿಕಿ ಅವರ ನಡುವೆ ನಡೆದ ಕುಸ್ತಿ ಪಂದ್ಯಾವಳಿಯನ್ನು ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ, ವೀಕ್ಷಿಸಿದರು.

ನಂತರ ಕುಸ್ತಿ ಪಟ್ಟು ಚಿಕ್ಕಳಿಯ ಪೈಲ್ವಾನ್ ರವಿ ಮತ್ತು ಪೈಲ್ವಾನ್ ಪವನ್ ಅವರ ನಡುವೆ ನಡೆಯಿತು.

ಆರಂಭಿಕ ಕುಸ್ತಿ ಪಂದ್ಯಾವಳಿಯು ದಾವಣಗೆರೆಯ ಪೈಲ್ವಾನ್ ಕಾರ್ತಿಕ್ ಕಾಟೆ v/s ದೆಹಲಿಯ ಪೈಲ್ವಾನ್ವಿ ವಿಕಿ, ಬೆಳಗಾಂ ನ ಸುನಿಲ್ ಪಡುತಾರೆ v/s ಪೈಲ್ವಾನ್ ರಾಹುಲ್ ರಾಟೆ ನಡುವೆ ನಡೆಯಲಿದೆ. ಬಾಲಕಿಯರ ವಿಭಾಗದಲ್ಲಿ ಬನ್ನೂರಿನ ಪೈಲ್ವಾನ್ ಜಾಹ್ನವಿ v/s ಮಂಡ್ಯದ ಪೈಲ್ವಾನ್ ಸ್ಫೂರ್ತಿ ಹಾಗೂ ರಮನಹಳ್ಳಿಯ ಪೈಲ್ವಾನ್ ಸಿಂಚನ v/s ಮಂಡ್ಯದ ಅಮೂಲ್ಯ ನಡುವೆ ಕುಸ್ತಿ ಪಂದ್ಯಾವಳಿಗಳ ಪ್ರಾರಂಭಗೊಂಡವು.

Oct 15, 2023 04:04 PM IST

ಸಂಜೆಯ ಸಡಗರಕ್ಕೆ ಅಣಿಯಾಗುತ್ತಿರುವ ಮೈಸೂರು

Oct 15, 2023 03:27 PM IST

ಮೈಸೂರಿಗೆ ದಸರಾ ಹೆಚ್ಚುವರಿ ರೈಲು

ಮೈಸೂರು: ಮೈಸೂರು ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು ಮೈಸೂರು-ಬೆಂಗಳೂರು ಮತ್ತು ಮೈಸೂರು-ಚಾಮರಾಜನಗರ ನಿಲ್ದಾಣಗಳ ನಡುವೆ ಕಾಯ್ದಿರಿಸದ ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ವಲಯವು ನಿರ್ಧರಿಸಿದೆ.

Oct 15, 2023 02:11 PM IST

ಆಹಾರ ವ್ಯರ್ಥವಾಗದಂತೆ ಸರ್ಕಾರದಿಂದ ನಿಯಮಾವಳಿ: ಮುನಿಯಪ್ಪ

ಮೈಸೂರು: ಮುಂದಿನ ದಿನಗಳಲ್ಲಿ ಆಹಾರ ವ್ಯರ್ಥವಾಗದಂತೆ ಸರ್ಕಾರದಿಂದ ನಿಯಮಾವಳಿಗಳನ್ನು ರೂಪಿಸಿ ಆಹಾರ ವ್ಯಕ್ತವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ ಹೆಚ್ ಮುನಿಯಪ್ಪ ಅವರು ತಿಳಿಸಿದರು.

ನಾಡಹಬ್ಬ ಮೈಸೂರು ದಸರಾ ಅಂಗವಾಗಿ ನಗರದ ಸ್ಕೌಟ್ ಅಂಡ್ ಗೈಡ್ಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ದಸರಾ ಆಹಾರ ಮೇಳ ಕಾರ್ಯಕ್ರಮವನ್ನು ಹಾಲು ಉಕ್ಕಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,ದೇಶದಲ್ಲಿ ಮೂರನೇ ಒಂದು ಭಾಗದಷ್ಟು ಆಹಾರ ವ್ಯರ್ಥವಾಗುತ್ತಿದೆ. ತಿನ್ನುವ ಹಕ್ಕು ನಮಗಿದೆ ಆದರೆ ಬಿಸಾಡುವ ಹಕ್ಕು ನಮಗಿಲ್ಲ. ಆಹಾರವನ್ನು ವ್ಯರ್ಥ ಮಾಡಬೇಡಿ ಎಂದರು.
ಇಂದು ಆಹಾರ ಮೇಳದಲ್ಲಿ 150 ಮಳಿಗೆಗಳನ್ನು ತೆರೆಯಲಾಗಿದೆ. ಆಹಾರವನ್ನು ಯಾರು ಕೂಡ ವ್ಯರ್ಥ ಮಾಡಬಾರದು. ಉಪಯುಕ್ತರು ಆಹಾರವನ್ನು ಬಳಸಿಕೊಳ್ಳಿ ಹೆಚ್ಚಿನ ರೀತಿ ಆಹಾರ ಪೋಲಾಗುವುದನ್ನು ತಪ್ಪಿಸಿ ಎಂದರು.

Oct 15, 2023 01:42 PM IST

ಮೌಲ್ಯಯುತ ಸಿನಿಮಾಗಳಿಗೆ ಸರ್ಕಾರದ ನೆರವು: ಸಿದ್ದರಾಮಯ್ಯ

ಮೈಸೂರು:ಬದುಕಿಗೆ ಮೌಲ್ಯಗಳನ್ನು ನೀಡುವ ಸಿನಿಮಾಗಳು ಹೆಚ್ಚೆಚ್ಚು ಬರಬೇಕು. ಅವು ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಮೈಸೂರು ದಸರಾ ಸಿನಿಮೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಗುಣಮಟ್ಟದ ಸಿನಿಮಾಗಳಿಗೆ ಸರ್ಕಾರ ಸದಾ ನೆರವು ನೀಡುತ್ತದೆ. ಜನಪರ ಸಿನಿಮಾ ಮಾಡುವವರಿಗೆ ಸರ್ಕಾರದ ಸಹಾಯಹಸ್ತ ಸದಾ ಇರುತ್ತದೆ ಎಂದರು.

ಹಾಸ್ಯ ನಟ ನರಸಿಂಹರಾಜುಗೆ ನರಸಿಂಹರಾಜುನೇ ಸರಿಸಾಟಿ. ಕನ್ನಡ ಚಿತ್ರರಂಗ ಕಂಡ ಅಪರೂಪದ ಹಾಸ್ಯ ನಟ ನರಸಿಂಹರಾಜು. ಇವರು ಇಲ್ಲದ ಸಿನಿಮ, ಸಿನಿಮಾವೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಅವರ ಪ್ರತಿಭೆ ಬೆಳ್ಳಿ ತೆರೆಯಲ್ಲಿ ಬೆಳಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Oct 15, 2023 01:12 PM IST

ಹಸಿರು ದೀಪಾಲಂಕಾರಕ್ಕೂ ಚಾಲನೆ

ಮೈಸೂರು ದಸರಾ ಪ್ರಮುಖ ಆಕರ್ಷಣೆಯಾದ ವಿದ್ಯುತ್‌ ದೀಪಾಲಂಕಾರಕ್ಕೂ ಭಾನುವಾರವೇ ಚಾಲನೆ ಸಿಗಲಿದೆ.

ಸಂಜೆ 6 ಗಂಟೆಗೆ ನ್ಯೂ ಸಯಾಜಿ ರಾವ್ ರಸ್ತೆಯಲ್ಲಿರುವ ಹಸಿರು ಮಂಟಪದಲ್ಲಿ ದಸರಾ ವಿದ್ಯುತ್ ದೀಪ ಅಲಂಕಾರವನ್ನು ಇಂಧನ ಸಚಿವರಾದ ಕೆ.ಜೆ ಜಾರ್ಜ್ ಉದ್ಘಾಟಿಸಲಿದ್ದಾರೆ.

Oct 15, 2023 12:49 PM IST

ಕಲಾ ಶಿಬಿರ, ರಂಗೋತ್ಸವಕ್ಕೂ ಸಂಜೆ ಚಾಲನೆ

ಮೈಸೂರು ದಸರಾದಲ್ಲಿ ಸಂಜೆ 5 ಗಂಟೆಗೆ ಕರ್ನಾಟಕ ಕಲಾಮಂದಿರದಲ್ಲಿ ಅಖಿಲ ಭಾರತ ಹಾಗೂ ರಾಜ್ಯಮಟ್ಟದ ಚಿತ್ರ ಶಿಲ್ಪಕಲಾ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ ಉದ್ಘಾಟಿಸಲಿದ್ದಾರೆ.

ಸಂಜೆ 5.30 ಕ್ಕೆ ರಂಗಾಯಣದಲ್ಲಿ ನವರಾತ್ರಿ ರಂಗೋತ್ಸವ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ ಉದ್ಘಾಟಿಸಲಿದ್ದಾರೆ

Oct 15, 2023 12:48 PM IST

ಸಂಜೆ ಯೋಗ ದಸರಾ, ಪುಸ್ತಕ ಮೇಳ ಉದ್ಘಾಟನೆ

ಮೈಸೂರು ದಸರಾದಲ್ಸಂಲಿ ಜೆ 5:00 ಗಂಟೆಗೆ ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಭವನದಲ್ಲಿ ಯೋಗ ದಸರಾ ಕಾರ್ಯಕ್ರಮ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಕಾರ್ಯಕ್ರಮವನ್ನು ಉದ್ಘಾಟಿಸುವರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 15 ರಿಂದ 22 ರವರೆಗೆ ದಸರಾ ಪುಸ್ತಕ ಮಾರಾಟ ಮೇಳವನ್ನು ನಗರದ ಓವೆಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಭಾನುವಾರ ಸಂಜೆ 5 ಗಂಟೆಗೆ ಮಾರಾಟ ಮೇಳ ಉದ್ಘಾಟನೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ಎಸ್ ತಂಗಡಗಿ ನೆರವೇರಿಸುವರು.

Oct 15, 2023 12:28 PM IST

ಪ್ರಾರ್ಥನೆಯಿಂದ ಸೋಲಿಲ್ಲ: ಡಿಕೆಶಿ

ದಸರಾ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡಿ, ದುಃಖವನ್ನು ದೂರ ಮಾಡುವ ದೇವಿ ದುರ್ಗಾದೇವಿ. ನಮ್ಮ ಕನ್ನಡ ಸಂಸ್ಕತಿಯನ್ನು ಬಿಂಬಿಸುವ ಆಚರಣೆ ದಸರಾ. ಭೂಮಿಯನ್ನು ಭಾಷೆಯನ್ನು ತಾಯಿಯ ಹೆಸರಿನಲ್ಲಿ ಕರೆಯುತ್ತೇವೆ. ನಮ್ಮ ನಾಡಿನ ಅಗ್ರ ದೇವತೆ ಚಾಮುಂಡಿತಾಯಿ. ಪ್ರಯತ್ನ ಮಾಡಿ ಸೋಲಬಹುದು ಆದರೆ ಪ್ರಾರ್ಥಿಸಿ ಸೋತಿಲ್ಲ ಎಂಬ ನಂಬಿಕೆ ಇಟ್ಟು ನಾಡಿಗೆ ಒಳ್ಳೆ ಮಳೆ ಬೆಳೆ ನೀಡುವಂತೆ ಪ್ರಾರ್ಥಿಸಲು ಇಲ್ಲಿ ಬಂದಿದ್ದೇವೆ. ನಾವು ಚುನಾವಣೆಗೆ ಮುಂಚೆ ನಾನು ಮತ್ತು ಮುಖ್ಯಮಂತ್ರಿಗಳು ತಾಯಿ ಚಾಮುಂಡಿ ದೇವಿಗೆ 5 ಗ್ಯಾರೆಂಟಿ ಗಳನ್ನು ಜಾರಿಗೆ ತರಲು ಶಕ್ತಿ ನೀಡುವಂತೆ ಪ್ರಾರ್ಥನೆ ಮಾಡಿದ್ದೆವು. ಅದರಂತೆ ನಾವು ನುಡಿದಂತೆ ನಡೆದು 4 ಗ್ಯಾರೆಂಟಿ ಗಳನ್ನು ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.

Oct 15, 2023 12:26 PM IST

ಪ್ರೀತಿ, ವಿಶ್ವಾಸದಿಂದ ಕಾಣಿರಿ: ಸಿದ್ದರಾಮಯ್ಯ

ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದಸರಾ ಆಚರಣೆಯ ಮೂಲಕ ಕನ್ನಡ ನಾಡಿನ ಭಾಷೆ, ಸಂಸ್ಕೃತಿ, ಅಭಿವೃದ್ಧಿ ಹಾಗೂ ಪರಂಪರೆ ಯನ್ನು ಜನರಿಗೆ ಸಾರುವ ಕೆಲಸ ಮಾಡುತ್ತದೆ. ಕನ್ನಡ ನಾಡಿನ ಸಮೃದ್ಧಿ, ವೈಭವವನ್ನು ವಿಶ್ವಕ್ಕೆ ಸಾರುವ ಕೆಲಸವನ್ನು ನಾವು ದಸರಾ ಮೂಲಕ ಮಾಡುತ್ತಿದ್ದೇವೆ. ನಮ್ಮ ನಾಡು ಸಮೃದ್ಧವಾಗಿದೆ. ಕರ್ನಾಟಕ ನಾಡಿನ ಜನ ಪ್ರೀತಿ ವಿಶ್ವಾಸ, ಸಹಕಾರ ಗೌರವದ ಗುಣಗಳನ್ನು ಬೆಳೆಸಿಕೊಂಡಿದ್ದಾರೆ. ಯಾವುದೇ ಜಾತಿ ಧರ್ಮಕ್ಕೆ ಸೇರಿದ್ದರೂ ಎಲ್ಲರೂ ಪ್ರೀತಿ ವಿಶ್ವಾಸದಿಂದ ಕಾಣಬೇಕು ಎಂದು ಸಲಹೆ ನೀಡಿದರು.

Oct 15, 2023 12:25 PM IST

30 ಸಾವಿರ ಕೋಟಿ ರೂ. ಬೆಳೆ ನಷ್ಟ: ಸಿದ್ದರಾಮಯ್ಯ

ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮುಂಗಾರು ಮಳೆ ಕೊರತೆಯಿಂದ 42 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು 30 ಸಾವಿರ ಕೋಟಿ ರೂಪಾಯಿಗಳ ಬೆಳೆ ನಷ್ಟ ಆಗಿದೆ. ಮಾನದಂಡಗಳ ಪ್ರಕಾರ 4850 ಕೋಟಿ ಬೆಳೆ ಹಾನಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. 116 ತಾಲ್ಲೂಕುಗಳು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಮುಂದಿನ ಹಿಂಗಾರು ಮಳೆ ಉತ್ತಮವಾಗಿ ಆಗಲಿ ಎಂದು ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೇವೆ ಎಂದು ಹೇಳಿದರು.

Oct 15, 2023 12:23 PM IST

ಮೈಸೂರು ದಸರಾ ಸಾಂಪ್ರದಾಯಿಕ ಆಚರಣೆ: ಸಿದ್ದರಾಮಯ್ಯ

ಮೈಸೂರು ದಸರಾ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬರದ ಹಿನ್ನೆಲೆಯಲ್ಲಿ ದಸರಾ ಹೇಗಿರಬೇಕು ಎನ್ನುವ ಚರ್ಚೆಯಾಯಿತು. ಕೊನೆಗೆ ಸಾಂಪ್ರದಾಯಿಕವಾಗಿ ಆಚರಿಸುವ ಕುರಿತು ತೀರ್ಮಾನ ಮಾಡಲಾಯಿತು ಎಂದು ಹೇಳಿದರು.

Oct 15, 2023 12:22 PM IST

ಜನರಿಗೋಸ್ಕರ ಗ್ಯಾರಂಟಿ ಯೋಜನೆ:ಸಿದ್ದರಾಮಯ್ಯ

ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜನರ ಒಳಿತಿಗೋಸ್ಕರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಐದನೇ ಗ್ಯಾರಂಟಿ ಜನವರಿಯಲ್ಲಿ ಜಾರಿಯಾಗಲಿದೆ ಎಂದು ಹೇಳಿದರು.

Oct 15, 2023 12:03 PM IST

ವಸ್ತು ಪ್ರದರ್ಶನಕ್ಕೆ ಸಿಎಂ ಚಾಲನೆ

ಮೈಸೂರು: ಮೈಸೂರು ದಸರಾ ಹಿನ್ನೆಲೆಯಲ್ಲಿ ಭಾನುವಾರ ಸಂಜೆ 4 ಗಂಟೆಗೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಶ್ರೀ ದೇವರಾಜ ಅರಸು ವಿವಿಧ ದೇಶ ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕುಸ್ತಿ ಉದ್ಘಾಟಿಸಲಿದ್ದಾರೆ.

ಸಂಜೆ 4:30ಕ್ಕೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ದಸರಾ ವಸ್ತು ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

Oct 15, 2023 11:56 AM IST

ದಸರಾ ವೇಳೆ ಸಿಎಂ ಸಿದ್ದರಾಮಯ್ಯ ಪೂಜೆ

Oct 15, 2023 11:54 AM IST

ರಾಕ್ಷಸೀ ಗುಣ ಅಳಿಯಲಿ: ಜಿಟಿ ದೇವೇಗೌಡ

ಮೈಸೂರು: ಮೈಸೂರು ದಸರಾ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಎಲ್ಲರೂ ದ್ವೇಷ, ಅಸೂಯೆ ಬಿಟ್ಟು ಅಭಿವೃದ್ಧಿ ಕಡೆ ಹೆಜ್ಜೆ ಹಾಕಬೇಕು.ನಮ್ಮಲ್ಲೂ ರಾಕ್ಷಸ ಗುಣಗಳಿವೆ, ಈ ರಾಕ್ಷಸ ಗುಣಗಳನ್ನು ಬಿಟ್ಟು ಎಲ್ಲರೂ ಮುಂದೆ ಸಾಗಬೇಕು.ಕನ್ನಡ ನಾಡಿಗೆ ಭೀಕರ ಬರಗಾಲ ಬಂದಿದೆ.ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ರಾಜ್ಯದಲ್ಲಿ ಮಳೆ ಆಗಲಿ ಎಂದು ಆಶಿಸಿದರು.

Oct 15, 2023 11:25 AM IST

ನಾಡಿನ ಪ್ರತಿಬಿಂಬ ದಸರಾ: ಮಹದೇವಪ್ಪ

ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಉಸ್ತುವಾರಿ ಸಚಿವ ಡಾ.ಮಹದೇವಪ್ಪ, ದಸರಾಗೆ ತನ್ನದೇ ಆದ ಇತಿಹಾಸವಿದೆ. ಮೈಸೂರು ಮಹಾರಾಜರು ಹಾಕಿಕೊಟ್ಟ ಈ ಪರಂಪರೆ ಈಗಲೂ ಮುಂದುವರಿದಿದೆ. ನಾಡಿನ ಪ್ರತಿಬಿಂಬವಾಗಿ ಈಗಲೂ ದಸರಾ ತನ್ನ ಮಹತ್ವ ಉಳಿಸಿಕೊಂಡಿದೆ ಎಂದು ಹೇಳಿದರು.

Oct 15, 2023 11:15 AM IST

ಮಧ್ಯಾಹ್ನ ಆಹಾರ ಮೇಳಕ್ಕೆ ಚಾಲನೆ

ಮೈಸೂರು ದಸರಾ ಹಲವು ಉದ್ಘಾಟನೆ ಕಾರ್ಯಕ್ರಮಗಳು ಭಾನುವಾರ ನೆರವೇರಲಿವೆ. ಮಧ್ಯಾಹ್ನ 12:30 ಕ್ಕೆ ನಗರದ ಕುಪ್ಪಣ್ಣ ಪಾರ್ಕ್ ನಲ್ಲಿ ಫಲಪುಷ್ಪ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಮಧ್ಯಾಹ್ನ 1 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ದಸರಾ ಆಹಾರ ಮೇಳ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ. ಎಚ್ ಮುನಿಯಪ್ಪ ನೆರವೇರಿಸುವರು.

Oct 15, 2023 11:14 AM IST

ಮೈಸೂರು ಚಾಮುಂಡಿಬೆಟ್ಟಕ್ಕೆ ಕಾಯಂ ದೀಪ ವ್ಯವಸ್ಥೆ ಮಾಡಿ

ಮೈಸೂರು ಚಾಮುಂಡಿಬೆಟ್ಟದಲ್ಲಿ ಕಾಯಂ ದೀಪ ವ್ಯವಸ್ಥೆ ಮಾಡಿಕೊಡಬೇಕು. ಇದರಿಂದ ಮೈಸೂರಿಗೆ ಬರುವವರಿಗೆ ಚಾಮುಂಡಿಬೆಟ್ಟವನ್ನು ದೀಪದಲ್ಲಿ ನೋಡಲು ಸಹಕಾರಿಯಾಗಲಿದೆ. ಇದು ಚಲನಚಿತ್ರ ರಂಗದ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು ಅವರ ಸಹೋದರ ವಿರಾಟ್‌ ಸಿಂಗ್‌ ಸಲಹೆ ಎಂದು ಹಂಸಲೇಖ ಹೇಳಿದರು.

Oct 15, 2023 11:09 AM IST

ದಸರಾಗೆ ಭಾರೀ ಭದ್ರತೆ

ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡಲು ಮೈಸೂರು ನಗರ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ದಸರಾ ಕಾರ್ಯಕ್ರಮ ನಡೆಯಲಿರುವ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮೈಸೂರು ನಗರ, ಇತರ ಜಿಲ್ಲೆಯ ಅಧಿಕಾರಿಗಳು, 1 ಡಿಐಜಿ, 11 ಎಸ್​ಪಿಗಳು, 20 ಎಎಸ್​ಪಿ ಸೇರಿದಂತೆ 4,200 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಶಸ್ತ್ರ ಪಡೆಗಳು, ವಿಧ್ವಂಸಕ ಕೃತ್ಯ ಪಡೆಗಳು, ಸ್ಫೋಟಕ ನಿಷ್ಕ್ರಿಯ ದಳ, ವಿಶೇಷ ಗರುಡ ಪಡೆ, 30 ಕೆಎಸ್​ಆರ್​ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.

Oct 15, 2023 10:47 AM IST

ಮೈಸೂರು ದಸರಾ ಉದ್ಘಾಟಿಸಿದ ಡಾ.ಹಂಸಲೇಖ

Oct 15, 2023 10:44 AM IST

ಕನ್ನಡ ದೀಪ ಹಚ್ಚಿದ್ದೇನೆ: ಹಂಸಲೇಖ

ಮೈಸೂರು: ಕನ್ನಡಿಗರ ಆಶಯದಂತೆ ಕನ್ನಡದ ದೀಪವನ್ನು ಹಚ್ಚಿದ್ದೇನೆ ಎಂದು ದಸರಾ ಉದ್ಘಾಟಿಸಿದ ಡಾ.ಹಂಸಲೇಖ ಹೇಳಿದರು.

ದಸರಾ ಎನ್ನುವುದು ಜೀವಂತ ಮಹಾಕಾವ್ಯ. ವೀರ ತೆಂಕಣದ ಕಥೆಯೇ ಇದಕ್ಕೆ ದ್ರವ್ಯ. ಇದು ಸಂಭ್ರಮದ ಮಹಾಕಾವ್ಯ. ದಸರಾ ಒಂದು ಕಥಾಕಣಜ ಎಂದು ವಿವರಿಸಿದರು ಹಂಸಲೇಖ.

ನಾನು ದಸರಾ ಉದ್ಘಾಟನೆಗೆ ಬಂದಿರುವುದು ಖುಷಿ ನೀಡಿದೆ. ಇದಕ್ಕಾಗಿ ಜೀವನದಲ್ಲಿ ಮೆಟ್ಟಿಲು ಹತ್ತಿ ಬಂದಿದ್ದೇನೆ. ಇಂದೂ ಚಾಮುಂಡಿಬೆಟ್ಟವನ್ನು ಮೆಟ್ಟಿಲು ಹತ್ತಿ ಬಂದಿದ್ದೇನೆ ಎಂದರು.

Oct 15, 2023 10:38 AM IST

ಕರ್ನಾಟಕಕ್ಕೆ ಐ ದಶ ಸಡಗರ: ಹಂಸಲೇಖ

ಮೈಸೂರು: ಕನ್ನಡದ ಏಕೀಕರಣಕ್ಕೆ ಈಗ ಐವತ್ತು ವರ್ಷ ತುಂಬಿದೆ. ಕರ್ನಾಟಕವನ್ನು ಐದಶ ಎಂದು ಕರೆಯಬಹುದು. ನನ್ನ ಕಲಾ ಕಾಯಕಕ್ಕೂ ಐದು ದಶಕಕ್ಕೂ ತುಂಬಿದೆ. ದಸರಾ ಉದ್ಘಾಟನೆ ನನಗೆ ಅವಕಾಶ ಸಿಕ್ಕಿರುವುದು ಬೆಲೆ ಬಾಳುವಂತದ್ದು ಎಂದು ದಸರಾ ಉದ್ಘಾಟಿಸಿದ ಡಾ.ಹಂಸಲೇಖ ಹೇಳಿದರು.

Oct 15, 2023 10:34 AM IST

ಭಾಷಣ ಆರಂಭಿಸಿದ ಹಂಸಲೇಖ

ಮೈಸೂರು ದಸರಾ ಉದ್ಘಾಟಿಸಿದ ಡಾ.ಹಂಸಲೇಖ ಕನ್ನಡ ಲೋಕಕ್ಕೆ ನಮನ ಎಂದು ಭಾಷಣ ಆರಂಭಿಸಿದರು.

Oct 15, 2023 10:30 AM IST

ಮೈಸೂರು ದಸರಾ ಉದ್ಘಾಟನೆ

ನಾಲ್ಕು ನೂರು ವರ್ಷಕ್ಕೂ ಮಿಗಿಲಾದ ಇತಿಹಾಸ ಇರುವ, ಕರ್ನಾಟಕದ ಪರಂಪರೆಯನ್ನು ಬಿಂಬಿಸುವ ನಾಡಹಬ್ಬ ದಸರಾ2023ಕ್ಕೆ ಸಡಗರದ ನಡುವೆಯೇ ಚಾಲನೆ ದೊರೆತಿದೆ.

ಬೆಟ್ಟದ ಚಳಿ, ಮೋಡ ಕವಿದ ವಾತಾವರಣ ನಡುವೆ ಸೂರ್ಯನ ದರ್ಶನ ಈಗಷ್ಟೇ ಆಗಿರುವಾಗ ಅಕ್ಷರ ಬ್ರಹ್ಮ ಹಾಗೂ ನಾದಬ್ರಹ್ಮ ಡಾ.ಹಂಸಲೇಖ ದಸರಾಗೆ ಚಾಲನೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಜನಪ್ರತಿನಿಧಿಗಳು, ಗಣ್ಯರ ಉಪಸ್ಥಿತಿಯಲ್ಲಿ ಹತ್ತು ದಿನದ ನಾಡಹಬ್ಬಕ್ಕೆ ಚಾಲನೆ ದೊರೆಯಿತು.

ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ನಂತರ ವೇದಿಕೆಯಲ್ಲಿ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿ ದಸರಾವನ್ನು ಹಂಸಲೇಖ ಉದ್ಘಾಟಿಸಿದರು.

Oct 15, 2023 10:18 AM IST

ಚಾಮುಂಡಿಬೆಟ್ಟದಲ್ಲಿ ಗಣ್ಯರು, ಪೂಜೆ ಶುರು

ಮೈಸೂರಿನ ದಸರಾ ಉದ್ಘಾಟನೆಗೆ ಗಣ್ಯರ ದಂಡು ಈಗಾಗಲೇ ಚಾಮುಂಡಿಬೆಟ್ಟಕ್ಕೆ ಆಗಮಿಸಿದೆ. ಚಾಮುಂಡಿಬೆಟ್ಟದಲ್ಲಿರುವ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸಿಎಂ ಸಿದ್ದರಾಮಯ್ಯ, ದಸರಾ ಉದ್ಘಾಟಿಸಲಿರುವ ಡಾ.ಹಂಸಲೇಖ ಪೂಜೆ ಸಲ್ಲಿಸಿದ್ದು, ದಸರಾ ಚಟುವಟಿಕೆಗಳು ಆರಂಭಗೊಂಡಿವೆ.

Oct 15, 2023 10:17 AM IST

ಚಲನಚಿತ್ಸೋತ್ಸವಕ್ಕೆ ತಾರೆಯರ ದಂಡು

ಅಕ್ಟೋಬರ್ 15 ರಂದು ಬೆಳಗ್ಗೆ 11:30ಕ್ಕೆ ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ಮೈಸೂರು ದಸರಾ ಚಲನಚಿತ್ರೋತ್ಸವ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ ಮಹದೇವಪ್ಪನವರು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಚಲನಚಿತ್ರ ಕಲಾವಿದರು ಹಾಗೂ ಸಂಗೀತ ನಿರ್ದೇಶಕರಾದ ಸಾಧುಕೋಕಿಲ, ಹಿರಿಯ ಚಲನಚಿತ್ರ ಕಲಾವಿದರಾದ ಸುಧಾ ನರಸಿಂಹರಾಜು, ಚಲನಚಿತ್ರ ಕಲಾವಿದರಾದ ಮಿಲನ ನಾಗರಾಜ್, ಡಾರ್ಲಿಂಗ್ ಕೃಷ್ಣ, ಮಾನ್ವಿತಾ ಕಾಮತ್, ಮಯೂರಿ ಕ್ಯಾತರಿ ಹಾಗೂ ವೈಭವಿ ಶಾಂಡಿಲ್ಯ ಭಾಗವಹಿಸುವರು.

Oct 15, 2023 09:56 AM IST

ಮೈಸೂರು ದಸರಾಗೆ ಕೆಎಸ್‌ಆರ್‌ಟಿಸಿ ಪ್ಯಾಕೇಜ್‌ ಘೋಷಣೆ

Oct 15, 2023 09:53 AM IST

ದಸರಾ ಕುಸ್ತಿಯೂ ಇಂದು ಆರಂಭ: ಮೊದಲ ಪಂದ್ಯಗಳಿಗೆ ತಯಾರಿ

ಅಗಸ್ಟ್ 15 ರಂದು ಸಂಜೆ 4 ಗಂಟೆಗೆ ವಸ್ತು ಪ್ರದರ್ಶನ ಪ್ರಾಧಿಕಾರದ ದೇವರಾಜ ಅರಸು ವಿವಿಧೋದ್ದೇಶ ಸಂಘ ಆವರಣದಲ್ಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟಿಸುವರು.

ಆರಂಭಿಕ ಕುಸ್ತಿ ಪಂದ್ಯಾವಳಿಯು ದಾವಣಗೆರೆಯ ಪೈಲ್ವಾನ್ ಕಾರ್ತಿಕ್ ಕಾಟೆ v/s ದೆಹಲಿಯ ಪೈಲ್ವಾನ್ವಿ ಕಿ, ಬೆಳಗಾಂ ನ ಸುನಿಲ್ ಪಡುತಾರೆ v/s ಪೈಲ್ವಾನ್ ರಾಹುಲ್ ರಾಟಿ ನಡುವೆ ನಡೆಯಲಿದ್ದು, ಬಲಕಿಯರ ವಿಭಾಗದಲ್ಲಿ ಬನ್ನೂರಿನ ಪೈಲ್ವಾನ್ ಜಾಹ್ನವಿ v/s ಮಂಡ್ಯದ ಪೈಲ್ವಾನ್ ಸ್ಫೂರ್ತಿ ಹಾಗೂ ರಮನಹಳ್ಳಿಯ ಪೈಲ್ವಾನ್ ಸಿಂಚನ v/s ಮಂಡ್ಯದ ಅಮೂಲ್ಯ ನಡುವೆ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ ಎಂದು ಕುಸ್ತಿ ಸಮಿತಿ ಉಪ ವಿಶೇಷಾಧಿಕಾರಿ ಡಾ.ನಂದಿನಿ ತಿಳಿಸಿದ್ದಾರೆ

Oct 15, 2023 09:49 AM IST

ಮೈಸೂರು ಅರಮನೆಯಲ್ಲೂ ಖಾಸಗಿ ದರ್ಬಾರ್‌ ಸಡಗರ

ಮೈಸೂರು ಅರಮನೆಯಲ್ಲಿ ಖಾಸಗಿ ದಸರಾ ಸಡಗರ ಶುರುವಾಗಿದೆ. ಎಂಟನೇ ಬಾರಿಗೆ ಖಾಸಗಿ ದರ್ಬಾರ್‌ ನಡೆಸಲು ಅಣಿಯಾಗಿರುವ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಪೂಜೆಗಳಲ್ಲಿ ಭಾನುವಾರ ಬೆಳಿಗ್ಗೆ ಭಾಗಿಯಾದರು ಬೆಳಗ್ಗೆ 5ರಿಂದಲೇ ಅರಮನೆಯಲ್ಲಿ ಪೂಜಾ ವಿಧಾನಗಳು ಆರಂಭವಾಗಿವೆ. ಚಂಡಿಕಾಹೋಮ, ಲಲಿತಾ ಸಹಸ್ರನಾಮ ಸಹಿತ ನಾನಾ ಪೂಜೆಗಳು ನೆರವೇರಿದವು.

ಬೆಳಗ್ಗೆ 6 ಗಂಟೆಯಿಂದ 6.25ರ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ನಡೆಯಿತು., ಬೆಳಗ್ಗೆ 07.05 ರಿಂದ 7.45ರ ಶುಭ ಲಗ್ನದಲ್ಲಿ ವಾಣಿವಿಲಾಸ ಅರಮನೆಯಲ್ಲಿ ಕಂಕಣಧಾರಣೆ ನೆರವೇರಿಸಲಾಯಿತು.,

ಇನ್ನು ಬೆಳಗ್ಗೆ 9.45ಕ್ಕೆ ಅರಮನೆ ಸವಾರಿ ತೊಟ್ಟಿಗೆ ಗೋಶಾಲೆಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಹಸು ಆಗಮನವಾಗಿದೆ. ಬೆಳಗ್ಗೆ 10.15ಕ್ಕೆ ಕಳಸ‌ ಪೂಜೆ, ಸಿಂಹಾಸನ‌ ಪೂಜೆ ನಡೆಯಲಿದೆ. ಬೆಳಗ್ಗೆ 11.30ರಿಂದ 11.50ಕ್ಕೆ ಖಾಸಗಿ ದರ್ಬಾರ್ ನಡೆಯಲಿದ್ದು, ಯದುವೀರ್ ಒಡೆಯರ್ ಅವರು ಸಿಂಹಾಸನವೇರಿ ಸತತ ಎಂಟನೇ ಬಾರಿ ಖಾಸಗಿ ದರ್ಬಾರ್ ನಡೆಸಲು ಸಿದ್ದರಾಗಿದ್ದಾರೆ.

Oct 15, 2023 09:34 AM IST

ವರ್ಚುಯಲ್‌ ಆಗಿ ದಸರಾ ವೀಕ್ಷಿಸಿ

ದಸರಾ ಮಹೋತ್ಸವ 2023 ರ ಉದ್ಘಾಟನೆ ಸಹಿತ ವಿವಿಧ ಕಾರ್ಯಕ್ರಮಗಳು ಫೇಸ್‌ಬುಕ್ ಯೂಟ್ಯೂಬ್ ನತ್ತು ವೆಬ್‌ಸೈಟ್ ‌ನಲ್ಲಿ ದಿನಾಂಕ: 15-10-2023 ರಿಂದ 24-10-2023 ರವರಗೆ ನೇರ ಪ್ರವಾಸವಾಗಲಿದೆ.

ಈ ಕಾರ್ಯಕ್ರಮಗಳನ್ನು ವರ್ಚುವಲ್ ಆಗಿ ವೀಕ್ಷಿಸಲು ಈ ಲಿಂಕ್ ಗಳನ್ನು ಬಳಸಿ.

Facebook Link.

https://facebook.mysoredasara.gov.in

YouTube Link

https://youtube.mysoredasara.gov.in

Website Link

https://mysoredasara.gov.in/

Oct 15, 2023 09:32 AM IST

ಮೈಸೂರು ದಸರಾಕ್ಕೆ ಪ್ರವಾಸೋದ್ಯಮ ಇಲಾಖೆ ತಯಾರಿ

Oct 15, 2023 09:30 AM IST

ದಸರಾಗೆ ಸಿಎಂ ಟ್ವೀಟ್‌ ಸ್ವಾಗತ

Oct 15, 2023 09:28 AM IST

ಮೈಸೂರು ಮನೆಯಿಂದ ಹೊರಟ ಸಿದ್ದರಾಮಯ್ಯ

ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಶನಿವಾರ ರಾತ್ರಿಯೇ ಆಗಮಿಸಿ ವಾಸ್ತವ್ಯ ಹೂಡಿದ್ದ ಸಿದ್ದರಾಮಯ್ಯ ಚಾಮುಂಡಿಬೆಟ್ಟದ ಕಡೆಗೆ ತೆರಳಿದರು. ಕುವೆಂಪುನಗರದಲ್ಲಿರುವ ಅವರ ನಿವಾಸದ ಎದುರು ಪೊಲೀಸ್‌ ವಂದನೆ ಸ್ವೀಕರಿಸಿ ಅಲ್ಲಿಂದ ಬೆಟ್ಟಕ್ಕೆ ಕಡೆಗೆ ನಿರ್ಗಮಿಸಿದರು.

Oct 15, 2023 09:26 AM IST

ಚಾಮುಂಡಿಬೆಟ್ಟದಲ್ಲಿ ಸ್ವಾಗತಕ್ಕೆ ಸಿದ್ದತೆ

ಮೈಸೂರು ದಸರಾ ಉದ್ಘಾಟನೆಗೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ, ನಾದಬ್ರಹ್ಮ ಡಾ.ಹಂಸಲೇಖ ಸೇರಿದಂತೆ ಗಣ್ಯರು, ಜನಪ್ರತಿನಿಧಿಗಳನ್ನು ಬರ ಮಾಡಿಕೊಳ್ಳಲು ಮೈಸೂರು ಜಿಲ್ಲಾಡಳಿತ ಹಾಗೂ ದಸರಾ ಸಮಿತಿ ಸಿದ್ದತೆ ಮಾಡಿಕೊಂಡಿದೆ.

Oct 15, 2023 09:18 AM IST

ಮೈಸೂರು ದಸರಾ ಉದ್ಘಾಟನೆಗೆ ಕ್ಷಣಗಣನೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ಬರದ ಛಾಯೆಯ ನಡುವೆ ಈ ಬಾರಿ ಸಾಂಪ್ರದಾಯಿಕ ದಸರೆಗೆ ಒತ್ತು ನೀಡಿದ್ದರೂ ಸಡಗರ, ಸಂಭ್ರಮಕ್ಕೆ ಯಾವುದೇ ಕೊರತೆಯಿಲ್ಲ. ಚಾಮುಂಡಿಬೆಟ್ಟದಲ್ಲಿ ಭಾನುವಾರ ಬೆಳಿಗ್ಗೆ10.15ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ನಾದಬ್ರಹ್ಮ ಡಾ.ಹಂಸಲೇಖ ನಾಡಹಬ್ಬಕ್ಕೆ ಚಾಲನೆ ನೀಡುವರು.

    ಹಂಚಿಕೊಳ್ಳಲು ಲೇಖನಗಳು