ಮೈಸೂರು ದಸರಾಕ್ಕೆ 40 ಕೋಟಿ ರೂ ತನಕ ಅನುದಾನ, ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಂಡ 10 ಮುಖ್ಯ ನಿರ್ಧಾರಗಳು
Aug 16, 2024 04:21 PM IST
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ (ಬಲದಿಂದ ಎರಡನೇಯವರು) ಅಧ್ಯಕ್ಷತೆಯಲ್ಲಿ ಮೈಸೂರು ದಸರಾಕ್ಕೆ ಸಂಬಂಧಿಸಿದ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಶಾಸಕರಾದ ತನ್ವೀರ್ ಸೇಠ್ (ಎಡದಿಂದ ಎರಡನೇಯವರು), ಜಿಟಿ ದೇವೇಗೌಡ (ಬಲದಿಂದ ಮೊದಲನೇಯವರು) ಮತ್ತು ಇತರೆ ಅಧಿಕಾರಿಗಳು ಭಾಗವಹಿಸಿದ್ದರು.
Mysuru Dasara; ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉನ್ನತ ಮಟ್ಟದ ಕಾರ್ಯಕಾರಿ ಸಮಿತಿ ಸಭೆ ಇಂದು ನಡೆದಿದ್ದು, ಮೈಸೂರು ದಸರಾಕ್ಕೆ 40 ಕೋಟಿ ರೂ ತನಕ ಅನುದಾನ ಕೊಡಲಿದೆ ಎಂಬ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ಬಹಿರಂಗಗೊಳಿಸಿದರು. ಅಲ್ಲದೆ, ಸಭೆಯಲ್ಲಿ ಹಲವು ನಿರ್ಣಯ ತೆಗೆದುಕೊಳ್ಳಲಾಗಿದ್ದು, 10 ಮುಖ್ಯ ನಿರ್ಧಾರಗಳ ವಿವರ ಹೀಗಿದೆ.
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಆಚರಣೆಗೆ 40 ಕೋಟಿ ರೂಪಾಯಿ ತನಕ ಅನುದಾನ ನೀಡಲು ಸರ್ಕಾರ ತೀರ್ಮಾನಿಸಿದೆ. ಈ ಅನುದಾನದ ಬಳಕೆ ಮತ್ತು ಪ್ರಾಯೋಜಕತ್ವದ ವಿಚಾರ ಚರ್ಚಿಸುವುದಕ್ಕೆ ಇಂದು (ಆಗಸ್ಟ್ 16) ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉನ್ನತ ಮಟ್ಟದ ಕಾರ್ಯಕಾರಿ ಸಮಿತಿ ಸಭೆ ನಡೆಯಿತು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹದೇವಪ್ಪ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ, ದಸರಾ ಆಚರಣೆಗೆ ಅನುದಾನ, ಅನುದಾನ ಬಳಕೆಗೆ 4ಜಿ ವಿನಾಯಿತಿ ನೀಡುವ ವಿಚಾರ ಚರ್ಚೆಗೆ ಒಳಗಾಯಿತು.
ಕರ್ನಾಟಕದಲ್ಲಿ ಈ ಸಲ ಉತ್ತಮವಾಗಿ ಮಳೆಯಾಗಿದ್ದು, ರಾಜ್ಯದ ಜನರು ಖುಷಿಯಿಂದ ಇದ್ದಾರೆ. ಆದ್ದರಿಂದ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಸಚಿವ ಎಚ್.ಸಿ ಮಹದೇವಪ್ಪ ತಿಳಿಸಿದರು.
ಮೈಸೂರು ದಸರಾಗೆ ಸಂಬಂಧಿಸಿದ ಸಭೆಯ ತೀರ್ಮಾನದ 10 ಮುಖ್ಯ ಅಂಶಗಳು
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಎರಡು ದಿನ ಹಿಂದೆ ಹೈ ಪವರ್ ಕಮಿಟಿ ಸಭೆ ನಡೆಯಿತು. ಈ ಸಭೆಯಲ್ಲಿ ಬಗ್ಗೆ ಹಾಗೂ ದಸರಾ ಉದ್ಘಾಟಕರ ಆಯ್ಕೆ ಬಗ್ಗೆ ಚರ್ಚಿಸಲಾಗಿದೆ ಎಂದು ಸಚಿವ ಮಹದೇವಪ್ಪ ಹೇಳಿದರು. ಇನ್ನುಳಿದ ಮುಖ್ಯ ಅಂಶಗಳಿವು
1) ದಸರಾ ಆಚರಣೆಗೆ ಹೆಚ್ಚಿನ ಪ್ರಾಯೋಜಕತ್ವ ಪಡೆಯಲು ಅಧಿಕಾರಿಗಳು ಮುಂದಾಗಬೇಕು.
2) ಚಾಮುಂಡಿ ಬೆಟ್ಟದಲ್ಲಿ ಅಕ್ಟೋಬರ್ 03 ರಂದು ಬೆಳಗ್ಗೆ 9.15 ರಿಂದ 9.45 ರ ಒಳಗೆ ದಸರಾ ಉದ್ಘಾಟನೆ ಮಾಡಲು ತೀರ್ಮಾನಿಸಲಾಗಿದೆ.
3) ಈ ಬಾರಿ ದಸರಾ ಆಚರಣೆಗೆ 40 ಕೋಟಿ ರೂಪಾಯಿವರೆಗೂ ಅನುದಾನ ಬಳಕೆಗೆ ಅವಕಾಶ ಕಲ್ಪಿಸಲು ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆ.
4) ಮೈಸೂರು ದಸರಾ ಉತ್ಸವಕ್ಕೆ ಮುಂಚಿತವಾಗಿ ಮೈಸೂರು ನಗರದ ಎಲ್ಲಾ ರಸ್ತೆಗಳನ್ನು ಪರಿಶೀಲಿಸಿ ಗುಂಡಿ ಮುಚ್ಚಿ, ಮರು ಡಾಂಬರೀಕರಣ ಮಾಡಬೇಕು.
5) ದಸರಾ ಆಚರಣೆಯಲ್ಲಿ ಅಧಿಕಾರಿಗಳು ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು. ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು.
6) ಆಹಾರ ಮೇಳವನ್ನು ಸ್ಕೌಟ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್ ಪ್ಯಾಲೇಸ್ ಆವರಣದಲ್ಲಿ ಆಯೋಜಿಸಬೇಕು.
7) ಸ್ತಬ್ಧ ಚಿತ್ರಗಳ ಲ್ಲಿ ಕರ್ನಾಟಕ ಸರ್ಕಾರದ 5 ಗ್ಯಾರೆಂಟಿಗಳ ಕುರಿತ ಸ್ತಬ್ಧ ಚಿತ್ರಗಳು ಇರಬೇಕು. ಜೊತೆಗೆ ಸರ್ಕಾರದ ಒಂದು ವರ್ಷದ ಸಾಧನೆ ಕುರಿತ ಸ್ತಬ್ಧ ಚಿತ್ರ ಇರಬೇಕು.
8) ದೀಪಾಲಂಕಾರ 21 ದಿನಗಳ ಕಾಲ ಇರಬೇಕು. ದೀಪಾಲಂಕಾರ ದಸರಾ ಆಚರಣೆ ಯ ಮೇರುಗನ್ನು ಹೆಚ್ಚಿಸುತ್ತದೆ. ದೀಪಾಲಂಕಾರವನ್ನು ದಸರಾ ಮಹೋತ್ಸವದಲ್ಲಿ ಪ್ರಮುಖ ವೃತ್ತಗಳಲ್ಲಿ ಮಾಡುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ಗಮನಹರಿಸಬೇಕು.
9) ಯುವ ಸಂಭ್ರಮ ಹಾಗೂ ಯುವ ದಸರಾ ಕಾರ್ಯಕ್ರಮಗಳಿಗೆ ಕಳೆದ ಎರಡು ವರ್ಷಗಳಲ್ಲಿನ ಕಾರ್ಯಕ್ರಮ ಹಾಗೂ ಕಲಾವಿದರು ಕೂಡ ಪುನರಾವರ್ತನೆ ಆಗದಂತೆ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಬೇಕು.
10) ಚಿಣ್ಣರ ದಸರಾ, ಮಹಿಳಾ ದಸರಾ ಹಾಗೂ ರೈತ ದಸರ ಕಾರ್ಯಕ್ರಮ ಅರ್ಥ ಪೂರ್ಣವಾಗಿ ನಡೆಸಬೇಕು. ಸ್ವತಂತ್ರ ದೇಶಾಭಿಮಾನದ ಸಂದೇಶಗಳನ್ನು ಸಾರುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಕಾರ್ಯಕ್ರಮ ಆಯೋಜಿಸಬೇಕು.
ಮೈಸೂರು ದಸರಾ ಆಚರಣೆಗೆ 19 ಉಪಸಮಿತಿ ರಚನೆ
ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ ಅವರು ಮಾತನಾಡಿ ದಸರಾ ಆಚರಣೆಗೆ 19 ಉಪ ಸಮಿತಿಗಳನ್ನು ರಚಿಸಲಾಗಿದೆ. ಗಜ ಪಯಣವನ್ನು ಆಗಸ್ಟ್ 21 ರಂದು ನಿಗದಿ ಮಾಡಲಾಗಿದೆ. ಕರ್ನಾಟಕ ಸಂಭ್ರಮ 50 ನ್ನು ಆಚರಣೆ ಮಾಡಲಾಗುತ್ತಿದೆ. ಇದರ ಲಾಂಛನವನ್ನು ದಸರಾ ಆಚರಣೆಯಲ್ಲಿ ಅಳವಡಿಸಲಾಗುವುದು ಎಂದು ಹೇಳಿದರು.
ವಾರ್ತಾ ಇಲಾಖೆಯ 20 ಬೋರ್ಡ್ ಗಳನ್ನು ಡಿಜಿಟಲೀಕರಣ ಮಾಡಿ ಅಲ್ಲಿ ದಸರಾ ಪ್ರಚಾರವನ್ನು ಮಾಡಬೇಕು. ಆಹಾರ ಮೇಳ ಕನಿಷ್ಠ 1 ತಿಂಗಳು ಇರಬೇಕು. ಆಹಾರ ಮೇಳದಲ್ಲಿ ಸ್ವಚ್ಚತೆ ಕಾಪಾಡಿಕೊಂಡು ಗುಣಮಟ್ಟದ ಆಹಾರ ನೀಡಬೇಕು. ಕಡಿಮೆ ದರದಲ್ಲಿ ಆಹಾರ ನೀಡಬೇಕು ಎಂದು ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಆಗ್ರಹಿಸಿದರು.
ಅರ್ಜುನ ಆನೆ ವೀರ ಮರಣ ಹೊಂದಿದ್ದು ಅದರ ಹೆಸರಿನಲ್ಲಿ ಮಾವುತರಿಗೆ ಪ್ರಶಸ್ತಿ ನೀಡಬೇಕು ಎಂದು ಅರಣ್ಯ ವಸತಿ ಹಾಗೂ ವಿಹಾರ ದಾಮಗಳ ನಿಗಮದ ಅಧ್ಯಕ್ಷರು ಹಾಗೂ ಹೆಚ್.ಡಿ ಕೋಟೆ ಶಾಸಕರಾದ ಅನಿಲ್ ಚಿಕ್ಕಮಾದು ಮನವಿ ಮಾಡಿದರು.
ಸಭೆಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ, ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ, ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿ ಸಿದ್ದೇಗೌಡ, ಚಾಮರಾಜನಗರ ಕ್ಷೇತ್ರದ ಶಾಸಕ ಪುಟ್ಟರಂಗ ಶೆಟ್ಟಿ, ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ, ಕೆ ಆರ್ ನಗರ ಕ್ಷೇತ್ರದ ಶಾಸಕ ಡಿ ರವಿಶಂಕರ್ , ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಹೆಚ್.ಎಂ ಗಣೇಶ್ ಪ್ರಸಾದ್, ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್ ಕೃಷ್ಣ ಮೂರ್ತಿ, ವಿಧಾನ ಪರಿಷತ್ ಸದಸ್ಯ ವಿಶ್ವನಾಥ್, ಡಿ ತಿಮ್ಮಯ್ಯ, ಕೆ ವಿವೇಕಾನಂದ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಸೇರಿದಂತೆ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.