logo
ಕನ್ನಡ ಸುದ್ದಿ  /  ಕರ್ನಾಟಕ  /  Mysuru Accident: ಮೈಸೂರು ಅಪಘಾತ, ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ತಲಾ 2 ಲಕ್ಷ ರೂಪಾಯಿ ಪರಿಹಾರ

Mysuru Accident: ಮೈಸೂರು ಅಪಘಾತ, ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ತಲಾ 2 ಲಕ್ಷ ರೂಪಾಯಿ ಪರಿಹಾರ

HT Kannada Desk HT Kannada

May 30, 2023 02:51 PM IST

google News

Mysuru Accident: ಮೈಸೂರು ಅಪಘಾತ, ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ತಲಾ 2 ಲಕ್ಷ ರೂಪಾಯಿ ಪರಿಹಾರ

    • Mysuru News: ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ 10 ಜನರ ಕುಟುಂಬಗಳಿಗೆ ಪ್ರಧಾನಿ ಕಾರ್ಯಾಲಯದ ವತಿಯಿಂದ ಪರಿಹಾರ ಘೋಷಣೆ ಮಾಡಲಾಗಿದೆ.
Mysuru Accident: ಮೈಸೂರು ಅಪಘಾತ, ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ತಲಾ 2 ಲಕ್ಷ ರೂಪಾಯಿ ಪರಿಹಾರ
Mysuru Accident: ಮೈಸೂರು ಅಪಘಾತ, ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ತಲಾ 2 ಲಕ್ಷ ರೂಪಾಯಿ ಪರಿಹಾರ

ಮೈಸೂರು: ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ 10 ಜನರ ಕುಟುಂಬಗಳಿಗೆ ಪ್ರಧಾನಿ ಕಾರ್ಯಾಲಯದ ವತಿಯಿಂದ ಪರಿಹಾರ ಘೋಷಣೆ ಮಾಡಲಾಗಿದೆ. ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದೆ. ಈ ಸಂಬಂಧ ಟ್ವೀಟ್ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದ ಪ್ರಧಾನಿ ನರೇಂದ್ರ ಮೋದಿ “ದುರ್ಘಟನೆಯಲ್ಲಿ ಪ್ರಾಣಹಾನಿ ಸಂಭವಿಸಿರುವುದು ಅತ್ಯಂತ ದುರದೃಷ್ಟಕರ. ಅಗಲಿದ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ 10 ಜನರ ಕುಟುಂಬಗಳಿಗೆ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಸಹ ಪರಿಹಾರ ಘೋಷಿಸಿದ್ದರು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 10 ಜನರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಘೋಷಿಸಿದ್ದರು. ಟ್ವೀಟ್ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ, ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದ್ದರು.

ಅಲ್ಲದೆ ನಿನ್ನೆ ರಾತ್ರಿ ಮೈಸೂರಿನ ಆಸ್ಪತ್ರೆಗೆ ಬಳ್ಳಾರಿ ಗ್ರಾಮಾಂತರ ಶಾಸಕ ಹಾಗು ಸಚಿವ ನಾಗೇಂದ್ರ ಅವರು ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದರು. ಕುಟುಂಬಸ್ಥರ ಬಗ್ಗೆ ಮಾಹಿತಿ ನೀಡಿದ ಸಚಿವರು, ʼಮೃತಪಟ್ಟಿರುವ ಹತ್ತು ಜನರು ಒಂದೇ ಕುಟುಂಬದವರು. ಖಾನಾವಳಿಗಳಿಗೆ ರೊಟ್ಟಿ ಮಾಡಿಕೊಡುವುದು ಅವರ ವೃತ್ತಿ. ಮನೆಯವರೆಲ್ಲಾ ಸೇರಿ ರೊಟ್ಟಿ ಮಾರಿ ಜೀವನ ನಡೆಸುತ್ತಿದ್ದರು. ಎಲ್ಲರೂ ಲಿಂಗಾಯತ ಸಮುದಾಯದವರು. ಚುನಾವಣೆಯಲ್ಲಿ ನನ್ನ ಪರವಾಗಿ ಈ ಕುಟಂಬದವರು ಕೆಲಸ ಮಾಡಿದ್ದರು. ನಾನು ಈ ಕುಟುಂಬವನ್ನು ಬಹಳ ಹತ್ತಿರದಿಂದ ಬಲ್ಲೆ. ಎಲ್ಲರಿಗೂ ಅನ್ನ ಹಾಕುತ್ತಿದ್ದವರೇ ಇಂದು ದುರ್ಮರಣಕ್ಕೆ ಒಳಗಾಗಿದ್ದಾರೆʼ ಎಂದು ಬೇಸರ ವ್ಯಕ್ತಪಡಿಸಿದ್ದರು.

ಮೈಸೂರು ಜಿಲ್ಲೆಯ ಟಿ.ನರಸೀಪುರ-ಕೊಳ್ಳೆಗಾಲ ರಸ್ತೆಯ ಕುರುಬೂರು ಗ್ರಾಮದ ಪಿಂಜರಾಪೋಲ್‌ ಬಳಿ ಖಾಸಗಿ ಬಸ್ ಮತ್ತು ಇನ್ನೋವಾ ಕಾರು ಎದುರಾಗಿ ಬರುತ್ತಿದ್ದ ವೇಳೆ ಡಿಕ್ಕಿಯಾಗಿತ್ತು. ಡಿಕ್ಕಿಯಾದ ರಭಸಕ್ಕೆ ನಾಲ್ಕಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಹಲವರಿಗೆ ಗಾಯಗಳಾಗಿ ಅವರನ್ನು ಕೂಡಲೆ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಟ್ಟು ಹತ್ತು ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಇನ್ನೋವಾ ಕಾರು ಸಂಪೂರ್ಣ ಜಖಂ ಆಗಿತ್ತು. ಇವರು ಪ್ರವಾಸಕ್ಕೆಂದು ಮೈಸೂರಿಗೆ ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಅಪಘಾತದ ಭೀಕರ ದೃಶ್ಯ ಸೆರೆಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌ ಆಗಿದೆ.

ವರದಿ: ಧಾತ್ರಿ ಭಾರದ್ವಾಜ್‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ