logo
ಕನ್ನಡ ಸುದ್ದಿ  /  ಕರ್ನಾಟಕ  /  Crime News: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ರಾತ್ರಿ ಪ್ರಯಾಣಕ್ಕೆ ಆತಂಕ, ಒಂದೇ ದಿನ ಎರಡು ದರೋಡೆ, ಪ್ರಕರಣ ದಾಖಲು

Crime News: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ರಾತ್ರಿ ಪ್ರಯಾಣಕ್ಕೆ ಆತಂಕ, ಒಂದೇ ದಿನ ಎರಡು ದರೋಡೆ, ಪ್ರಕರಣ ದಾಖಲು

Praveen Chandra B HT Kannada

Aug 14, 2023 08:09 AM IST

google News

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ

    • Bengaluru Mysuru expressway: ಬೆಂಗಳೂರು ಮತ್ತು ಮೈಸೂರು ನಡುವೆ ಪ್ರಯಾಣದ ಅವಧಿ ಕಡಿಮೆ ಮಾಡಿರುವ ಎಕ್ಸ್‌ಪ್ರೆಸ್‌ವೇಯಲ್ಲಿ ಇದೀಗ ಅಪರಾಧ ಕೃತ್ಯಗಳು ಹೆಚ್ಚುತ್ತಿದ್ದು, ಪ್ರಯಾಣಿಕರಲ್ಲಿ ಆತಂಕ ಹುಟ್ಟಿಸುತ್ತಿದ್ದೆ. ಶನಿವಾರ ರಾತ್ರಿ ಎರಡು ದರೋಡೆ ಪ್ರಕರಣಗಳು ವರದಿಯಾಗಿವೆ.
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ

ಶ್ರೀರಂಗಪಟ್ಟಣ: ಬೆಂಗಳೂರು ಮತ್ತು ಮೈಸೂರು ನಡುವಿನ ಎಕ್ಸ್‌ಪ್ರೆಸ್‌ ವೇಯಲ್ಲಿ ಇದೀಗ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು, ರಾತ್ರಿ ಪ್ರಯಾಣಿಸಲು ಆತಂಕ ಪಡುವಂತಾಗಿದೆ. ಶನಿವಾರ ನಡೆದ ಎರಡು ದರೋಡೆ ಘಟನೆಗಳು ಕಾರು ಪ್ರಯಾಣಿಕರ ಸುರಕ್ಷತೆ ಕುರಿತು ಪ್ರಶ್ನೆ ಮೂಡಿಸಿದೆ. ಒಂದು ಘಟನೆಯಲ್ಲಿ ನಿಲ್ಲಿಸಿದ ಕಾರಿನ ಬಳಿ ಬಂದ ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ. ಇನ್ನೊಂದು ಘಟನೆಯಲ್ಲಿ ಚಲಿಸುತ್ತಿದ್ದ ಕಾರನ್ನೇ ಅಡ್ಡಗಟ್ಟಿ ಬೆದರಿಸಿ ದರೋಡೆ ಮಾಡಿದ್ದಾರೆ.

ಶನಿವಾರ ರಾತ್ರಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ದುಷ್ಕರ್ಮಿಗಳು ದಂಪತಿಯ ಚಿನ್ನದ ಸರವನ್ನು ದೋಚಿದ್ದಾರೆ. ಮೊದಲ ಘಟನೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗೇಟ್ನಲ್ಲಿರುವ ಭಾರತ್ ಬೆಂಚ್ ಕಂಪನಿ ಬಳಿ ಉಡುಪಿ ಜಿಲ್ಲೆಯ ನಿವಾಸಿಗಳಾದ ಶಿವಪ್ರಸಾದ್ ಮತ್ತು ಅವರ ಪತ್ನಿ ಸುಮಾ ಕಾರು ನಿಲ್ಲಿಸಿದ್ದ ವೇಳೆ ಹೆಲ್ಮೆಟ್ ಧರಿಸಿ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಯುಧ ತೋರಿಸಿ ದಂಪತಿಗೆ ಬೆದರಿಕೆ ಹಾಕಿದ್ದು, 30 ಗ್ರಾಂ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದಾರೆ.

ಎರಡನೇ ಘಟನೆಯಲ್ಲಿ, ಕೋಲಾರ ಜಿಲ್ಲೆಯ ಮಾಲೂರು ನಿವಾಸಿಗಳಾದ ಡಾ.ರಕ್ಷಿತ್ ರೆಡ್ಡಿ ಮತ್ತು ಅವರ ಪತ್ನಿ ಮಾನಸ ಅವರು ತಮ್ಮ ಕಾರಿನಲ್ಲಿ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಸುತ್ತಿದ್ದಾಗ ಶ್ರೀರಂಗಪಟ್ಟಣ ತಾಲೂಕಿನ ಗೌರಿಪುರದಲ್ಲಿ ಟೈರ್ ಪಂಚರ್ ಆಗಿದ್ದು, ದಂಪತಿ ಕಾರಿನಿಂದ ಕೆಳಗಿಳಿದು ಟೈರ್ ಬದಲಾಯಿಸುವ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ದುಷ್ಕರ್ಮಿಗಳು ಚಾಕುವಿನಿಂದ ಬೆದರಿಸಿ 40 ಗ್ರಾಂ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದಾರೆ. ಮಂಡ್ಯ ಎಸ್ಪಿ ಎನ್.ಯತೀಶ್ ಅಪರಾಧ ನಡೆದ ಎರಡೂ ಸ್ಥಳಗಳಿಗೆ ಭಾನುವಾರ ಭೇಟಿ ನೀಡಿದರು. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. (ವರದಿ: ಧಾತ್ರಿ ಭಾರದ್ವಾಜ್‌ , ಮೈಸೂರು)

ಹೆದ್ದಾರಿ ಪ್ರಯಾಣದಲ್ಲಿ ಇರಲಿ ಎಚ್ಚರ

ರಾತ್ರಿ ವಾಹನದಲ್ಲಿ ಹೆದ್ದಾರಿಗಳಲ್ಲಿ ಪ್ರಯಾಣಿಸುವವರು ತುಸು ಹೆಚ್ಚೇ ಎಚ್ಚರಿಕೆ ವಹಿಸಬೇಕು. ರಾತ್ರಿ ಒಂಟಿಯಾಗಿ ಕಾರಿನಲ್ಲಿ ಹೋಗುವವರನ್ನು ಅಡ್ಡಗಟ್ಟಿ ಬೆದರಿಸುವ ಘಟನೆಗಳು ಹೆಚ್ಚಾಗುತ್ತಿವೆ. ಹೆದ್ದಾರಿಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ತುರ್ತು ಕರೆ ಮಾಡಬೇಕಾದ ಸಂಖ್ಯೆಗಳನ್ನು ಮೊದಲೇ ಪಡೆದುಕೊಳ್ಳಿ. ಟೋಲ್‌ಗೇಟ್‌ಗಳಲ್ಲಿ ಈ ರೀತಿ ತುರ್ತು ಸಂಪರ್ಕದ ಸಂಖ್ಯೆಗಳು ದೊರಕುತ್ತವೆ. ಹೆದ್ದಾರಿಗಳಲ್ಲಿ ಕಾರಿನ ಮೇಲೆ ಮೊಟ್ಟೆ ಎಸೆದು ಕಾರು ನಿಲ್ಲುವಂತೆ ಮಾಡುವುದು, ಕಲ್ಲು ಹೊಡೆಯುವುದು ಇತ್ಯಾದಿಗಳನ್ನು ಮಾಡುತ್ತಾರೆ. ಈ ರೀತಿಯ ಘಟನೆಯಾದಗ ಕಾರು ನಿಲ್ಲಿಸಿದರೆ ಅಲ್ಲಿಗೆ ದುಷ್ಕರ್ಮಿಗಳು ಆಗಮಿಸಿ ಬೆದರಿಸಬಹುದು. ಮೊಟ್ಟೆ ಎಸೆದ ಘಟನೆ ನಡೆದಾಗ ವೈಪರ್‌ ಹಾಕಲು ಹೋಗಬೇಡಿ. ತುಂಬಾ ಅನಿವಾರ್ಯ ಇಲ್ಲದಿದ್ದರೆ ರಾತ್ರಿ ಪ್ರಯಾಣ ಅವಾಯ್ಡ್‌ ಮಾಡಿ.

ಎಕ್ಸ್‌ಪ್ರೆಸ್‌ವೇನಲ್ಲಿ ಹೆಚ್ಚಾದ ಅಪಘಾತ

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಬಳಕೆ ಅಧಿಕೃತ ಶುರುವಾಗಿ ಆರು ತಿಂಗಳೇ ಆಗುತ್ತಿದೆ. ಈವರೆಗೂ ರಸ್ತೆ ಅಪಘಾತಗಳ ಪ್ರಮಾಣ ಹೆಚ್ಚುತ್ತಲೇ ಇದೆ. ವೇಗವಾಗಿ ವಾಹನ ಓಡಿಸಿ ನಿಯಂತ್ರಣ ತಪ್ಪಿ ಮೃತಪಡುತ್ತಿರುವವರು ಒಂದು ಕಡೆಯಾದರೆ, ಮತ್ತೊಂದು ಕಡೆ ಭಾರೀ ವಾಹನಗಳ ಡಿಕ್ಕಿಯಿಂದ ಬೈಕ್‌ ಸವಾರರೂ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆರು ತಿಂಗಳಲ್ಲಿ 170 ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಮಾಹಿತಿಯಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ