logo
ಕನ್ನಡ ಸುದ್ದಿ  /  ಕರ್ನಾಟಕ  /  ಭದ್ರಾವತಿಯ ಮೈಸೂರು ಪೇಪರ್‌ ಮಿಲ್ಸ್‌ ಪುನರಾರಂಭಕ್ಕೆ ಕರ್ನಾಟಕ ಸರ್ಕಾರದ ಗಂಭೀರ ಚಿಂತನೆ: ಸಚಿವ ಎಂಬಿ ಪಾಟೀಲ್‌

ಭದ್ರಾವತಿಯ ಮೈಸೂರು ಪೇಪರ್‌ ಮಿಲ್ಸ್‌ ಪುನರಾರಂಭಕ್ಕೆ ಕರ್ನಾಟಕ ಸರ್ಕಾರದ ಗಂಭೀರ ಚಿಂತನೆ: ಸಚಿವ ಎಂಬಿ ಪಾಟೀಲ್‌

HT Kannada Desk HT Kannada

Sep 08, 2023 04:51 PM IST

google News

ಭದ್ರಾವತಿಯ ಮೈಸೂರು ಪೇಪರ್‌ ಮಿಲ್ಸ್‌ ಪುನರಾರಂಭಕ್ಕೆ ಎಂ ಬಿ ಪಾಟೀಲ್‌ ಚಿಂತನೆ

    • ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯನವರ ಕನಸಿನ ಕೂಸಾದ ಭದ್ರಾವತಿಯ ಮೈಸೂರು ಪೇಪರ್ ಮಿಲ್ಸ್ ಸದ್ಯಕ್ಕೆ 1,482 ಕೋಟಿ ರೂ. ನಷ್ಟದ ಸುಳಿಯಲ್ಲಿದೆ.
ಭದ್ರಾವತಿಯ ಮೈಸೂರು ಪೇಪರ್‌ ಮಿಲ್ಸ್‌ ಪುನರಾರಂಭಕ್ಕೆ ಎಂ ಬಿ ಪಾಟೀಲ್‌ ಚಿಂತನೆ
ಭದ್ರಾವತಿಯ ಮೈಸೂರು ಪೇಪರ್‌ ಮಿಲ್ಸ್‌ ಪುನರಾರಂಭಕ್ಕೆ ಎಂ ಬಿ ಪಾಟೀಲ್‌ ಚಿಂತನೆ

ಮೈಸೂರು: ಒಂದು ಕಾಲದಲ್ಲಿ ಕೈಗಾರಿಕಾ ರಂಗದ ಪ್ರತಿಷ್ಠೆಯ ಸಂಕೇತವಾಗಿದ್ದು ಈಗ ಬೀಗಮುದ್ರೆ ಕಂಡಿರುವ ಭದ್ರಾವತಿಯ ಮೈಸೂರು ಪೇಪರ್ ಮಿಲ್ಸ್ (ಎಂಪಿಎಂ) ಕಾರ್ಖಾನೆಗೆ ಮರುಜೀವ ನೀಡಲು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೆಜ್ಜೆ ಇಟ್ಟಿದ್ದಾರೆ. ಈ ಸಂಬಂಧ ಅವರು ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್ವರ ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಗುರುವಾರ ಇಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು.

ಸಭೆಯಲ್ಲಿ ವಿಸ್ತೃತ ವಿಚಾರ ವಿನಿಮಯ ನಡೆಸಿದ ಸಚಿವ ಎಂ.ಬಿ ಪಾಟೀಲ್ ಅವರು, ಕಾರ್ಖಾನೆ ಉಳಿಸಿಕೊಂಡಿರುವ ಸಾಲದ ಮೊತ್ತ, ವಿದ್ಯುತ್ ಬಿಲ್ ಮತ್ತು ಮುಂದಿನ ಹಾದಿ ಏನಾಗಿರಬೇಕು ಎಂಬ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅಧ್ಯಕ್ಷತೆಯಲ್ಲಿ ಸಭೆ‌ ನಡೆಸಲು‌ ಸಚಿವರು‌ ಸೂಚಿಸಿದರು. ಈ ಸಭೆಗೆ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅವರನ್ನೂ ಕರೆಯಲು ಸಚಿವ ಎಂ.ಬಿ ಪಾಟೀಲ್ ಸೂಚಿಸಿದರು.

ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯನವರ ಕನಸಿನ ಕೂಸಾದ ಮೈಸೂರು ಪೇಪರ್ ಮಿಲ್ಸ್ ಸದ್ಯಕ್ಕೆ 1,482 ಕೋಟಿ ರೂ. ನಷ್ಟದ ಸುಳಿಯಲ್ಲಿದೆ. ಜೊತೆಗೆ 229 ಕೋಟಿ ರೂ.ಗಳಷ್ಟು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ರಾಜ್ಯ ಸರ್ಕಾರ 2010 ರಿಂದ ಈತನಕ 850 ಕೋಟಿ ರೂ. ಸಾಲದ ರೂಪದಲ್ಲಿ ಕೊಟ್ಟಿದೆ ಎಂದು ಅವರು ತಿಳಿಸಿದರು.

ಈ ಮಧ್ಯೆ ಎಂಪಿಎಂ ಖಾಸಗೀಕರಣಕ್ಕೆ ಯತ್ನ ನಡೆದಿತ್ತು. ಸಂಸ್ಥೆ ಮೇಲೆ ಇರುವ ಆರ್ಥಿಕ‌ ಹೊರೆಯನ್ನು ನಿಭಾಯಿಸಲು ಹಣಕಾಸು ಇಲಾಖೆಯ ಸಹಕಾರ ಬೇಕಾಗುತ್ತದೆ. ಹೀಗಾಗಿ ಅಧಿಕಾರಿಗಳ ಸಭೆ ನಂತರ ಖಾಸಗೀಕರಣದ ರೂಪುರೇಷೆ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದರು.

ಎಂಪಿಎಂ ವ್ಯಾಪ್ತಿಯಲ್ಲಿ ಸುಮಾರು 23 ಸಾವಿರ ಹೆಕ್ಟೇರ್ ಅರಣ್ಯ ಮತ್ತು ಅರಣ್ಯೇತರ ಭೂಮಿ ಇದ್ದು ಇಲ್ಲಿ ಸದ್ಯಕ್ಕೆ ಅಕೇಶಿಯಾ, ನೀಲಗಿರಿ ಮತ್ತು ಬಿದಿರನ್ನು ಬೆಳೆಯಲಾಗುತ್ತಿದೆ. ಒಂದು ವೇಳೆ ಕಾರ್ಖಾನೆಯನ್ನು ಗುತ್ತಿಗೆ ‌ನೀಡಿದರೂ, ಕಾರ್ಖಾನೆ ಜಾಗದಲ್ಲಿ‌, ನಿಷೇಧಿಸಿರುವ ನೀಲಿಗಿರಿ ಬೆಳೆಯಲು ಅವಕಾಶ‌ ನೀಡಬಹುದೇ ಎಂಬುದನ್ನೂ ಕೂಲಂಕಶವಾಗಿ ಪರಿಶೀಲಿಸಬೇಕು ಎಂದು ಅವರು ವಿವರಿಸಿದರು.

ಇದಲ್ಲದೆ ಎಂಪಿಎಂನ ಕೆಲವು ಉದ್ಯೋಗಿಗಳಿಗೆ ಸರ್ಕಾರದ ವಿವಿಧ ಸಂಸ್ಥೆ/ನಿಗಮಗಳಲ್ಲಿ ನೌಕರಿ ಕೊಡಿಸುವ ಕೆಲಸವೂ ಆಗುತ್ತಿದೆ. ಕೆಲವರಿಗೆ ಸ್ವಯಂ ನಿವೃತ್ತಿ ನೀಡಲಾಗಿದೆ. ಜತೆಗೆ ತಾತ್ಕಾಲಿಕ ಆಧಾರದಲ್ಲಿ ಕೆಲಸ ಮಾಡುತ್ತಿರುವ 250 ಫಾರೆಸ್ಟ್ ವಾಚರ್ ಗಳ ವೇತನ ಏರಿಕೆಗೂ ಒಂದು ಪರಿಹಾರ ರೂಪಿಸಬೇಕು ಎಂದು ಎಂ.ಬಿ ಪಾಟೀಲ್ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ‌ ಕಾರ್ಯದರ್ಶಿ ಸೆಲ್ವಕುಮಾರ್, ಶಿವಮೊಗ್ಗ ಜಿಲ್ಲಾಧಿಕಾರಿ ಮತ್ತು ಎಂಪಿಎಂ ವ್ಯವಸ್ಥಾಪಕ ನಿರ್ದೇಶಕ ಸೆಲ್ವಮಣಿ, ಎಪಿಸಿಸಿಎಫ್ ವನಶ್ರೀ ವಿಪಿನ್ ಸಿಂಗ್, ಚೀಫ್ ಆಪರೇಟಿಂಗ್ ಆಫೀಸರ್ ರವೀಂದ್ರನಾಥ್ ಮುಂತಾದವರು ಭಾಗವಹಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ