logo
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು ಅಪರಾಧ ಸುದ್ದಿ; 50,000 ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದ ಎಫ್‌ಡಿಎ

ಮೈಸೂರು ಅಪರಾಧ ಸುದ್ದಿ; 50,000 ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದ ಎಫ್‌ಡಿಎ

Umesh Kumar S HT Kannada

Apr 04, 2024 12:51 PM IST

google News

ಮೈಸೂರು ಅಪರಾಧ ಸುದ್ದಿ

  • ಮೈಸೂರು ಅಪರಾಧ ಸುದ್ದಿಗಳು: ಊಟೋಪಚಾರದ ಬಿಲ್ ಪಾವತಿಗೆ 50,000 ರೂಪಾಯಿ ಲಂಚ ಪಡೆಯುವಾಗ ಪ್ರಾದೇಶಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತರಬೇತಿ ಕೇಂದ್ರದ ಎಫ್‌ಡಿಎ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದ ಘಟನೆ ನಡೆದಿದೆ. ಇದರ ಜೊತೆಗೆ ಇನ್ನೆರಡು ಅಪರಾಧ ಸುದ್ದಿಗಳು ಇಲ್ಲಿವೆ.

    (ವರದಿ- ರಂಗಸ್ವಾಮಿ, ಮೈಸೂರು)

ಮೈಸೂರು ಅಪರಾಧ ಸುದ್ದಿ
ಮೈಸೂರು ಅಪರಾಧ ಸುದ್ದಿ

ಮೈಸೂರು: ಶಿಬಿರಾರ್ಥಿಗಳಿಗೆ ಊಟೋಪಚಾರದ ಬಿಲ್ ಪಾವತಿ ಸಂಬಂಧ 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಮೈಸೂರಿನ ಮೇಟಗಳ್ಳಿಯಲ್ಲಿರುವ ಪ್ರಾದೇಶಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತರಬೇತಿ ಕೇಂದ್ರದ ಪ್ರಥಮ ದರ್ಜೆ ಸಹಾಯಕ ಮಹೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳ ಕೈಗೆ ಮಹೇಶ್ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ತರಬೇತಿ ಕೇಂದ್ರದ ಶಿಬಿರಾರ್ಥಿಗಳಿಗೆ ಊಟೋಪಚಾರ ನೀಡಿದ್ದಕ್ಕೆ ಎಂದು ತರಬೇತಿ ಕೇಂದ್ರದಿಂದ 5.16 ಲಕ್ಷ ರೂಪಾಯಿ ಬಿಲ್ ಬಿಡುಗಡೆಯಾಗಿತ್ತು. ಈ ಬಿಲ್ ಪಾವತಿ ಮಾಡಲು ಕ್ಯಾಟರಿಂಗ್ ಮಾಲೀಕ ಶಿವನಾಗ ಎಂಬುವವರ ಬಳಿ ಮಹೇಶ್ 80,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಕ್ಯಾಟರಿಂಗ್ ಮಾಲೀಕ ಶಿವನಾಗ ಅವರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು‌.

ಶಿವನಾಗ ಅವರು ನೀಡಿದ್ದ ದೂರಿ‌ನ‌ ಮೇರೆಗೆ ಲೋಕಾಯುಕ್ತ ಎಸ್ ಪಿ ಸಜಿತ್, ಡಿ ವೈ ಎಸ್ ಪಿ ಕೃಷ್ಣಯ್ಯ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಗಳಾದ ಜಯರತ್ನ, ಉಮೇಶ್ ಹಾಗು ಸಿಬ್ಬಂದಿಗಳಾದ ಲೋಕೇಶ್, ರಮೇಶ್, ಎಚ್ ಎನ್ ಗೋಪಿ, ಪ್ರಕಾಶ್, ಮೋಹನ್ ಗೌಡ, ವೀಣಾ, ಆಶಾ ಮೊದಲಾದವರು ಕಾರ್ಯಾಚರಣೆ ನಡೆಸಿದ್ದು, ಕ್ಯಾಟರಿಂಗ್ ಮಾಲೀಕ ಶಿವನಾಗ ಅವರಿಂದ ಮಹೇಶ್ 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಹಣದ ಸಮೇತ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಎಲಚಗೆರೆ ಚೆಕ್ ಪೋಸ್ಟ್‌ನಲ್ಲಿ 8.50 ಲಕ್ಷ ರೂಪಾಯಿ ಜಪ್ತಿ

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಚುನಾವಣಾ ಅಧಿಕಾರಿ ಜಗನ್ನಾಥ್ ಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ನೇತೃತ್ವದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ 8.50 ಲಕ್ಷ ರೂಪಾಯಿ ಜಪ್ತಿ ಮಾಡಲಾಗಿದೆ. ನಂಜನಗೂಡು ತಾಲ್ಲೂಕಿನ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿದೆ ಈ ಎಲಚಗೆರೆ‌ ಚೆಕ್ ಪೋಸ್ಟ್. ಚೆಕ್ ಪೋಸ್ಟ್‌ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಕಾರಿನಲ್ಲಿದ್ದ 8.50ಲಕ್ಷ ಹಣ ಜಪ್ತಿ ಮಾಡಲಾಗಿದ್ದು, ಅನುಮತಿ ಪಡೆಯದ ಮತ್ತು ಸೂಕ್ತ ದಾಖಲಾತಿ ಇಲ್ಲದ ಹಣ ಇದಾಗಿದೆ.

ಕರ್ತವ್ಯ ನಿರತ ಪೊಲೀಸರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಮೈಸೂರು ಜಿಲ್ಲೆ ಕೆ ಆರ್ ನಗರ ತಾಲೂಕಿ‌ನ ತಿಪ್ಪೂರು ಗ್ರಾಮದಲ್ಲಿ ಕಳೆದ ರಾತ್ರಿ ಸುಮಾರು 11 ರಿಂದ 12 ಗಂಟೆ ನಡುವಿನ ಸಮಯದಲ್ಲಿ ಚುನಾವಣೆ ಉದ್ದೇಶದಿಂದ ಅಕ್ರಮ ಮದ್ಯ ಸಂಗ್ರಹಣೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾದ ಕಾರಣ ಪರಿಶೀಲಿಸಲು ಉಪ ನಿರೀಕ್ಷಕರು ಹಾಗೂ ನಾಲ್ಕು ಜನ ಪೊಲೀಸರು ತೆರಳಿದ್ದ ವೇಳೆ ಮೇಲೆ ಕೆಲವು ವ್ಯಕ್ತಿಗಳು ಪೊಲೀಸರ ಮೇಲೆ ದಾಳಿ ನಡೆಸಿರುವ ಆತಂಕಕಾರಿ ಘಟನೆ ನಡೆದಿದೆ.

ಈ ವೇಳೆ ಸಂತೋಷ್ ಎಂಬ ಹಿರಿಯ ಪೊಲೀಸ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಇವರಿಗೆ ಕೆ ಆರ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿ ದಾಖಲು ಮಾಡಲಾಗಿದೆ. ಆರೋಪಿಗಳ ವಿರುದ್ಧ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307 ಹಾಗೂ 353 ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

(ವರದಿ- ರಂಗಸ್ವಾಮಿ, ಮೈಸೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ