logo
ಕನ್ನಡ ಸುದ್ದಿ  /  ಕರ್ನಾಟಕ  /  Mysuru Muda Scam: ಮೊದಲ ಬಾರಿ ಪತ್ನಿ ವಿರುದ್ದ ಕೇಳಿ ಬಂದ ಆರೋಪಕ್ಕೆಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಏನು?

Mysuru Muda Scam: ಮೊದಲ ಬಾರಿ ಪತ್ನಿ ವಿರುದ್ದ ಕೇಳಿ ಬಂದ ಆರೋಪಕ್ಕೆಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಏನು?

Umesha Bhatta P H HT Kannada

Jul 02, 2024 05:02 PM IST

google News

ಪತ್ನಿ ವಿರುದ್ದ ನಿವೇಶನದ ಆರೋಪ ಕೇಳಿ ಬಂದಿದ್ದಕ್ಕೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ.

    • Siddaramaiah ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರು ಸಾರ್ವಜನಿಕವಾಗಿ ಕೇಳಿ ಬಂದಿದೆ. ಇದಕ್ಕೆ ಅವರು ಉತ್ತರ ನೀಡಿದ್ದಾರೆ. 
ಪತ್ನಿ ವಿರುದ್ದ ನಿವೇಶನದ ಆರೋಪ ಕೇಳಿ ಬಂದಿದ್ದಕ್ಕೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ.
ಪತ್ನಿ ವಿರುದ್ದ ನಿವೇಶನದ ಆರೋಪ ಕೇಳಿ ಬಂದಿದ್ದಕ್ಕೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ.

ಬೆಂಗಳೂರು: ಮೈಸೂರಿನಲ್ಲಿ ತವರು ಮನೆಯವರು ನನ್ನ ಪತ್ನಿಯವರಿಗೆ ನೀಡಿದ್ದ ಜಮೀನನ್ನು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರವು( Muda) ಸ್ವಾಧೀನ ಮಾಡಿಕೊಂಡಿದ್ದು, ಅದಕ್ಕೆ ಪರ್ಯಾಯವಾಗಿ 50: 50 ಅನುಪಾತದಲ್ಲಿ ಬೇರೆಡೆ ನಿವೇಶನಗಳನ್ನು ಬಿಜೆಪಿ ಅಧಿಕಾರದಲ್ಲಿದ್ದಾಗ ಕೊಡಲಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಮಾಧ್ಯಮದವರೊಂದಿಗೆ ಮಂಗಳವಾರ ಮಾತನಾಡಿದ ಅವರು, ಮೂಡಾ ನಿವೇಶನ ಹಂಚಿಕೆ ಬಗ್ಗೆ ವಿವರವಾಗಿ ಪ್ರತಿಕ್ರಿಯೆ ನೀಡಿದರು.ಬಿಜೆಪಿ ಅವರು ಅಧಿಕಾರದಲ್ಲಿರುವಾಗ ನಮಗೆ ನಿವೇಶನ ಕೊಟ್ಟಿದ್ದಾರೆ. ನನ್ನ ಪತ್ನಿಗೆ ಸೇರಿದ್ದ 3 ಎಕರೆ 16 ಗಂಟೆ ಜಮೀನು ರಿಂಗ್ ರೋಡ್ ಪಕ್ಕದ ಕೆಸರೆಯಲ್ಲಿದೆ. ಅದನ್ನು ನನ್ನ ಭಾವಮೈದುನ ಪಡೆದಿದ್ದು ನನ್ನ ಪತ್ನಿಗೆ ದಾನವಾಗಿ ಕೊಟ್ಟಿದ್ದಾರೆ. ನಾನು ಅಧಿಕಾರದಲ್ಲಿದ್ದಾಗ ತೆಗೆದುಕೊಳ್ಳಲು ಹೋಗಿಲ್ಲ. 50: 50 ಅನುಪಾತದಲ್ಲಿ ಕೊಡಬೇಕು ಎಂದು ಕಾನೂನು ಮಾಡಿದ್ದು ಬಿಜೆಪಿಯವರು. ನಮ್ಮ ಜಮೀನನ್ನು ಸ್ವಾಧೀನ ಮಾಡಿಕೊಳ್ಳದೇ ಮೂಡಾದವರು ನಿವೇಶನಗಳನ್ನು ಮಾಡಿ ಹಂಚಿದ್ದರು. ಹಂಚಿದ ಮೇಲೆ ನಮಗೆ ಕಾನೂನುಬದ್ಧವಾಗಿ ನಿವೇಶನ ಕೊಡಬೇಕು. ಅದರಂತೆ 50:50 ಕೊಡಲು ಒಪ್ಪಿದರು ಎಂದರು.

ಸರ್ಕಾರದ ನಿಯಮಾವಳಿ, ಆದೇಶದ ಪ್ರಕಾರ ಕೊಡಿ ಎಂದು ಬಿಜೆಪಿ ಅಧಿಕಾರದಲ್ಲಿದ್ದಾಗ ಕೇಳಿಕೊಂಡಿದ್ದೆವು. ಆಗ ಅವರು ಬೇರೆ ಬೇರೆ ಸ್ಥಳಗಳಲ್ಲಿ ಸಮಾನಾಂತರ ನಿವೇಶನಗಳನ್ನು ಕೊಟ್ಟಿದ್ದಾರೆ.ಇದರಲ್ಲಿ ತಪ್ಪೇನಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಅಶೋಕ ಪ್ರಶ್ನೆಗಳ ಸುರಿಮಳೆ

ಇದೇ ವಿಚಾರವಾಗಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ, ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ರೂಪಾಯಿ ದಲಿತರ ಹಣವನ್ನ ಗುಳುಂ ಮಾಡಿರುವ 'ಸಿದ್ಧ'ಹಸ್ತರು ಈಗ ಮೈಸೂರಿನ ಮುಡಾದಲ್ಲಿ 4,000 ಕೋಟಿ ರೂ. ಗುಳುಂ ಮಾಡುವ ಮೂಲಕ ಮತ್ತೊಮ್ಮೆ ತಮ್ಮ 'ಕೈ'ಚಳಕ ಪ್ರದರ್ಶನ ಮಾಡಿದ್ದಾರೆ ಎಂದು ಕಿಚಾಯಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ನವರೇ, ತಮ್ಮ ಧರ್ಮ ಪತ್ನಿ ಅವರ ಹೆಸರಿನಲ್ಲೂ ನಿಯಮ ಬಾಹಿರವಾಗಿ ನಿವೇಶನ ವರ್ಗಾವಣೆ ಆಗಿರುವ ಸುದ್ದಿ ಹೊರಬಂದಿದೆಯಲ್ಲ ಇದನ್ನ ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರಿ? ಆರೋಪ ಕೇಳಿಬಂದಿರುವ ಮುಡಾ ಅಧಿಕಾರಿಗಳನ್ನ ಅಮಾನತು ಮಾಡದೆ, ಕೇವಲ ವರ್ಗಾವಣೆ ಮಾಡಿ ಕೈತೊಳೆದುಕೊಂಡಿದ್ದೀರಲ್ಲ, ಯಾರನ್ನು ರಕ್ಷಣೆ ಮಾಡಲು ಹೊರಟಿದ್ದೀರಿ? 4,000 ಕೋಟಿ ರೂಪಾಯಿ ಮೌಲ್ಯದ ಈ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣವನ್ನ ಅಸಲಿಗೆ ಸಿಬಿಐಗೆ ವಹಿಸಬೇಕು ಅಥವಾ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ತನಿಖಾ ಆಯೋಗಕ್ಕೆ ನೀಡಬೇಕು. ಅದು ಬಿಟ್ಟು ತನಿಖೆಗೆ ಇಬ್ಬರು ಐಎಎಸ್ ಅಧಿಕಾರಿಗಳನ್ನ ನೇಮಿಸಿ ಪ್ರಕರಣವನ್ನ ಮುಚ್ಚಿಹಾಕಲು ಹೊರಟಿದ್ದೀರಲ್ಲ50:50 ಅನುಪಾತ ಹಂಚಿಕೆಗೆ ಅನುಮತಿ ನೀಡಿದ್ದು ಯಾರು? )ಪರ್ಯಾಯ ನಿವೇಶನ ನೀಡುವಾಗ ಅದೇ ಬಡಾವಣೆ ಬಿಟ್ಟು ಲಾಭದ ಬಡಾವಣೆಗಳಲ್ಲಿ ಅವಕಾಶಕ್ಕೆ ಶಿಫಾರಸ್ಸು ಮಾಡಿದ್ದು ಯಾರು? ಸಚಿವ ಸಂಪುಟದ ಅನುಮತಿ ಪಡೆಯದೆ ಮನಸ್ಸಿಗೆ ಬಂದಂತೆ ನಿವೇಶನ ನೀಡಲು ಅನುಮತಿ ನೀಡಿದ್ದು ಯಾರು? ನಿಮ್ಮ ತವರು ಜಿಲ್ಲೆಯಲ್ಲಿ, ಸ್ವಂತ ಊರಿನಲ್ಲಿ, ತಮ್ಮ ಆಪ್ತ ಸಚಿವರ ಇಲಾಖೆಯಲ್ಲಿ, ಇಂಥದ್ದೊಂದು ಬೃಹತ್ ಹಗರಣ ತಮ್ಮ ಗಮನಕ್ಕೆ ಬಾರದೆ, ತಮ್ಮ ಕೈವಾಡವಿಲ್ಲದೆ ನಡೆಯಲು ಸಾಧ್ಯವೇ? ಎಂದು ಅಶೋಕ ಪ್ರಶ್ನಿಸಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ