Tiger captured: ಸೆರೆ ಸಿಕ್ಕ ನಾಗರಹೊಳೆ ಹುಲಿರಾಯ: 17 ದಿನದ ನಂತರ ಯಶಸ್ವಿ ಕಾರ್ಯಾಚರಣೆ, ಆರು ತಿಂಗಳಲ್ಲೇ ಮೂರನೇ ಹುಲಿ ಸೆರೆ
Sep 20, 2023 10:54 AM IST
ಕೊನೆಗೂ ಸೆರೆ ಸಿಕ್ಕ ನಾಗರಹೊಳೆ ಹುಲಿರಾಯ.
- Tiger captured ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ತಾಲ್ಲೂಕಿನಲ್ಲಿ ಬಾಲಕನೊಬ್ಬನ ಮೇಲೆ ದಾಳಿ ಮಾಡಿ ಬಲಿ ಪಡೆದಿದೆ ಎನ್ನಲಾದ ಹುಲಿಯನ್ನು ಅರಣ್ಯ ಇಲಾಖೆ( Karnataka Forest Department) ಸೆರೆ ಹಿಡಿದಿದೆ. ಎಂಟು ವರ್ಷದ ಗಂಡು ಹುಲಿ ಇದಾಗಿದೆ.
ಮೈಸೂರು: ಸತತ ಹದಿನೇಳು ದಿನದಿಂದ ಹುಲಿ ಸೆರೆಗೆ ಕರ್ನಾಟಕ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ. ಬಾಲಕನನ್ನು ಕೊಂದು ಹಾಕಿದೆ ಎನ್ನಲಾದ ಎಂಟು ವರ್ಷದ ಗಂಡು ಹುಲಿಯನ್ನು ಸೆರೆ ಹಿಡಿಯಲಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಕ್ಕಪಕ್ಕದ ಪ್ರದೇಶದಲ್ಲಿಯೇ ಆರು ತಿಂಗಳ ಒಳಗೆ ಸೆರೆ ಹಿಡಿದಿರುವ ಮೂರನೇ ಹುಲಿ ಇದಾಗಿದೆ. ಬೋನಿನಲ್ಲಿ ಇರಿಸಿ ಹುಲಿಗೆ ನಾಗರಹೊಳೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಸೆರೆ ಸಿಕ್ಕಿರುವ ಎರಡು ಹುಲಿಗಳು ಮೃಗಾಲಯದ ಪುನರ್ವಸತಿ ಕೇಂದ್ರಗಳಲ್ಲಿವೆ.
ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತೆ ಇರುವ ಕಲ್ಲಹಟ್ಟಿ ಗ್ರಾಮದ ಜಮೀನಿನಲ್ಲಿಯೇ ಮಂಗಳವಾರ ರಾತ್ರಿ ಹುಲಿಯನ್ನು ಸೆರೆ ಹಿಡಿಯಲಾಗಿದೆ.
ಬಾಲಕ ಸಾವು
ಎಚ್.ಡಿ.ಕೋಟೆ ತಾಲೂ ಕಲ್ಲಹಟ್ಟಿ ಗ್ರಾಮದ ರೈತ ಕೃಷ್ಣನಾಯಕ ಮತ್ತು ಮಾದೇವಿ ಬಾಯಿ ಎಂಬವರ ಪುತ್ರ ಚರಣ್ ನಾಯಕ್ (9) ಸೆಪ್ಟಂಬರ್ 4 ರಂದು ಸೋಮವಾರ ಶಾಲೆ ಮುಗಿಸಿಕೊಂಡು ತಂದೆ ತಾಯಿಯಿದ್ದ ಜಮೀನಿಗೆ ಹೋಗಿದ್ದ. ಈ ವೇಳೆ ಹುಲಿ ದಾಳಿ ನಡೆಸಿದ್ದರಿಂದ ಆತ ಮೃತಪಟ್ಟಿದ್ದ. ಆತನ ದೇಹದ ಭಾಗವನ್ನು ಹುಲಿ ತಿಂದು ಹೋಗಿತ್ತು. ದಾಳಿಯಾಗಿದ್ದನ್ನು ಗಮನಿಸಿದ್ದ ಸ್ಥಳೀಯರು ಹುಲಿ ಹೊಡೆತದಿಂದಲೇ ಬಾಲಕ ಮೃತಪಟ್ಟಿರುವುದಾಗಿ ಹೇಳಿದ್ದರು. ಹುಲಿ ಸೆರೆ ಹಿಡಿಯುವಂತೆ ಒತ್ತಾಯ ಮಾಡಿದ್ದರು.
ನಿರಂತರ ಕಾರ್ಯಾಚರಣೆ
ಹದಿನೇಳು ದಿನದಿಂದಲೂ ಎಚ್‌ಡಿಕೋಟೆ ತಾಲ್ಲೂಕಿನ ಕಲ್ಲಹಟ್ಟಿ ಹಾಗೂ ಸುತ್ತಮುತ್ತಲ ಭಾಗದಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ಮುಂದುವರಿದಿತ್ತು. ಕಾರ್ಯಾಚರಣೆಯಲ್ಲಿ ಎಸಿಎಫ್ ರಂಗಸ್ವಾಮಿ, ದಯಾನಂದ್, ಅಂತರಸಂತೆ ವಲಯ ಅರಣ್ಯ ಅಧಿಕಾರಿ ಭರತ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಸಿಬ್ಬಂದಿ, ಅರಣ್ಯ ಇಲಾಖೆ ವಿಶೇಷ ಕಾರ್ಯಪಡೆ( STPF) ಸೇರಿದಂತೆ ಅಧಿಕಾರಿಗಳು, ತಜ್ಞರು ಸ್ಥಳದಲ್ಲೇ ಬೀಡುಬಿಟ್ಟಿದ್ದರು. ದಸರಾದಲ್ಲಿ ಪಾಲ್ಗೊಂಡಿದ್ದ ಅರ್ಜುನ ಸೇರಿದಂತೆ ಆರಕ್ಕೂ ಹೆಚ್ಚು ಆನೆಗಳನ್ನು ಬಳಸಿಕೊಂಡು ಕೂಂಬಿಂಗ್ ಮಾಡಿದ್ದರೂ ಹುಲಿ ಪತ್ತೆಯಾಗಿರಲಿಲ್ಲ. ನಿರಂತರವಾಗಿ ಕಾರ್ಯಾಚರಣೆ ನಡೆದಿತ್ತು. ಅರ್ಜುನ ಆನೆ ನಾಲ್ಕು ದಿನದ ಹಿಂದೆಯೇ ವಾಪಾಸಾಗಿತ್ತು. ಮೂರ್ನಾಲ್ಕು ಕಡೆ ಬೋನು ಇರಿಸಿ ಕ್ಯಾಮರಾಗಳನ್ನೂ ಅಳವಡಿಸಲಾಗಿತ್ತು. ಥರ್ಮಲ್ ಢ್ರೋಣ್ ಕೂಡ ಬಳಸಿ ಹುಲಿ ಇರುವಿಕೆ ಮಾಹಿತಿ ಪಡೆಯಲಾಗಿತ್ತು. ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದರೂ ಹುಲಿ ಕಂಡಿರಲಿಲ್ಲ.
ಕಂಡ ಹುಲಿರಾಯ
ಸಾಮಾನ್ಯವಾಗಿ ಹುಲಿ ಏನನ್ನಾದರೂ ಸಾಯಿಸಿದರೆ ಮತ್ತೆ ಅದೇ ಜಾಗಕ್ಕೆ ಆಹಾರ ಹುಡುಕಿ ಬಂದೇ ಬರುತ್ತವೆ. ಅಲ್ಲಿಗೆ ಈ ಹುಲಿ ಬರಬಹುದು ಎನ್ನುವ ಲೆಕ್ಕಾಚಾರದೊಂದಿಗೆ ಸಿಬ್ಬಂದಿ ಸುತ್ತಮುತ್ತ ಕಾಯುತ್ತಲೇ ಇದ್ದರು. ಮಂಗಳವಾರ ಸಂಜೆ ಹೊತ್ತಿಗೆ ಕಲ್ಲಹಟ್ಟಿ ಸಮೀಪದಲ್ಲೇ ಹುಲಿ ಇರುವುದನ್ನು ಸಿಬ್ಬಂದಿ ಕಂಡಿದ್ದಾರೆ. ಕೂಡಲೇ ನಾಗರಹೊಳೆ ವನ್ಯಜೀವಿ ವೈದ್ಯಾಧಿಕಾರಿ ಡಾ.ರಮೇಶ್, ಅರವಳಿಕೆ ತಜ್ಞ ರಂಜನ್ ಸಹಿತ ಹಲವರು ಅಲ್ಲಿಗೆ ಧಾವಿಸಿದ್ದು ಹುಲಿ ಇರುವುದನ್ನು ಗಮನಿಸಿ ಅರವಳಿಕೆ ನೀಡಿದ್ದಾರೆ. ಬಳಿಕ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಸೆರೆ ಸಿಕ್ಕ ಹುಲಿ ಆರೋಗ್ಯಕರವಾಗಿದೆ.
ಹುಲಿ ಸೆರೆಗೆ ಪ್ರಯತ್ನ ನಿಂತಿರಲಿಲ್ಲ. ಹದಿನೇಳು ದಿನದವರೆಗೂ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಲೇ ಇದ್ದರು. ಈಗ ಒಂದು ಗಂಡು ಹುಲಿ ಸೆರೆ ಹಿಡಿಯಲಾಗಿದೆ. ಹುಲಿ ಆರೋಗ್ಯದಿಂದ ಇದೆ. ಕಾಡಿಗೆ ಹೊಂದಿಕೊಂಡಂತೆ ಜಮೀನುಗಳೂ ಇರುವುದರಿಂದ ಹಸಿರು ವಾತಾವರಣ ನೋಡಿ ಬರುತ್ತವೆ. ಇಂತಹ ಸಂದರ್ಭದಲ್ಲಿ ದಾಳಿಯಾಗಿರಬಹುದು. ಹುಲಿಯನ್ನು ಭದ್ರಾ ಹುಲಿಧಾಮದಲ್ಲಿ ಬಿಡುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ ಚಿಕ್ಕನರಗುಂದ ತಿಳಿಸಿದರು.
ಮೂರನೇ ಹುಲಿ
ಈ ವರ್ಷದ ಫೆಬ್ರವರಿಯಿಂದ ಈವರೆಗೂ ನಾಗರಹೊಳೆ ಸುತ್ತಮುತ್ತಲಿನಲ್ಲೇ ಮೂರು ಹುಲಿಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಎಚ್‌ಡಿಕೋಟೆ ತಾಲ್ಲೂಕು ಹಾಗೂ ಕೊಡಗಿನಲ್ಲಿ ಒಂದು ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ಒಂದು ಹುಲಿ ಮೈಸೂರಿನ ಕೂರ್ಗಳ್ಳಿ ಹಾಗೂ ಮತ್ತೊಂದು ಹುಲಿ ಬೆಂಗಳೂರಿನ ಬನ್ನೇರಘಟ್ಟ ಪುನರ್ ವಸತಿ ಕೇಂದ್ರದಲ್ಲಿವೆ.
ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಹುಲಿಗಳ ಸಂಖ್ಯೆ ಅಧಿಕವಾಗಿದ್ದು, ಗಡಿ ಭಾಗದಲ್ಲಿಯೇ ಕೆಲವು ಇರುವ ಮಾಹಿತಿಯೂ ಅರಣ್ಯ ಇಲಾಖೆಗೆ ಇದೆ. ಅಂದರೆ ಮಿತಿಗಿಂತ ಹೆಚ್ಚಿನ ಹುಲಿ ಇರುವುದು ಸಮಸ್ಯೆಗೆ ಕಾರಣವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕಾಡಿನ ಗಡಿಯಲ್ಲಿ ಬೀಡು ಬಿಟ್ಟಿರುವ ಹುಲಿ ಸೆರೆ ಹಿಡಿದು ಬೇರೆಡೆಗೆ ಬಿಡುವ ಬೇಡಿಕೆಯಿದ್ದರೂ ಸುಲಭವಾಗಿ ಮಾಡಲು ಆಗದು. ಈಗ ಸೆರೆ ಹಿಡಿದಿರುವ ಹುಲಿಗೂ ರೇಡಿಯೋ ಕಾಲರ್ ಅಳವಡಿಸಿ ಭದ್ರಾಕ್ಕೆ ಬಿಡುವ ಸಾಧ್ಯತೆಯಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಗ್ರಾಮಸ್ಥರ ಆಕ್ರೋಶ
ಈ ವೇಳೆ ಗ್ರಾಮಸ್ಥರು ಹುಲಿ ತೋರಿಸುವಂತೆ ಒತ್ತಡ ಹಾಕಿದರು. ಇದಲ್ಲದೇ ಇನ್ನೊಂದು ಹುಲಿ ಈ ಭಾಗದಲ್ಲಿದೆ. ಅದನ್ನೂ ಸೆರೆ ಹಿಡಿಯಬೇಕು ಎಂದು ಆಕ್ರೋಶ ಹೊರ ಹಾಕಿದರು. ಸೆರೆ ಸಿಕ್ಕ ಹುಲಿಯನ್ನು ಹಿಡಿದುಕೊಂಡು ಹೋಗುವಾಗಲೂ ಕೊಂಚ ಗೊಂದಲ ಉಂಟಾಯಿತು. ಅರಣ್ಯ ಇಲಾಖೆಯವರು ಸ್ಥಳೀಯರ ಮನ ಒಲಿಸಿದರು.
ಇದನ್ನೂ ಓದಿರಿ