ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ರಸ್ತೆಗೆ ಇಳಿದ ಇಬ್ಬರು ಪ್ರವಾಸಿಗರನ್ನು ಅಟ್ಟಿಸಿಕೊಂಡು ಬಂದ ಕಾಡಾನೆ, ವಿಡಿಯೋ ವೈರಲ್
Feb 03, 2024 10:59 AM IST
ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಭಾಗದಲ್ಲಿ ರಸ್ತೆಗೆ ಇಳಿದ ಇಬ್ಬರು ಪ್ರವಾಸಿಗರನ್ನು ಅಟ್ಟಿಸಿಕೊಂಡು ಬಂದ ಕಾಡಾನೆಯ ವಿಡಿಯೋ ವೈರಲ್ ಆಗಿದ್ದು, ಅದರ ಫೋಟೋ ತುಣಕುಗಳಿವು.
Viral Video: ಕಾಡಾನೆಗಳ ದಾಳಿ ಹೊಸದಲ್ಲ. ರಕ್ಷಿತಾರಾಣ್ಯ ಮಾರ್ಗದಲ್ಲಿ ಸಂಚರಿಸುವಾಗ ಪ್ರಯಾಣಿಕರು ಜಾಗರೂಕರಾಗಿರಬೇಕು ಎಂಬುದಕ್ಕೆ ಸಾಕಷ್ಟು ನಿದರ್ಶನಗಳು ಕಣ್ಣ ಮುಂದಿವೆ. ಆ ಪಟ್ಟಿಗೆ ಇತ್ತೀಚಿನ ಸೇರ್ಪಡೆ ಇದು. ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ರಸ್ತೆಗೆ ಇಳಿದ ಇಬ್ಬರು ಪ್ರವಾಸಿಗರನ್ನು ಅಟ್ಟಿಸಿಕೊಂಡು ಬಂದ ಕಾಡಾನೆಯ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು: ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ (Bandipur Tiger Reserve Forest) ಫೋಟೋ ತೆಗೆಯಲು ಕಾರಿನಿಂದ ಇಳಿದ ಇಬ್ಬರು ಪ್ರವಾಸಿಗರನ್ನು ಕಾಡಾನೆ ಅಟ್ಟಿಸುತ್ತಿರುವ ದೃಶ್ಯದ ವಿಡಿಯೋ ವೈರಲ್ (Viral Video) ಆಗಿದೆ.
ಈ ಘಟನೆ ಜನವರಿ 31 ರಂದು ಕೇರಳದ ಮುತ್ತಂಗಾ ಸಮೀಪ ನಡೆದಿದೆ. ಅದೃಷ್ಟವಶಾತ್, ಆನೆ ದಾಳಿಗೆ ಬಂದರೂ ಅದರ ದಾಳಿಯಿಂದ ಇಬ್ಬರೂ ಅದೃಷ್ಟವಶಾತ್ ಬಚಾವ್ ಆಗಿದ್ದಾರೆ. ಈ ಭಯಾನಕ ದೃಶ್ಯವನ್ನು ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನದವರೂ ನೋಡಿದ್ದಾರೆ. ಅವರಲ್ಲಿ ಒಂದು ಕಾರಿನಲ್ಲಿದ್ದವರು ವೈರಲ್ ಆಗಿರುವ ಈ ವಿಡಿಯೋ ಚಿತ್ರೀಕರಿಸಿದ್ದಾರೆ. ಅವರ ಕಾರು ಹಿಮ್ಮುಖ ಚಲನೆಯಲ್ಲಿತ್ತು ಎಂಬುದು ವಿಡಿಯೋ ಗಮನಿಸಿದರೆ ಗೊತ್ತಾಗುತ್ತದೆ.
ವಿಡಿಯೋ ತುಣುಕು 20 ಸೆಕೆಂಡ್ ಇದ್ದು, ಕಾಡಾನೆ ಅಟ್ಟಿಸಿಕೊಂಡು ಬರುತ್ತಿರುವಾಗ ಇಬ್ಬರು ಅದರ ಎದುರು ಓಡುತ್ತಿರುವ ದೃಶ್ಯವಿದೆ. ಹಿಂದೆ ಇದ್ದ ವ್ಯಕ್ತಿ ನೆಲಕ್ಕೆ ಬಿದ್ದ ಕೂಡಲೇ ಆನೆ ಆ ಬಿದ್ದ ವ್ಯಕ್ತಿಗೆ ಸೊಂಡಿಲಿನಿಂದ ಹೊಡೆದು, ಎದುರು ಹೋಗಿ ಒಂದು ಸುತ್ತು ತಿರುಗಿ ಕಾಲಿನಿಂದ ಒದೆಯಿತು. ಆದರೆ ಆ ಒದೆ ವ್ಯಕ್ತಿಗೆ ತಾಗಲಿಲ್ಲ. ಆ ವ್ಯಕ್ತಿ ಕೂಡಲೇ ತೆವಳಿಕೊಂಡು ಮರಗಳ ನಡುವೆ ಮುಂದಕ್ಕೆ ಜಾರಿದರು. ಆನೆ ಹಿಂದಿರುಗಿ ಹೋಯಿತು. ಅವರು ಅಲ್ಲಿಂದ ಎದ್ದು ಕೆಂಪು ಕಾರಿನ ಕಡೆಗೆ ಓಡುತ್ತಿರುವಲ್ಲಿಗೆ ದೃಶ್ಯಕೊನೆಯಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಆನೆ ದಾಳಿ ವಿಚಾರ ಚರ್ಚೆ
ಈ ವಿಡಿಯೋ ಇನ್‌ಸ್ಟಾಗ್ರಾಂ ಸೇರಿ ವಿವಿಧ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಹಲವು ಖಾತೆಗಳ ಮೂಲಕ ಅಪ್ಲೋಡ್ ಆಗಿದ್ದು, ವೈರಲ್ ಆಗಿದೆ. ಅನೇಕರು ಈ ವಿಡಿಯೋ ನೋಡಿ ದಿಗ್ಭ್ರಾಂತರಾಗಿದ್ದಾರೆ.
ಅಭಯಾರಾಣ್ಯ ಪ್ರದೇಶದಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದು, ಇಳಿಯುವುದು ಇತ್ಯಾದಿ ಚಟುವಟಿಕೆಗಳನ್ನು ಅರಣ್ಯ ಇಲಾಖೆ ನಿಷೇಧಿಸಿದೆ. ಇದಕ್ಕೆ ಸಂಬಂಧಿಸಿದ ಸೈನ್ ಬೋರ್ಡ್‌ಗಳನ್ನೂ ಈ ಹೆದ್ದಾರಿಯ ಉದ್ದಕ್ಕೂ ಸ್ಥಾಪಿಸಲಾಗಿದೆ. ಈ ಎಲ್ಲ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದು ಈ ಘಟನೆಗೆ ಕಾರಣ ಎಂಬ ಮಾತು ಕೇಳಿಬಂದಿದೆ. ಸೋಷಿಯಲ್ ಮೀಡಿಯಾದಲ್ಲೂ ಈ ವಿಚಾರ ಚರ್ಚೆಗೆ ಒಳಗಾಗಿದ್ದು, ಅನೇಕ ಅಭಿಪ್ರಾಯಗಳು ವ್ಯಕ್ತವಾಗಿವೆ.
ಬಂಡೀಪುರ ಅರಣ್ಯ ಹುಲಿ ಯೋಜನೆಯ ಅಧಿಕಾರಿಯೊಬ್ಬರು ಪ್ರಜಾವಾಣಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ವೈರಲ್ ಆಗಿರುವ ವಿಡಿಯೋದಲ್ಲಿ ನಡೆದ ಘಟನೆ ಎಲ್ಲಿ ಆಗಿದ್ದು ಎಂಬ ಬಗ್ಗೆ ಖಚಿತವಾದ ಮಾಹಿತಿ ಇಲ್ಲ. ನಮ್ಮ ಮದ್ದೂರು ವಲಯದಲ್ಲಿ ಆಗಿರುವ ಘಟನೆ ಎಂದು ಕೆಲವರು ಹೇಳಿದ್ದಾರೆ. ಬಹುತೇಕರು ಇದು ಕೇರಳದ ವಯನಾಡು ವ್ಯಾಪ್ತಿಯ ಮುತಂಗಾ ವ್ಯಾಪ್ತಿಯಲ್ಲಿ ಆಗಿರುವಂಥದ್ದು ಎಂದು ಹೇಳುತ್ತಿದ್ದಾರೆ. ವಿಡಿಯೋದಲ್ಲೂ ಮಲೆಯಾಳ ಭಾಷೆಯಲ್ಲಿ ಮಾತನಾಡಿರುವುದು ದಾಖಲಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಚಿಕ್ಕಮಗಳೂರು ವ್ಯಾಪ್ತಿಗೆ ಬಂದಿವೆ 24 ಕಾಡಾನೆಗಳ ಹಿಂಡು
ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 24 ಕಾಡಾನೆಗಳ ಹಿಂಡು ಕಂಡುಬಂದಿದೆ. ಕಳೆದ ಆರು ದಿನಗಳಿಂದ ಇದು ಈ ಭಾಗದಲ್ಲಿದ್ದು, ಶುಕ್ರವಾರ (ಫೆ.2) ಬೆಳಗ್ಗೆ ಆಲದಗುಡ್ಡೆಯಿಂದ ಆಲೂರು ಕಡೆಗೆ ಹೋಗಿವೆ ಎಂದು ಅರಣ್ಯ ಸಿಬ್ಬಂದಿ ಹೇಳಿದ್ದಾರೆ. ಆಲ್ಲೂರು ಸಮೀಪ ಅಡಕಲ್ ಎಸ್ಟೇಟ್‌ನಲ್ಲಿ ಆನೆಗಳು ಬೀಡು ಬಿಟ್ಟಿದ್ದು, ಮತ್ತಾವರ, ದಂಬದಹಳ್ಳಿ, ಆಮೆಕಟ್ಟೆ, ವಸ್ತಾರೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ತೋಟದ ಕಾರ್ಮಿಕರು ಎಚ್ಚರಿಕೆಯಿಂದ ಇರುವಂತೆ ಆನೆ ಕಾರ್ಯಪಡೆ ಹಾಗೂ ಅರಣ್ಯ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಕಾಡಾನೆಗಳ ಹಾವಳಿಯಿಂದ ಫಸಲಿಗೆ ಬಂದ ಬಾಳೆ, ಅಡಿಕೆ ಸೇರಿದಂತೆ ತರಕಾರಿ ಬೆಳೆಗಳು ನಾಶವಾಗಿವೆ. ಕೆ.ಆರ್. ಪೇಟೆ ಬಳಿ ಭತ್ತದ ಬಣವೆಗಳನ್ನು ಎಳೆದಾಡಿ ಮೇಯ್ದಿರುವ ಆನೆಗಳು ಮಾವಿನಕೆರೆ ಪಕ್ಕದ ಹಳ್ಳದಲ್ಲಿ ನೀರು ಕುಡಿದು ಜಾಗ ಖಾಲಿ ಮಾಡಿವೆ ಎಂದು ಸ್ಥಳೀಯರು ಹೇಳಿದ್ದಾರೆ.