logo
ಕನ್ನಡ ಸುದ್ದಿ  /  ಕರ್ನಾಟಕ  /  Kerala News: ಕರ್ನಾಟಕ ಕೇರಳ ಗಡಿಯಲ್ಲಿ ಗಾಂಜಾ ಮಸ್ತಿಯಲ್ಲಿ ಯುವ ಸಮುದಾಯ ಅಸಭ್ಯ ವರ್ತನೆ: ಮೈಸೂರು ಪೊಲೀಸ್‌, ಅರಣ್ಯ ಇಲಾಖೆ ಅಲರ್ಟ್‌

Kerala News: ಕರ್ನಾಟಕ ಕೇರಳ ಗಡಿಯಲ್ಲಿ ಗಾಂಜಾ ಮಸ್ತಿಯಲ್ಲಿ ಯುವ ಸಮುದಾಯ ಅಸಭ್ಯ ವರ್ತನೆ: ಮೈಸೂರು ಪೊಲೀಸ್‌, ಅರಣ್ಯ ಇಲಾಖೆ ಅಲರ್ಟ್‌

Umesha Bhatta P H HT Kannada

Aug 11, 2023 01:44 PM IST

google News

ಕರ್ನಾಟಕ ಕೇರಳ ಗಡಿ ಭಾಗದಲ್ಲಿ ಮಾದಕ ವಸ್ತು ಬಳಸಿ ಅಸಭ್ಯವಾಗಿ ವರ್ತಿಸುವ ಪ್ರಕರಣ ನಡೆದಿದ್ದು. ಮಾಹಿತಿ ನೀಡುವಂತೆ ಮೈಸೂರು ಪೊಲೀಸರು ಸೂಚಿಸಿದ್ದಾರೆ.

    • Karnataka Kerala Border ಕರ್ನಾಟಕ ಕೇರಳ ಗಡಿ ಭಾಗದಲ್ಲಿ ಯುವ ಸಮುದಾಯ ಗಾಂಜಾ( Ganja) ಬಳಸಿ ಅಸಭ್ಯವಾಗಿ ವರ್ತಿಸುವುದನ್ನು ಗಂಭೀರವಾಗಿ ಪರಿಗಣಿಸಿರುವ ಮೈಸೂರು ಪೊಲೀಸರು( Mysore Police) ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು( Forest Department) ಮುನ್ನೆಚ್ಚರಿಕೆ ವಹಿಸಿ ಮಾಹಿತಿ ನೀಡುವಂತ ಸೂಚಿಸಿದ್ದಾರೆ. ಏನಿದು ಪ್ರಕರಣ ಇಲ್ಲಿದೆ ವಿವರ…
ಕರ್ನಾಟಕ ಕೇರಳ ಗಡಿ ಭಾಗದಲ್ಲಿ ಮಾದಕ ವಸ್ತು ಬಳಸಿ ಅಸಭ್ಯವಾಗಿ ವರ್ತಿಸುವ ಪ್ರಕರಣ ನಡೆದಿದ್ದು. ಮಾಹಿತಿ ನೀಡುವಂತೆ ಮೈಸೂರು ಪೊಲೀಸರು ಸೂಚಿಸಿದ್ದಾರೆ.
ಕರ್ನಾಟಕ ಕೇರಳ ಗಡಿ ಭಾಗದಲ್ಲಿ ಮಾದಕ ವಸ್ತು ಬಳಸಿ ಅಸಭ್ಯವಾಗಿ ವರ್ತಿಸುವ ಪ್ರಕರಣ ನಡೆದಿದ್ದು. ಮಾಹಿತಿ ನೀಡುವಂತೆ ಮೈಸೂರು ಪೊಲೀಸರು ಸೂಚಿಸಿದ್ದಾರೆ.

ಮೈಸೂರು: ಕರ್ನಾಟಕ ಹಾಗೂ ಕೇರಳ ಗಡಿ ಭಾಗದಲ್ಲಿ ಗಾಂಜಾ ಬಳಸಿ ಮಸ್ತಿ ಮಾಡುವ ಯುವ ಸಮುದಾಯದ ಪ್ರಕರಣಗಳು ಕಂಡು ಬರುತ್ತಿವೆ. ಅದರಲ್ಲೂ ಗಡಿ ಭಾಗದ ಕಬಿನಿ ಹಿನ್ನೀರು ಪ್ರದೇಶಗಳಲ್ಲಿ ಇಂತಹ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಪೊಲೀಸ್‌ ಹಾಗೂ ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.

ಕೇರಳದಿಂದ ಆಗಮಿಸಿ ಕೆಲ ಯುವಕ ಯುವತಿಯರ ಗುಂಪು ಅಸಭ್ಯವಾಗಿ ವರ್ತಿಸಿದ ವಿಡಿಯೋ ವೈರಲ್‌ ಆದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಗಳು ಈಗಾಗಲೇ ಗಸ್ತು ಪ್ರಮಾಣವನ್ನು ಹೆಚ್ಚಿಸಿದ್ದಾರೆ. ಇಂತಹ ಪ್ರಕರಣ ಕಂಡು ಬಂದರೆ ಕೂಡಲೇ ನೇರವಾಗಿ ತಮಗೆ ಮಾಹಿತಿ ನೀಡುವಂತೆಯೂ ಸೂಚನೆ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಯೂ ಇಂತಹ ಪ್ರಕರಣ ಕಂಡಾಗ ಮುನ್ನೆಚ್ಚರಿಕೆ ವಹಿಸುವ ಜತೆಗೆ ಸಿಬ್ಬಂದಿ ಸದಾ ಅಲರ್ಟ್‌ ಆಗಿರುವಂತೆಯೂ ಸೂಚಿಸಿದೆ.

ಮೋಜು ಮಸ್ತಿ ನಿರಂತರ

ಕೇರಳದ ವಯನಾಡು ಜಿಲ್ಲೆಯ ಭಾಗದಿಂದ ಕರ್ನಾಟಕದ ಅರಣ್ಯ ಪ್ರದೇಶದ ಕಡೆಗೆ ಬರುವವರ ಸಂಖ್ಯೆ ಮೊದಲಿನಿಂದಲೂ ಇದೆ. ಅದರಲ್ಲೂ ಕೊಡಗು- ಮೈಸೂರು ಜಿಲ್ಲೆ ಸಂಪರ್ಕಿಸುವ ಡಿಬಿಕುಪ್ಪೆ, ಕುಟ್ಟ ,ಮಾಕುಟ್ಟ ಭಾಗದ ಕಡೆಯಿಂದ ಕೇರಳದವರು ಆಗಮಿಸುತ್ತಾರೆ. ಈ ಭಾಗದಲ್ಲಿ ಕಬಿನಿ ಹಿನ್ನೀರ ಪ್ರದೇಶವಿದೆ. ಅರಣ್ಯ ಪ್ರದೇಶವೂ ಚೆನ್ನಾಗಿರುವುದರಿಂದ ಗಡಿ ದಾಟಿಕೊಂಡು ಬರುತ್ತಾರೆ. ಕೆಲವರು ಕುಟುಂಬ ಸಮೇತರಾಗಿ ಬಂದು ಇಲ್ಲಿ ಕಳೆದು ಹೋಗುವುದು ಇದೆ. ಆದರೆ ಕೆಲ ಯುವಕ ಯುವತಿಯರು, ವಿದ್ಯಾರ್ಥಿಗಳು ಮೋಜು ಮಸ್ತಿ ನೆಪದಲ್ಲಿ ಬರುತ್ತಾರೆ. ಕೆಲವರಂತೂ ಮದ್ಯಪಾನ ಮಾಡುವ ಸನ್ನಿವೇಶದಲ್ಲಿದ್ದರೆ, ಇನ್ನಷ್ಟು ಮಂದಿ ಗಾಂಜಾ ಸೇವಿಸಿ ಮಸ್ತಿಯಲ್ಲಿ ಕಳೆಯುವ ಚಿತ್ರಣಗಳೂ ಗಡಿ ಭಾಗದಲ್ಲಿ ಕಾಣ ಸಿಗುತ್ತವೆ. ಗಾಂಜಾ ಸೇವಿಸಿದಾಗ ಅಸಭ್ಯವಾಗಿ ವರ್ತಿಸಿ ಸ್ಥಳೀಯರ ಕೈಗೆ ಸಿಲುಕಿ ಏಟು ತಿಂದ ಪ್ರಕರಣಗಳೂ ಇವೆ. ಕೆಲವರನ್ನು ಸ್ಥಳೀಯ ಪೊಲೀಸರಿಗೆ ಅಥವಾ ಅರಣ್ಯ ಇಲಾಖೆ ಸಿಬ್ಬಂದಿ ಸುಪರ್ದಿಗೆ ನೀಡಿ ಬುದ್ದಿವಾದ ಹೇಳಿ ಕಳುಹಿಸುವ ಸನ್ನಿವೇಶಗಳೂ ಕಂಡು ಬಂದಿವೆ.

ಕಬಿನಿ ಹಿನ್ನೀರು

ಕೇರಳದಿಂದ ಹರಿದು ಬರುವ ಕಪಿಲಾ ನದಿಗೆ ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ತಾಲ್ಲೂಕಿನಲ್ಲಿ ಜಲಾಶಯ ನಿರ್ಮಿಸಿದ ನಂತರ ಕಬಿನಿ ಹಿನ್ನೀರು ಯಥೇಚ್ಛವಾಗಿದೆ. ನೀರಿನ ಜತೆಗೆ ವನ್ಯಜೀವಿಗಳ ಪ್ರಮಾಣವೂ ಇದೆ. ಈ ಕಾರಣದಿಂದ ಕೇರಳ ಭಾಗದಿಂದ ಹೆಚ್ಚು ಯುವಕರು ಬೈಕ್‌, ಕಾರುಗಳಲ್ಲಿ ಡ್ರೈವ್‌ ಬರುತ್ತಾರೆ. ಈ ವೇಳೆ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಖಾಲಿ ಇರುವ ಭಾಗಕ್ಕೂ ತೆರಳುತ್ತಾರೆ. ಇಲ್ಲಿ ಮೋಜು ಮಸ್ತಿ ಮಾಡುವುದು ಸಾಮಾನ್ಯವಾಗಿದೆ. ಕೆಲವರು ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತ್ತಾರೆ. ವಯನಾಡು ಭಾಗದಿಂದ ಕಬಿನಿ ಹಿನ್ನೀರಿಗೆ ಹೋಗಲು ಹಲವು ಮಾರ್ಗಗಳಿವೆ. ಇವರೆಲ್ಲಾ ಪೊಲೀಸ್‌ ಹಾಗೂ ಅರಣ್ಯ ಇಲಾಖೆಯವರ ಕಣ್ಣು ತಪ್ಪಿಸಿ ಒಳನುಗ್ಗುತ್ತಾರೆ. ಬೀಚನಹಳ್ಳಿ ಹಾಗೂ ಅಂತರಸಂತೆ ಠಾಣೆಗಳು ದೂರ ಇವೆ. ಡಿಬಿಕುಪ್ಪೆಯಲ್ಲಿ ಹೊರ ಪೊಲೀಸ್‌ ಠಾಣೆ ಮಾತ್ರ ಇದೆ. ಏನಾದರೂ ನಿರ್ದಿಷ್ಟ ದೂರು ಬಂದಾಗ ಪೊಲೀಸರು ಅಥವಾ ಅರಣ್ಯ ಇಲಾಖೆಯವರು ಅನೈತಿಕ ಚಟುವಟಿಕೆಗಳಲ್ಲಿ ತೊಡಗುವ ಸಿಬ್ಬಂದಿಯನ್ನು ಕರೆದು ವಿಚಾರಿಸುತ್ತಾರೆ. ಗಮನಕ್ಕೆ ಬಾರದೇ ಇಲ್ಲವೇ ದೂರು ಇಲ್ಲದೇ ಇದ್ದಾಗ ಪೊಲೀಸರು ಕೂಡ ಸುಮ್ಮನಾಗಿಬಿಡುತ್ತಾರೆ.

ಹೋಂ ಸ್ಟೇಗಳಲ್ಲಿ

ಗಡಿ ಭಾಗದಲ್ಲಿ ನೂರಕ್ಕೂ ಹೆಚ್ಚು ಹೋಂಸ್ಟೇಗಳಿದ್ದು, ಇಲ್ಲಿಗೂ ಬಂದು ವಾಸ್ತವ್ಯ ಹೂಡಿ ದಿನ ಕಳೆದು ಹೋಗುವವರೂ ಇದ್ದಾರೆ. ಕೆಲವು ಹೋಂಸ್ಟೇಗಳಲ್ಲಿ ಎಲ್ಲ ಸೇವೆಗಳೂ ಸಿಗುವುದರಿಂದ ಅವುಗಳನ್ನು ಹುಡುಕಿಕೊಂಡು ಬರುವವರೂ ಇದ್ದಾರೆ. ಗಾಂಜಾ ಸೇರಿ ಮತ್ತೇರಿಸುವ ವಸ್ತುಗಳು ಗುಪ್ತವಾಗಿ ಮಾರಾಟವಾಗುವುದರಿಂದ ಗೊತ್ತಿದ್ದವರ ಮೂಲಕ ಪಡೆಯುವವರೂ ಇದ್ದಾರೆ. ಹೋಂಸ್ಟೇಗಳಲ್ಲಿ ಸಿಲುಕಿಕೊಳ್ಳಬಹುದು ಎನ್ನುವ ಭಯದಿಂದ ಕಬಿನಿ ಹಿನ್ನೀರು ಅಥವಾ ಮುಕ್ತ ಪ್ರದೇಶಕ್ಕೆ ಆಗಮಿಸುತ್ತಾರೆ. ಪೊಲೀಸ್‌ ಹಾಗೂ ಅರಣ್ಯ ಇಲಾಖೆಯವರಿಗೆ ಇದು ತಿಳಿದಿದ್ದರೂ ಕ್ರಮ ಕೈಗೊಳ್ಳಲು ಆಗುತ್ತಿಲ್ಲ. ಯಾರಾದರೂ ದೂರು ನೀಡಿದರೆ ಮಾತ್ರ ಕ್ರಮ ಕೈಗೊಳ್ಳಬಹುದು ಎಂದು ಪೊಲೀಸರು ಹೇಳುತ್ತಾರೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ವಿಡಿಯೋ ವೈರಲ್‌

ಕಬಿನಿ ಹಿನ್ನೀರಿನಲ್ಲಿ ಡಿಸೆಂಬರ್‌ ನಂತರ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಫೆಬ್ರವರಿ ಮಾರ್ಚ್‌ ಏಪ್ರಿಲ್‌ ತಿಂಗಳಿನಲ್ಲಂತೂ ನೀರು ಸಂಪೂರ್ಣ ಕುಸಿತವಾಗುವುದರಿಂದ ಕಬಿನಿ ಹಿನ್ನೀರ ಪ್ರದೇಶವೂ ಮುಕ್ತವಾಗುತ್ತದೆ. ಈ ವೇಳೆ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಮೋಜು ಮಸ್ತಿಗೆ ಮುಂದಾಗುತ್ತಾರೆ. ಈ ಬಾರಿಯೂ ಫೆಬ್ರವರಿಯಲ್ಲಿ ಕೇರಳದಿಂದ ಬಂದ ಆರು ಜನ ಯುವಕ ಯುವತಿಯರ ತಂಡ ಮೋಜು ಮಸ್ತಿ ಮಾಡಿದೆ. ಈ ಪ್ರದೇಶ ಕೇರಳ ಹಾಗೂ ಕರ್ನಾಟಕ ಗಡಿ ಪ್ರದೇಶಕ್ಕೆ ಬರುತ್ತದೆ. ಕೇರಳದ ವಯನಾಡು ಜಿಲ್ಲೆಯ ಪುಲಪಳ್ಳಿ ಠಾಣೆ ವ್ಯಾಪ್ತಿಗೆ ಬರುವುದರಿಂದ ಅಲ್ಲಿ ಪ್ರಕರಣ ದಾಖಲಾಗಿದೆ. ಈ ವಿಡಿಯೋ ಈಗ ವೈರಲ್‌ ಆಗಿದೆ.

ಕರ್ನಾಟಕ ಕೇರಳ ಗಡಿಭಾಗದಲ್ಲಿ ಗಾಂಜಾ ಮತ್ತಿನಲ್ಲಿ ಯುವತಿಯರು ಎಂಬ ವಿಡಿಯೋಗೆ ಸಂಬಂಧಿಸಿದಂತೆ ಫೆಬ್ರವರಿ 05ರಲ್ಲಿ ಕೇರಳದ ವೈನಾಡು ಜಿಲ್ಲೆಯ ಪುಲಪಳ್ಳಿ ಪೊಲೀಸ್ ಠಾಣೆಯಲ್ಲಿ Cr No 79/2023 ರಲ್ಲಿ ಪ್ರಕರಣ ದಾಖಲಾಗಿದೆ .ಇದು ಹಳೆಯ ವಿಡಿಯೋವಾಗಿದೆ. ಈ ಘಟನೆ ನಡೆದಿರುವುದು ನಮ್ಮ ವ್ಯಾಪ್ತಿಯಲ್ಲಲ್ಲ. ಕೇರಳದ ಪ್ರದೇಶಕ್ಕೆ ಬರುವುದರಿಂದ ಅಲ್ಲಿ ಮೊಕದ್ದಮೆ ದಾಖಲಾಗಿದೆ. ಆದರೂ ನಮ್ಮ ಭಾಗಕ್ಕೂ ಹೀಗೆ ಬಂದು ಅಸಭ್ಯವಾಗಿ ವರ್ತಿಸುವ, ಮಾದಕ ವಸ್ತುಗಳನ್ನು ಬಳಸುವ ಪ್ರಕರಣಗಳೂ ವರದಿಯಾಗುತ್ತಲೇ ಇರುತ್ತವೆ. ಈ ಕುರಿತು ನಮ್ಮ ಪೊಲೀಸರಿಗೂ ಕಟ್ಟೆಚ್ಚರದಲ್ಲಿರುವಂತೆ ಸೂಚನೆ ನೀಡಲಾಗಿದೆ. ಮೈಸೂರು ಜಿಲ್ಲಾ ಪೊಲೀಸ್ ಘಟಕವು ಮಾದಕ ವಸ್ತುಗಳ ಸಾಗಾಟ & ಮಾರಾಟಗಳ ಮೇಲೆ ನಿಗಾ ವಹಿಸಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ , ಈ ಬಗ್ಗೆ ಯಾವುದೇ ಮಾಹಿತಿಗಳಿದ್ದಲ್ಲಿ ನಮಗೆ ನೇರವಾಗಿ ಮೆಸೇಜ್‌ ಮಾಡಬಹುದು ಎನ್ನುವುದು ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್‌ ಅವರ ವಿವರಣೆ.

ಅರಣ್ಯ ಇಲಾಖೆಯಲ್ಲೂ ಕಟ್ಟೆಚ್ಚರ

ಇನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿಬಿಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಗೆ ಬರುವ ಹಿನ್ನೀರಿನಲ್ಲಿ ಹೀಗೆ ಪ್ರವಾಸಿಗರು ಬರುವುದು ಸಾಕಷ್ಟಿದೆ. ಬಾವಲಿಯಲ್ಲಿ ಅರಣ್ಯ ಇಲಾಖೆ ಚೆಕ್‌ ಪೋಸ್ಟ್‌ ಇದೆ. ಆದರೆ ಈ ಮಾರ್ಗವಾಗಿ ಬಾರದೇ ಅಡ್ಡದಾರಿ ಹಿಡಿದು ಹೋಗುತ್ತಾರೆ. ಇದು ಅರಣ್ಯ ಇಲಾಖೆಯವರಿಗೂ ತಲೆನೋವು ತರಿಸಿದೆ.

ಕಬಿನಿ ಹಿನ್ನೀರಿಗೆ ಹೊಂದಿಕೊಂಡ ಹಲವು ಕಡೆ ಆಗಾಗ ಹೀಗೆ ಮಾದಕವಸ್ತು ಬಳಸುವ ಇಲ್ಲವೇ ಮೋಜು ಮಸ್ತಿ ಮಾಡಿ ವನ್ಯಜೀವಿಗಳಿಗೆ ಕಿರಿಕಿರಿ ಮಾಡುವುದೂ ಇದೆ. ಅಂತರವರಿಗೆ ಎಚ್ಚರಿಕೆ ನೀಡಿದ್ದೇವೆ. ಮಾದಕ ವಸ್ತುಗಳೊಂದಿಗೆ ಸಿಕ್ಕಿಬಿದ್ದರೆ ಪ್ರಕರಣ ದಾಖಲಿಸುವಂತೆಯೂ ನಮ್ಮ ಸಿಬ್ಬಂದಿಗೆ ತಿಳಿಸಿದ್ದೇವೆ. ಜಲಸಂಪನ್ಮೂಲ ಇಲಾಖೆಯವರಿಗೂ ಇಂತವರು ಕಂಡು ಬಂದರೆ ತಿಳಿಸುವ ಜತೆಗೆ ಅನಗತ್ತ ಓಡಾಟಕ್ಕೆ ಅವಕಾಶ ಮಾಡಿಕೊಡದಂತೆಯೂ ಸೂಚಿಸಿದ್ದೇವೆ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಕುಮಾರ ಚಿಕ್ಕನರಗುಂದ ಸ್ಪಷ್ಟಪಡಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ