logo
ಕನ್ನಡ ಸುದ್ದಿ  /  ಕರ್ನಾಟಕ  /  ಸ್ಟೇಟ್‌, ಸಿಬಿಎಸ್‌ಇ ಹಾಗೂ ಐಸಿಎಸ್‌ಇ ನಡುವಿನ ವ್ಯತ್ಯಾಸವೇನು? ಮಕ್ಕಳ ಭವಿಷ್ಯಕ್ಕೆ ಯಾವುದು ಉತ್ತಮ? ಈ ಕುರಿತ ಸಮಗ್ರ ವಿವರ ಇಲ್ಲಿದೆ

ಸ್ಟೇಟ್‌, ಸಿಬಿಎಸ್‌ಇ ಹಾಗೂ ಐಸಿಎಸ್‌ಇ ನಡುವಿನ ವ್ಯತ್ಯಾಸವೇನು? ಮಕ್ಕಳ ಭವಿಷ್ಯಕ್ಕೆ ಯಾವುದು ಉತ್ತಮ? ಈ ಕುರಿತ ಸಮಗ್ರ ವಿವರ ಇಲ್ಲಿದೆ

Reshma HT Kannada

Apr 10, 2023 10:25 AM IST

google News

ಎಜುಕೇಷನ್‌

    • Parenting and Education: ಮಕ್ಕಳಿಗೆ ಸಮರ್ಪಕ ಶಿಕ್ಷಣ ನೀಡಿ,  ಅವರ ಭವಿಷ್ಯವನ್ನು ರೂಪಿಸುವುದು ಪೋಷಕರ ಕರ್ತವ್ಯ ಹಾಗೂ ಜವಾಬ್ದಾರಿ. ಆದರೆ ಪಠ್ಯಕ್ರಮದ ಆಯ್ಕೆಯ ವಿಚಾರದಲ್ಲಿ ಪೋಷಕರು ಸಾಕಷ್ಟು ಗೊಂದಲಗಳನ್ನು ಎದುರಿಸುತ್ತಾರೆ. ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಈ ವಿಚಾರಗಳಲ್ಲಿ ಪೋಷಕರ ಗೊಂದಲ ಪರಿಹಾರಕ್ಕೆ ಇಲ್ಲಿದೆ ಒಂದಿಷ್ಟು ಮಾಹಿತಿ.
ಎಜುಕೇಷನ್‌
ಎಜುಕೇಷನ್‌

ಮಕ್ಕಳನ್ನು ಶಾಲೆಗೆ ಸೇರಿಸುವುದು ಇಂದಿನ ಪೋಷಕರಿಗೆ ಬಹುದೊಡ್ಡ ಸವಾಲು. ಶಿಕ್ಷಣ ವ್ಯವಸ್ಥೆ ಅಪ್‌ಗ್ರೇಡ್‌ ಆದಷ್ಟು, ಪೋಷಕರು ಇನ್ನಷ್ಟು, ಮಗದಷ್ಟು ಸವಾಲು ಹಾಗೂ ಗೊಂದಲಗಳನ್ನು ಎದುರಿಸುತ್ತಾರೆ.

ಸ್ಟೇಟ್‌(ರಾಜ್ಯ ಪಠ್ಯಕ್ರಮ), ಐಸಿಎಸ್‌ಇ, ಸಿಬಿಎಸ್‌ಇ ಈ ಮೂರು ಬೋರ್ಡ್‌ ಅಥವಾ ಪಠ್ಯಕ್ರಮಗಳು ಪ್ರಸುತ್ತ ಚಾಲ್ತಿಯಲ್ಲಿವೆ. ಮಗುವನ್ನು ಶಾಲೆಗೆ ಸೇರಿಸುವಾಗ ಯಾವ ಬೋರ್ಡ್‌ ಆಯ್ಕೆ ಮಾಡಿಕೊಳ್ಳುವುದು ಎಂಬ ಬಗ್ಗೆ ಪ್ರತಿ ಮನೆಯಲ್ಲೂ ನಾನಾ ಥರದ ಚರ್ಚೆಗಳು ನಡೆಯುವುದು ಸಾಮಾನ್ಯ.

ಅದರಲ್ಲೂ ಇಂದಿನ ಯುವ ಪೋಷಕರು ಮಗುವಿನ ಶಾಲೆಯ ವಿಚಾರದಲ್ಲಿ ಸಾಕಷ್ಟು ತಲೆ ಕಡೆಸಿಕೊಳ್ಳುತ್ತಾರೆ. ಶಿಕ್ಷಣ ವ್ಯವಸ್ಥೆ ಹಾಗೂ ಕ್ರಮಗಳು ಅಪ್‌ಡೇಟ್‌ ಆಗುತ್ತಲೇ ಇರುವ ಈ ಕಾಲದಲ್ಲಿ ತಮ್ಮ ಮಗು ಯಾವ ಬೋರ್ಡ್‌ನಲ್ಲಿ ಓದಿದರೆ ಉತ್ತಮ ಎಂಬ ಗೊಂದಲ ಪೋಷಕರಲ್ಲಿರುವುದು ಸಾಮಾನ್ಯ. ಇತ್ತೀಚೆಗೆ ಐಸಿಎಸ್‌ಇ ಪಠ್ಯಕ್ರಮದ ಆಯ್ಕೆಯಲ್ಲಿ ಪೋಷಕರು ಹೆಚ್ಚಿನ ಒಲವು ಹೊಂದಿದ್ದಾರೆ. ಸಿಬಿಎಸ್‌ಸಿಗೂ ಬೇಡಿಕೆ ಇದೆ. ರಾಜ್ಯಪಠ್ಯಕ್ರಮದ ಮೇಲಿನ ಆಸಕ್ತಿ ಕೊಂಚ ಕಡಿಮೆಯಾಗಿದೆ ಅನ್ನಿಸಿದರೂ ಪೋಷಕರಿಗೆ ಇದು ಕೂಡ ಒಂದು ಆಯ್ಕೆಯ ಭಾಗವಾಗಿದೆ.

ಈ ಪ್ರತಿ ಬೋರ್ಡ್‌ ಅಥವಾ ಶಿಕ್ಷಣ ಪದ್ಧತಿಯಲ್ಲೂ ಸಿಲಬಸ್‌ ಹಾಗೂ ಕಲಿಕಾ ವಿಧಾನದಲ್ಲಿ ಅನುಸರಿಸುವ ವಿಧಾನಗಳು ಭಿನ್ನವಾಗಿರುತ್ತವೆ. ಸಹಜವಾಗಿ, ಮಕ್ಕಳು ಶಿಕ್ಷಣವನ್ನು ಗ್ರಹಿಸುವ ಮತ್ತು ನಿಜ ಜೀವನದಲ್ಲಿ ಅದನ್ನು ಅನ್ವಯಿಸುವ ರೀತಿಯಲ್ಲಿ ಇದು ಶಾಶ್ವತವಾದ ಪರಿಣಾಮವನ್ನು ಬೀರುತ್ತದೆ. ಈ ಮೂರು ಬೋರ್ಡ್‌ಗಳು ಬೋಧನೆ ಮತ್ತು ಮೌಲ್ಯಮಾಪನ ಮಾಡುವ ವಿಧಾನದಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿವೆ.

ಅದೇನೇ ಇರಲಿ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಈಗಾಗಲೇ, ಅಂದರೆ ಜನವರಿಯಿಂದಲೇ ನೋಂದಣಿ ಪ್ರಕ್ರಿಯೆಗಳು ಆರಂಭವಾಗಿವೆ. ಹೆಚ್ಚಿನ ಶಾಲೆಗಳಲ್ಲಿ ಸೀಟುಗಳು ಈಗಾಗಲೇ ಭರ್ತಿಯಾಗಿವೆ. ಕೆಲವು ಕಡೆ ನೋಂದಣಿ ಪ್ರಕ್ರಿಯೆ ನಡೆಯುತ್ತಿರುತ್ತದೆ.

ಆದರೆ ನಮ್ಮಲ್ಲಿ ಹಲವು ಪೋಷಕರಿಗೆ ರಾಜ್ಯಪಠ್ಯಕ್ರಮ, ಐಸಿಎಸ್‌ಇ ಹಾಗೂ ಸಿಬಿಎಸ್‌ಇ ಬೋರ್ಡ್‌ ಇವುಗಳ ನಡುವಿನ ವ್ಯತ್ಯಾಸ ತಿಳಿದಿಲ್ಲ. ಇವುಗಳ ಕಲಿಕಾ ವಿಧಾನ ಹೇಗಿರುತ್ತದೆ ಎಂಬ ಬಗ್ಗೆ ಅರಿವಿಲ್ಲ. ಈ ಮೂರು ಪಠ್ಯಕ್ರಮದ ಕುರಿತು ವ್ಯತ್ಯಾಸ ಹಾಗೂ ಪ್ರಾಮುಖ್ಯತೆಯ ಕುರಿತ ಒಂದಿಷ್ಟು ವಿವರ ಈ ಲೇಖನದಲ್ಲಿದೆ.

ಸಿಬಿಎಸ್‌ಇ

  • ಪುಸಕ್ತದಲ್ಲಿನ ಓದಿನ ಹೊರತಾಗಿಯೂ ಸಿಬಿಎಸ್‌ಇ (ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್‌) ಪದ್ಧತಿಯಲ್ಲಿ ಪ್ರಾಜೆಕ್ಟ್‌ ವರ್ಕ್‌, ಅಸೈನ್‌ಮೆಂಟ್‌ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಸಾಕಷ್ಟು ಒತ್ತು ನೀಡಲಾಗುತ್ತದೆ. ಈ ಬೋರ್ಡ್‌ನ ಕಲಿಕಾ ವಿಧಾನಗಳು ವಿದ್ಯಾರ್ಥಿಗಳು ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ನೆರವಾಗುತ್ತವೆ.
  • ಪರೀಕ್ಷೆಯ ವಿಷಯದಲ್ಲಿ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನು ಹೊರತುಪಡಿಸಿ ಪಠ್ಯಕ್ಕೆ ಸಂಬಂಧಿತ ಬೇರೆ, ಬೇರೆ ಪುಸ್ತಕಗಳನ್ನು ಓದಲು ಮಾರ್ಗದರ್ಶನ ಮಾಡಲಾಗುತ್ತದೆ. ಯಾಕೆಂದರೆ ಪ್ರಶ್ನೆಗಳನ್ನು ಯಾವಾಗಲೂ ಪಠ್ಯಪುಸ್ತಕವನ್ನೇ ಆಧರಿಸಿ ಕೇಳಲಾಗುವುದಿಲ್ಲ. ಮಕ್ಕಳ ಬುದ್ಧಿಮಟ್ಟ ಹಾಗೂ ತಾರ್ಕಿಕತೆಯನ್ನು ಪರೀಕ್ಷಿಸಲು ಕೂಡ ಪರೀಕ್ಷೆ ಮುಖ್ಯವಾಗುತ್ತದೆ.
  • ಸಿಬಿಎಸ್‌ಇಯಲ್ಲಿ ದೇಶದಾದ್ಯಂತ ಒಂದೇ ಪಠ್ಯಕ್ರಮವಿರುತ್ತದೆ. ಇದರಿಂದ ವರ್ಗಾವಣೆ ಹೊಂದುವ ಪೋಷಕರ ಮಕ್ಕಳಿಗೆ ಈ ಆಯ್ಕೆ ಉತ್ತಮ, ಇದು ಅವರ ಓದಿಗೆ ಯಾವುದೇ ರೀತಿಯ ತೊಂದರೆ ಉಂಟು ಮಾಡುವುದಿಲ್ಲ.
  • ವಿದ್ಯಾರ್ಥಿಗಳು ವ್ಯಾಪಕ ಶ್ರೇಣಿಯಲ್ಲಿ ಅನುಸರಿಸುವಂತೆ ಇದರಲ್ಲಿ ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಗಳೆರಡನ್ನೂ ಅನುಮೋದಿಸಲಾಗಿದೆ.
  • ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಸಿಬಿಎಸ್‌ಇಗೆ ಪಠ್ಯಕ್ರಮವನ್ನು ನಿಗದಿ ಪಡಿಸುತ್ತದೆ.
  • ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮದೊಂದಿಗೆ ಸಾಮಾಜಿಕ ಜಾಗೃತಿಯ ಕುರಿತು ತರಬೇತಿಯನ್ನು ಪಡೆಯುತ್ತಾರೆ. ಜೆಇಇ, ನೀಟ್‌ನಂತಹ ಉನ್ನತ ಶಿಕ್ಷಣದ ಪ್ರವೇಶ ಪರೀಕ್ಷೆಗಳು ಸಿಬಿಎಸ್‌ಸಿ ಪಠ್ಯಕ್ರಮದ ಆಧಾರದ ಮೇಲೆ ಪ್ರಶ್ನೆಗಳನ್ನು ಸಿದ್ಧಪಡಿಸುತ್ತವೆ.
  • ಕೋರ್ಸ್‌ ಕಂಟೆಂಟ್‌ ವಿಷಯದಲ್ಲಿ ವಿಜ್ಞಾನ ಹಾಗೂ ಗಣಿತ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
  • ದೀರ್ಘಾವಧಿಯಲ್ಲಿ, ಸಿಬಿಎಸ್‌ಇ ವಿದ್ಯಾರ್ಥಿಗಳು ಉತ್ತಮ ವೃತ್ತಿಪರತೆಯನ್ನು ಹೊಂದುತ್ತಾರೆ. ಏಕೆಂದರೆ ಈ ಬೋರ್ಡ್‌ ವಿದ್ಯಾರ್ಥಿಗಳನ್ನು ಸುಸಂಬದ್ಧ ವ್ಯಕ್ತಿತ್ವದದೊಂದಿಗೆ ಬುದ್ಧಿವಂತರನ್ನಾಗಿ ರೂಪಿಸುತ್ತದೆ.

ಐಸಿಎಸ್‌ಇ

  • ಇದು ಬೇರೆ ಬೋರ್ಡ್‌ಗಳಿಗಿಂತ ಐಸಿಎಸ್‌ಇ (ಇಂಡಿಯನ್‌ ಸರ್ಟಿಫಿಕೇಟ್‌ ಆಫ್‌ ಸೆಕೆಂಡರಿ ಎಜುಕೇಷನ್‌) ಭಿನ್ನವಾಗಿದ್ದು, ಸುದೀರ್ಘ ಪಠ್ಯಕ್ರಮವನ್ನು ಹೊಂದಿರುತ್ತದೆ. ಈ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಹಿಡಿತ ಸಾಧಿಸಲು, ಅಡಿಪಾಯ ಗಟ್ಟಿಗೊಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಬೇಕಾಗುತ್ತದೆ. ಒಮ್ಮೆ ಅವರ ಅಡಿಪಾಯ ಗಟ್ಟಿಯಾಯಿತು ಎಂದರೆ ಅವರು ಯಾವುದೇ ವಿಷಯವನ್ನೂ ಸುಲಭವಾಗಿ ನಿಭಾಯಿಸಬಹುದು ಮತ್ತು ಸುಧಾರಿತ ಜ್ಞಾನ ಪಡೆಯಲು ಸಾಧ್ಯವಾಗುತ್ತದೆ.
  • ಪರೀಕ್ಷೆಯ ವಿಷಯದಲ್ಲಿ ಎಲ್ಲಾ ವಿಷಯಗಳಲ್ಲೂ ಉತ್ತಮ ಅಂಕಗಳಿಸುವುದು ಕೆಲವು ವಿದ್ಯಾರ್ಥಿಗಳಿಗೆ ಸವಾಲು ಎನ್ನಿಸಬಹುದು. ಯಾಕೆಂದರೆ ಇವು ವಿಸ್ತಾರವಾದ ಪಠ್ಯಕ್ರಮವನ್ನು ಹೊಂದಿದ್ದು, ಪಠ್ಯಕ್ರಮದ ಯಾವುದೇ ಮೂಲೆಯಿಂದಲಾದರೂ ಪ್ರಶ್ನೆಗಳು ಬರಬಹುದು.
  • ಇನ್ನು ಈ ಬೋರ್ಡ್‌ ವಿಷಯಕ್ಕೆ ಬರುವುದಾದರೆ ಇದರಲ್ಲಿ ಇಂಗ್ಲಿಷ್‌ಗೆ ಮಾತ್ರ ಒತ್ತು ನೀಡಲಾಗುತ್ತದೆ; ಇಂಗ್ಲಿಷ್‌ ಹೊರತುಪಡಿಸಿ ಯಾವುದೇ ಪ್ರಾದೇಶಿಕ ಭಾಷೆಗಳಿಗೆ ಇದರಲ್ಲಿ ಪ್ರಾಮುಖ್ಯತೆ ಇರುವುದಿಲ್ಲ.
  • ಕೋರ್ಸ್‌ ಕಂಟೆಂಟ್‌ ವಿಷಯದಲ್ಲಿ ಐಸಿಎಸ್‌ಇ ಬೋರ್ಡ್‌ನಲ್ಲಿ ಭಾಷೆ, ಕಲೆ ಹಾಗೂ ವಿಜ್ಞಾನಕ್ಕೆ ಸಾಮಾನ್ಯವಾಗಿ ಸಮಾನವಾಗಿ ಆದ್ಯತೆ ನೀಡಲಾಗುತ್ತದೆ. ವಿಶ್ಲೇಷಣಾ ಕೌಶಲಗಳು ಹಾಗೂ ಪ್ರಾಯೋಗಿಕ ಜ್ಞಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ವ್ಯಾಪಕ ಶ್ರೇಣಿಯ ವಿಷಯಗಳು ಮಕ್ಕಳ ಒಟ್ಟಾರೆ ಬೆಳವಣಿಗೆಯನ್ನು ಅನ್ವೇಷಿಸುವ ಉದ್ದೇಶವನ್ನು ಹೊಂದಿದೆ.
  • ಸಿಬಿಎಸ್‌ಇಯಂತೆ ಐಸಿಎಸ್‌ಇ ಬೋರ್ಡ್‌ ಭಾರತ ಸರ್ಕಾರದ ನಿಯಂತ್ರಣದಲ್ಲಿಲ್ಲ. ಅದೇನೇ ಇದ್ದರೂ, ಇದಕ್ಕೆ ಎಲ್ಲಾ ಕಡೆ ಬೇಡಿಕೆ ಇದೆ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಶಿಕ್ಷಣ ಪಡೆಯಲು ಈ ಸರ್ಟಿಫಿಕೇಟ್‌ ತನ್ನದೇ ಮೌಲ್ಯವನ್ನು ಹೊಂದಿದೆ.
  • ಐಸಿಎಸ್‌ಇಯ ಪಠ್ಯಕ್ರಮವು ಕೆಲವು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಅನುಸರಿಸುವ ಪಠ್ಯಕ್ರಮದಂತೆಯೇ ಇರುತ್ತದೆ. ವಿದ್ಯಾರ್ಥಿಗಳು ವಿದೇಶಗಳಲ್ಲಿ ಉನ್ನತ ಶಿಕ್ಷಣ ಮಾಡಲು ಬಯಸಿದರೆ ಇದು ಖಂಡಿತ ಅವರಿಗೆ ಸಹಾಯ ಮಾಡುತ್ತದೆ.
  • ಐಸಿಎಸ್‌ಇ ವಿದ್ಯಾರ್ಥಿಗಳು ಸಮಸ್ಯೆ-ಪರಿಹರಿಸುವ ಸಾಮರ್ಥ್ಯ ಮತ್ತು ಉತ್ತಮ ತಾರ್ಕಿಕ ಕೌಶಲಗಳನ್ನು ಹೊಂದಲು ಸಮರ್ಪಕ ತರಬೇತಿ ಪಡೆದಿರುವುದರಿಂದ ತಮ್ಮ ವೃತ್ತಿಪರ ಜೀವನದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಹುದು.

ಸ್ಟೇಟ್‌ ಬೋರ್ಡ್‌ (ರಾಜ್ಯ ಪಠ್ಯಕ್ರಮ)

  • ಇತರ ಪಠ್ಯಕ್ರಮಗಳಿಗೆ ಹೋಲಿಸಿದರೆ, ರಾಜ್ಯ ಪಠ್ಯಕ್ರಮ ಸಾಮಾನ್ಯವಾಗಿದ್ದು, ಹೆಚ್ಚಿನವರು ಇದನ್ನು ಆಯ್ಕೆ ಮಾಡುತ್ತಾರೆ. ವಿದ್ಯಾರ್ಥಿಗಳಿಗೆ ಈ ಬೋರ್ಡ್‌ ಉತ್ತಮ ಆಯ್ಕೆ ಅಂತಲೂ ಹೇಳಬಹುದು. ಆದರೆ ಕೆಲವೊಂದು ಪ್ರವೇಶ ಪರೀಕ್ಷೆಗಳನ್ನು ಎದುರಿಸುವಾಗ ಈ ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ.
  • ಸ್ಟೇಟ್‌ ಬೋರ್ಡ್‌ನಲ್ಲಿ ಅಂಕ ಗಳಿಸುವುದು ನಿಜಕ್ಕೂ ಸುಲಭ, ಯಾಕೆಂದರೆ ಅವರು ಪಠ್ಯಕ್ರಮದಲ್ಲಿ ಇರುವ ಅಂಶಗಳಲ್ಲೇ ಪ್ರಶ್ನೆಪತ್ರಿಕೆಯನ್ನು ತಯಾರಿಸಿರುತ್ತಾರೆ. ಪಠ್ಯಕ್ರಮದಲ್ಲಿ ಎಲ್ಲಾ ಅಂಶಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಯು ಸರಳವಾಗಿ ಉತ್ತಮ ಅಂಕಗಳನ್ನು ಗಳಿಸಬಹುದು.
  • ಸ್ಟೇಟ್‌ ಬೋರ್ಡ್‌ನಲ್ಲಿ ಆಯಾಯಾ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯಿಂದ ಪಠ್ಯಕ್ರಮವನ್ನು ರೂಪಿಸಲಾಗುತ್ತದೆ ಮತ್ತು ಈ ಪಠ್ಯಕ್ರಮವು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಭಿನ್ನವಾಗಿರಬಹುದು. ಆದ್ದರಿಂದ ಮಕ್ಕಳು ಶೈಕ್ಷಣಿಕ ಹಂತದಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವುದು ಸವಾಲಿನ ಸಂಗತಿಯಾಗಿದೆ. ರಾಜ್ಯ ಸರ್ಕಾರದ ಅಡಿಯಲ್ಲಿ ವೃತ್ತಿ ನಿರ್ವಹಿಸಲು ಪೋಷಕರ ಮಕ್ಕಳಿಗೆ ಈ ಆಯ್ಕೆ ಉತ್ತಮ.
  • ರಾಜ್ಯ ಪಠ್ಯಕ್ರಮದಲ್ಲಿ, ಐಚ್ಛಿಕವಾಗಿರುವ ಇಂಗ್ಲಿಷ್ ಅನ್ನು ಹೊರತುಪಡಿಸಿ ತಮ್ಮ ಪ್ರಾದೇಶಿಕ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಸ್ಥಳೀಯ ಭಾಷೆಯಲ್ಲಿ ಪಠ್ಯಕ್ರಮವನ್ನು ಕಲಿಯಬಹುದು, ಇದು ಇಂಗ್ಲಿಷ್ ಅನ್ನು ಅನುಸರಿಸಲು ಕಷ್ಟಕರವಾದ ವಿದ್ಯಾರ್ಥಿಗಳಿಗೆ ಉತ್ತಮ ಆಯ್ಕೆಯಾಗಿದೆ.
  • ಈ ಪಠ್ಯಕ್ರಮದಲ್ಲಿ ಒತ್ತಡ ಅತಿಯಾಗಿರುವುದಿಲ್ಲ, ಸಿಲಬಸ್‌ಗಳು ಕೂಡ ಸಿಬಿಎಸ್‌ಇ ಹಾಗೂ ಐಸಿಎಸ್‌ಇಯಂತೆ ವಿಸ್ತಾರವಾಗಿರುವುದಿಲ್ಲ. ಆದ್ದರಿಂದ ಇದರಲ್ಲಿ ಶಿಕ್ಷಕರಿಗೆ ಕಲಿಸುವ ಹಾಗೂ ವಿದ್ಯಾರ್ಥಿಗಳಿಗೆ ಕಲಿಯುವ ಅವಧಿಯ ಪ್ರಮಾಣ ಕಡಿಮೆ ಇರುತ್ತದೆ. ಇದರೊಂದಿಗೆ ಪಠ್ಯೇತರ ಚಟುವಟಿಕೆ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಸುಲಭ ಎನ್ನಿಸುತ್ತದೆ.
  • ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಮಕ್ಕಳಿಗೆ ಹೋಲಿಸಿದರೆ ಸ್ಟೇಟ್‌ ಬೋರ್ಡ್‌ನಲ್ಲಿ ಓದುವ ಮಕ್ಕಳಿಗೆ ಪ್ರವೇಶ ಪರೀಕ್ಷೆಗಳನ್ನು ಎದುರಿಸಲು ಪ್ರತ್ಯೇಕ ತರಬೇತಿಯ ಅಗತ್ಯವಿರುತ್ತದೆ.
  • ಸಂಬಂಧಿತ ವಿಷಯಗಳ ಪ್ರಾಯೋಗಿಕ ಜ್ಞಾನಕ್ಕೆ ಸ್ಟೇಟ್‌ ಬೋರ್ಡ್‌ನಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಆದರೆ ಸಿಬಿಎಸ್‌ಇ ಮಂಡಳಿಯು ವಿವಿಧ ವಿಷಯಗಳ ವೈಜ್ಞಾನಿಕ ವಿಧಾನಗಳಿಗೆ ಹೆಚ್ಚಿನ ಗಮನವನ್ನು ನೀಡುತ್ತದೆ.
  • ರಾಜ್ಯಪಠ್ಯಕ್ರಮವನ್ನು ಅಳವಡಿಸಿಕೊಂಡಿರುವ ಶಾಲೆಗಳಲ್ಲಿ ಅಧ್ಯಯನ ಶುಲ್ಕವು ಕಡಿಮೆ ಇರುತ್ತದೆ. ಇದು ಕೆಳ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಉನ್ನತ ಶಿಕ್ಷಣ ಪಡೆಯಲು ಉತ್ತಮ ಆಯ್ಕೆಯಾಗಿರುತ್ತದೆ. ರಾಜ್ಯ ಪಠ್ಯಕ್ರಮವನ್ನು ಒದಗಿಸುವ ಸರ್ಕಾರಿ ಶಾಲೆಗಳಿವೆ, ಅಲ್ಲಿ ವಿದ್ಯಾರ್ಥಿಗಳು ಕಡಿಮೆ ಶುಲ್ಕ ಅಥವಾ ಉಚಿತವಾಗಿ ಶಿಕ್ಷಣವನ್ನು ಪಡೆಯಬಹುದು.
  • ಸ್ಟೇಟ್‌ ಬೋರ್ಡ್‌ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದಿರಬಹುದು, ಆದರೆ ಸಿಬಿಎಸ್‌ಇ ಹಾಗೂ ಐಸಿಎಸ್‌ಇಗೆ ಹೋಲಿಸಿದರೆ ಅವರ ಸಾಮರ್ಥ್ಯ ಕೊಂಚ ಕಡಿಮೆ ಅಂತಲೇ ಹೇಳಬಹುದು. ಆ ಕಾರಣದಿಂದಲೇ ಅವರು ಕಾಲೇಜಿನ ಮೊದಲ ವರ್ಷದ ಓದನ್ನು ನಿಭಾಯಿಸಲು ಕಷ್ಟ ಪಡುತ್ತಾರೆ. ಏಕೆಂದರೆ ಒಂದೇ ಬಾರಿಗೆ ಶೈಕ್ಷಣಿಕ ಮಟ್ಟದಲ್ಲಿ ಏರಿಕೆಯಾಗಿರುತ್ತದೆ.
  • ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳು ತಮ್ಮ ವೃತ್ತಿಪರ ಹಂತದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಬೋರ್ಡ್‌ಗಳ ಹೊರತಾಗಿಯೂ, ಕೆಲಸದ ನೀತಿಗಳು ಮತ್ತು ಸಂದರ್ಭಗಳನ್ನು ನಿಭಾಯಿಸುವ ಅವರ ಸಾಮರ್ಥ್ಯವು ಹೆಚ್ಚು ಮುಖ್ಯವಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ