logo
ಕನ್ನಡ ಸುದ್ದಿ  /  ಕರ್ನಾಟಕ  /  Kharge Assassination Charge: ಖರ್ಗೆ, ಹೆಂಡತಿ-ಮಕ್ಕಳ ಹತ್ಯೆಗೆ ಸಂಚು; ಲೀಕ್​ ಆಗಿರುವ ಆಡಿಯೋ ನನ್ನದಲ್ಲ ಎಂದ ಬಿಜೆಪಿ ಅಭ್ಯರ್ಥಿ ಮಣಿಕಂಠ

Kharge Assassination Charge: ಖರ್ಗೆ, ಹೆಂಡತಿ-ಮಕ್ಕಳ ಹತ್ಯೆಗೆ ಸಂಚು; ಲೀಕ್​ ಆಗಿರುವ ಆಡಿಯೋ ನನ್ನದಲ್ಲ ಎಂದ ಬಿಜೆಪಿ ಅಭ್ಯರ್ಥಿ ಮಣಿಕಂಠ

Meghana B HT Kannada

May 07, 2023 08:30 AM IST

google News

ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ - ಎಐಸಿಸಿ​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

    • Kharge Assassination Charge: ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಆಡಿಯೋ ಕ್ಲಿಪ್​ವೊಂದನ್ನು ಬಿಡುಗಡೆ ಮಾಡಿ, ಇದರಲ್ಲಿರುವ ಧ್ವನಿ ಮಣಿಕಂಠ ರಾಠೋಡ್​ ಮತ್ತು ಬಿಜೆಪಿ ಮುಖಂಡ ರವಿ ಅವರದ್ದು ಎಂದು ಆರೋಪಿಸಿದ್ದರು. " ಖರ್ಗೆ, ಅವರ ಹೆಂಡರು, ಮಕ್ಕಳನ್ನು ಸಾಫ್​ (ಮುಗಿಸುತ್ತೇನೆ) ಮಾಡುತ್ತೇನೆ" ಎಂದು ಹೇಳುವ ಆಡಿಯೋ ಇದಾಗಿದೆ.
ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ - ಎಐಸಿಸಿ​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ - ಎಐಸಿಸಿ​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಎಐಸಿಸಿ​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಅವರ ಇಡೀ ಕುಟುಂಬವನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗುತ್ತಿದೆ ಎಂದು ಕಾಂಗ್ರೆಸ್​ ಆರೋಪಿಸಿದ್ದು, ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್​ (Manikanta Rathod) ಅವರದ್ದು ಎನ್ನಲಾದ ಆಡಿಯೋ ಲೀಕ್​ ಆಗಿದೆ.

ನಿನ್ನೆ (ಮೇ 6, ಶನಿವಾರ) ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Singh Surjewala), ಆಡಿಯೋ ಕ್ಲಿಪ್​ವೊಂದನ್ನು ಬಿಡುಗಡೆ ಮಾಡಿ, ಇದರಲ್ಲಿರುವ ಧ್ವನಿ ಮಣಿಕಂಠ ರಾಠೋಡ್​ ಮತ್ತು ಬಿಜೆಪಿ ಮುಖಂಡ ರವಿ ಅವರದ್ದು ಎಂದು ಆರೋಪಿಸಿದ್ದರು. " ಖರ್ಗೆ, ಅವರ ಹೆಂಡರು, ಮಕ್ಕಳನ್ನು ಸಾಫ್​ (ಮುಗಿಸುತ್ತೇನೆ) ಮಾಡುತ್ತೇನೆ" ಎಂದು ಹೇಳುವ ಆಡಿಯೋ ಇದಾಗಿದೆ.

ಆಡಿಯೋದಲ್ಲಿ ಏನಿದೆ?

ಅವಾಚ್ಯ ಶಬ್ದಗಳನ್ನು ಬಳಸಿ ಮಾತನಾಡಿರುವ ಮಣಿಕಂಠ ರಾಠೋಡ್, " ನನ್ನ ಮೇಲೆ 44 ಕೇಸ್‌ ಇದೆ ಎಂದು ಹೇಳಿದವರು ಯಾರು" ಎಂದು ರವಿ ಬಳಿ ಕೇಳುತ್ತಾರೆ. " ಖರ್ಗೆ ಕಡೆಯವರು ಈ ರೀತಿ ಮಾತಾಡುತ್ತಾರೆ" ಎಂದು ರವಿ ಹೇಳಿದಾಗ, " ಹಾಗಾದ್ರೆ ಖರ್ಗೆ ಕಡೆಯವರನ್ನೇ ಕೇಳು" ಎಂದು ರಾಠೋಡ್ ಹೇಳುತ್ತಾರೆ. " ಅವರ ಫೋನ್‌ ನಂಬರ್‌ ಕೊಡಿ, ನಾನು ನಿಮ್ಮ ಅಭಿಮಾನಿ, ಅಣ್ಣನ ಬಗ್ಗೆ ಹೀಗ್ಯಾಕೆ ಮಾತಾಡ್ತೀರ ಅಂತ ಅವರನ್ನ ಕೇಳ್ತೀನಿ" ಎಂದು ರವಿ ಹೇಳಿದಾಗ, " ನನ್ನ ಹತ್ರ ಅವರ ಫೋನ್‌ ನಂಬರ್‌ ಇದ್ರೆ ಅವರು, ಅವರ ಹೆಂಡತಿ ಮಕ್ಕಳನ್ನು ಸಾಫ್‌ ಮಾಡುತ್ತೇನೆ" ಎನ್ನುತ್ತಾರೆ. ಆಗ ರವಿ ಅವರು " ಯಾರ ಹೆಂಡತಿ-ಮಕ್ಕಳನ್ನು ಸಾಫ್‌ ಮಾಡುತ್ತೀರಿ" ಎಂದು ಮತ್ತೊಮ್ಮೆ ಕೇಳಿದ್ದಾರೆ, ಅದಕ್ಕೆ ಮಣಿಕಂಠ " ನೀನು ಯಾರ ಹೆಸರನ್ನು ತೆಗೆದುಕೊಂಡಿದ್ದೀಯಾ" ಎಂದು ಕೇಳುತ್ತಾರೆ. ಆಗ ರವಿ, " ಖರ್ಗೆ ಅವರದ್ದು ಅಣ್ಣಾ" ಎಂದು ಹೇಳುತ್ತಾರೆ. " ಹಾ ಅವರದ್ದೇ, ಅವರ ನಂಬರ್‌ ಇದ್ರೆ ಅವರ, ಅವರೆಲ್ಲಾ ಹೆಂಡ್ರು ಮಕ್ಕಳನ್ನು ಸಾಫ್‌ ಮಾಡ್ತೇನಿಲೇ" ಎಂದು ರಾಠೋಡ್ ಹೇಳಿದ್ದಾರೆ ಎಂದು ಆರೋಪಿಸಲಾದ ಆಡಿಯೋ ಕ್ಲಿಪ್​ ಇದಾಗಿದೆ.

ಮಣಿಕಂಠ ರಾಠೋಡ್​ ಪ್ರತಿಕ್ರಿಯೆ

ಆಡಿಯೋ ವೈರಲ್​ ಆಗುತ್ತಿದ್ದಂತೆಯೇ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಣಿಕಂಠ ರಾಠೋಡ್​, " ಇದನ್ನು ಕೇಳಿ ನನಗೆ ತುಂಬಾ ಆಶ್ಚರ್ಯವಾಯಿತು. ಕಾಂಗ್ರೆಸ್ ಚುನಾವಣೆಯಲ್ಲಿ ಸೋಲುವ ಭಯದಲ್ಲಿದೆ. ಆದ್ದರಿಂದ ಅವರು ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿರುವ ಆಡಿಯೋ ಸುಳ್ಳು ಮತ್ತು ನಾನು ಯಾರಿಗೂ ಬೆದರಿಕೆ ಹಾಕಿಲ್ಲ. ನಾನು ಕಾಂಗ್ರೆಸ್ ವಿರುದ್ಧ ದೂರು ದಾಖಲಿಸಿದ್ದೇನೆ" ಎಂದು ಹೇಳಿದ್ದಾರೆ.

ಕರ್ನಾಟಕದ ಜನರು ಮೌನವಾಗಿರುವುದಿಲ್ಲ

"ಪ್ರಧಾನಿ ಮೌನವಾಗಿರುತ್ತಾರೆ ಎಂದು ನನಗೆ ತಿಳಿದಿದೆ, ಹಾಗೆಯೇ ಕರ್ನಾಟಕ ಪೊಲೀಸರು ಮತ್ತು ಭಾರತದ ಚುನಾವಣಾ ಆಯೋಗವೂ ಸಹ ಮೌನವಾಗಿರುತ್ತಾರೆ. ಆದರೆ ಕರ್ನಾಟಕದ ಜನರು ಮೌನವಾಗಿರುವುದಿಲ್ಲ ಮತ್ತು ತಕ್ಕ ಉತ್ತರವನ್ನು ನೀಡುತ್ತಾರೆ" ಎಂದು ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.

ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

ಖರ್ಗೆ ಹತ್ಯೆ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ನಾವು ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತೇವೆ, ನಾವು ಸಂಪೂರ್ಣ ವಿಚಾರಣೆ ನಡೆಸುತ್ತೇವೆ ಮತ್ತು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.

ಪ್ರಿಯಾಂಕ್ ಖರ್ಗೆಗೂ ಕೊಲೆ ಬೆದರಿಕೆ ಹಾಕಿದ್ದ ಮಣಿಕಂಠ

ಚಿತ್ತಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪ್ರಿಯಾಂಕ್ ಖರ್ಗೆ ಅವರಿಗೂ ಈ ಹಿಂದೆ ಮಣಿಕಂಠ ರಾಠೋಡ್​ ಕೊಲೆ ಬೆದರಿಕೆ ಹಾಕಿದ್ದರು. ಪ್ರಿಯಾಂಕ್ ಖರ್ಗೆ ಅವರನ್ನು ಹೊಡೆದುರುಳಿಸಲು ಸಿದ್ಧ ಎಂದು ಮಾಧ್ಯಮಗೋಷ್ಟಿಯಲ್ಲಿಯೇ ಹೇಳಿದ್ದರು. ಹೀಗಾಗಿ ರಾಠೋಡ್​ ಅವರನ್ನು ನವೆಂಬರ್ 13, 2022 ರಂದು ಪೊಲೀಸರು ಬಂಧಿಸಿದ್ದರು ಮತ್ತು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ