Police Transfer: ಯತೀಂದ್ರ ವಿಡಿಯೋ ಗದ್ದಲದ ನಡುವೆ ಕರ್ನಾಟಕ ಪೊಲೀಸ್‌ನಲ್ಲಿ ಭಾರೀ ವರ್ಗಾವಣೆ: ಮತ್ತೆ ವಾಕ್ಸಮರ
Nov 18, 2023 12:04 PM IST
ಕರ್ನಾಟಕ ಸರ್ಕಾರ ಹೊರಡಿಸಿರುವ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ.
- police officers transfers ಕರ್ನಾಟಕದಲ್ಲಿ ವರ್ಗಾವಣೆ ಕುರಿತು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಡುವೆ ಸಂಘರ್ಷ ನಡೆದಿರುವ ನಡುವೆ ಪೊಲೀಸ್ ಅಧಿಕಾರಿಗಳ ಮತ್ತೊಂದು ಪಟ್ಟಿ ಬಿಡುಗಡೆಯಾಗಿದೆ.
ಬೆಂಗಳೂರು: ಕರ್ನಾಟಕದಲ್ಲಿ ವರ್ಗಾವಣೆ ಪ್ರಕ್ರಿಯೆ ನವೆಂಬರ್ ಬಂದರೂ ನಿಂತಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುವ ಜತೆಗೆ ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲಿ ಒಂದೇ ದಿನ ಭಾರೀ ವರ್ಗಾವಣೆ ಮಾಡಲಾಗಿದೆ.
ಇದರಿಂದಾಗಿ ಮತ್ತೆ ಮಾಜಿ ಸಿಎಂ ಎಚ್‌ಡಿಕೆ ಹಾಗೂ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಅವರ ನಡುವೆ ವಾಕ್ಸಮರ ಜೋರಾಗಿದೆ.
ಡಿವೈಎಸ್ಪಿ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ. ಕೆಲವು ಅಧಿಕಾರಿಗಳ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ಅಲ್ಲಿಯೇ ಮುಂದುವರೆಸಲಾಗಿದೆ. ಸಿಎಂ ತವರು ಜಿಲ್ಲೆ ಹಾಗೂ ವರುಣಾ ಕ್ಷೇತ್ರ ವ್ಯಾಪ್ತಿಗೆ ಬರುವ ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್‌ಗಳನ್ನೂ ಎತ್ತಂಗಡಿ ಮಾಡಲಾಗಿದೆ.
ವಿವೇಕಾನಂದ ಎಂಬುವವರಿಗೆ ಸಂಬಂಧಿಸಿದಂತೆ ಯತೀಂದ್ರ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದ ಹೆಸರು ಮೈಸೂರು ನಗರದ ವಿವಿಪುರಂ ಠಾಣೆಗೆ ವರ್ಗಗೊಂಡಿರುವ ಪಟ್ಟಿಯಲ್ಲಿದೆ.
ಮೈಸೂರು, ಬೆಂಗಳೂರು, ಚಿತ್ರದುರ್ಗ, ಬೆಳಗಾವಿ, ಗದಗ, ದಕ್ಷಿಣಕನ್ನಡ, ಚನ್ನಪಟ್ಟಣ ಸೇರಿದಂತೆ ಒಟ್ಟು 40 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಅದೇ ರೀತಿ ನಾಲ್ವರು ಡಿವೈಎಸ್ಪಿಗಳ ವರ್ಗಾವಣೆ ರದ್ದುಮಾಡಲಾಗಿದೆ.
ಬೆಂಗಳೂರು, ತುಮಕೂರು, ಕಲಬುರಗಿ ಸೇರಿದಂತೆ ವಿವಿಧ ವೃತ್ತಗಳು ಸೇರಿದಂತೆ ಒಟ್ಟು 71 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗ ಮಾಡಲಾಗಿದೆ. ಇಲ್ಲಿಯೂ ಮೈಸೂರು ನಗರ, ಗ್ರಾಮಾಂತರದ ವಿಭಾಗದ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಿ ಹೊಸಬರನ್ನು ನೇಮಿಸಲಾಗಿದೆ.
ಕರ್ನಾಟಕದ ಡಿಜಿಪಿ ಅವರ ಆದೇಶದ ಮೇರೆಗೆ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ ಎಂದು ಎಡಿಪಿಜಿ ಸೌಮೆಂದು ಮುಖರ್ಜಿ ಆದೇಶ ಹೊರಡಿಸಿದ್ದಾರೆ.
ಸಿಎಂ ವಿರುದ್ಧ ಹೆಚ್ಡಿಕೆ ಟೀಕಾಪ್ರಹಾರ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ನಡುವಿನ ಫೋನ್ ಸಂಭಾಷಣೆಯಲ್ಲಿ ಪ್ರಸ್ತಾಪಗೊಂಡಿದ್ದ ವಿವೇಕಾನಂದ ಎನ್ನುವ ಹೆಸರು ಕಳೆದ ರಾತ್ರಿ ಹೊರಬಿದ್ದ ಪೊಲೀಸ್ ಇನಸ್ಪೆಕ್ಟರ್ʼಗಳ ವರ್ಗಾವಣೆ ಪಟ್ಟಿಯಲ್ಲಿ ಪ್ರತ್ಯಕ್ಷವಾಗಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟೀಕಾಪ್ರಹಾರ ನಡೆಸಿರುವ ಅವರು; ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ, 48 ಗಂಟೆಗಳ ಒಳಗಾಗಿಯೇ ವರ್ಗದ ಪಟ್ಟಿಯಲ್ಲಿ ಒಳನುಸಳಿದ್ದು ಹೇಗೆ!? ಎಂದು ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ, 48 ಗಂಟೆಗಳ ಒಳಗಾಗಿಯೇ ವರ್ಗದ ಪಟ್ಟಿಯಲ್ಲಿ ಒಳನುಸಳಿದ್ದು ಹೇಗೆ!? ಓಹ್! ಒಂದು ಸರಕಾರ! ವಿಸ್ಮಯಗಳ ಆಗರ!! ಡೂಪ್ಲಿಕೇಟ್ ಸಿಎಂ-DCM ಸಲಹೆ ಮೇರೆಗೆ ಕಾಸಿಗಾಗಿ ಹುದ್ದೆ ವಿಡಿಯೋಗೆ CSR ಕಥೆ ಕಟ್ಟಿದ್ದ ಮುಖ್ಯಮಂತ್ರಿಗಳ ನೈತಿಕತೆಗೆ ನಯಗಾರಿಕೆಗೆ ನೂರೆಂಟು ನಮನ ಎಂದು ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.
ವಿಡಿಯೋ ವಿವೇಕಾನಂದ, ಗುಪ್ತವಾರ್ತೆಯಿಂದ ಮೈಸೂರು ವಿ.ವಿ.ಪುರಂಗೆ ಪೋಸ್ಟಿಂಗ್ ಪಡೆದಿದ್ದು ಹೇಗೆ? ʼಬರ್ಮುಡಾ ಟ್ರ್ಯಾಂಗಲ್ʼ ರಹಸ್ಯವನ್ನೇ ಮೀರಿಸಿದೆ ಈ ಚಿದಂಬರ ರಹಸ್ಯ. ಪ್ರಶ್ನೆ ಕೇಳುವುದು ನನ್ನ ವಿಧಿ, ಉತ್ತರ ಹೇಳಲೇಬೇಕು.. ಅದು ನಿಮ್ಮ ದುರ್ವಿಧಿ. ಆನ್ಸರ್ ಮಾಡಿ ಸಿದ್ದರಾಮಯ್ಯನವರೇ..? ಎಂದು ಮಾಜಿ ಮುಖ್ಯಮಂತ್ರಿಗಳು ಕಾಲೆಳೆದಿದ್ದಾರೆ.
ಕುಮಾರಸ್ವಾಮಿಗೆ ಹೊಟ್ಟೆಕಿಚ್ಚು. ದ್ವೇಷದಿಂದ ಮಗನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಲ್ಲವೇ ನೀವು ಹೇಳಿದ್ದು. ಹಾಗಾದರೆ; 71 ಪೊಲೀಸ್ ಇನಸ್ಪೆಕ್ಟರ್ʼಗಳ ವರ್ಗದ ಈ ಯಾದಿಯ 4ನೇ ಹೆಸರಿನಲ್ಲೇ ಅಡಗಿದೆಯಲ್ಲಾ ನಿಮ್ಮ 'ಸುಲಿಗೆಪುತ್ರ'ನ ಕೆಚ್ಚು! ಕ್ಷೇತ್ರತ್ಯಾಗದ ತ್ಯಾಗಮಯಿ, ಈಗ ವರುಣಾಕ್ಕೆ ವಕ್ಕರಿಸಿದ ಕೆಡಿಪಿ ಕಲಿ. ಏನಂತೀರಿ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಈ ಪಾಪದ ಕಾಸಿನ ಕಮಟು ದುರ್ನಾತ ಅಸಹ್ಯಕರ. 'ವರ್ಗಾವರ್ಗಿ ಬಜೆಟ್'ನಲ್ಲಿ ನಿಮ್ಮ ಪಟಾಲಂದು ಶಿಖರಸಾಧನೆ! 6 ತಿಂಗಳ ಭರ್ಜರಿ ʼಅತೀಂದ್ರೀಯʼ ಅಟ್ಟಹಾಸ!! 'ಕಾಸಿಗಾಗಿ ಹುದ್ದೆ& ಕಾಂಗ್ರೆಸ್ ಹುಂಡಿ' ಎಂಬ ಸಿನಿಮಾವನ್ನೂ ಮಾಡಿ, ಕೆಡಿಪಿ ಕಲಿಯೇ ನಾಯಕ, ಟೆಂಪರರಿ ಸಿಎಂ-TCM ನಿರ್ಮಾಪಕ, ಡೂಪ್ಲಿಕೇಟ್ ಸಿಎಂ-DCM ನಿರ್ದೇಶಕ.. ಹೇಗಿದೆ? ಎಂದು ಕುಮಾಸ್ವಾಮಿ ಅವರು ಟಾಂಗ್ ನೀಡಿದ್ದಾರೆ.
ಸತ್ಯ ಹೇಳಿದರೆ ಗುಂಪುಗುಂಪಾಗಿ ಮೇಲೆ ಬೀಳುತ್ತೀರಿ.. ಬೆದರಿಸುತ್ತೀರಿ. ಕುಮಾರಸ್ವಾಮಿಯದು ಹಿಟ್ & ರನ್ ಅಂತೀರಿ, ಸುಳ್ಳು ಎನ್ನುತ್ತೀರಿ. ಕಣ್ಮುಂದೆ ವಿಡಿಯೋ ಸಾಕ್ಷ್ಯವಿದೆ. ರಾಜ್ಯದ ಜನ ನೋಡಿದ್ದಾರೆ. ಪಲಾಯನಕ್ಕೆ ಅವಕಾಶವೇ ಇಲ್ಲ. ನಿಮ್ಮ ಕೌರವ ದುರ್ನೀತಿ ನನ್ನ ಮುಂದೆ ನಡೆಯಲ್ಲ. ನಾನು ಒಬ್ಬನೇ ಒಬ್ಬ, ಅಂಜಿಕೆ ನನ್ನ ರಕ್ತದಲ್ಲೇ ಇಲ್ಲ ಎಂದು ನೇರವಾಗಿ ತಿರುಗೇಟು ನೀಡಿದ್ದಾರೆ.
ಯತೀಂದ್ರ ತಿರುಗೇಟು
ವರ್ಗಾವಣೆ ದಂಧೆ ಆರೋಪ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಡಾ.ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಸಿಎಸ್ಆರ್ ಫಂಡ್ ಬಗ್ಗೆ ನಾನು ಅವತ್ತು ಮಾತನಾಡಿದ್ದು. ನನಗೂ ವಿವೇಕಾನಂದ ವರ್ಗಾವಣೆಗೂ ಸಂಬಂಧವಿಲ್ಲ. ನಾನು ಆ ವಿಡಿಯೋ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವೇ ಇಲ್ಲ.ನಮ್ಮ ತಂದೆ ಆಗಲಿ, ನಾನಾಗಲಿ ಯಾವುದೇ ದಂಧೆ ನಡೆಸುತ್ತಿಲ್ಲ ಎಂದು ಶನಿವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.
ನಮ್ಮ ಕ್ಷೇತ್ರದಲ್ಲಿ ವಿವೇಕಾನಂದ ಅಂತಾ ಬಿಇಒ ಕೂಡ ಇದ್ದಾರೆ. ಆದರೆ ಪೊಲೀಸ್ ವಿವೇಕಾನಂದ ಯಾರು ಅಂತಾ ನನಗೆ ಗೊತ್ತಿಲ್ಲ.ಸಿಎಂ ಮೇಲೆ ಆರೋಪ ಮಾಡಬೇಕಾದ್ರೆ ಸಾಕ್ಷ್ಯ ಇಟ್ಟುಕೊಳ್ಳಬೇಕು. ಭ್ರಷ್ಟಾಚಾರ, ದಂಧೆ ಆಗ್ತಿದೆ ಎಂದು ಸುಳ್ಳು ಆರೋಪ ಮಾಡಬೇಡಿ ಎಂದು ಹೇಳಿದರು.