logo
ಕನ್ನಡ ಸುದ್ದಿ  /  ಕರ್ನಾಟಕ  /  Political Analysis: ಗರಿಷ್ಠ ಮತನೆಲೆಗಟ್ಟಿನ ಕಾಂಗ್ರೆಸ್‌ ಕೈಗೆ ಸಿಗುವುದೇ ಆಡಳಿತ ಚುಕ್ಕಾಣಿ; ಸಾಮರ್ಥ್ಯ, ದೌರ್ಬಲ್ಯ, ಅವಕಾಶ, ಆತಂಕ ಅವಲೋಕನ

Political Analysis: ಗರಿಷ್ಠ ಮತನೆಲೆಗಟ್ಟಿನ ಕಾಂಗ್ರೆಸ್‌ ಕೈಗೆ ಸಿಗುವುದೇ ಆಡಳಿತ ಚುಕ್ಕಾಣಿ; ಸಾಮರ್ಥ್ಯ, ದೌರ್ಬಲ್ಯ, ಅವಕಾಶ, ಆತಂಕ ಅವಲೋಕನ

Anonymous HT Kannada

May 04, 2023 07:00 AM IST

google News

ಬೆಂಗಳೂರಿನಲ್ಲಿ ಮಂಗಳವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು.

  • Political Analysis: ಕರ್ನಾಟಕದಲ್ಲಿ ಈ ಸಲ ಕಾಂಗ್ರೆಸ್‌ ಅಧಿಕಾರ ಚುಕ್ಕಾಣಿ ಹಿಡಿಯಬಹುದಾ? ಮತ ಹಂಚಿಕೆ ಲೆಕ್ಕಾಚಾರ ಪ್ರಕಾರ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚಿನ ಮತನೆಲೆಗಟ್ಟಿದೆ. ಆದರೆ, ಗೆದ್ದ ಸ್ಥಾನಗಳ ಲೆಕ್ಕಾಚಾರಕ್ಕೆ ಬಂದರೆ ಅದು ಮತಗಳಿಕೆಗೆ ಹೊಂದುವಂತಿಲ್ಲ. 3 ಚಾರ್ಟ್‌ ಮೂಲಕ ಇದರ ವಿಶ್ಲೇಷಣೆಯನ್ನು ಒದಗಿಸಿದ್ದಾರೆ ಹಿಂದುಸ್ತಾನ ಟೈಮ್ಸ್‌ನ ನಿಶಾಂತ್‌ ರಂಜನ್‌. 

ಬೆಂಗಳೂರಿನಲ್ಲಿ ಮಂಗಳವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಬೆಂಗಳೂರಿನಲ್ಲಿ ಮಂಗಳವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು. (PTI)

ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election 2023) ಯಲ್ಲಿ ಕಾಂಗ್ರೆಸ್‌ (Congress) ಈ ಸಲ ಅಧಿಕಾರದ ಗದ್ದುಗೆ ಏರಬಹುದೇ? ಮೇ 10 ರಂದು ಮತದಾನ (Voting) ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಬಯಸುತ್ತಿರುವ ಕಾಂಗ್ರೆಸ್‌ ಪಕ್ಷದ ಸಾಮರ್ಥ್ಯ, ದೌರ್ಬಲ್ಯ, ಅವಕಾಶ ಮತ್ತು ಆತಂಕ (SWOT analysis) ಕಾಂಗ್ರೆಸ್, ಕರ್ನಾಟಕ ಚುನಾವಣೆ, ಸಾಮರ್ಥ್ಯ, ದೌರ್ಬಲ್ಯ, ಆತಂಕ ಮತ್ತು ಅವಕಾಶಗಳ ಚೌಕಟ್ಟಿನಲ್ಲಿ ಮತ ಹಂಚಿಕೆ, ಸೀಟು ಹಂಚಿಕೆ, ಮೀಸಲಾತಿಗಳನ್ನು ವಿವರಿಸುವ ಮೂರು ಚಾರ್ಟ್‌ಗಳ ವಿವರಣೆ ಇಲ್ಲಿದೆ.

ಸಾಮರ್ಥ್ಯ (Strength): ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕಿದೆ ಅತಿದೊಡ್ಡ ಬೆಂಬಲದ ನೆಲೆ

ದೇಶಾದ್ಯಂತ ಹೆಜ್ಜೆಗುರುತು ಕುಗ್ಗುತ್ತಿರುವ ಸಮಯದಲ್ಲಿ, ಕಾಂಗ್ರೆಸ್ ಅದರ ಬೆಂಬಲದ ನೆಲೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. ಇದನ್ನು ಮತ ಹಂಚಿಕೆಯ ಪರಿಭಾಷೆಯಲ್ಲಿ ಅಳೆಯಲಾಗುತ್ತದೆ. ಈ ಮತಹಂಚಿಕೆಯು ಕಾಂಗ್ರೆಸ್‌ ಪಕ್ಷಕ್ಕೆ ಕರ್ನಾಟಕದಲ್ಲಿ ಅದರ ಪ್ರತಿಸ್ಪರ್ಧಿಗಳಿಗಿಂತ ಯಾವಾಗಲೂ ಹೆಚ್ಚಾಗಿರುತ್ತದೆ ಎಂಬ ಅಂಶ ಗಮನಾರ್ಹವಾದುದು.

ಕರ್ನಾಟಕದ ಹಿಂದಿನ ಎಲ್ಲ ವಿಧಾನಸಭಾ ಚುನಾವಣೆಗಳ ಫಲಿತಾಂಶದ ಅಂದರೆ 1985 ಮತ್ತು 1994ರ ಫಲಿತಾಂಶ ಬಿಟ್ಟು ಉಳಿದವುಗಳ ಕುರಿತಾದ ಹಿಂದುಸ್ತಾನ್‌ ಟೈಮ್ಸ್‌ ವಿಶ್ಲೇಷಣೆ (HT Analysis)ಯು ಕಾಂಗ್ರೆಸ್‌ಗೆ ಅತ್ಯಧಿಕ ಮತ ಹಂಚಿಕೆ ಆಗಿದೆ ಎಂಬುದನ್ನು ಬಿಂಬಿಸಿದೆ. ಇದರಲ್ಲಿ 2004, 2008 ಮತ್ತು 2018 ರ ಚುನಾವಣೆಗಳನ್ನು ಒಳಗೊಂಡಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಈ ರೀತಿಯಾಗಿ ನೋಡಿದರೆ ರಾಜ್ಯದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಕಾಂಗ್ರೆಸ್‌ ತನ್ನ ಪಾರಮ್ಯ ಮೆರೆದಿದೆ.

ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಯ ಮತಗಳಿಕೆಯೊಂದಿಗೆ ಹೋಲಿಕೆ ಮಾಡಿದರೆ, ರಾಜ್ಯದಲ್ಲಿ ಕಾಂಗ್ರೆಸ್‌ಗಿಂತ ಹೆಚ್ಚಿನ ಮತ ಪಾಲು ಬಿಜೆಪಿಗೆ ಎಂದಿಗೂ ಸಿಕ್ಕಿಲ್ಲ ಎಂಬುದು ನಿರ್ವಿವಾದಿತ ವಿಚಾರ.

ಚಾರ್ಟ್‌ 1 ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಮತಗಳ ಪಾಲು

ದೌರ್ಬಲ್ಯ (Weakness): ಕರ್ನಾಟಕದ ಮೂರು ಪ್ರಮುಖ ಪಕ್ಷಗಳ ಪೈಕಿ ಮತ ಹಂಚಿಕೆಗೆ ಹೋಲಿಸಿದರೆ ಕಾಂಗ್ರೆಸ್‌ನ ಸೀಟು ಹಂಚಿಕೆ ಅನುಪಾತ ಕಡಿಮೆ

ಪ್ರಮಾಣಾನುಗುಣವಾದ ಮತದಾನದ ವ್ಯವಸ್ಥೆಯಲ್ಲಿ ಅಧಿಕಾರವನ್ನು ಖಾತರಿಪಡಿಸಲು ಹೆಚ್ಚಿನ ಮತ ಹಂಚಿಕೆಯು ಸಾಕಾಗುತ್ತದೆ, ಫಸ್ಟ್‌-ಪಾಸ್ಟ್-ದಿ-ಪೋಸ್ಟ್ (FPTP) ವ್ಯವಸ್ಥೆಯಲ್ಲಿ ವಿಷಯಗಳು ವಿಭಿನ್ನವಾಗಿವೆ. ಅಲ್ಲಿ ಚುನಾವಣೆಗಳನ್ನು ಗೆಲ್ಲುವ ಪಕ್ಷದ ಸಾಮರ್ಥ್ಯವು ಅದರ ಮತ ಪಾಲು ಕ್ಷೇತ್ರ ಮಟ್ಟದಲ್ಲಿ ಸೀಟು ಹಂಚಿಕೆಯಾಗಿ ಪರಿವರ್ತನೆ ಆಗುವ ವಿಚಾರದಲ್ಲಿ ಅನಿಶ್ಚಿತವಾಗಿರುತ್ತದೆ.

ಸೈದ್ಧಾಂತಿಕವಾಗಿ ಹೇಳುವುದಾದರೆ, ಒಂದು ಪಕ್ಷವು ತನ್ನ ಬೆಂಬಲದ ಮೂಲವು ಆಯ್ದ ಪ್ರದೇಶದಲ್ಲಿ ಕೇಂದ್ರೀಕೃತವಾಗಿದ್ದರೆ ಹೆಚ್ಚು ಕಡಿಮೆ ಮತ ಪಾಲನ್ನು ಹೊಂದಲು ಮತ್ತು ಹೆಚ್ಚಿನ ಸ್ಥಾನದಲ್ಲಿ ಗೆಲುವು ಪಡೆಯಲು ಸಾಧ್ಯವಿದೆ. ಜನಬೆಂಬಲವನ್ನು ಸ್ಥಾನಗಳಾಗಿ ಪರಿವರ್ತಿಸಲು ಪಕ್ಷದ ಸಾಮರ್ಥ್ಯವನ್ನು ಅಳೆಯಲು ಒಂದು ಉಪಯುಕ್ತ ಮೆಟ್ರಿಕ್ ಮತ ಹಂಚಿಕೆ ಅನುಪಾತವಾಗಿದೆ.

ಕರ್ನಾಟಕದಲ್ಲಿ ಕಳೆದ ನಾಲ್ಕು ಚುನಾವಣೆಗಳಲ್ಲಿ ಈ ಅನುಪಾತ ಸಂಖ್ಯೆಯನ್ನು ಹೋಲಿಸಿದಾಗ 2013 ಹೊರತುಪಡಿಸಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿಲ್ಲ ಎಂಬುದು ವೇದ್ಯವಾಗುತ್ತದೆ. ಇದು ಸದ್ಯದ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್‌ನ ದೊಡ್ಡ ದೌರ್ಬಲ್ಯ ಎಂದು ಹೇಳಬಹುದು. ಕಳೆದ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಅತಿ ಹೆಚ್ಚು ಸೀಟು-ಮತ ಹಂಚಿಕೆ ಅನುಪಾತವನ್ನು ಹೊಂದಿದೆ. 2013ರ ಚುನಾವಣೆಯಲ್ಲಿ ಬಿಜೆಪಿ ತನ್ನ ಸೀಟು-ಮತದ ಪಾಲು ಅನುಪಾತದಲ್ಲಿ ನಷ್ಟ ಅನುಭವಿಸಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಚಾರ್ಟ್‌ 2 - 2004ರ ಚುನಾವಣೆಯಿಂದೀಚೆಗೆ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿಯ ಸ್ಥಾನ ಪಾಲು ಮತ್ತು ಮತ ಹಂಚಿಕೆ ಪಾಲಗಳ ತುಲನೆ.

ಅವಕಾಶ (Opportunity): ಶೇಕಡ 75 ಮೀಸಲಾತಿ ಭರವಸೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್ ಅನ್ನು ವಿಸ್ತರಿಸಬಹುದಾ?

ದೇವರಾಜ್ ಅರಸ್ ಅವರ ನಾಯಕತ್ವದಲ್ಲಿ ಅಹಿಂದ ಎಂಬ ಸಾಮಾಜಿಕ ಒಕ್ಕೂಟದ ಆಧಾರದ ಮೇಲೆ ಕರ್ನಾಟಕದಲ್ಲಿ ಕಾಂಗ್ರೆಸ್ ಅತ್ಯುತ್ತಮ ಸಾಧನೆಯನ್ನು ಸಾಧಿಸಿದೆ. ಅಹಿಂದ ಎಂಬುದು ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ಎಂಬುದನ್ನು ಬಿಂಬಿಸುವ ಕನ್ನಡದ ಸಂಕ್ಷಿಪ್ತ ರೂಪವಾಗಿದೆ. ಈ ಮೈತ್ರಿಯು ಕರ್ನಾಟಕದ ರಾಜಕೀಯದಲ್ಲಿ ಎರಡು ಪ್ರಬಲ ಜಾತಿಗಳಾದ ಲಿಂಗಾಯತರು ಮತ್ತು ಒಕ್ಕಲಿಗರಿಗೆ ಪರ್ಯಾಯ ಎಂಬಂತೆ ಬಿಂಬಿಸಲಾಗುತ್ತಿದೆ.

ಅಹಿಂದ ಎಂದು ಸ್ಥೂಲವಾಗಿ ವ್ಯಾಖ್ಯಾನಿಸಲಾದ ಸಾಮಾಜಿಕ ಗುಂಪುಗಳು ರಾಜ್ಯದಲ್ಲಿ ಇನ್ನೂ ಕಾಂಗ್ರೆಸ್‌ನ ದೊಡ್ಡ ಬೆಂಬಲದ ಮೂಲವಾಗಿದೆ. ಆದರೂ ಅದರ ಪ್ರಾಥಮಿಕ ಎದುರಾಳಿ ಬಿಜೆಪಿಯು ಅಹಿಂದದ ಅಲ್ಪಸಂಖ್ಯಾತರಲ್ಲದ ಘಟಕಗಳಿಗೆ ಸಂಬಂಧಿಸಿ ಅಂತರವನ್ನು ನಿವಾರಿಸಿದೆ.

ಮುಸ್ಲಿಮರ ಮೀಸಲಾತಿಯನ್ನು ಬೇರೆ ಕೆಟಗರಿಗೆ ವರ್ಗಾಯಿಸಿ, ಅದನ್ನು ಲಿಂಗಾಯತ ಮತ್ತು ಒಕ್ಕಲಿಗರಿಗೆ ಹೆಚ್ಚುವರಿ ಮೀಸಲಾತಿಯನ್ನು ಘೋಷಿಸುವ ಮೂಲಕ ರಾಜ್ಯದ ಎರಡು ಪ್ರಮುಖ ಸಾಮಾಜಿಕ ಗುಂಪುಗಳ ನಡುವೆ ಬಿಜೆಪಿ ತನ್ನ ಲಾಭವನ್ನು ಹೆಚ್ಚಿಸಲು ಪ್ರಯತ್ನಿಸಿತು. ಬಿಜೆಪಿ ಸರ್ಕಾರದ ಈ ನಿರ್ಧಾರವನ್ನು ಸದ್ಯಕ್ಕೆ ಕೋರ್ಟ್‌ ತಡೆಹಿಡಿದಿದೆ.

ಪ್ರತಿಯಾಗಿ ಅನುಪಾತವನ್ನು ಘೋಷಿಸುವ ಮೂಲಕ ಕಾಂಗ್ರೆಸ್ ಇದನ್ನು ಎದುರಿಸಲು ಪ್ರಯತ್ನಿಸಿದೆ. ರಾಜ್ಯದಲ್ಲಿ ಮೀಸಲಾತಿ 75 ಪ್ರತಿಶತಕ್ಕೆ ಏರುತ್ತಿದೆ. ಭರವಸೆಯು ರಾಜಕೀಯ ವೇಗವನ್ನು ಪಡೆದರೆ, ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಬೆಂಬಲದ ನೆಲೆಯನ್ನು ರಾಜಿ ಮಾಡಿಕೊಳ್ಳದೆಯೆ ಹೆಚ್ಚುವರಿ ಸಾಮಾಜಿಕ ಗುಂಪುಗಳ ಬೆಂಬಲವನ್ನು ಪಡೆಯಬಹುದು.

ಚಾರ್ಟ್‌ 3 - ಸಿಎಸ್‌ಡಿಎಸ್‌-ಲೋಕನೀತಿ ಪ್ರಸ್ತುತ ಪಡಿಸಿರುವ ಡೇಟಾ ಪ್ರಕಾರ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಇರುವ ಜಾತಿವಾರು ಬೆಂಬಲ (ಅವಧಿ 2008ರಿಂದ 2018)

ಆತಂಕ (Threat): ಚುನಾವಣೋತ್ತರ ಭಿನ್ನಾಭಿಪ್ರಾಯವು ಕಾಂಗ್ರೆಸ್ಸಿನ ಲಾಭಕ್ಕೆ ಕುತ್ತುತರಬಹುದೇ?

ದೇಶದಲ್ಲಿ 2014ರ ನಂತರದ ಅವಧಿಯಲ್ಲಿ ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಬಹುತೇಕ ಎಲ್ಲ ರಾಜ್ಯಗಳಲ್ಲಿ, ಅದರ ಸಂಘಟನೆಯು ರಾಜ್ಯ ಮಟ್ಟದ ನಾಯಕರ ನಡುವಿನ ಬಣ ಜಗಳದಲ್ಲಿ ಮುಳುಗಿದೆ.

ರಾಜಸ್ಥಾನದಲ್ಲಿ (ಅಶೋಕ್ ಗೆಹ್ಲೋಟ್ ವರ್ಸಸ್ ಸಚಿನ್ ಪೈಲಟ್) ಮತ್ತು ಛತ್ತೀಸ್‌ಗಢದಲ್ಲಿ (ಭೂಪೇಶ್ ಬಾಘೇಲ್ ವರ್ಸಸ್ ಟಿಎಸ್ ಸಿಂಗ್ದೇ‌ಯೋ) ಉದ್ವಿಗ್ನತೆಗಳು ಸರ್ಕಾರದ ಪತನಕ್ಕೆ ಕಾರಣವಾಗದಿದ್ದರೂ, ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್‌ನಿಂದ ಹೊರನಡೆದ ನಂತರ ಮಧ್ಯಪ್ರದೇಶದಲ್ಲಿ 2020ರ ಚುನಾವಣೆಯ ನಡುವೆ ಪಕ್ಷವು ಸರ್ಕಾರವನ್ನು ಕಳೆದುಕೊಂಡಿದೆ. 2022 ರ ಪಂಜಾಬ್ ಚುನಾವಣೆಗೆ ಮೊದಲು ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬದಲಿಗೆ ಚರಣ್ಜಿತ್ ಸಿಂಗ್ ಚನ್ನಿ ಅವರನ್ನು ನೇಮಿಸಿದ ನಂತರ ಅಲ್ಲೂ ಆಡಳಿತವನ್ನು ಕಳೆದುಕೊಂಡಿದೆ.

ಇನ್ನು ಕರ್ನಾಟಕದಲ್ಲಿಯೂ ಪಕ್ಷವು ಮಾಜಿ ಮುಖ್ಯಮಂತ್ರಿ ಕೆ ಸಿದ್ದರಾಮಯ್ಯ ಮತ್ತು ಅದರ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಪೈಪೋಟಿಯ ಗುಂಪುಗಾರಿಕೆಯನ್ನು ಎದುರಿಸುತ್ತಿದೆ. 2019 ರಲ್ಲಿ ಕಾಂಗ್ರೆಸ್ 13 ಶಾಸಕರ ದೊಡ್ಡ ಪಕ್ಷಾಂತರವನ್ನು ಕಂಡಿದೆ. ಈ ವಿದ್ಯಮಾನವು ಕಾಂಗ್ರೆಸ್ ಮತ್ತು ಜನತಾ ದಳ (ಜಾತ್ಯತೀತ) ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಯಿತು ಎಂಬ ಅಂಶವನ್ನು ಗಮನಿಸಿದರೆ, ಪಕ್ಷವು ಗೆದ್ದರೂ, ಬಹುಮತವನ್ನು ಹೊಂದಿದರೂ ಕಾಂಗ್ರೆಸ್‌ ಪಕ್ಷದ ನಾಯಕರೊಳಗೆ ಭಿನ್ನಮತವನ್ನು ತಳ್ಳಿಹಾಕುವಂತೆ ಇಲ್ಲ. ಏನು ಬೇಕಾದರೂ ಸಂಭವಿಸಬಹುದು.

ಅನುವಾದ - ಉಮೇಶ್‌ ಕುಮಾರ್‌ ಶಿಮ್ಲಡ್ಕ, ಸುದ್ದಿ ಸಂಪಾದಕ, ಹಿಂದುಸ್ತಾನ್‌ ಟೈಮ್ಸ್‌ ಕನ್ನಡ

ಈ ವಿಶ್ಲೇಷಣೆಯ ಮೂಲ ಲೇಖನ ಓದುವುದಕ್ಕೆ Number theory: A SWOT analysis of the Congress in Karnataka

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ