Caste Census: ಜಾತಿ ಗಣತಿ ವರದಿ ಸ್ವೀಕರಿಸುವ ಸಿದ್ಧರಾಮಯ್ಯ ನಿರ್ಧಾರದ ಹಿಂದಿದೆ ಹಲವು ಲೆಕ್ಕಾಚಾರ, ಒಕ್ಕಲಿಗ-ಲಿಂಗಾಯತರ ನಡೆಯ ಬಗ್ಗೆ ಕುತೂಹಲ
Jun 13, 2023 01:38 PM IST
ಮುಖ್ಯಮಂತ್ರಿ ಸಿದ್ಧರಾಮಯ್ಯ
- Karnataka Politics: ಭಾರತದಲ್ಲಿ 1932ರ ಬಳಿಕ ಜಾತಿವಾರು ಗಣತಿ ನಡೆದಿಲ್ಲ. ವಿವಿಧ ಧರ್ಮ, ಜಾತಿ, ಉಪ ಜಾತಿಗಳ ಜನಸಂಖ್ಯೆ ಎಷ್ಟಿದೆ ಎಂಬ ನಿಖರವಾದ ಅಂಕಿಅಂಶಗಳಿಲ್ಲ. ಇದನ್ನು ಅರಿಯುವ ಪ್ರಯತ್ನಕ್ಕೆ ಸಿದ್ದರಾಮಯ್ಯ ಮುಂದಾಗಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.
ಬೆಂಗಳೂರು: ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸ್ವೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮುಂದುವರೆದು ಈ ವರದಿಯ ದತ್ತಾಂಶದ ಆಧಾರದಲ್ಲಿ ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ನಿಜ! 1932 ರ ಬಳಿಕ ದೇಶದಲ್ಲಿ ಜಾತಿವಾರು ಜನಗಣತಿ ನಡೆದಿಲ್ಲ. ವಿವಿಧ ಧರ್ಮ, ಜಾತಿ, ಉಪ ಜಾತಿಗಳ ಜನಸಂಖ್ಯೆ ಎಷ್ಟಿದೆ ಎಂಬ ನಿಖರವಾದ ಅಂಕಿ ಅಂಶಗಳಿಲ್ಲ. ಇಂತಹುದೊಂದು ಪ್ರಯತ್ನವನ್ನು ಸಿದ್ದರಾಮಯ್ಯ ಸರ್ಕಾರ ಮಾಡಿತ್ತು. ದೇಶದಲ್ಲೇ ಮೊದಲ ಬಾರಿಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲು ಮುಂದಾಗಿದ್ದರು. ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ ಸಮೀಕ್ಷೆ ನಡೆದಿತ್ತು. ಎಚ್.ಕಾಂತರಾಜು ಆಯೋಗದ ಅಧ್ಯಕ್ಷರು.
ವರದಿ ಸಿದ್ದವಾಗಿದ್ದರೂ ತಮ್ಮದೇ ಸರ್ಕಾರ ನೇಮಿಸಿದ್ದ ಆಯೋಗದ ವರದಿಯನ್ನು ಸ್ವೀಕಾರ ಮಾಡಲು ಸಿದ್ದರಾಮಯ್ಯ ಹಿಂದೇಟು ಹಾಕಿದ್ದರು. ಇದು ಜೇನು ಗೂಡಿಗೆ ಕೈ ಹಾಕಿದಂತೆ ಎನ್ನುವುದು ಸಿದ್ದರಾಮಯ್ಯ ಅವರಿಗೆ ಅರ್ಥವಾಗಿತ್ತು. ಏಕೆಂದರೆ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಥವಾ ಜಾತಿ ಗಣತಿ ವರದಿ ಪ್ರಕಾರ ರಾಜ್ಯದ ಜಾತಿ ಸಮೀಕರಣದ ಲೆಕ್ಕಾಚಾರಗಳು ಬುಡಮೇಲು ಆಗುವಂತಿದ್ದವು. ಈ ವರದಿಯನ್ನು ಸ್ವೀಕಾರ ಮಾಡಿದರೆ ರಾಜ್ಯದಲ್ಲಿ ಮೇಲ್ವರ್ಗಗಳು ದಂಗೆ ಏಳುವ ಸಾಧ್ಯತೆಗಳಿದ್ದವು. ಹಾಗಾಗಿ ಪರಿಣಾಮದ ಅಂದಾಜು ಮಾಡಲು ಸರ್ಕಾರ ಈ ವರದಿಯ ಯಾವ ಯಾವ ಜಾತಿಯ ಜನರು ಎಷ್ಟಿದ್ದಾರೆ ಎಂಬ ಅಂಶಗಳನ್ನು ಸೋರಿಕೆ ಮಾಡಿತು. ನಿರೀಕ್ಷೆಯಂತೆ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಸರ್ಕಾರದ ವಿರುದ್ದ ತಿರುಗಿ ಬಿದ್ದವು. ಎಚ್ಚೆತ್ತ ಸಿದ್ದರಾಮಯ್ಯ ಸರ್ಕಾರ ಈ ವರದಿಯನ್ನು ಸ್ವೀಕಾರ ಮಾಡಲೇ ಇಲ್ಲ.
ಏನಿತ್ತು ವರದಿಯಲ್ಲಿ?
2011ರ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆ 6.30 ಕೋಟಿ. ಈ ಪೈಕಿ ಸುಮಾರು 6 ಕೋಟಿ ಜನ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಬೆಂಗಳೂರಿನಲ್ಲಿ ಶೇ 84ರಷ್ಟು ಸಮೀಕ್ಷೆ ನಡೆದಿದೆ ಎಂಬ ಮಾಹಿತಿ ಇದೆ. ಸೋರಿಕೆಯಾಗಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ 1.08 ಕೋಟಿ, ಪರಿಶಿಷ್ಟ ಪಂಗಡದ 42 ಲಕ್ಷ, ಮುಸ್ಲಿಮರು 75 ಲಕ್ಷ ಹಾಗೂ ಹಿಂದುಳಿದ ಸಮುದಾಯಕ್ಕೆ ಸೇರಿದ ಕುರುಬರು 45 ಲಕ್ಷ ಇದ್ದಾರೆ. ಲಿಂಗಾಯತರು 73 ಲಕ್ಷ ಮತ್ತು ಒಕ್ಕಲಿಗರು 70 ಲಕ್ಷದಷ್ಟು ಇದ್ದಾರೆ ಎಂಬ ಅಂಶ ಸೋರಿಕೆಯಾಗಿದೆ. ಆದರೆ ಈ ಎರಡೂ ಸಮುದಾಯಗಳು ತಮ್ಮ ತಮ್ಮ ಜನಸಂಖ್ಯೆ 1 ಕೋಟಿಗೂ ಹೆಚ್ಚು ಎಂದು ಪ್ರತಿಪಾದಿಸುತ್ತಿದ್ದು, ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಕಡಿಮೆ ಮಾಡಿದೆ ಎಂದು ಆರೋಪಿಸಿವೆ. ಬ್ರಾಹ್ಮಣ (15ಲಕ್ಷ), ಕ್ರೈಸ್ತ (12ಲಕ್ಷ), ಯಾದವ(10.50ಲಕ್ಷ) ಎಂಬ ಮಾಹಿತಿ ಇದೆ. ಈ ಸಮುದಾಯಗಳೂ ತಮ್ಮ ಜನಸಂಖ್ಯೆ ಇಷ್ಟು ಕಡಿಮೆ ಇರಲಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿವೆ.
ಈ ಹಿಂದಿನ ಜನಗಣತಿಗಳ ಪ್ರಕಾರ ಜನಸಂಖ್ಯೆಯಲ್ಲಿ ಲಿಂಗಾಯತರು ಮೊದಲ ಸ್ಥಾನದಲ್ಲಿದ್ದರೆ ಒಕ್ಕಲಿಗರು ಎರಡನೇ ಸ್ಥಾನದಲ್ಲಿದ್ದಾರೆ. ಈ ಸಮೀಕ್ಷೆಯಲ್ಲಿ ಲಿಂಗಾಯತರು 73 ಲಕ್ಷ ಮಾತ್ರ ಇದ್ದಾರೆ. ಒಕ್ಕಲಿಗರು 70 ಲಕ್ಷದಷ್ಟು ಇದ್ದಾರೆ. ಅಂದರೆ ಮೊದಲ ಸ್ಥಾನದಲ್ಲಿದ್ದ ಲಿಂಗಾಯತರು ನಾಲ್ಕನೇ ಸ್ಥಾನಕ್ಕೆ ಮತ್ತು ಎರಡನೇ ಸ್ಥಾನದಲ್ಲಿದ್ದ ಒಕ್ಕಲಿಗರು ಐದನೇ ಸ್ಥಾನಕ್ಕೆ ಕುಸಿದಿದ್ದಾರೆ. ಮೂರನೇ ಸ್ಥಾನದಲ್ಲಿದ್ದ ಕುರುಬರು ಆರನೇ ಸ್ಥಾನಕ್ಕೆ ಕುಸಿದಿದ್ದಾರೆ. ಸಮೀಕ್ಷೆಯ ಅಂಕಿ ಅಂಶಗಳು ಇಲ್ಲಿಗೆ ನಿಲ್ಲುವುದಿಲ್ಲ. ಸಮೀಕ್ಷೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಕಾರ ಕುರುಬ ಸಮುದಾಯವನ್ನು ಅತ್ಯಂತ ಹಿಂದುಳಿದ ಸಮುದಾಯ ಎಂದು ಘೋಷಿಸಬೇಕು ಎಂದು ಶಿಫಾರಸು ಮಾಡಲಾಗಿದೆ.
ಈ ಅಂಕಿ ಅಂಶಗಳ ಕಾರಣಗಳಿಗಾಗಿ ಈ ವರದಿ ಮೇಲ್ವರ್ಗಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ಕಾರಣಕ್ಕೆ ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಸರ್ಕಾರಗಳು ಈ ಜೇನು ಗೂಡಿಗೆ ಕೈ ಹಾಕುವ ಸಾಹಸ ಮಾಡಲಿಲ್ಲ.
ಮತ್ತೊಂದು ಕಡೆ ಈ ಎರಡೂ ಸಮುದಾಯಗಳ ರಾಜಕೀಯ ಮುಖಂಡರು ಪಕ್ಷಾತೀತವಾಗಿ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಮುದಾಯಗಳ ಸ್ವಾಮೀಜಿಗಳು ವರದಿ ಅನುಷ್ಠಾನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಎರಡು ಮೂರು ವರ್ಷಗಳಲ್ಲಿ ನಡೆದ ಮೀಸಲಾತಿ ಹೆಚ್ಚಳ ಸಭೆಗಳಲ್ಲೂ ಕಾಂತರಾಜು ವರದಿ ಜಾರಿಗೆ ವಿರೋಧ ವ್ಯಕ್ತವಾಗುತ್ತಲೇ ಬಂದಿದೆ. ಒಂದು ವೇಳೆ ಯಾವುದೇ ಸರ್ಕಾರ ಜಾರಿಗೆ ಪ್ರಯತ್ನ ನಡೆಸಿದರೆ ಉಗ್ರವಾಗಿ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿವೆ.
ಪರಿಸ್ಥಿತಿ ಹೀಗಿರುವಾಗ ಆಗ ಇಲ್ಲದ ಧೈರ್ಯ ಸಿದ್ದರಾಮಯ್ಯ ಅವರಿಗೆ ಈಗ ಎಲ್ಲಿಂದ ಬಂತು ಎಂಬ ಪ್ರಶ್ನೆ ಮೂಡುತ್ತದೆ. ಡಿ.ಕೆ. ಶಿವಕುಮಾರ್ ಎಂ.ಬಿ. ಪಾಟೀಲ್ ಅವರ ರಾಜೀನಾಮೆಗೆ ಒತ್ತಡ ಹೆಚ್ಚದೆ ಇರುತ್ತದೆಯೇ? ಎರಡೂ ಸಮುದಾಯಗಳು 15ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಪ್ರಾಬಲ್ಯ ಹೊಂದಿವೆ.
ಪರಿಸ್ಥಿತಿ ಬಿಗಡಾಯಿಸಿದರೆ ಸರಕಾರ ರಕ್ಷಣಾತ್ಮಕ ಆಟದ ಮೊರೆ ಹೋಗುತ್ತದೆ. ಅಂದರೆ ಈ ವರದಿಯನ್ನು ಪರಿಶೀಲಿಸಲು ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಿ ಕೈ ತೊಳೆದು ಕೊಳ್ಳುತ್ತದೆ. ಒಬ್ಬ ವ್ಯಕ್ತಿಯ ಮಾಹಿತಿ ಗಣಕೀಕರಣಕ್ಕೆ ರೂ. 6.14 ವೆಚ್ಚ ಮಾಡಲಾದ ಈ ವರದಿ ಶೈತ್ಯಾಗಾರ ಸೇರುತ್ತದೆ.
ವರದಿ: ಮಾರುತಿ, ಬೆಂಗಳೂರು.