Inside Story: ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ವಿಧೇಯಕದಿಂದ ಸಿದ್ದರಾಮಯ್ಯ ಹಿಂದೆ ಸರಿಯಲು ಏನು ಕಾರಣ? ಹೈಕಮಾಂಡ್ ಪಾತ್ರವೂ ಇದೆಯೇ?
Jul 19, 2024 10:03 PM IST
ವಿಧಾನಸಭೆಯಲ್ಲಿ ಚರ್ಚೆಯಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್.
- ಸರ್ಕಾರದ ಈ ನಿರ್ಧಾರಕ್ಕೆ ಕಾನೂನಿನ ಮಾನ್ಯತೆ ಸಿಗುವುದಿಲ್ಲ. ಅನೇಕ ರಾಜ್ಯಗಳಲ್ಲಿ ಇಂತಹ ಪ್ರಯತ್ನಗಳು ನಡೆದಿದ್ದರೂ ಕಾನೂನಿನ ಮಾನ್ಯತೆ ಸಿಕ್ಕಿಲ್ಲ. ಬದಲಾಗಿ ಕೈಗಾರಿಕೋದ್ಯಮಿಗಳಿಂದ ಟೀಕೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ವಿಚಾರವನ್ನು ಕರ್ನಾಟಕದ ನಾಯಕರಿಗೆ ಮನವರಿಕೆ ಮಾಡಿಕೊಡಲು ಹೈಕಮಾಂಡ್ ಯತ್ನಿಸಿತು. (ವರದಿ: ಮಾರುತಿ ಎಚ್.)
ಬೆಂಗಳೂರು: ಕರ್ನಾಟಕದ ಖಾಸಗಿ ಕೈಗಾರಿಕೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಆಡಳಿತಾತ್ಮಕ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ 50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ 75 ರ ಮೀಸಲಾತಿ ನಿಗದಿಪಡಿಸುವ ವಿಧೇಯಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತಾತ್ಕಾಲಿಕವಾಗಿ ತಡೆ ಹಿಡಿದಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮತ್ತೊಮ್ಮೆ ಪರಾಮರ್ಶಿಸಿ ನಿರ್ಧರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಯೂಟರ್ನ್ ತೆಗೆದುಕೊಂಡಿದ್ದಾರೆ. ದಿಢೀರನೆ ಮುಖ್ಯಮಂತ್ರಿಗಳು ಯೂಟರ್ನ್ ತೆಗೆದುಕೊಳ್ಳಲು ಕಾರಣಗಳಾದರೂ ಏನು? ಅವರ ಮೇಲೆ ಒತ್ತಡ ಹೇರಿದ್ದಾದರೂ ಯಾರು ಎಂಬ ಪ್ರಶ್ನೆಗೆ ದಿಲ್ಲಿಯತ್ತ ಬೊಟ್ಟು ಮಾಡಿ ತೋರಿಸಲಾಗುತ್ತಿದೆ. ರಾಷ್ಟ್ರ ರಾಜಧಾನಿಯಿಂದ ಬಂದ ಆ ಒಂದು ಕರೆ ಸಿದ್ದರಾಮಯ್ಯ ಅವರನ್ನು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಸರ್ಕಾರದ ಈ ನಿರ್ಧಾರಕ್ಕೆ ಕಾನೂನಿನ ಮಾನ್ಯತೆ ಸಿಗುವುದಿಲ್ಲ. ಅನೇಕ ರಾಜ್ಯಗಳಲ್ಲಿ ಇಂತಹ ಪ್ರಯತ್ನಗಳು ನಡೆದಿದ್ದರೂ ಕಾನೂನಿನ ಮಾನ್ಯತೆ ಸಿಕ್ಕಿಲ್ಲ. ಬದಲಾಗಿ ಕೈಗಾರಿಕೋದ್ಯಮಿಗಳಿಂದ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಈ ನಿರ್ಧಾರದಿಂದ ಪಕ್ಷಕ್ಕಾಗಲೀ ಅಥವಾ ರಾಜ್ಯದ ಜನತೆಗಾಗಲೀ ಯಾವುದೇ ಪ್ರಯೋಜನ ಆಗುವುದಿಲ್ಲ ಎಂಬ ಸಲಹೆಯನ್ನು ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ನೀಡಲಾಗಿದೆ.
ಪಕ್ಷದ ವರಿಷ್ಠರು ಹಾಗೂ ಲೋಕಸಭೆಯಲ್ಲಿ ಪಕ್ಷದ ನಾಯಕರೂ ಆಗಿರುವ ರಾಹುಲ್ ಗಾಂಧಿ ಅವರ ಮಧ್ಯಪ್ರವೇಶದಿಂದ ಈ ಮಸೂದೆಯನ್ನು ತಡೆ ಹಿಡಿಯಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಮತ್ತೊಂದು ಕಡೆ ಈ ನಿರ್ಧಾರದಿಂದ ರಾಜ್ಯದಲ್ಲಿ ಪಕ್ಷಕ್ಕೆ ಹೆಚ್ಚಿನ ಬೆಂಬಲ ಸಿಗಲಿದೆ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನಗಳನ್ನು ಮಾಡಿದರಾದರೂ ಹೈಕಮಾಂಡ್ ಸೊಪ್ಪು ಹಾಕಿಲ್ಲ.
2019 ರಲ್ಲಿ ಆಂಧ್ರಪ್ರದೇಶ, 2020 ರಲ್ಲಿ ಹರಿಯಾಣ, 2023 ರಲ್ಲಿ ಜಾರ್ಖಂಡ್ ಇಂತಹ ಪ್ರಯತ್ನಗಳಿಗೆ ಕೈ ಹಾಕಿವೆ. ಆಂಧ್ರಪ್ರದೇಶ ಹೈಕೋರ್ಟ್ ಇಂತಹ ನಿರ್ಧಾರ ಅಸಂವಿಧಾನಿಕ ಎಂದು ಹೇಳಿತ್ತು. ಹರಿಯಾಣ-ಪಂಜಾಬ್ ಹೈಕೋರ್ಟ್ ದೇಶದ ನಾಗರಿಕರೊಳಗೆ ಇಂತಹ ತಾರತಮ್ಯ ಸರಿಯಲ್ಲ ಎಂದು ಹೇಳಿದೆ. ಪಂಜಾಬ್ ಸರ್ಕಾರವು ಈ ತೀರ್ಪನ್ನು ಸುಪ್ರೀಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಜಾರ್ಖಂಡ್ ಸರಕಾರದ ಈ ವಿಧೇಯಕವನ್ನು ರಾಜ್ಯಪಾಲರು ತಡೆಹಿಡಿದ್ದಾರೆ.
ಸಂವಿಧಾನ ವಿರೋಧಿ ಕ್ರಮ: ಶಶಿ ತರೂರ್
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಲೋಕಸಭಾ ಸದಸ್ಯ ಶಶಿ ತರೂರ್ ಅವರೂ ಕರ್ನಾಟಕ ಸರ್ಕಾರದ ನಿಲುವನ್ನು ಖಂಡಿಸಿದ್ದಾರೆ. ರಾಜ್ಯ ಸರ್ಕಾರದ ಕ್ರಮವು ಸಂವಿಧಾನ ವಿರೋಧಿ ಮತ್ತು ವಿವೇಚನಾರಹಿತ ಕ್ರಮ ಎಂದೂ ಅವರು ಟೀಕಿಸಿದ್ದಾರೆ. ಈ ಕ್ರಮದಿಂದ ಹಿಂದೆ ಸರಿದ ಸಿದ್ದರಾಮಯ್ಯ ಅವರನ್ನು ತರೂರ್ ಅಭಿನಂದಿಸಿದ್ದಾರೆ. ಸಂವಿಧಾನದ ಆಶಯಗಳ ಪ್ರಕಾರ ದೇಶದ ಪ್ರತಿಯೊಬ್ಬ ಪ್ರಜೆಗೂ ದೇಶದೊಳಗೆ ಸ್ವತಂತ್ರವಾಗಿ ಬದುಕುವ ಹಾಗೂ ಸಂಚರಿಸುವ ಮುಕ್ತ ಅವಕಾಶಗಳನ್ನು ನೀಡಲಾಗಿದೆ. ಒಂದು ವೇಳೆ ಎಲ್ಲ ರಾಜ್ಯಗಳು ಇಂತಹ ಕಾನೂನುಗಳನ್ನು ಜಾರಿಗೊಳಿಸುತ್ತಾ ಹೋದರೆ ಅದು ಸಂವಿಧಾನ ವಿರೋಧಿಯಾಗುವುದಿಲ್ಲವೇ ಎಂದು ಅವರು ಪ್ರಶ್ನಿಸಿದ್ದರು.
ಈ ಹಿಂದೆ ಇಂತಹುದೇ ಪ್ರಯತ್ನಕ್ಕೆ ಕೈ ಹಾಕಿದ್ದ ಹರಿಯಾಣ ಸರ್ಕಾರದ ಮಸೂದೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು ಕಣ್ಣ ಮುಂದಿದ್ದರೂ ಕರ್ನಾಟಕ ಇಂತಹ ಪ್ರಯತ್ನಕ್ಕೆ ಕೈ ಹಾಕಿದ್ದಾದೂ ಏಕೆ ಎಂದು ಅರ್ಥವಾಗಿಲ್ಲ. ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಉದ್ದಿಮೆಗಳು ನೆರೆಯ ರಾಜ್ಯಗಳಿಗೆ ಸ್ಥಳಾಂತರಗೊಳ್ಳುವ ಅಪಾಯವೂ ಇದೆ ಎಂದು ತರೂರ್ ಆತಂಕ ವ್ಯಕ್ತಪಡಿಸಿದ್ದರು.