logo
ಕನ್ನಡ ಸುದ್ದಿ  /  ಕರ್ನಾಟಕ  /  Inside Details: ತಾಯಿ ಅನಿತಾ ಕುಮಾರಸ್ವಾಮಿ ಮಾತು ಮೀರಿ ಎಲೆಕ್ಷನ್ ನಿಲ್ಲಬೇಕಾದ ಸ್ಥಿತಿ ನಿಖಿಲ್‌ಗೆ ಬಂದಿದ್ದು ಏಕೆ? -ಎಕ್ಸ್‌ಕ್ಲೂಸೀವ್ ವಿವರ

Inside Details: ತಾಯಿ ಅನಿತಾ ಕುಮಾರಸ್ವಾಮಿ ಮಾತು ಮೀರಿ ಎಲೆಕ್ಷನ್ ನಿಲ್ಲಬೇಕಾದ ಸ್ಥಿತಿ ನಿಖಿಲ್‌ಗೆ ಬಂದಿದ್ದು ಏಕೆ? -ಎಕ್ಸ್‌ಕ್ಲೂಸೀವ್ ವಿವರ

D M Ghanashyam HT Kannada

Nov 30, 2024 03:24 PM IST

google News

ಸಂತೋಷದ ಕ್ಷಣವೊಂದರಲ್ಲಿ ಅಮ್ಮ ಅನಿತಾ ಕುಮಾರಸ್ವಾಮಿ ಅವರಿಗೆ ಸಿಹಿ ತಿನ್ನಿಸುತ್ತಿರುವ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ. (ಸಂಗ್ರಹ ಚಿತ್ರ)

    • ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಸ್ಪರ್ಧಿಸುವುದು ತಾಯಿ ಅನಿತಾ ಅವರಿಗೆ ಇಷ್ಟವಿರಲಿಲ್ಲ. 2026ಕ್ಕೆ ನಿಖಿಲ್‌ಗೆ ರಾಜಯೋಗ ಬರುತ್ತದೆ. ಅಲ್ಲಿಯವರೆಗೂ ಕಾಯಬೇಕು ಎನ್ನುವ ಮಾತು ದೇವೇಗೌಡರ ಕುಟುಂಬದ್ದಾಗಿತ್ತು. ಆದರೂ ನಿಖಿಲ್ ಚುನಾವಣೆಗೆ ಸ್ಪರ್ಧಿಸಿದ್ದು ಏಕೆ? -ದೇವೇಗೌಡರ ಕುಟುಂಬದ ಆಂತರ್ಯ ಬಲ್ಲವರು ಬಹಿರಂಗಪಡಿಸಿದ ವಿವರಗಳಿವು (ಬರಹ: ಶ್ರೀನಿವಾಸ ಮಠ)
ಸಂತೋಷದ ಕ್ಷಣವೊಂದರಲ್ಲಿ ಅಮ್ಮ ಅನಿತಾ ಕುಮಾರಸ್ವಾಮಿ ಅವರಿಗೆ ಸಿಹಿ ತಿನ್ನಿಸುತ್ತಿರುವ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ. (ಸಂಗ್ರಹ ಚಿತ್ರ)
ಸಂತೋಷದ ಕ್ಷಣವೊಂದರಲ್ಲಿ ಅಮ್ಮ ಅನಿತಾ ಕುಮಾರಸ್ವಾಮಿ ಅವರಿಗೆ ಸಿಹಿ ತಿನ್ನಿಸುತ್ತಿರುವ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ. (ಸಂಗ್ರಹ ಚಿತ್ರ)

ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಸೋತ ನಂತರದಲ್ಲಿ ಜೆಡಿಎಸ್ ಮತ್ತು ದೇವೇಗೌಡರ ಕುಟುಂಬದ ಹಲವು ಆಂತರಿಕ ವಿಚಾರಗಳು ಹೊರಗೆ ಬರುತ್ತಿವೆ. ಅದರಲ್ಲಿ ಮೊದಲನೆಯದು ಹಾಗೂ ಮುಖ್ಯವಾದದ್ದು ಏನೆಂದರೆ, ನಿಖಿಲ್ ಈ ಚುನಾವಣೆಗೆ ಸ್ಪರ್ಧಿಸುವುದು ತಾಯಿ ಅನಿತಾ ಅವರಿಗೆ ಎಳ್ಳಷ್ಟೂ ಇಷ್ಟವಿರಲಿಲ್ಲ. ಜೆಪಿ ನಗರದಲ್ಲಿ ಇರುವ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ‘ಬಿ ಫಾರಂ’ಗೆ ಪೂಜೆ ಮಾಡಿಸಿಕೊಂಡು ಬಂದು, ಅದನ್ನು ಪದ್ಮನಾಭ ನಗರದಲ್ಲಿನ ಮನೆಯ ಪಕ್ಕದಲ್ಲಿ ಇರುವಂಥ ದೇವೇಗೌಡರ ಪಿಎಸ್ ಕಚೇರಿಯಲ್ಲಿ ಇರಿಸಲಾಗಿತ್ತು. ಇಲ್ಲಿಗೆ ಬಂದಿದ್ದ ನಿಖಿಲ್ ಅವರು ಆ ಬಿ ಫಾರಂ ಅನ್ನು ಕೈಯಲ್ಲಿ ಕೂಡ ಮುಟ್ಟದೆ ಐದು ನಿಮಿಷದಲ್ಲಿಯೇ ಅಲ್ಲಿಂದ ಹೊರಟು ಬಿಟ್ಟಿದ್ದರು. ಅಂದರೆ ತಾಯಿಯ ಮಾತನ್ನು ಮೀರಿ ಸ್ಪರ್ಧಿಸುವುದಕ್ಕೆ ಸ್ವತಃ ನಿಖಿಲ್‌ಗೂ ಒಲವಿರಲಿಲ್ಲ. ಆದರೆ ತಂದೆ ಕುಮಾರಸ್ವಾಮಿ, ಅಜ್ಜ ದೇವೇಗೌಡರು ಸಿಲುಕಿಕೊಂಡಿದ್ದ ಒತ್ತಡಕ್ಕೆ ಮಣಿದು ಮೂರನೇ ಸೋಲನ್ನು ತಲೆ ಮೇಲೆ ಹಾಕಿಕೊಳ್ಳಬೇಕಾಯಿತು. ಮಾಧ್ಯಮಗಳಲ್ಲಿ “ಅಭಿಮನ್ಯು” ಎಂಬ ಹೋಲಿಕೆಯನ್ನೂ ನಿಖಿಲ್ ಸಾಕಷ್ಟು ಸಲ ಗಮನಿಸಬೇಕಾಯಿತು.

ಮೂಲಗಳು ತಿಳಿಸುವ ಪ್ರಕಾರ, ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸುವುದು ಮೂರು ತಿಂಗಳ ಹಿಂದೆಯೇ ನಿರ್ಧಾರವಾಗಿತ್ತು. “ಬೈ ಎಲೆಕ್ಷನ್”ಗಳಲ್ಲಿ ಅದ್ಭುತ ಕಾರ್ಯತಂತ್ರ ನಿಪುಣ (ಸ್ಟ್ರಾಟಜಿಸ್ಟ್) ಅನ್ನಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಈ ಯೋಜನೆಯು ಎಲ್ಲೂ ಹೊರಗೆ ಬಾರದಿರುವಂತೆ ನೋಡಿಕೊಂಡರು. ಆದರೆ ನಿಜವಾಗಿಯೂ ಖೆಡ್ಡಾಕ್ಕೆ ಬಿದ್ದಿದ್ದು ಜೆಡಿಎಸ್ ಹಾಗೂ ಬಿಜೆಪಿಯವರು. ಜೆಡಿಎಸ್‌ನಿಂದಾದರೂ ಸರಿ, ಬಿಜೆಪಿಯಿಂದಾದರೂ ಸರಿ, ಯೋಗೇಶ್ವರ್ ಅಭ್ಯರ್ಥಿ ಆಗಲಿ ಎಂಬುದೇ ಆ ಎರಡೂ ಮೈತ್ರಿ ಪಕ್ಷಗಳವರ ಉದ್ದೇಶವಾಗಿತ್ತು. ಒಂದು ವೇಳೆ ತುಂಬ ಮುಂಚಿತವಾಗಿಯೇ ಈ ಯೋಗೇಶ್ವರ್ ಜಂಪ್ ಆಗುವುದರ ಅಂದಾಜು ಸಿಕ್ಕಿದ್ದರೆ ಚುನಾವಣೆಯ ಸ್ಪರ್ಧೆ ಇನ್ನಷ್ಟು ಕಠಿಣವಾಗುತ್ತಿದ್ದದ್ದು ನಿಜ. ತೀರಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಜೆಡಿಎಸ್- ಬಿಜೆಪಿ ಪಾಳಯಕ್ಕೆ ಈ ಸಂದೇಶ ಸಿಕ್ಕಿದೆ. ಈ ಯೋಗೇಶ್ವರ್ ಗೆ ಯಾವ ಕಾರಣಕ್ಕೂ ಮೈತ್ರಿ ಪಕ್ಷಗಳ ಟಿಕೆಟ್ ಕೊಡಬಾರದು ಎಂಬ ಸುಳಿವು ಕೇಂದ್ರ ಗುಪ್ತಚರ ಇಲಾಖೆಯಿಂದಲೇ ಬಂದಿದೆ.

ಹಿಂಜರಿದರು ಜಯಮುತ್ತು

ಈ ಬೆಳವಣಿಗೆಗಳು ಅರಿವಾಗುವ ಹೊತ್ತಿಗೆ ಜಯಮುತ್ತು ಅವರಿಗೆ ಜೆಡಿಎಸ್ ಟಿಕೆಟ್ ಕೊಡುವುದು ಎನ್ನುವ ತೀರ್ಮಾನವಾಗಿತ್ತು. ಯೋಗೇಶ್ವರ್ ಬೆನ್ನಿಗೆ ಇಡೀ ಸರ್ಕಾರ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಇವರೆಲ್ಲ ನಿಂತ ಮೇಲೆ ಜಯಮುತ್ತು ಅವರಿಗೆ ಸ್ಪರ್ಧಿಸುವ ಉತ್ಸಾಹವೇ ಅಡಗಿಹೋಯಿತು. ಚನ್ನಪಟ್ಟಣ ಕ್ಷೇತ್ರದಲ್ಲೂ ಜೆಡಿಎಸ್ ಕಾರ್ಯಕರ್ತರು ಇನ್ನೂ ಒಂದಿಷ್ಟು ಹೆಸರುಗಳನ್ನು ಚರ್ಚೆ ಮಾಡಿದರು. ಆದರೆ ಒಳ್ಳೆ ಹೆಸರು, ತಕ್ಕಮಟ್ಟಿಗೆ ಶಕ್ತಿಯೂ ಇರುವ ಜಯಮುತ್ತು ಅವರೇ ಹೀಗೆ ಹೆಜ್ಜೆ ಹಿಂದಕ್ಕೆ ಇಟ್ಟ ಮೇಲೆ ನಿಖಿಲ್ ಕುಮಾರಸ್ವಾಮಿ ಪಿಕ್ಚರ್ ಒಳಗೆ ಬಂದಿದ್ದಾರೆ.

'2026ನೇ ಇಸವಿ ಬರುವ ತನಕ ಅಥವಾ ಆ ನಂತರ ನಿಖಿಲ್ ಗೆ ರಾಜಯೋಗ ಬರುತ್ತದೆ. ಅದಾದ ಮೇಲೆ ಅವರು ಚುನಾವಣೆಗೆ ಸ್ಪರ್ಧಿಸಲಿ' ಎನ್ನುವ ಮಾತು ದೇವೇಗೌಡರ ಕುಟುಂಬದ ಒಳಗೆ ಇತ್ತು. ಆದರೆ ಈಗ ಯೋಗೇಶ್ವರ್‌ಗೆ ಸಮಯ ಚೆನ್ನಾಗಿಲ್ಲ. ಜ್ಯೋತಿಷ್ಯ ರೀತಿಯಾಗಿ ದುರ್ಬಲವಾಗಿದ್ದಾರೆ, ಆದ್ದರಿಂದ ಇದೊಂದು ರಿಸ್ಕ್ ತೆಗೆದುಕೊಳ್ಳೋಣ ಅಂತ ಕುಮಾರಸ್ವಾಮಿ- ದೇವೇಗೌಡರು ಸೇರಿ ಅನಿತಾ ಅವರನ್ನು ಒಪ್ಪಿಸಿದ್ದಾರೆ. “ನೀವೆಲ್ಲ ಸೇರಿ ನನ್ನ ಮಗನ ಮತ್ತೊಂದು ಸೋಲು ನೋಡುವ ಹಾಗೆ ಮಾಡ್ತೀರಿ” ಅಂತಲೇ ಗೌಡರ ಕುಟುಂಬದ ಸೊಸೆ ಬಹಳ ಬೇಸರದಿಂದ ಈ ಸ್ಪರ್ಧೆಗೆ ಒಪ್ಪಿದ್ದರು ಎಂದು ದೇವೇಗೌಡರ ಕುಟುಂಬದ ಆಪ್ತ ಮೂಲಗಳು ಹೇಳುತ್ತವೆ.

ಕುಮಾರಸ್ವಾಮಿ ತಮ್ಮ ಮೇಲೆ ಒಂದಿಷ್ಟು ಗಮನ ಕೊಡಲಿ ಅನ್ನೋ ಕಾರಣಕ್ಕೆ ಉತ್ತರ ಕರ್ನಾಟಕ ಭಾಗದ ವಿವಿಧ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಸಹ ಚನ್ನಪಟ್ಟಣಕ್ಕೆ ಬಂದು, ನಿಖಿಲ್ ಪರವಾಗಿ ಕೆಲಸ ಮಾಡಿದ್ದರು ಎಂಬುದು ಜೆಡಿಎಸ್ ಪಕ್ಷದ ಒಳಗಿನ ಮೂಲಗಳು ನೀಡುವ ಮಾಹಿತಿ. ಇದು ಯಾಕೆ ಹೀಗೆ ಅಂದರೆ, ಕುಮಾರಸ್ವಾಮಿ ಅವರೀಗ ಬಿಜೆಪಿಯ ಆಂತರಿಕ ವಿಚಾರಗಳಲ್ಲೂ ನಿರ್ಧಾರವನ್ನು ನಿರ್ಧರಿಸಬಲ್ಲಷ್ಟು ಪ್ರಬಲರಾಗಿದ್ದಾರೆ. ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಈ ಥರದ ಬಿಜೆಪಿಯ ಪರಮೋಚ್ಚ ನಾಯಕರ ಜತೆಗೆ ಉತ್ತಮ ಸಂಬಂಧ- ಸಂಪರ್ಕ ಹೊಂದಿದ್ದಾರೆ. ಈ ಕಾರಣದಿಂದಲೇ ತಮಗೆ ಏನಾದರೂ ಅಸೆಂಬ್ಲಿ ಟಿಕೆಟ್ ಕೊಡಿಸುವುದಕ್ಕೆ ಎಚ್‌ಡಿಕೆ ನೆರವಾಗಬಹುದು ಅನ್ನೋ ದೃಷ್ಟಿಯಿರಿಸಿಕೊಂಡು ಬಂದು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.

ದಾಳ ಉರುಳಿಸಿದರು ಡಿಕೆ ಶಿವಕುಮಾರ್

ಆರಂಭಲ್ಲಿಯೇ ಹೇಳಿದಂತೆ ಡಿಕೆ ಶಿವಕುಮಾರ್ ಅವರು ತಮ್ಮ ದಾಳವನ್ನು ಚೆನ್ನಾಗಿಯೇ ಉರುಳಿಸಿದರು. ಅವರಿಗೋ ತನ್ನ ತಮ್ಮ ಡಿಕೆ ಸುರೇಶ್ ಸೋಲು ಬಹಳ ದೊಡ್ಡ ಗಾಯ ಮಾಡಿತ್ತು. ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲೇಬೇಕಿತ್ತು. ಆದ್ದರಿಂದ ಮತದಾನಕ್ಕೆ ಇನ್ನೆರಡೋ ಮೂರೋ ದಿನ ಇರುವಾಗ ಮೂರು ತಿಂಗಳಿಂದ ಬಾಕಿ ಉಳಿದ “ಗೃಹಲಕ್ಷ್ಮೀ” ಯೋಜನೆಯ ಹಣ ಆರು ಸಾವಿರ ರೂಪಾಯಿ ಹೆಣ್ಣುಮಕ್ಕಳ ಖಾತೆಗೆ ಜಮೆ ಆಯಿತು. ಅದರ ಹೊರತಾಗಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಡಿಕೆಶಿ ಕುಟುಂಬ 'ತುಂಬಾ ಚೆನ್ನಾಗಿ' ನೋಡಿಕೊಂಡಿತ್ತು. ಅವರ ಖರ್ಚು- ವೆಚ್ಚಕ್ಕೆ ಒಂದು ಚೂರು ಕೊರತೆಯಾಗದಂತೆ ಸ್ವತಃ ಶಿವಕುಮಾರ್ ಎಚ್ಚರಿಕೆ ವಹಿಸಿದ್ದರು.

ಹಾಗೆ ನೋಡಿದರೆ ನಿಖಿಲ್ ಹೆಸರಿನ ಘೋಷಣೆ ಅಗುತ್ತಿದ್ದಂತೆ ಚನ್ನಪಟ್ಟಣದಲ್ಲಿ ವಾತಾವರಣ ಸುಧಾರಿಸಿದ್ದು ಹೌದು. ಆದರೆ ಯೋಗೇಶ್ವರ್ ಅಷ್ಟರಲ್ಲಾಗಲ್ಲೇ ಜೆಡಿಎಸ್- ಬಿಜೆಪಿಯವರು ಯಾವ ಸಿದ್ಧತೆಯೂ ಮಾಡಿಕೊಳ್ಳದಷ್ಟು ದೂರದ ತನಕ ದಾರಿ ತಪ್ಪಿಸಿಯಾಗಿತ್ತು.

ಯೋಗೇಶ್ವರ್ ತಂತ್ರಕ್ಕೆ ಬೆಟಿಂಗ್ ಪಂಟರ್‌ಗಳೂ ದಾರಿ ತಪ್ಪಿದರು

ಉಪಚುನಾವಣೆಗಳಲ್ಲಿ ಹಣದ ಹೊಳೆ ಹರಿಯುವುದು ಸಾಮಾನ್ಯ. ಆದರೆ ಈ ಸಲ ಎಷ್ಟು ದುಡ್ಡು ಖರ್ಚಾಗಿದೆ ಗೊತ್ತೆ? ಚನ್ನಪಟ್ಟಣದ ಸ್ಥಳೀಯ ನಿವಾಸಿಗಳು ಮತ್ತು ರಾಜಕೀಯವನ್ನು ಹತ್ತಿರದಿಂದ ಗಮನಿಸುವವರ ಪ್ರಕಾರ ಜೆಡಿಎಸ್‌ನಿಂದ ಸುಮಾರು ನೂರಾ ಇಪ್ಪತ್ತು ಕೋಟಿ ಮತ್ತು ಕಾಂಗ್ರೆಸ್‌ನಿಂದ ಸುಮಾರು ನೂರಾ ಎಂಬತ್ತು ಕೋಟಿ ರೂಪಾಯಿ ಖರ್ಚಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಿರಿಯ ನಾಯಕರ ಅಭಿಪ್ರಾಯ, ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದರೆ, 'ಅದರಲ್ಲೇನ್ರೀ ಇದೆ ವಿಶೇಷ. ಎಲೆಕ್ಷನ್ ಅಂದ ಮೇಲೆ ದುಡ್ಡು ಖರ್ಚಾಗೇ ಖರ್ಚಾಗುತ್ತೆ' ಎನ್ನುವ ಉತ್ತರ ಸಿಗುತ್ತಿದೆ. ಆದರೆ ಜನರು ಮಾತ್ರ ಚನ್ನಪಟ್ಟಣದ ಬೀದಿಬೀದಿಗಳಲ್ಲಿ ಎಲೆಕ್ಷನ್ ಖರ್ಚಿನ ಬಗ್ಗೆ ಏರುದನಿಯಲ್ಲಿಯೇ ಮಾತನಾಡುತ್ತಿದ್ದಾರೆ.

ಎಚ್‌ಡಿ ಕುಮಾರಸ್ವಾಮಿ ಅವರನ್ನು ಜಮೀರ್ ಅಹಮದ್ 'ಕರಿಯ' ಎಂದಿದ್ದ ವಿಚಾರವೂ ಈ ಚುನಾವಣೆಯಲ್ಲಿ ಚರ್ಚೆಯಾಯಿತು. ಗೆಲುವಿನ ಬಗ್ಗೆ ಸರಿಯಾದ ಅಂದಾಜು ಹೊಂದಿದ್ದರೂ ಯೋಗೇಶ್ವರ್ ಕೊನೆಯ ಹಂತದಲ್ಲಿ, ಈ ಹೇಳಿಕೆಯು ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂದು ಅಡ್ಡಗೋಡೆ ಮೇಲೆ ದೀಪದ ಮಾತು ಆಡಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತಾನು ಗೆಲ್ಲುವ ಅವಕಾಶ ಫಿಫ್ಟಿ- ಫಿಫ್ಟಿ ಎನ್ನುವ ಮೂಲಕ ಯೋಗೇಶ್ವರ್ ಬೆಟ್ಟಿಂಗ್ ಮಾಡುವವರನ್ನು- ಮಾಡಿದವರನ್ನು ದಾರಿ ತಪ್ಪಿಸಿದರು ಅಂತಲೂ ನಕ್ಕು ಮಾತನಾಡುವ ಹಲವರು ಈಗ ಚನ್ನಪಟ್ಟಣ ಕ್ಷೇತ್ರದಲ್ಲಿ ಸಿಗುತ್ತಾರೆ.

ನಿಖಿಲ್ ಕುಮಾರಸ್ವಾಮಿ ಈಗ ಆಡುತ್ತಿರುವ ಮಾತು ಸತ್ಯ

ಉಪ ಚುನಾವಣೆಗಳಲ್ಲಿ ಸಾಮಾನ್ಯವಾಗಿ ಸಿದ್ಧ ಮಾದರಿ ಇರುತ್ತವೆ. “ಆಪರೇಷನ್ ಕಮಲ” ಆದ ಮೇಲೆ ನಡೆದ ಉಪ ಚುನಾವಣೆಗಳ ಜೊತೆಗೆ ಈಗಿನದನ್ನು ಹೋಲಿಸುವ ಅಗತ್ಯ ಇಲ್ಲ. ಆದರೆ ತಿಳಿದುಕೊಳ್ಳಬೇಕಾದದ್ದು ಏನೆಂದರೆ, ನಿಖಿಲ್ ಕುಮಾರಸ್ವಾಮಿ ಈಗ ಏನು ಹೇಳುತ್ತಿರುವುದು ಸತ್ಯ. ಮಾಧ್ಯಮಗಳಲ್ಲಿ ನಿಖಿಲ್ ಹೆಸರು ತೇಲಿಬಂದದ್ದು ಹೌದಾದರೂ ಅನಿತಾ ಅವರಿಗಾಗಲೀ, ನಿಖಿಲ್‌ಗಾಗಲಿ ಈ ಉಪಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಒಂದು ಚೂರೂ ಇಷ್ಟವಿರಲಿಲ್ಲ. ಕುಮಾರಸ್ವಾಮಿ ಸಹ ತಾವು ಲೋಕಸಭಾ ಚುನಾವಣೆ ಗೆದ್ದ ನಂತರ ನೇರಾನೇರ ಜನರ ಸಂಪರ್ಕದಲ್ಲಿ ಇದ್ದವರಲ್ಲ. ಅದರಲ್ಲೂ ಯೋಗೇಶ್ವರ್‌ ಅವರಿಗೆ ಹೋಲಿಸಿದರಂತೂ ಜನರಿಗೆ ನೇರವಾಗಿ ಸಿಗುವುದು ಕಡಿಮೆ. ನಿಖಿಲ್ ಅವರು ಈ ಹಿಂದೆ ಮಂಡ್ಯ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ನಿಂತರು. ಈ ಅಂಶವೂ ಚನ್ನಪಟ್ಟಣ ಕ್ಷೇತ್ರದಲ್ಲಿ ಅದರದೇ ಪ್ರಭಾವ ಬೀರಿದೆ.

ಪ್ರಜ್ವಲ್ ಮೇಲಿದ್ದ ನಿರೀಕ್ಷೆ ನಿಖಿಲ್ ಕಡೆಗೆ ಶಿಫ್ಟ್

ದೇವೇಗೌಡರಿಗೆ ಪ್ರಜ್ವಲ್ ರೇವಣ್ಣ ರಾಜಕೀಯವಾಗಿ ತುಂಬ ಎತ್ತರಕ್ಕೆ ಏರುವ ನಿರೀಕ್ಷೆ ಇತ್ತು. ನಿಖಿಲ್‌ಗಿಂತಲೂ ಪ್ರಜ್ವಲ್ ಮೇಲೆ ಅವರ ಆಸಕ್ತಿ- ಆಕಾಂಕ್ಷೆ ಎರಡೂ ಇದ್ದದ್ದೂ ಪ್ರಜ್ವಲ್ ಮೇಲೆಯೇ. ಆದರೆ ಹಾಸನದ ಪೆನ್ ಡ್ರೈವ್ ಪ್ರಕರಣದ ನಂತರದಲ್ಲಿ ಆಗಿರುವ ಇಮೇಜ್ ಡ್ಯಾಮೇಜ್‌ನಿಂದ ಹೊರಬರುವುದು ಬಹಳ ಕಷ್ಟ ಎಂದು ಅವರಿಗೆ ತಿಳಿದಿದೆ. ಆ ಕಾರಣದಿಂದ ನಿಖಿಲ್ ಅವರನ್ನು ದೊಡ್ಡ ನಾಯಕನನ್ನಾಗಿ ಬೆಳೆಸಬೇಕು, ಅದಕ್ಕಾಗಿ ದೊಡ್ಡ ಸವಾಲಿನ ಚುನಾವಣೆಯಲ್ಲಿಯೇ ಗೆಲ್ಲಿಸಿಕೊಂಡು ಬರಬೇಕು ಎಂದು ಭಾವಿಸಿ ತೆಗೆದುಕೊಂಡಿದ್ದ ರಿಸ್ಕ್ ಇದಾಗಿತ್ತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ನ ಜಿ.ಟಿ.ದೇವೇಗೌಡರ ವಿರುದ್ಧ ಸೋತಿದ್ದು ಸಿದ್ದರಾಮಯ್ಯಗೆ, ದೇವೇಗೌಡರ ಅಳಿಯ ಡಾ ಸಿ.ಎನ್. ಮಂಜುನಾಥ್ ವಿರುದ್ಧ ತನ್ನ ತಮ್ಮ ಡಿಕೆ ಸುರೇಶ್ ಸೋಲು ಕಂಡಿದ್ದರ ಸಿಟ್ಟು ಶಿವಕುಮಾರ್‌ಗೆ ಇತ್ತು. ಒಟ್ಟಾರೆ ದೇವೇಗೌಡ- ಕುಮಾರಸ್ವಾಮಿ ಜೋಡಿಗೆ ಚೇತರಿಸಿಕೊಳ್ಳಲು ಆಗದ ಹೊಡೆತ ನೀಡಬೇಕು ಅನ್ನೋದು ಈ ಸಿದ್ದರಾಮಯ್ಯ- ಶಿವಕುಮಾರ್ ಉದ್ದೇಶವಾಗಿತ್ತು. ಅದನ್ನು ಅವರು ನಿಖಿಲ್‌ ಅವರನ್ನು ಸೋಲಿಸುವ ಮೂಲಕ ತೀರಿಸಿಕೊಂಡಿದ್ದಾರೆ.

ಇತ್ತ, ತನ್ನ ಮಗನ ಸೋಲಿನ ನೋವಿಗೆ ಮುಲಾಮು ಎನ್ನುವ ಹಾಗೆ ತಾಯಿ ಅನಿತಾ ಅವರು ಪತ್ರವೊಂದನ್ನು ಬರೆದು, ಅದು ಎಲ್ಲ ಕಡೆಯೂ ವೈರಲ್ ಆಗಿದೆ. ಹಾಗೇ ಗಮನಿಸಿ ನೋಡಿ, ಅನಿತಾ ಕುಮಾರಸ್ವಾಮಿ ಅವರು ಈ ರೀತಿ ಪತ್ರ ಬರೆಯುವುದು, ಸಾಂತ್ವನ ಹೇಳುವುದು ಇದೆಲ್ಲ ಮಾಡುವಂಥವರಲ್ಲ. ಆದರೆ ಮಗನ ಚುನಾವಣೆ ಸೋಲು ಅವರನ್ನು ಚಿಂತೆಗೆ ಹಾಗೂ ಅದೇ ಸಮಯಕ್ಕೆ ಅಸಮಾಧಾನಕ್ಕೆ ದೂಡಿದೆ. ನಿಖಿಲ್‌ಗೆ ದೇವೇಗೌಡರ ಮನೆಯ ಹುಡುಗ ಎನ್ನುವುದು ವರವೂ ಹೌದು, ಶಾಪವೂ ಹೌದು. ಆದರೆ ಇತ್ತೀಚಿನ ವರ್ಷಗಳಲ್ಲಂತೂ ಅವರಲ್ಲಿ ರಾಜಕೀಯ ಪ್ರಬುದ್ಧತೆ ಕಂಡುಬರುತ್ತಿದೆ ಎಂಬುದು ಅವರ ಮನೆಯ ಕಾಂಪೌಂಡಿನೊಳಗೆ ಇರುವ ಪ್ರಮುಖ ನಾಯಕರ ದೃಷ್ಟಿಕೋನ. ಸ್ಪರ್ಧೆ ಅಂದ ಮೇಲೆ ಗೆಲುವು- ಸೋಲು ಸಹಜ, ಉಳಿದಂತೆ ಎಷ್ಟನೆಯ ಗೆಲುವು ಅಥವಾ ಸೋಲು ಅನ್ನೋದು ಕೇವಲ ನಂಬರ್. ಅದರಿಂದ ನಿಖಿಲ್ ಕುಮಾರಸ್ವಾಮಿ ಥರದವರ ರಾಜಕೀಯ ಬದುಕಿನಲ್ಲಿ ತುಂಬ ದೊಡ್ಡ ವ್ಯತ್ಯಾಸ ಏನೂ ಆಗುವುದಿಲ್ಲ.

(ಬರಹ: ಶ್ರೀನಿವಾಸ ಮಠ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ