logo
ಕನ್ನಡ ಸುದ್ದಿ  /  ಕರ್ನಾಟಕ  /  Cash For Posting: ಪೋಸ್ಟಿಂಗ್‌ ಬೇಕಾದರೆ 30 ಲಕ್ಷ ರೂಪಾಯಿ ತನ್ನಿಅಂತಾರೆ; ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಗಂಭೀರ ಆರೋಪ

Cash for Posting: ಪೋಸ್ಟಿಂಗ್‌ ಬೇಕಾದರೆ 30 ಲಕ್ಷ ರೂಪಾಯಿ ತನ್ನಿಅಂತಾರೆ; ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಗಂಭೀರ ಆರೋಪ

Umesh Kumar S HT Kannada

Jul 03, 2023 06:46 PM IST

google News

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ

  • Cash for Posting: ವೈಎಸ್ಟಿ ಆರೋಪದ ಬಳಿಕ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಸಲು ಸಿಂಡಿಕೇಟ್ ವ್ಯವಸ್ಥೆ ಜಾರಿಗೆ ಬಂದಿದೆ. ಸಿಎಂ ಕಚೇರಿಯಲ್ಲಿ ಪೋಸ್ಟಿಂಗ್‌ಗೆ 30 ಲಕ್ಷ ರೂಪಾಯಿ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ
ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ (Congress Govt) ಬಂದ ನಂತರ ವೈಎಸ್ಟಿ (YST) ತೆರಿಗೆ ಶುರುವಾಗಿದೆ ಎಂದು ನೇರ ಆರೋಪ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಇಂದು (ಜು.3), ‌ಪೋಸ್ಟಿಂಗ್‌ಗಾಗಿ ಹಣ (Cash for Posting) ಎಂಬ ವರ್ಗಾವಣೆ ಸಿಂಡಿಕೇಟ್‌ ಚಲಾವಣೆಯಲ್ಲಿದೆ ಎಂದು ಮತ್ತೊಂದು ಗಂಭೀರ ಆರೋಪ ಮಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಇಲಾಖಾವಾರು ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ದಂಧೆ ಹಾಗೂ ಭ್ರಷ್ಟಾಚಾರ ವಿಸ್ತರಣೆ ಆಗುತ್ತಿದೆ. ಸಾರಿಗೆ ಹಾಗೂ ಕಂದಾಯ ಇಲಾಖೆಗಳ (ಸಬ್ ರಿಜಿಸ್ಟ್ರಾರ್) ನಂತರ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಸಲು ಸಿಂಡಿಕೇಟ್ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ ಎಂದು ನೇರ ಆರೋಪಮಾಡಿದರು.

ರಾಜ್ಯಪಾಲರ ಭಾಷಣದಲ್ಲಿ ಭ್ರಷ್ಟಾಚಾರವನ್ನು ಮೂಲೋತ್ಪಾಟನೆ ಮಾಡುವುದಾಗಿ ಹೇಳಿಸಿದ ಈ ಸರ್ಕಾರದಲ್ಲಿ ಕಾಸಿಗಾಗಿ ಪೋಸ್ಟಿಂಗ್ (Cash for Posting) ಅವ್ಯಾಹತವಾಗಿ ನಡೆಯುತ್ತಿದೆ. ಪ್ರತಿ ಹುದ್ದೆಗೂ ದರ ನಿಗದಿ ಮಾಡಲಾಗಿದೆ. ಇವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಕುಮಾರಸ್ವಾಮಿ ತೀವ್ರ ಅಸಾಮಧಾನ ವ್ಯಕ್ತಪಡಿಸಿದರು.

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಿಂಡಿಕೇಟ್ ಸಿದ್ಧ ಮಾಡಿಕೊಟ್ಟಿರುವ ಪಟ್ಟಿಯ ಕಡತ ಇಲಾಖೆಯ ಆಯುಕ್ತರ ಮುಂದೆ ಸಹಿಗಾಗಿ ಕಾಯುತ್ತಾ ಬಿದ್ದಿದೆ. ಅವರು ಸಹಿ ಹಾಕುತ್ತಾರೋ ಅಥವಾ ಏನು ಮಾಡುತ್ತಾರೋ ಎಂದು ಕಾಯುತ್ತಿರುವುದಾಗಿ ಕುಮಾರಸ್ವಾಮಿ ಹೇಳಿದರು.

ಪೋಸ್ಟಿಂಗ್‌ ಬೇಕಾದರೆ 30 ಲಕ್ಷ ರೂಪಾಯಿ ತನ್ನಿ ಅಂತಾರೆ..

ಈ ಕಾಂಗ್ರೆಸ್ ಸರಕಾರವು ಕಾಸಿಲ್ಲದೆ ಪೋಸ್ಟ್ ಇಲ್ಲ ಎಂಬುದನ್ನು ನೀತಿಯನ್ನಾಗಿ ಮಾಡಿಕೊಂಡಿದೆ. ಸದಾ ಮುಖ್ಯಮಂತ್ರಿ ಹಿಂದೆಮುಂದೆ ಹಾಗೂ ಸಿಎಂ ಕಚೇರಿ ಸುತ್ತಾಮುತ್ತಾ ಸದಾ ಓಡಾಡಿಕೊಂಡಿರುವ ಶಾಸಕರೊಬ್ಬರು ಮುಖ್ಯಮಂತ್ರಿಗೆ ಪತ್ರ ಕೊಟ್ಟರೆ, ಬರೀ ಪತ್ರ ಬೇಡ. 30 ಲಕ್ಷ ರೂಪಾಯಿ ಕೊಡಬೇಕು ಎಂದು ಹೇಳ್ತಾರಂತೆ ಸಿಎಂ ಕಚೇರಿಯಲ್ಲಿ ಇರುವ ಈ ಮಹಾಶಯರು. ಇದು ಈ ಸರಕಾರದ ಹಣೆಬರಹ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ಸಾಕ್ಷಿ ಇಡಿ ಅಂತಾರೆ. ದುಡ್ಡು ಕೊಟ್ಟೋನು ಸಾಕ್ಷಿ ಇಡ್ತಾನ? ಅವನಿಗೆ ಕೆಲಸ ಆದರೆ ಸಾಕು. ಇವರು ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ರಾಜ್ಯಪಾಲರ ಭಾಷಣದಲ್ಲಿ ವೀರಾವೇಶ ತೋರುವ ಇವರು, ಅಧಿಕಾರಕ್ಕೆ ಒಂದು ತಿಂಗಳ ಮೇಲಾಯಿತು. ಇದುವರೆಗೆ ಲಂಚಾವತಾರದ ಈ ಸರಕಾರ ಏನು ಕ್ರಮ ಕೈಗೊಂಡಿದೆ. ಜನರಿಗೆ ಹೇಳಬೇಕಲ್ಲವೇ? ಎಂದು ತರಾಟೆಗೆ ತೆಗೆದುಕೊಂಡರು.

ನಾನು ವಿಷಯ ಇದ್ದರೆ ಮಾತ್ರ ಮಾತನಾಡುತ್ತೇನೆ, ಇಲ್ಲವಾದರೆ ಮೌನವಾಗಿ ಇರುತ್ತೇನೆ. ದಾಖಲೆ ಇದ್ದರೆ ಕೊಡಲಿ ಎಂದು ಕೆಲವರು ಹೇಳಿದ್ದನ್ನು ಕೇಳಿದ್ದೇನೆ. ದಾಖಲೆ ಕೊಡಿ ಎಂದವರೇ ಹಿಂದೆ ಬಿಜೆಪಿ ಸರಕಾರದ ವಿರುದ್ಧ 40% ಕಮಿಷನ್ ಆರೋಪ ಸೇರಿದಂತೆ ಅನೇಕ ಆರೋಪಗಳನ್ನು ಮಾಡಿದ್ದರು. ಅವರು ಅಂದು ದಾಖಲೆ ಇಟ್ಟಿದ್ದರಾ? ಈಗ ಅವರದೇ ಸರಕಾರ ಇದೆ, ದಾಖಲೆ ಬಿಡುಗಡೆ ಮಾಡಬಹುದು, ಅಲ್ಲವೇ? ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ಚುನಾವಣೆಗೆ ಭ್ರಷ್ಟಾಚಾರದ ಬಗ್ಗೆ ವೀರಾವೇಶದಿಂದ ಜನರ ಮುಂದೆ ಮಾತನಾಡಿದರು. ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಎಂದು ಕೊಚ್ಚಿಕೊಂಡರು. ಆ ವೀರಾವೇಶ ಈಗ ಎಲ್ಲಿ ಹೋಯಿತು ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ