logo
ಕನ್ನಡ ಸುದ್ದಿ  /  ಕರ್ನಾಟಕ  /  Congress Vs Bjp: ಕರ್ನಾಟಕದಲ್ಲಿ ಅಗತ್ಯ ವಸ್ತುಗಳು, ಅಗತ್ಯ ಹುದ್ದೆಗಳ ಇಂದಿನ ದರ; ಪರಸ್ಪರ ಕಾಲೆಳೆದುಕೊಂಡ ಬಿಜೆಪಿ, ಕಾಂಗ್ರೆಸ್‌

Congress vs BJP: ಕರ್ನಾಟಕದಲ್ಲಿ ಅಗತ್ಯ ವಸ್ತುಗಳು, ಅಗತ್ಯ ಹುದ್ದೆಗಳ ಇಂದಿನ ದರ; ಪರಸ್ಪರ ಕಾಲೆಳೆದುಕೊಂಡ ಬಿಜೆಪಿ, ಕಾಂಗ್ರೆಸ್‌

Umesh Kumar S HT Kannada

Jul 06, 2023 09:03 PM IST

google News

ಕರ್ನಾಟಕ ಬಿಜೆಪಿ ಟ್ವೀಟ್‌ ಮೂಲಕ ಶೇರ್‌ ಮಾಡಿದ ಶಾಡೋ ಸಿಎಂ ಪೋಸ್ಟರ್‌

  • Congress vs BJP: ವಿಪಕ್ಷ ನಾಯಕ ಆಯ್ಕೆ ವಿಳಂಬವಾಗಿರುವುದನ್ನು ಕಾಂಗ್ರೆಸ್‌ ಛೇಡಿಸುತ್ತಿರುವಾಗಲೇ, ಬಿಜೆಪಿ ಶಾಡೋ ಸಿಎಂ ದ ಯತೀಂದ್ರ ಪೋಸ್ಟರ್‌ ಮೂಲಕ ತಿರುಗೇಟು ನೀಡಿದೆ. ಈ ಇಂಟರೆಸ್ಟಿಂಗ್‌ ಟ್ವೀಟ್‌ ವಾರ್‌ನ ವಿವರ ಹೀಗಿದೆ.

ಕರ್ನಾಟಕ ಬಿಜೆಪಿ ಟ್ವೀಟ್‌ ಮೂಲಕ ಶೇರ್‌ ಮಾಡಿದ ಶಾಡೋ ಸಿಎಂ ಪೋಸ್ಟರ್‌
ಕರ್ನಾಟಕ ಬಿಜೆಪಿ ಟ್ವೀಟ್‌ ಮೂಲಕ ಶೇರ್‌ ಮಾಡಿದ ಶಾಡೋ ಸಿಎಂ ಪೋಸ್ಟರ್‌ (Karnataka BJP)

ಬೆಂಗಳೂರು: ವಿಪಕ್ಷ ನಾಯಕರೊಬ್ಬರು ತುರ್ತಾಗಿ ಬೇಕಾಗಿದ್ದಾರೆ ಎಂದು ಕಳೆದ ವಾರ ಕಾಡಿದ್ದ ಆಡಳಿತಾರೂಢ ಕಾಂಗ್ರೆಸ್‌ ಪಕ್ಷಕ್ಕೆ ಇಂದು (ಜುಲೈ 6) ಅದರದ್ದೇ ದಾಟಿಯಲ್ಲಿ ಅದನ್ನು ಬಿಜೆಪಿ ಕಾಡಿದೆ.

ಈ ನಡುವೆ, ಜೆಡಿಎಸ್‌ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವೈಎಸ್‌ಟಿ ತೆರಿಗೆ ವಿಚಾರ, ವರ್ಗಾವಣೆ ದಂಧೆ ವಿಚಾರದಲ್ಲಿ ಗಂಭೀರ ಆರೋಪ ಮಾಡಿದ್ದರು. ಆಗ ಕುಮಾರಸ್ವಾಮಿ ಅವರನ್ನು ಬೆಂಬಲಿಸಿದ್ದ ಬಿಜೆಪಿ ನಾಯಕರು, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಒಟ್ಟಾಗಿ ಹೋರಾಟ ನಡೆಸುವ ಅಗತ್ಯವನ್ನು ಒತ್ತಿ ಹೇಳಿದ್ದರು.

ರಾಜ್ಯದಲ್ಲಿ ಅಗತ್ಯ ವಸ್ತುಗಳು ಹಾಗೂ ಅಗತ್ಯ ಹುದ್ದೆಗಳ ಇಂದಿನ ದರ

ಇದರ ಬೆನ್ನಿಗೆ, ಇಂದು (ಜುಲೈ 6) “ರಾಜ್ಯದಲ್ಲಿ ಅಗತ್ಯ ವಸ್ತುಗಳು ಹಾಗೂ ಅಗತ್ಯ ಹುದ್ದೆಗಳ ಇಂದಿನ ದರ*” ಎಂಬ ಶೀರ್ಷಿಕೆಯಲ್ಲಿ ಬಿಜೆಪಿಯು ಆಡಳಿತಾರೂಢ ಕಾಂಗ್ರೆಸ್‌ಗೆ ಟಾಂಗ್‌ ನೀಡಿದೆ.

ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವನ್ನು ಮುಂದಿಟ್ಟುಕೊಂಡು, ಕ್ಯಾಶ್‌ ಫೋರ್‌ ಪೋಸ್ಟಿಂಗ್‌ ವಿಚಾರವನ್ನು ಅದಕ್ಕೆ ಸಮೀಕರಣ ಮಾಡಿ ಬಿಜೆಪಿ ಬಹಳ ಸೃಜನಾತ್ಮಕವಾಗಿ ಟೀಕೆಯನ್ನು ಮಾಡಿದೆ.

ಇದರಲ್ಲಿ ಬಿಜೆಪಿಯು, ರಾಜ್ಯದಲ್ಲಿ ಅಗತ್ಯ ವಸ್ತುಗಳು ಹಾಗೂ ಅಗತ್ಯ ಹುದ್ದೆಗಳ ಇಂದಿನ ದರ ಎಂದು ಉಲ್ಲೇಖಿಸಿದ ಬಳಿಕ

ತರಕಾರಿ: ಟೊಮೆಟೊ - 120-130 ರೂ., ಬೀನ್ಸ್‌ - 120 ರೂಪಾಯಿ, ಕ್ಯಾರೆಟ್‌ - 110 ರೂಪಾಯಿ, ಹಸಿಮೆಣಸಿನಕಾಯಿ - 170 ರೂಪಾಯಿ ಎಂಬ ಅಂಶದ ಕಡೆಗೆ ಬೆಳಕು ಚೆಲ್ಲಿದೆ. ಇದಾದ ಬಳಿಕ ವರ್ಗಾವಣೆ, ಪೋಸ್ಟಿಂಗ್‌ ವಿಚಾರ ಎತ್ತಿಕೊಂಡು,

ವರ್ಗಾವಣೆ ತರಹೇವಾರಿ: ಮುಖ್ಯ ಎಂಜಿನಿಯರ್: 5‌ ಕೋಟಿ ರೂಪಾಯಿ, ಜಿಲ್ಲಾ ಆರೋಗ್ಯಾಧಿಕಾರಿ: 2 ಕೋಟಿ ರೂಪಾಯಿ, ಲೆಕ್ಕಾಧಿಕಾರಿ: 2.25 ಕೋಟಿ ರೂಪಾಯಿ, ತಹಶೀಲ್ದಾರ್‌: 1.25 ಕೋಟಿ ರೂಪಾಯಿ,

ಪೊಲೀಸ್‌ ಸಬ್‌ ಇನ್ಸ್ಪೆಕ್ಟರ್‌: ಬೆಂಗಳೂರು ನಗರ - 1.5 ಕೋಟಿ ರೂಪಾಯಿ, ಜಿಲ್ಲಾ ಕೇಂದ್ರ - 80 ಲಕ್ಷ ರೂಪಾಯಿ, ತಾಲ್ಲೂಕು ಕೇಂದ್ರ 40 ಲಕ್ಷ ರೂಪಾಯಿ ಎಂದು ಉಲ್ಲೇಖಿಸಿದೆ.

ಕೊನೆಯಲ್ಲಿ ಕೇಂದ್ರದ ಸುರ್ಜೇವಾಲಾ ಕಮಿಷನ್‌ ಪ್ರತ್ಯೇಕ ಎಂಬ ಷರಾ ಬರೆದು ಪ್ರಕಟನೆ : #ATMsarkara ದ ಪರವಾಗಿ #ShadowCM Yatindra ಎಂದು ಉಲ್ಲೇಖಿಸಿ ಟ್ವೀಟ್‌ ಮಾಡಿದೆ.

ಕಮಿಷನ್‌ ಮಾಸ್ಟರ್‌ ಇನ್‌ ದ ಷಾಡೋ ಆಫ್‌ ಚೀಫ್‌ ಮಿನಿಸ್ಟರ್‌

ಜೆಡಿಎಸ್‌ ನಾಯಕ ಹೆಚ್‌ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುತ್ರ ಯತೀಂದ್ರ ಅವರನ್ನು ಟಾರ್ಗೆಟ್‌ ಮಾಡಿ ವಾಗ್ದಾಳಿ ನಡೆಸಿದ್ದರು. ಸಿಎಂಒ ಕಚೇರಿಯಲ್ಲಿ ಕೆಲಸ ಆಗಬೇಕು ಎಂದಾದರೆ ವೈಎಸ್‌ಟಿ ತೆರಿಗೆ ಪಾವತಿಸಬೇಕು. ಆ ಪರಿಸ್ಥಿತಿ ಬಂದಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಇದೇ ಎಳೆಯನ್ನು ಇಟ್ಟುಕೊಂಡ ಬಿಜೆಪಿ ಇಂದು ಇನ್ನೊಂದು ಟ್ವೀಟ್‌ ಮಾಡಿದ್ದು, ಅದರಲ್ಲಿ ಕಮಿಷನ್‌ ಮಾಸ್ಟರ್‌ ಇನ್‌ ದ ಷಾಡೋ ಆಫ್‌ ಚೀಫ್‌ ಮಿನಿಸ್ಟರ್‌ ಎಂದು ಟೀಕಿಸಿದೆ. ಇದರ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ, ಅದರ ನೆರಳಿಗೆ ಅವರ ಪುತ್ರ ಯತೀಂದ್ರನ ತಲೆ ಸೇರಿಸಿದ ಇಮೇಜ್‌ ಒಂದನ್ನು ಶೇರ್‌ ಮಾಡಿದೆ. ಆ ಇಮೇಜ್‌ ಮೇಲೆ ಶಾಡೋ ಸಿಎಂ ದ ಯತೀಂದ್ರ ಎಂಬ ಶೀರ್ಷಿಕೆ ಗಮನಸೆಳೆಯುತ್ತದೆ.

ಇನ್ನೊಂದು ಟ್ವೀಟ್‌ನಲ್ಲಿ CM ನೆರಳಿನಲ್ಲಿ #ShadowCM ಅವ್ಯವಹಾರ. ಅಂಕೆ ಮೀರಿದೆ ಇವರಿಬ್ಬರ ಭ್ರಷ್ಟಾಚಾರ ಎಂಬ ಹೇಳಿಕೆಯೊಂದಿಗೆ ಕಾರ್ಟೂನ್‌ ಒಂದನ್ನು ಕೂಡ ಬಿಜೆಪಿ ಟ್ವೀಟ್‌ ಮಾಡಿದೆ.

ವಿರೋಧ ಪಕ್ಷ ನಾಯಕನನ್ನು ಆಯ್ಕೆ ಮಾಡೋದಕ್ಕೆ ಆಗಿಲ್ಲ ನಿಮ್‌ ಕೈಲಿ

ಬಜೆಟ್‌ ಅಧಿವೇಶನ ಶುರುವಾಗಿ ನಾಲ್ಕು ದಿನವಾದರೂ ವಿರೋಧ ಪಕ್ಷದ ನಾಯಕ ಯಾರು ಅಂತ ತೀರ್ಮಾನ ಮಾಡೋದಕ್ಕೆ ಆಗಿಲ್ಲ ನಿಮ್ಮ ಕೈಲಿ ಎಂದು ಕಾಂಗ್ರೆಸ್‌ ಇಂದು (ಜುಲೈ 6) ಕೂಡ ಲೇವಡಿ ಮಾಡಿದೆ. ಟ್ವೀಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಉದ್ದೇಶಿಸಿ ಮಾತನಾಡಿದ ವಿಡಿಯೋ ತುಣುಕನ್ನು ಶೇರ್‌ ಮಾಡಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ