Karnataka Assembly Elections: ನಾಮಪತ್ರ ಸಲ್ಲಿಕೆ ಆರಂಭ, ಮೂರೂ ಪಕ್ಷಗಳಲ್ಲಿ ಅತೃಪ್ತಿ, ಅಸಮಾಧಾನ; ಈವರೆಗಿನ 10 ಮುಖ್ಯ ಬೆಳವಣಿಗೆಗಳಿವು
Apr 13, 2023 11:20 AM IST
ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಉಮೇದುವಾರರು ಪ್ರಚಾರ ಚುರುಕುಗೊಳಿಸಿದ್ದಾರೆ.
- ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಈವರೆಗಿನ 10 ಪ್ರಮುಖ ಬೆಳವಣಿಗೆಗಳಿವು. ಜಾತಿ ಲೆಕ್ಕಾಚಾರ, ರಾಜಕೀಯ ಪಟ್ಟುಗಳ ಇಣುಕು ನೋಟವೂ ಇಲ್ಲಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಇಡೀ ದೇಶದ ಗಮನ ಸೆಳೆದಿದೆ. ಕರ್ನಾಟಕದ ಫಲಿತಾಂಶವು ಮುಂದಿನ ಲೋಕಸಭಾ ಚುನಾವಣೆಯ ಮೇಲೆಯೂ ಪರಿಣಾಮ ಬೀರಲಿದೆ ಎಂದು ಹಲವು ವಿಶ್ಲೇಷಕರು ಈಗಾಗಲೇ ಭವಿಷ್ಯ ನುಡಿದಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಏಕೈಕ ರಾಜ್ಯ ಕರ್ನಾಟಕ. ಇದೇ ಕಾರಣಕ್ಕೆ ಬಿಜೆಪಿಯ ವರಿಷ್ಠರು ಕರ್ನಾಟಕವನ್ನು ಪಕ್ಷದ ಪಾಲಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಎಂದು ಪರಿಗಣಿಸುತ್ತಾರೆ. ಭಾರತದಲ್ಲಿ ಕಾಂಗ್ರೆಸ್ ಪಕ್ಷವು ತುಸು ಪ್ರಭಾವಿಯಾಗಿರುವ, ಅಧಿಕಾರಕ್ಕೆ ಬರುವ ಸಾಧ್ಯತೆ ಗೋಚರಿಸುತ್ತಿರುವ ರಾಜ್ಯ ಕರ್ನಾಟಕ. ಈ ಕಾರಣಕ್ಕೆ ಕಾಂಗ್ರೆಸ್‌ಗೂ ಕರ್ನಾಟಕದ ಚುನಾವಣೆ ಮಹತ್ವದ್ದು. ಚುನಾವಣೆಗೆ ಬಹುಮೊದಲಿನಿಂದ ಸಿದ್ಧತೆ ಆರಂಭಿಸಿದ್ದ ಜೆಡಿಎಸ್ ಗೆಲ್ಲುವ ಉತ್ಸಾಹ ಇರುವುದಾಗಿ ಹೇಳಿಕೊಳ್ಳುತ್ತಿದೆ. ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಾಗದಿದ್ದರೂ ಯಾರು ಅಧಿಕಾರದಲ್ಲಿರಬೇಕು ಎನ್ನುವುದನ್ನು ನಿರ್ಧರಿಸುವ ಸ್ಥಾನದಲ್ಲಿ ತಾನಿರಬೇಕು ಎನ್ನುವುದು ಈ ಪಕ್ಷದ ನಾಯಕರ ಅಭಿಲಾಷೆ. ಅಭ್ಯರ್ಥಿ ಪಟ್ಟಿಗಳ ಗೊಂದಲ ಈಗ ಒಂದು ಹಂತಕ್ಕೆ ಬಂದಿದ್ದು, ಅತೃಪ್ತರ ಮಾತು ಮಾಧ್ಯಮಗಳಲ್ಲಿ ರಾರಾಜಿಸುತ್ತಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಈವರೆಗಿನ 10 ಪ್ರಮುಖ ಬೆಳವಣಿಗೆಗಳಿವು...
1) ನಾಮಪತ್ರ ಸಲ್ಲಿಕೆಗೆ ಏ 20 ಕೊನೆಯ ದಿನ: ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಚುನಾವಣಾ ಆಯೋಗವು ಮಾರ್ಚ್ 29ರಂದು ಘೋಷಿಸಿತ್ತು. ಇಂದು (ಏ 13) ಅಧಿಸೂಚನೆ ಹೊರಡಿಸಲಿದೆ. ಏ 20ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಏ 21ರಂದು ನಾಮಪತ್ರ ಪರಿಶೀಲನೆ, 24 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಮೇ 10ಕ್ಕೆ ಮತದಾನ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
2) ಆನ್‌ಲೈನ್ ನಾಮಪತ್ರ ಸಲ್ಲಿಕೆಗೆ ಅವಕಾಶ: ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಅಗತ್ಯ ದಾಖಲೆಗಳೊಂದಿಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಆಫ್‌ಲೈನ್ ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾಧಿಕಾರಿಯ ಎದುರು ಐವರು ಮಾತ್ರ ಉಪಸ್ಥಿತರಿಬಹುದು ಎಂದು ಆಯೋಗವು ಸ್ಪಷ್ಟಪಡಿಸಿದೆ.
3) 5.24 ಕೋಟಿ ಮತದಾರರು: ಕರ್ನಾಟಕದಲ್ಲಿ ಈ ಬಾರಿ 5.24 ಕೋಟಿ ಮತದಾರರು ಮತಚಲಾಯಿಸಲಿದ್ದಾರೆ. ಈ ಪೈಕಿ 2.63 ಕೋಟಿ ಪುರುಷರು ಮತ್ತು 2.60 ಕೋಟಿ ಮಹಿಳೆಯರು. 100 ವರ್ಷ ದಾಟಿರುವ 16,976 ಮತದಾರರಿದ್ದರೆ, 18ರಿಂದ 19 ವರ್ಷದ ಯುವ ಮತದಾರರ ಸಂಖ್ಯೆ 9.58 ಲಕ್ಷ. 80 ವರ್ಷ ದಾಟಿದವರ ಸಂಖ್ಯೆಯೂ (12.15 ಲಕ್ಷ) ಗಣನೀಯ ಪ್ರಮಾಣದಲ್ಲಿದೆ.
4) ಬೇಕಾಬಿಟ್ಟಿ ವೆಚ್ಚಕ್ಕೆ ಕಡಿವಾಣ: ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಚುನಾವಣಾ ಆಯೋಗವು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಪ್ರತಿ ಅಭ್ಯರ್ಥಿಗೆ 40 ಲಕ್ಷ ರೂಪಾಯಿ ವೆಚ್ಚ ಮಿತಿ ಘೋಷಿಸಲಾಗಿದೆ. ಚುನಾವಣಾ ಕರ್ತವ್ಯಕ್ಕಾಗಿ 3.51 ಲಕ್ಷ ಸಿಬ್ಬಂದಿ ಶ್ರಮಿಸಲಿದ್ದಾರೆ. ವೆಚ್ಚದ ಪರಿಶೀಲನೆಗಾಗಿ 234 ವೆಚ್ಚ ವೀಕ್ಷಕರನ್ನು ಗುರುತಿಸಲಾಗಿದೆ.
5) ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: 225 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ಚುನಾವಣೆ ನಡೆಯಲಿದೆ. ಬಿಜೆಪಿ 211, ಕಾಂಗ್ರೆಸ್ 166 ಹಾಗೂ ಜೆಡಿಎಸ್ 93 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಕಾಂಗ್ರೆಸ್ ಇಂದು ಮತ್ತೊಂದು ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಬಿಜೆಪಿ ಈ ಬಾರಿ 52 ಹೊಸ ಮುಖಗಳಿಗೆ ಅವಕಾಶ ನೀಡಿದೆ. ಆದರೆ ಬಂಡಾಯ ಶಮನ ಪಕ್ಷದ ವರಿಷ್ಠರಿಗೆ ಸವಾಲಾಗಿ ಪರಿಣಮಿಸಿದೆ.
6) ಅಮೂಲ್ vs ನಂದಿನಿ: ಕರ್ನಾಟಕದಲ್ಲಿ ಚರ್ಮಗಂಟು ರೋಗ ಹಾಗೂ ಪಶು ಆಹಾರ ಕೊರತೆಯಿಂದ ಕ್ಷೀರ ಕ್ಷಾಮದ (ಹಾಲಿನ ಕೊರತೆ) ಭೀತಿ ಎದುರಾಗಿದೆ. ಈ ನಡುವೆ ಗುಜರಾತ್‌ನ ಹಾಲು ಉತ್ಪಾದಕರ ಸಹಕಾರ ಸಂಘದ ಬ್ರಾಂಡ್ 'ಅಮೂಲ್' ಬೆಂಗಳೂರಿನಲ್ಲಿ ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಬಿಸಿಬಿಸಿ ಚರ್ಚೆಯ ವಿಷಯವಾಗಿದೆ. ಪ್ರತಿಪಕ್ಷಗಳು ತೀಕ್ಷ್ಣವಾಗಿ ಕಿಡಿಕಾರಿದ್ದರೆ, ಬಿಜೆಪಿ ನಾಯಕರು ಅಮೂಲ್ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕೆಎಂಎಫ್‌ಗೆ ಧಕ್ಕೆಯಿಲ್ಲ ಎಂದಿದ್ದಾರೆ.
7) ಗಮನ ಸೆಳೆದ ಸೋಮಣ್ಣ, ಅಶೋಕ್: ಮೈಸೂರಿನ ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ್ತು ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಅವರ ಗೆಲುವಿನ ನಾಗಾಲೋಟಕ್ಕೆ ತೊಡರುಗಾಲು ಹಾಕಲೆಂದು ಬಿಜೆಪಿ ಈ ಬಾರಿ ಮಹತ್ವದ ಪ್ರಯೋಗ ಮಾಡಿದೆ. ಪ್ರಭಾವಿ ಲಿಂಗಾಯತ ನಾಯಕರಾದ ಸೋಮಣ್ಣ ಮತ್ತು ಒಕ್ಕಲಿಗ ನಾಯಕ ಅಶೋಕ್ ಅವರಿಗೆ ಹೊಸ ಜವಾಬ್ದಾರಿ ವಹಿಸಿದೆ. ಅದರಂತೆ ವರುಣ ಕ್ಷೇತ್ರದಿಂದ ಸೋಮಣ್ಣ, ಕನಕಪುರದಿಂದ ಆರ್.ಅಶೋಕ್ ಸ್ಪರ್ಧಿಸಲಿದ್ದಾರೆ. ಆರ್.ಅಶೋಕ್ ಸ್ಪರ್ಧಿಸಲಿರುವ ಪದ್ಮನಾಭನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಡಿ.ಕೆ.ಸುರೇಶ್ ಸ್ಪರ್ಧಿಸುವ ಸಾಧ್ಯತೆಯಿದೆ.
8) ಕಾಂಗ್ರೆಸ್ ಜಾತಿ ಲೆಕ್ಕಾಚಾರ: ಕಾಂಗ್ರೆಸ್ ಪಕ್ಷವು ಮೊದಲ ಪಟ್ಟಿಯಲ್ಲಿ 124 ಮತ್ತು 2ನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತ್ತು. ಒಟ್ಟು 166 ಕ್ಷೇತ್ರಗಳಿಗೆ ಘೋಷಣೆಯಾಗಿರುವ ಪಟ್ಟಿಯಲ್ಲಿ ಲಿಂಗಾಯತ 43, ಒಕ್ಕಲಿಗ 30, ಎಸ್‌ಸಿ 26, ಒಬಿಸಿ 21, ಎಸ್‌ಸಿ 26, ಮುಸ್ಲಿಮ್ 11, ಬ್ರಾಹ್ಮಣ 5 ಜಾತಿಗೆ ಸೇರಿದವರಿಗೆ ಟಿಕೆಟ್ ಸಿಕ್ಕಿದೆ.
9) ಬಿಜೆಪಿ ಜಾತಿ ಲೆಕ್ಕಾಚಾರ: ಮೊದಲ ಹಂತದಲ್ಲಿ ಬಿಜೆಪಿ 189 ಮತ್ತು 2ನೇ ಹಂತದಲ್ಲಿ 23 ಕ್ಷೇತ್ರಗಳಿಗೆ ಉಮೇದುವಾರರನ್ನು ಘೋಷಿಸಿತು. 12 ಕ್ಷೇತ್ರಗಳ ಅಭ್ಯರ್ಥಿಗಳನ್ನು ಇನ್ನೂ ಘೋಷಿಸಬೇಕಿದೆ. ಮೊದಲ ಪಟ್ಟಿಯಲ್ಲಿ ಘೋಷಣೆಯಾದ ಅಭ್ಯರ್ಥಿಗಳ ಪೈಕಿ ಲಿಂಗಾಯತ 52, ಓಬಿಸಿ 32, ಎಸ್‌ಸಿ 30, ಎಸ್‌ಟಿ 16, ಬ್ರಾಹ್ಮಣ 12 ಸಮುದಾಯಗಳಿಗೆ ಸೇರಿದವರಿಗೆ ಟಿಕೆಟ್ ಸಿಕ್ಕಿತ್ತು.
10) ಪಕ್ಷಗಳ ಬಲಾಬಲ: ಕರ್ನಾಟಕದಲ್ಲಿ ಹಾಲಿ ಅಸ್ತಿತ್ವದಲ್ಲಿರುವ 15ನೇ ವಿಧಾನಸಭೆಯ ಅವಧಿ ಮೇ 23ಕ್ಕೆ ಕೊನೆಯಾಗಲಿದೆ. ಪ್ರಸ್ತುತ ಬಿಜೆಪಿ 119, ಕಾಂಗ್ರೆಸ್ 75, ಜೆಡಿಎಸ್ 28 ಶಾಸಕ ಬಲ ಹೊಂದಿವೆ. ಬಿಜೆಪಿಯ ಉಮೇಶ್ ಕತ್ತಿ ಹಾಗೂ ಆನಂದ್ ಮಾಮನಿ ನಿಧನರಾದ ಹಿನ್ನೆಲೆಯಲ್ಲಿ 2 ಸ್ಥಾನಗಳು ಖಾಲಿಯಿವೆ. ಈ ಸ್ಥಾನಗಳಿಗೆ ಉಪ ಚುನಾವಣೆ ನಡೆದಿರಲಿಲ್ಲ.
ಇದನ್ನೂ ಓದಿ: ಶಿಗ್ಗಾವಿ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ ಸ್ಪರ್ಧೆ
ಎಚ್‌ಟಿ ಕನ್ನಡ ವಾಟ್ಸಾಪ್ ಕಮ್ಯುನಿಟಿ ಸೇರಿ. ಫೇಸ್‌ಬುಕ್ ಪೇಜ್ ಲೈಕ್ ಮಾಡಿ, ಟ್ವಿಟರ್‌ನಲ್ಲಿ ಫಾಲೊ ಮಾಡಿ. ಯುಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ.