logo
ಕನ್ನಡ ಸುದ್ದಿ  /  ಕರ್ನಾಟಕ  /  ಹಾಸನ ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣ ಊರು ಬಿಟ್ಟು ಓಡಿಹೋಗಿ 1 ತಿಂಗಳಾಯಿತು, ಇದುವರೆಗಿನ 10 ಪ್ರಮುಖ ವಿದ್ಯಮಾನಗಳು

ಹಾಸನ ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣ ಊರು ಬಿಟ್ಟು ಓಡಿಹೋಗಿ 1 ತಿಂಗಳಾಯಿತು, ಇದುವರೆಗಿನ 10 ಪ್ರಮುಖ ವಿದ್ಯಮಾನಗಳು

Umesh Kumar S HT Kannada

May 27, 2024 08:00 AM IST

google News

ಹಾಸನ ಲೈಂಗಿಕ ಹಗರಣಕ್ಕೆ ಒಂದು ತಿಂಗಳು ಪೂರ್ಣವಾಗಿದೆ. ಈ ನಡುವೆ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಊರು ಬಿಟ್ಟು ಓಡಿಹೋಗಿ 1 ತಿಂಗಳಾಯಿತು,

  • ಹಾಸನ ಲೈಂಗಿಕ ಹಗರಣ; ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಲೈಂಗಿಕ ದೌರ್ಜನ್ಯ ಕೇಸ್‌, ಅಶ್ಲೀಲ ವಿಡಿಯೋ ಬಹಿರಂಗವಾದ ಬಳಿಕ ಊರು ಬಿಟ್ಟು ಓಡಿಹೋಗಿ 1 ತಿಂಗಳಾಯಿತು. ಈ ಕೇಸ್‌ನಲ್ಲಿ ಇದುವರೆಗಿನ 10 ಪ್ರಮುಖ ವಿದ್ಯಮಾನಗಳು ಹೀಗಿವೆ.

ಹಾಸನ ಲೈಂಗಿಕ ಹಗರಣಕ್ಕೆ ಒಂದು ತಿಂಗಳು ಪೂರ್ಣವಾಗಿದೆ. ಈ ನಡುವೆ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಊರು ಬಿಟ್ಟು ಓಡಿಹೋಗಿ 1 ತಿಂಗಳಾಯಿತು,
ಹಾಸನ ಲೈಂಗಿಕ ಹಗರಣಕ್ಕೆ ಒಂದು ತಿಂಗಳು ಪೂರ್ಣವಾಗಿದೆ. ಈ ನಡುವೆ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಊರು ಬಿಟ್ಟು ಓಡಿಹೋಗಿ 1 ತಿಂಗಳಾಯಿತು,

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಏಪ್ರಿಲ್ 26 ರಂದು ಲೋಕಸಭೆ ಚುನಾವಣೆಗೆ ಮತಚಲಾಯಿಸಿದ ಬಳಿಕ ಊರು ಬಿಟ್ಟು ಓಡಿ ಹೋಗಿದ್ದು, ಒಂದು ತಿಂಗಳು ಭರ್ತಿ ಪೂರ್ಣಗೊಂಡಿದೆ. ಅಶ್ಲೀಲ ವಿಡಿಯೋ, ಫೋಟೋಗಳ ಪೆನ್‌ಡ್ರೈವ್ ಬಹಿರಂಗವಾದ ಬಳಿಕ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಕೇಸ್ ದಾಖಲಾಗುತ್ತದೆ ಎಂಬುದು ಮನವರಿಕೆಯಾಗುತ್ತಿದ್ದಂತೆ, ಪ್ರಜ್ವಲ್ ರೇವಣ್ಣ ಜರ್ಮನಿಗೆ ತೆರಳಿದ್ದಾರೆ.

ಅವರ ತಂದೆ ಎಚ್‌ ಡಿ ರೇವಣ್ಣ ಅವರು ಏಪ್ರಿಲ್ 30ಕ್ಕೆ ಹೇಳಿದ ಪ್ರಕಾರ, ಏಪ್ರಿಲ್ 26ಕ್ಕೆ ಮತಚಲಾಯಿಸಿ ಕೆಲಸದ ನಿಮಿತ್ತ ಜರ್ಮನಿಗೆ ಹೋಗಿದ್ದಾರೆ. ಕೇಸ್ ದಾಖಲಾಗಿ ಎಫ್‌ಐಆರ್ ಆಗುತ್ತೆ ಎಂಬುದರ ಅರಿವು ಪ್ರಜ್ವಲ್‌ಗೆ ಇಲ್ಲ. ತನಿಖೆಗೆ ಹಾಜರಾಗುತ್ತಾರೆ. ಆದರೆ, ಏಪ್ರಿಲ್ 30ಕ್ಕೆ ಬರಲಿದ್ದಾರೆ ಎಂದರು. ಆದರೆ ಎರಡು ಸಲ ಅವರ ವಿಮಾನ ಟಿಕೆಟ್ ವೈರಲ್ ಆಗಿರುವುದು ಬಿಟ್ಟರೆ ಬೇರೇನೂ ಆಗಿಲ್ಲ.

ಸದ್ಯ ಪ್ರಜ್ವಲ್ ರೇವಣ್ಣ ಅವರನ್ನು ಒಳಗೊಂಡ ಹಾಸನ ಲೈಂಗಿಕ ಹಗರಣ ರಾಜಕೀಯದ ರಂಗುಪಡೆದುಕೊಂಡಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಕೆಸರೆರಚಾಟಕ್ಕೆ ಬಳಕೆಯಾಗುತ್ತಿದೆ. ಈ ನಡುವೆ, ಅಶ್ಲೀಲ ವಿಡಿಯೋ ಬಹಿರಂಗವಾದ ಕಾರಣ ಸಂತ್ರಸ್ತೆಯರ ಬದುಕು ಕೂಡ ಸಂಕಷ್ಟಕ್ಕೆ ಒಳಗಾಗಿದೆ.

ಹಾಸನ ಲೈಂಗಿಕ ಹಗರಣ; ಪ್ರಜ್ವಲ್‌ ರೇವಣ್ಣ ಕೇಸ್ ಇದುವರೆಗೆ ಏನೇನಾಯಿತು?

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪೆನ್‌ ಡ್ರೈವ್ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಸದ್ದುಮಾಡಿತ್ತು. ಹೊಳೆನರಸೀಪುರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಜಿ.ದೇವರಾಜೇಗೌಡ ಈ ಪೆನ್‌ಡ್ರೈವ್‌ ವಿಚಾರವಾಗಿ ಮಾತನಾಡಿ ಗಮನಸೆಳೆದಿದ್ದರು. ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕ ಕಾರ್ತಿಕ್‌ ಅವರ ಬಳಿ ಪೆನ್‌ಡ್ರೈವ್ ಇದೆ ಎಂಬುದನ್ನು ಜಿ.ದೇವರಾಜೇಗೌಡ ಹೇಳಿದ್ದರು. ಇದರ ವಿರುದ್ಧ ಪ್ರಜ್ವಲ್ ರೇವಣ್ಣ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಹೀಗಾಗಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇದು ಬಹಿರಂಗವಾಗಿರಲಿಲ್ಲ.

ಲೋಕಸಭಾ ಚುನಾವಣೆ ಪ್ರಕ್ರಿಯೆ ಶುರುವಾಗುವುದಕ್ಕೆ ಮೊದಲೇ ಜೆಡಿಎಸ್ ಮತ್ತೆ ಬಿಜೆಪಿ ಜೊತೆಗೆ ಮೈತ್ರಿಮಾಡಿಕೊಂಡಿದೆ. ಕರ್ನಾಟಕದ ಲೋಕಸಭಾ ಸ್ಥಾನಗಳ ಹಂಚಿಕೆ ವಿಚಾರ ಅಳೆದೂ ತೂಗಿ ನಡೆಸಿದ ಬಿಜೆಪಿ ವರಿಷ್ಠರು ಜೆಡಿಎಸ್‌ಗೆ ಮೂರು ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದರು. ಅದರಲ್ಲಿ ಹಾಸನವೂ ಒಂದು. ಹಾಸನದ ಅಭ್ಯರ್ಥಿ ಘೋಷಣೆ ತಡವಾಗಿತ್ತು. ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಪುನಃ ಕಣಕ್ಕೆ ಇಳಿಸಿದರೆ ತೊಂದರೆ ಇದೆ ಎಂದು ಸ್ಥಳೀಯ ಬಿಜೆಪಿ ನಾಯಕರು, ಮಾಜಿ ಶಾಸಕ ಪ್ರೀತಂಗೌಡ ಮುಂತಾದವರು ಹೇಳಿದ್ದು ಗಮನಸೆಳೆದಿತ್ತು.

ಎಲ್ಲರ ವಿರೋಧದ ನಡುವೆಯೇ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಕಣಕ್ಕೆ ಇಳಿಸಿತ್ತು. ಬಿಜೆಪಿ ವರಿಷ್ಠರು ಬೆಂಬಲ ನೀಡಿದ್ದರು. ಪ್ರಚಾರಕ್ಕೂ ಬಂದಿದ್ದರು. ಏಪ್ರಿಲ್ 20ರ ತನಕ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಏಪ್ರಿಲ್ 23ರ ಹೊತ್ತಿಗೆ ಪ್ರಜ್ವಲ್ ವಿರುದ್ಧ ಹಾಸನದಲ್ಲಿ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಪ್ರಜ್ವಲ್ ವಿರುದ್ಧ ದೂರು ನೀಡಲು ಮಹಿಳೆಯೊಬ್ಬರು ಮುಂದಾಗಿದ್ದರು. ಆದರೆ, ಸಾಮಾಜಿಕವಾಗಿ ಎದುರಾದ ಸಮಸ್ಯೆ ಕಾರಣ ಅವರು ಹಿಂದೇಟುಹಾಕಿದರು. ಇವಿಷ್ಟೂ ಪೀಠಿಕೆ.

ಪ್ರಜ್ವಲ್‌ ರೇವಣ್ಣ ಕೇಸ್; ಪ್ರಮುಖ 10 ವಿದ್ಯಮಾನಗಳು

1) ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕುರಿತಾಗಿ ಏಪ್ರಿಲ್ 24ರಂದು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿತು. ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳು ಹಾಸನದ ಉದ್ದಗಲಕ್ಕೂ ಪ್ರಸಾರವಾಗುತ್ತಿದ್ದು, ಅದರಲ್ಲಿರುವ ಮಹಿಳೆಯರಿಗೆ ಬದುಕು ಸಾಗಿಸುವುದು ಕಷ್ಟವಾಗಿದೆ ಎಂದು ಅಹವಾಲು ತೋಡಿಕೊಂಡಿತ್ತು.

2) ಇದರ ಆಧಾರದ ಮೇಲೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತತ್‌ಕ್ಷಣವೇ ವಿಶೇಷ ತನಿಖಾ ತಂಡ ರಚಿಸುವಂತೆ ಶಿಫಾರಸು ಮಾಡಿದ್ದರು. ಆದರೆ, ಅದರಲ್ಲಿ ಪ್ರಜ್ವಲ್ ರೇವಣ್ಣ ಅವರ ಹೆಸರು ಇರಲಿಲ್ಲ. ಈ ಶಿಫಾರಸು ಆಧರಿಸಿ ಸಿಎಂ ಸಿದ್ದರಾಮಯ್ಯ ಅವರು ಎಸ್‌ಐಟಿ ರಚಿಸುವ ಘೋಷಣೆ ಮಾಡಿದರು. ಎಸ್‌ಐಟಿ ರಚನೆಯಾಯಿತು.

3) ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಸೋರಿಕೆ ಮಾಡಿದ್ದು ಯಾರು? ಎಂಬ ಪ್ರಶ್ನೆ ಬರುತ್ತಲೇ, ಮೊದಲು ಗಮನಸೆಳೆದುದು ಬಿಜೆಪಿ ನಾಯಕ ಜಿ.ದೇವರಾಜೇಗೌಡ. ಅವರು ರೇವಣ್ಣ ಅವರ ಮನೆಯ ಕಾರು ಚಾಲಕ ಕಾರ್ತಿಕ್ ಗೌಡ ಅವರ ಹೆಸರು ಹೇಳಿದ್ದರು. ಇದಾಗಿ ಎರಡು ದಿನಕ್ಕೆ ಕಾರ್ತಿಕ್ ವಿಡಿಯೋ ಸಂದೇಶ ಬಂತು. ಜಿ.ದೇವರಾಜೇಗೌಡ ರಾಜಕೀಯ ಮಾಡ್ತಿದ್ದಾರೆ. ವಿಡಿಯೋ ಪೆನ್‌ಡ್ರೈವ್ ಲೀಕ್ ಮಾಡಿದ್ದು ಅವರೇ ಎಂದು ಹೇಳಿದ್ದಲ್ಲದೇ, ಎಸ್‌ಐಟಿ ಬಳಿ ಎಲ್ಲ ವಿವರ ನೀಡಿ ಬಳಿಕ ಮಾಧ್ಯಮಕ್ಕೆ ಎಲ್ಲ ವಿವರ ನೀಡುವುದಾಗಿ ಹೇಳಿ ನೇಪಥ್ಯಕ್ಕೆ ಸರಿದರು.

4) ಈ ನಡುವೆ ಜಿ.ದೇವರಾಜೇಗೌಡ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಕೇಸ್ ದಾಖಲಿಸಿದ್ದರು. ಈ ಕೇಸ್‌ನಲ್ಲಿ ಬಂಧಿತರಾಗುವ ಭೀತಿಯಲ್ಲಿ ತಪ್ಪಿಸಿಕೊಳ್ಳಲು ಹೊರಟವರನ್ನು ಚಿತ್ರದುರ್ಗದಲ್ಲಿ ಪೊಲೀಸರು ಬಂಧಿಸಿದ್ದರು. ಆಗ, ಈ ಪೆನ್‌ಡ್ರೈವ್ ಸಂಚಿನ ಹಿಂದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದ್ದಾರೆ ಎಂದು ಹೇಳಿ ಸಂಚಲನ ಮೂಡಿಸಿದರು.

5) ಈ ವಿದ್ಯಮಾನಗಳ ನಡುವೆ, ಪ್ರಜ್ವಲ್ ರೇವಣ್ಣ ಏಪ್ರಿಲ್ 26ಕ್ಕೆ ಮತಚಲಾಯಿಸಿ, ವಿದೇಶಕ್ಕೆ ತೆರಳಿದರು. ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಮೊದಲ ಕೇಸ್ ದಾಖಲಾಯಿತು. ಮನೆಗೆಲಸದ ಮಹಿಳೆ ನೀಡಿದ ದೂರಿನಲ್ಲಿ ಎಚ್ ಡಿ ರೇವಣ್ಣ ಮೊದಲ ಆರೋಪಿ. ಪ್ರಜ್ವಲ್ ಎರಡನೇ ಆರೋಪಿ. ಇದಾದ ಬಳಿಕ ಜಿಲ್ಲಾ ಪಂಚಾಯಿತಿ ಅಧಿಕಾರಿಯೊಬ್ಬರು ಪ್ರಜ್ವಲ್ ವಿರುದ್ಧ ಅತ್ಯಾಚಾರ ಕೇಸ್ ದಾಖಲಿಸಿದರು. ಮೊದಲ ಕೇಸ್‌ನ ಮಹಿಳೆಯನ್ನು ಅಪಹರಿಸಿದ ಮತ್ತೊಂದು ಕೇಸ್ ದಾಖಲಾಯಿತು. ಇದರಲ್ಲಿ ಎಚ್ ಡಿ ರೇವಣ್ಣ ಮತ್ತು ಅವರ ಆಪ್ತನನ್ನು ಪೊಲೀಸರು ಬಂಧಿಸಿದರು. ಮೂರ್ನಾಲ್ಕು ದಿನಗಳ ಬಳಿಕ ರೇವಣ್ಣ ಜಾಮೀನು ಪಡೆದು ಹೊರಬಂದರು.

6) ರೇವಣ್ಣ ಬಂಧನವಾದ ಕೂಡಲೇ ಬರುವ ಸುಳಿವು ನೀಡಿದ್ದ ಪ್ರಜ್ವಲ್‌ ರೇವಣ್ಣ ವಿದೇಶದಿಂದ ವಾಪಸ್ ಬರಲಿಲ್ಲ. ಜರ್ಮನಿಯಿಂದ ಲಂಡನ್‌ಗೆ ಹೋದ ಸುದ್ದಿ ಪ್ರಸಾರವಾಯಿತು. ಪ್ರಜ್ವಲ್ ರೇವಣ್ಣ ಪತ್ತೆ ಬ್ಲೂಕಾರ್ನರ್ ನೋಟಿಸ್ ಜಾರಿಗೊಳಿಸಿದ್ದೂ ಆಯಿತು. ಎಸ್‌ಐಟಿ ಪ್ರಯತ್ನಗಳು ಫಲಕೊಟ್ಟಿಲ್ಲ. ಪ್ರಜ್ವಲ್ ಎಲ್ಲಿದ್ದಾರೆ ಎಂಬುದು ಇದುವರೆಗೂ ನಿಖರವಾಗಿ ಯಾರೂ ಹೇಳಿಲ್ಲ.

7) ರಾಜಕೀಯ ಕೆಸರೆರಚಾಟಕ್ಕೆ ಪ್ರಜ್ವಲ್ ರೇವಣ್ಣ ಕೇಸ್ ಬಳಕೆಯಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ತೀವ್ರ ವಾಕ್ಸಮರಗಳು ನಡೆಯುತ್ತಿದೆ. ಈ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದು ಅವರದ್ದೇ ಲೋಪ ಎಂದು ಬಿಂಬಿಸಲೆತ್ನಿಸಿದರು. ಲೋಕಸಭಾ ಚುನಾವಣೆ ನಡೆಯುತ್ತಿರುವ ಕಾರಣ ರಾಜಕೀಯ ಲಾಭ ಪಡೆಯುವ ಪ್ರಯತ್ನ ಎರಡೂ ಪಕ್ಷಗಳ ನಾಯಕರು ಮಾಡಿದರು.

8) ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್‌ ಪಕ್ಷದಿಂದ ಅಮಾನತುಗೊಳಿಸಿ ಆದೇಶ ಪ್ರಕಟಿಸಲಾಯಿತು. ಇದಾಗಿ ಕೆಲವು ದಿನಗಳ ಬಳಿಕ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಪತ್ರ ಬರೆದು, ಭಾರತಕ್ಕೆ ವಾಪಸ್ ಬರುವಂತೆ ಪ್ರಜ್ವಲ್ ರೇವಣ್ಣಗೆ ತಾಕೀತು ಮಾಡಿದರು. ಮನೆಯಿಂದ, ಕುಟುಂಬದಿಂದ ಹೊರಹಾಕುವುದಾಗಿ ಎಚ್ಚರಿಕೆ ನೀಡಿದರು. ಯಾವುದಕ್ಕೂ ಉತ್ತರ ಸಿಕ್ಕಿಲ್ಲ.

9) ಎಸ್ಐಟಿ ತಂಡ ಮೂರು ಗುಂಪುಗಳಾಗಿ ಪ್ರಕರಣದ ತನಿಖೆ ನಡೆಸುತ್ತಿದ್ದು, ಒಂದು ಸಹಾಯವಾಣಿಯನ್ನೂ ರಚಿಸಿದೆ. ದೂರು ಕೊಟ್ಟ ಸಂತ್ರಸ್ತೆಯರ ಹೇಳಿಕೆ ದಾಖಲಿಸಿಕೊ೦ಡು ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಕಲೆ ಹಾಕಲಾದ ಕೆಲವು ಸಾಕ್ಷ್ಯ, ಜಪ್ತಿ ಮಾಡಿರುವ ಎಲೆಕ್ಟ್ರಾನಿಕ್‌ ವಸ್ತುಗಳು, ಇನ್ನಿತರ ದಾಖಲೆಗಳ ಖಚಿತತೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಎಸ್‌ಐಟಿಯು ಒ೦ದು ತ೦ಡವು ಸಾಕ್ಷ್ಯ ಕಲೆ, ಮತ್ತೊ೦ದು ತ೦ಡವು ಪ್ರಜ್ಜಲ್ ಪತ್ತೆಗೆ ಅಗತ್ಯ ಕಾನೂನು ಪ್ರಕ್ರಿಯೆಯಲ್ಲಿ ತೊಡಗಿದೆ. ಇನ್ನೊಂದು ತ೦ಡವು ತಾಂತ್ರಿಕ ಕಾರ್ಯಾಚರಣೆ ನಡೆಸುತ್ತಿದೆ ಎ೦ದು ತಿಳಿದು ಬ೦ದಿದೆ. ಎರಡು ದಿನಗಳ ಹಿಂದಿನ ವರದಿ ಪ್ರಕಾರ 30ಕ್ಕೂ ಹೆಚ್ಚು ಸಂತ್ರಸ್ತೆಯರು ಅಹವಾಲು ದಾಖಲಿಸಿದ್ದಾರೆ. ದೂರು ನೀಡಿದವರು ಎಷ್ಟು ಜನ ಎಂಬುದು ಬಹಿರಂಗವಾಗಿಲ್ಲ. ಅಶ್ಲೀಲ ವಿಡಿಯೋದ ಪೆನ್‌ಡ್ರೈವ್ ಸಂಬಂಧಿಸಿ ಕೆಲವರನ್ನು ಬಂಧಿಸಿರುವ ಪೊಲೀಸರು, ಒಟ್ಟು ಪ್ರಕರಣದ ಮಾಹಿತಿಯನ್ನು ಇನ್ನೂ ಅಧಿಕೃತವಾಗಿ ಬಹಿರಂಗಗೊಳಿಸಿಲ್ಲ.

10) ಅಶ್ಲೀಲ ವೀಡಿಯೋಗಳ ಪನ್‌ಡೈವ್ ಕೇಸ್‌ಗೆ ಸ೦ಬ೦ಧಿಸಿದ ಪ್ರಮುಖ ಆರೋಪಿ, ಸ೦ಸದಪ್ರಜ್ವಲ್ ರೇವಣ್ಣವತ್ತೆಯಾಗದೇ ವಿಶೇಷ ತನಿಖಾ ತ೦ಡ ಎಸ್‌ಐಟಿ)ದ ತನಿಖೆಗೆ ಹಿನ್ನಡೆಯಾಗಿರುವುದು ವಾಸ್ತವ. ಈ ನಡುವೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಪ್ರಜ್ವಲ್ ರೇವಣ್ಣ ಅವರಿಗೆ ನೋಟಿಸ್ ಜಾರಿಗೊಳಿಸಿ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಬಾರದೇಕೆ ಎಂದು ಕೇಳಿದೆ. ಇದಕ್ಕೆ ಅವರು 10 ದಿನಗಳ ಒಳಗೆ ಉತ್ತರಿಸಬೇಕಾಗಿದೆ. ಈಗಾಗಲೇ 4 ದಿನಗಳಾಗಿವೆ.



    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ