logo
ಕನ್ನಡ ಸುದ್ದಿ  /  ಕರ್ನಾಟಕ  /  ಹಾಸನ ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹೊರಬಂದು ಒಂದು ತಿಂಗಳು, ಇತ್ತೀಚಿನ 5 ಪ್ರಮುಖ ವಿದ್ಯಮಾನಗಳಿವು

ಹಾಸನ ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹೊರಬಂದು ಒಂದು ತಿಂಗಳು, ಇತ್ತೀಚಿನ 5 ಪ್ರಮುಖ ವಿದ್ಯಮಾನಗಳಿವು

Umesh Kumar S HT Kannada

May 24, 2024 10:50 AM IST

google News

ಹಾಸನ ಲೈಂಗಿಕ ಹಗರಣ; ಹಾಸನ ಸಂಸದ ಪ್ರಜ್ವಲ್ ರೇವಣ್ಣ (ಚಿತ್ರದಲ್ಲಿರುವವರು) ಅವರ ಆಶ್ಲೀಲ ವಿಡಿಯೋ ಪೆನ್ ಡ್ರೈವ್ ಹೊರಬಂದು ಒಂದು ತಿಂಗಳು ಆಗಿದ್ದು, ಅವರು ತಲೆಮರೆಸಿಕೊಂಡು ಇನ್ನೆರಡು ದಿನಕ್ಕೆ ಒಂದು ತಿಂಗಳಾಗುತ್ತಿದೆ.

  • ಹಾಸನ ಲೈಂಗಿಕ ಹಗರಣ ಪ್ರಕರಣಕ್ಕೆ ಈಗ ಒಂದು ತಿಂಗಳು. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹೊರಬಂದು ಒಂದು ತಿಂಗಳಾಯಿತು. ಅವರು ತಲೆಮರೆಸಿಕೊಂಡು ಕೂಡ ಇನ್ನೇನು ಎರಡು ದಿನ ಆದರೆ ಒಂದು ತಿಂಗಳಾಗುತ್ತೆ. ಈ ಹಿನ್ನೆಲೆಯಲ್ಲಿ, ಇತ್ತೀಚಿನ 5 ಪ್ರಮುಖ ವಿದ್ಯಮಾನಗಳಿವು.

ಹಾಸನ ಲೈಂಗಿಕ ಹಗರಣ;  ಹಾಸನ ಸಂಸದ ಪ್ರಜ್ವಲ್ ರೇವಣ್ಣ (ಚಿತ್ರದಲ್ಲಿರುವವರು) ಅವರ ಆಶ್ಲೀಲ ವಿಡಿಯೋ ಪೆನ್ ಡ್ರೈವ್ ಹೊರಬಂದು ಒಂದು ತಿಂಗಳು ಆಗಿದ್ದು, ಅವರು ತಲೆಮರೆಸಿಕೊಂಡು ಇನ್ನೆರಡು ದಿನಕ್ಕೆ ಒಂದು ತಿಂಗಳಾಗುತ್ತಿದೆ.
ಹಾಸನ ಲೈಂಗಿಕ ಹಗರಣ; ಹಾಸನ ಸಂಸದ ಪ್ರಜ್ವಲ್ ರೇವಣ್ಣ (ಚಿತ್ರದಲ್ಲಿರುವವರು) ಅವರ ಆಶ್ಲೀಲ ವಿಡಿಯೋ ಪೆನ್ ಡ್ರೈವ್ ಹೊರಬಂದು ಒಂದು ತಿಂಗಳು ಆಗಿದ್ದು, ಅವರು ತಲೆಮರೆಸಿಕೊಂಡು ಇನ್ನೆರಡು ದಿನಕ್ಕೆ ಒಂದು ತಿಂಗಳಾಗುತ್ತಿದೆ.

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಬಹಿರಂಗವಾಗಿ ಒಂದು ತಿಂಗಳಾಯಿತು. ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡು ಒಂದು ತಿಂಗಳ ಆಸುಪಾಸು. ಈ ಒಂದು ತಿಂಗಳ ಅವಧಿಯಲ್ಲಿ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಕೇಸ್‌ನಲ್ಲಿ ಹಲವು ಬೆಳವಣಿಗೆಗಳಾಗಿದ್ದು, ಅವರ ವಿರುದ್ಧ ಕನಿಷ್ಠ ಮೂರು ಕೇಸ್‌ ದಾಖಲಾಗಿವೆ.

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ (ಏಪ್ರಿಲ್ 26)ದ ಬಳಿಕ ಪ್ರಜ್ವಲ್ ರೇವಣ್ಣ ಜರ್ಮನಿಗೆ ಹೋಗಿದ್ದಾರೆ ಎಂದು ಅವರ ತಂದೆ ಎಚ್ ಡಿ ರೇವಣ್ಣ ಹೇಳಿದ್ದರು. ಮತದಾನ ದಿನದ ಮಾರನೇ ದಿನ ಪ್ರಜ್ವಲ್ ವಿರುದ್ಧ ಮೊದಲ ಕೇಸ್ ದಾಖಲಾಯಿತು. ಅದಾಗಿ ಕೆಲವು ದಿನಗಳ ಬಳಿಕ ಜಿಲ್ಲಾ ಪಂಚಾಯಿತಿಯ ಮಹಿಳಾ ಅಧಿಕಾರಿಯೊಬ್ಬರು ಪ್ರಜ್ವಲ್ ವಿರುದ್ಧ ಅತ್ಯಾಚಾರ ಕೇಸ್ ದಾಖಲಿಸಿದರು. ಈ ನಡುವೆ ಹಾಸನ ಲೈಂಗಿಕ ಹಗರಣ (Hassan Sex Scandal) ತನಿಖೆ ನಡೆಸಲು ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿತ್ತು.

ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್ ಬಂದು ಎಸ್ಐಟಿ ತನಿಖೆ ಎದುರಿಸುತ್ತಾರೆ ಎಂದು ವದಂತಿ ಎರಡು ಬಾರಿ ಹರಡಿತ್ತು. ಅವರ ವಿಮಾನ ಟಿಕೆಟ್ ಇಮೇಜ್ ಕೂಡ ವೈರಲ್ ಆಗಿತ್ತು. ಆದರೆ ಅವರು ವಾಪಸ್ ಬಂದಿರಲಿಲ್ಲ. ಈ ಮಧ್ಯೆ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ತಮ್ಮ ಹುಟ್ಟುಹಬ್ಬದ ದಿನ ಮೊದಲ ಬಾರಿಗೆ ಪ್ರಜ್ವಲ್ ರೇವಣ್ಣ ಕೇಸ್ ಮತ್ತು ಎಚ್ ಡಿ ರೇವಣ್ಣ ಕೇಸ್ ಸಂಬಂಧಿಸಿ ಮಾತನಾಡಿದ್ದರು. ಕಾನೂನು ಪ್ರಕಾರ ಏನು ಕ್ರಮ ಆಗಬೇಕೋ ಅದಾಗಲಿ. ಅದಕ್ಕೆ ತಕರಾರು ಇಲ್ಲ ಎಂದು ಎಚ್ ಡಿ ದೇವೇಗೌಡ ಅವರು ಸ್ಪಷ್ಟಪಡಿಸಿದ್ದರು.

ಪ್ರಜ್ವಲ್ ರೇವಣ್ಣ ಕೇಸ್; ಇತ್ತೀಚಿನ 5 ವಿದ್ಯಮಾನಗಳು

1) ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ನಿನ್ನೆ (ಮೇ 23) ಮತ್ತೆ ಪ್ರಜ್ವಲ್ ರೇವಣ್ಣ ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ತತ್‌ಕ್ಷಣವೇ ಭಾರತಕ್ಕೆ ಬಂದು ಎಸ್‌ಐಟಿ ತನಿಖೆ ಎದುರಿಸಬೇಕು. ನನ್ನ ಮೇಲೆ ಗೌರವ ಇದ್ದರೆ ಕೂಡಲೇ ಬಂದು ಪೊಲೀಸರಿಗೆ ಶರಣಾಗಬೇಕು. ಸರಿ ತಪ್ಪುಗಳನ್ನು ನ್ಯಾಯಾಲಯ ತೀರ್ಮಾನ ಮಾಡುತ್ತೆ. ಬಾರದೇ ಇದ್ದರೆ ನಮ್ಮ ಕುಟುಂಬದಿಂದ ನಿನ್ನನ್ನು ಹೊರಗಿಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ವಿವರ ಓದಿಗೆ - ನನ್ನ ಮೇಲೆ ಗೌರವ ಇದ್ದರೆ ತಕ್ಷಣವೇ ವಾಪಸ್ ಬಾ: ಪ್ರಜ್ವಲ್ ರೇವಣ್ಣಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಕೊನೆಯ ಎಚ್ಚರಿಕೆ

2) ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ (Prajwal Revanna Diplomatic Passport) ರದ್ದು ಮಾಡಬೇಕು ಎಂದು ಕೋರಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Karnataka CM Siddaramaiah) ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ 2ನೇ ಬಾರಿಗೆ ಪತ್ರ ಬರೆದಿದ್ದಾರೆ. ಮೊದಲ ಪತ್ರಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ನಡುವೆ, ಕೇಂದ್ರ ಸರ್ಕಾರ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವುದಕ್ಕೆ ಬೇಕಾದ ಪ್ರಕ್ರಿಯೆ ಕಡೆಗೆ ಗಮನಹರಿಸಿದೆ ಎಂದು ವರದಿ ಹೇಳಿದೆ. ವಿವರ ಓದಿಗೆ - ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಿ; ಪ್ರಧಾನಿ ಮೋದಿಗೆ 2ನೇ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

3) ಸಂತ್ರಸ್ತೆ ಅಪಹರಣ ಪ್ರಕರಣದ ಸಂಬಂಧ ಪ್ರಜ್ವಲ್ ರೇವಣ್ಣ ತಾಯಿ ಭವಾನಿ ರೇವಣ್ಣ ಅವರ ಕಾರು ಚಾಲಕ ನಾಪತ್ತೆಯಾಗಿದ್ದಾನೆ. ಎಸ್‌ಐಟಿ ತಂಡ ಮೈಸೂರು ಸೇರಿ ಇತರೆ ಕಡೆಗಳಲ್ಲಿ ಕಾರು ಚಾಲಕನಿಗಾಗಿ ಶೋಧ ನಡೆಸಿದೆ. ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣ ಕಾರು ಚಾಲನಿಗೆ ಎಸ್ಐಟಿ 2 ಬಾರಿ ನೋಟಿಸ್ ನೀಡಿತ್ತು. ಈ ನೋಟಿಸ್‌ಗಳಿಗೆ ಉತ್ತರಿಸದೆ ಭವಾನಿ ರೇವಣ್ಣ ಕಾರು ಚಾಲಕ ನಾಪತ್ತೆಯಾಗಿದ್ದಾನೆ. ವಿವರ ಓದಿಗೆ - ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಆರೋಪ ಪ್ರಕರಣ; ಭವಾನಿ ರೇವಣ್ಣ ಕಾರು ಚಾಲಕ ನಾಪತ್ತೆ

4) ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಘಟನಾವಳಿಗಳನ್ನೇ ಹೋಲುವ ಸಿನಿಮಾ ಒಂದು ಸದ್ದಿಲ್ಲದೆ ಸಿದ್ಧವಾಗಿದೆಯೇ ಎಂಬ ಅನುಮಾನ ಮೂಡತೊಡಗಿದೆ. ಟೀಸರ್‌ ಸಹ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಟೀಸರ್‌ನಲ್ಲಿ ಮಹಿಳೆಯರ ಜತೆಗೆ ಪ್ರಭಾವಿ ವ್ಯಕ್ತಿಯೊಬ್ಬನ ಚೆಲ್ಲಾಟವೇ ಕಾಣಿಸಿದೆ. ವಿವರ ಓದಿಗೆ - ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಕೇಸ್‌ ಬೆನ್ನಲ್ಲೇ ಅದೇ ಘಟನೆ ಹೋಲುವ ಸಿನಿಮಾದ ಟೀಸರ್‌ ರಿಲೀಸ್; ಇದು ನಿರ್ದೇಶಕರ ಪ್ರೀ ಪ್ಲಾನಾ? VIDEO

5) ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌ ಸಂಬಂಧಿಸಿ ಎಸ್‌ಐಟಿ ಆರಂಭಿಸಿದ ಸಹಾಯವಾಣಿಗೆ 30ಕ್ಕೂ ಹೆಚ್ಚು ಮಹಿಳೆಯರು ತಮ್ಮ ಅಹವಾಲುಗಳನ್ನು ಹೇಳಿಕೊಂಡಿದ್ದಾರೆ. ಆದರೆ, ಎಲ್ಲರೂ ದೂರು ದಾಖಲಿಸಿಲ್ಲ ಎಂದು ಎಸ್‌ಐಟಿ ಮೂಲಗಳನ್ನು ಉಲ್ಲೇಖಿಸಿ ಟಿವಿ9 ಕನ್ನಡ ವರದಿ ಮಾಡಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ