ಕರ್ನಾಟಕದ ಈ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಸಾಧ್ಯತೆ; ಕಾರ್ಯಕರ್ತರಲ್ಲಿ ಗರಿಗೆದರಿದ ಉತ್ಸಾಹ
Jan 28, 2024 07:42 PM IST
ಪ್ರಿಯಾಂಕಾ ಗಾಂಧಿ
- Priyanka Gandhi: ಪ್ರಿಯಾಂಕಾ ಗಾಂಧಿ ಅವರು ಕರ್ನಾಟಕದ ಈ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿರುವ ಸುದ್ದಿ ಹರಿದಾಡುತ್ತಿದೆ. ಇಲ್ಲಿ ಪೂರಕ ವಾತಾವರಣ ಇದೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ. (ವರದಿ: ಎಚ್ ಮಾರುತಿ)
2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕರ್ನಾಟಕದಿಂದ ಸ್ಪರ್ಧೆ ಮಾಡಲಿದ್ದಾರೆಯೇ ? ಇಂತಹದೊಂದು ಸುದ್ದಿ ದೆಹಲಿಯಿಂದ ಬೆಂಗಳೂರಿನವರೆಗೆ ಹರಿದಾಡುತ್ತಿದೆ. ಇವರು ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾದ ಈ ಕ್ಷೇತ್ರ ಸುರಕ್ಷಿತ ಮತ್ತು ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಹಕಾರಿಯಾಗುತ್ತದೆ ಎನ್ನುವುದು ವರಿಷ್ಠರ ಅಭಿಲಾಷೆ ಎಂದು ಹೇಳಲಾಗುತ್ತಿದೆ.
ಸ್ಥಳೀಯ ಕಾಂಗ್ರೆಸ್ ನಾಯಕರ ಗಮನಕ್ಕೆ ತಾರದೆ ಹೈಕಮಾಂಡ್ ರಹಸ್ಯ ಸಮೀಕ್ಷೆ ನಡೆಸಿದ್ದು, ಪೂರಕ ವಾತಾವರಣ ಇದೆ ಎಂದು ವ್ಯಕ್ತವಾಗಿದ್ದು, ಈ ಸುದ್ದಿಗೆ ಮತ್ತಷ್ಟು ಪುಷ್ಠಿ ಬಂದಿದೆ. ನೆರೆಯ ತೆಲಂಗಾಣದಿಂದ ಸ್ಪರ್ಧಿಸುವ ಬಗ್ಗೆಯೂ ಗಾಂಧಿ ಕುಟುಂಬ ಚಿಂತನೆ ನಡೆಸಿದೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ. ಅಲ್ಲಿಯೂ ಸಮೀಕ್ಷೆ ನಡೆಸಿದ್ದು ಗೆಲುವು ಖಚಿತ ಎಂದು ವರದಿ ಹೇಳಿದೆ.
ಪ್ರಿಯಾಂಕಾ ಗಾಂಧಿ ಕೊಪ್ಫಳದಿಂದ ಕಣಕ್ಕಿಳಿಯುವ ಸಾಧ್ಯತೆಯಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಸುದ್ದಿ ಕುರಿತು ಚರ್ಚೆ ನಡೆಯುತ್ತಿದೆ. ಅನೇಕ ಕಾಂಗ್ರೆಸ್ ನಾಯಕರು ಫೇಸ್ಬುಕ್, ಎಕ್ಸ್ (ಟ್ವಿಟರ್) ಮತ್ತು ಯೂಟ್ಯೂಬ್ಗಳಲ್ಲಿ ಪ್ರಿಯಾಂಕಾ ಅವರಿಗೆ ಅಹ್ವಾನ ಮತ್ತು ಸ್ವಾಗತ ಕೋರುತ್ತಿದ್ದಾರೆ. ದಯಮಾಡಿ ಕೊಪ್ಪಳಕ್ಕೆ ಬನ್ನಿ ಎಂಬ ಹ್ಯಾಷ್ಟ್ಯಾಗ್ ನೊಂದಿಗೆ ಹಿರಿಯ ನಾಯಕರು ಆಹ್ವಾನ ನೀಡುತ್ತಿದ್ದಾರೆ.
ಚುನಾವಣೆಯಲ್ಲಿ ಕಣಕ್ಕಿಳಿಯುವ ವಿಷಯ ಗಾಂಧಿ ಕುಟುಂಬದ ನಿಷ್ಠರಿಗೆ ಮಾತ್ರ ತಿಳಿದಿದ್ದು, ಬಹುತೇಕ ಮುಖಂಡರ ಅರಿವಿಗೆ ಬಂದಿಲ್ಲ. ಹಾಗಾಗಿ ಅವರ‍್ಯಾರೂ ಈ ವದಂತಿಯನ್ನು ನಿರಾಕರಿಸುವುದೂ ಇಲ್ಲ. ಆದರೆ ಸ್ಥಳೀಯ ಕಾಂಗ್ರೆಸ್ ಮುಖಂಡರಲ್ಲಿ ಮಾತ್ರ ಉತ್ಸಾಹ ಹೆಚ್ಚಿರುವುದಂತೂ ನಿಜ.
ಕೊಪ್ಪಳದ ಲೋಕಸಭಾ ಸದಸ್ಯ ಬಿಜೆಪಿಯ ಕರಡಿ ಸಂಗಣ್ಣ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದಿದ್ದು, ಅವರಿಗೆ ಪಕ್ಷದೊಳಗೆ ವಿರೋಧ ವ್ಯಕ್ತವಾಗಿದೆ. ಅವರಿಗೆ ಟಿಕೆಟ್ ನೀಡದೆ ಬೇರೆ ಕಾರ್ಯಕರ್ತರಿಗೆ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರೇ ಆಗ್ರಹಪಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸ್ಥಳೀಯ ಬಿಜೆಪಿ ಮುಖಂಡರು ವಿಜಯೇಂದ್ರ ಮತ್ತಿತರ ನಾಯಕರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದ್ದಾರೆ ಎಂದು ಜಿಲ್ಲಾ ಮುಖಂಡರು ಹೇಳುತ್ತಾರೆ.
ಸ್ಥಳೀಯ ಕಾಂಗ್ರೆಸ್ ಮುಖಂಡರಲ್ಲಿ ಉತ್ಸಾಹ ಗರಿಗೆದರಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದು, ಐದು ಗ್ಯಾರಂಟಿಗಳ ಬೆಂಬಲ ಅವರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಪ್ರಿಯಾಂಕಾ ಅವರು ಇಲ್ಲಿಗೆ ಆಗಮಿಸುವುದು ತಿಳಿದಿಲ್ಲ. ಒಂದು ವೇಳೆ ಅವರು ಇಲ್ಲಿಗೆ ಆಗಮಿಸಿದರೆ ಅವರ ಗೆಲುವಿಗೆ ಶ್ರಮಿಸುತ್ತೇವೆ. ಅಷ್ಟೇ ಅಲ್ಲ, ಬಹದು ದೊಡ್ಡ ಅಂತರದಿಂದ ಗೆಲ್ಲಿಸಿ ಕಳುಹಿಸುತ್ತೇವೆ ಎಂದು ವಾಗ್ದಾನ ಮಾಡುತ್ತಾರೆ.
ಕೊಪ್ಪಳ ಏಕೆ?
ಕೊಪ್ಪಳದ ಕಾರ್ಯಕರ್ತರ ಉತ್ಸಾಹ ಮಾತ್ರ ಕಾರಣ ಅಲ್ಲ. ಇಲ್ಲಿನ ರಾಜಕೀಯ ವಾತಾವರಣವೂ ಕಾಂಗ್ರೆಸ್ಗೆ ಪೂರಕವಾಗಿದೆ. ರಾಯಚೂರು ಜಿಲ್ಲೆಯ 2, ಬಳ್ಳಾರಿ ಜಿಲ್ಲೆಯ 1 ವಿಧಾನಸಭಾ ಕ್ಷೇತ್ರ ಒಳಗೊಂಡಂತೆ ಒಟ್ಟು 8 ವಿಧಾನಸಭಾ ಕ್ಷೇತ್ರ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತವೆ. 8 ವಿಧಾನಸಭಾ ಕ್ಷೇತ್ರಗಳಲ್ಲಿ 6ರಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದ್ದು, ಕಾಂಗ್ರೆಸ್ಗೆ ವರದಾನ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಒಂದು ಕ್ಷೇತ್ರದಲ್ಲಿ ಬಿಜೆಪಿ ಇನ್ನೊಂದು ಕ್ಷೇತ್ರದಲ್ಲಿ ಜನಾರ್ದನ ರೆಡ್ಡಿ ಶಾಸಕರಾಗಿದ್ದಾರೆ.
2019ರ ಚುನಾವಣೆಯಲ್ಲಿ ಕೊಪ್ಪಳದಲ್ಲಿ ಬಿಜೆಪಿ ಕರಡಿ ಸಂಗಣ್ಣ 38,397 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಜಯಗಳಿಸಿದ್ದರು. ಕೊಪ್ಪಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿಗಳ ದಂಡು ಅಪಾರವಾಗಿದೆ. ಜನತಾ ಪರಿವಾರದಲ್ಲಿದ್ದಾಗ ಸಿದ್ದರಾಮಯ್ಯ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ರಾಜ್ಯಕ್ಕೂ ಗಾಂಧಿ ಕುಟುಂಬಕ್ಕೂ ನಂಟು:
ಕರ್ನಾಟಕಕ್ಕೂ ಇಂದಿರಾ ಗಾಂಧಿ ಕುಟುಂಬಕ್ಕೂ ಅವಿನಾಭಾವ ನಂಟಿದೆ. ಇಂದಿರಾಗಾಂಧಿ ಅವರಿಗೆ ಪುನರ್ಜನ್ಮ ನೀಡಿದ್ದು ಕರ್ನಾಟಕ ಎನ್ನುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. 1999ರಲ್ಲಿ ಸೋನಿಯಾ ಗಾಂಧಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು. ಆಗಲೇ ಹೇಳಿದಂತೆ ಗಾಂಧಿ ಕುಟುಂಬದ ಕುಡಿಯೊಂದು ಇಲ್ಲಿಂದ ಕಣಕ್ಕಳಿದರೆ ರಾಜ್ಯಾದ್ಯಂತ ಅದರ ಪ್ರಭಾವ ಹರಡಲಿದೆ. ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಹಾರಿಯಾಗುತ್ತದೆ. ಅಲ್ಲದೆ, ರಾಜ್ಯದಿಂದ ಸ್ಪರ್ಧಿಸುವ ರಾಷ್ಟ್ರೀಯ ನಾಯಕರ ಭವಿಷ್ಯ ಉಜ್ವಲವಾಗುತ್ತದೆ ಎಂದೂ ಹೇಳಲಾಗುತ್ತಿದೆ.
ವರದಿ: ಎಚ್ ಮಾರುತಿ