Basanagouda Patil Yatnal Profile: ಹಿಂದುತ್ವ, ರಾಷ್ಟ್ರೀಯವಾದಗಳ ಪ್ರತಿಪಾದಕ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಪರಿಚಯ
May 08, 2023 03:10 PM IST
ಬಸನಗೌಡ ಪಾಟೀಲ್ ಯತ್ನಾಳ್
Basanagouda Patil Yatnal Profile: ನೇರ ನಡೆ, ನುಡಿಯೊಂದಿಗೆ ಹಿಂದುತ್ವ, ರಾಷ್ಟ್ರೀಯ ವಾದಗಳ ಪ್ರತಿಪಾದಕರಾಗಿ ಗಮನಸೆಳೆಯುತ್ತಿರುವವರು ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್. ಅವರಿಗೆ ರಾಜಕೀಯ ಮಹತ್ವಕಾಂಕ್ಷೆ ಹೆಚ್ಚು. ಅವರು ಈ ಸಲ ಮತ್ತೆ ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಅವರ ಕಿರುಪರಿಚಯ ಇಲ್ಲಿದೆ.
ವಿಜಯಪುರ ನಗರ ಕ್ಷೇತ್ರದ ಹಾಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal). ಕಡಕ್ ಮಾತುಗಳಿಂದ ವಿವಾದಕ್ಕೀಡಾಗಿ ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತಿರುವವರು ಯತ್ನಾಳ್. ಸಂಸದರಾಗಿ, ಕೇಂದ್ರ ಸಚಿವರಾಗಿ, ವಿಧಾನಪರಿಷತ್ ಸದಸ್ಯರಾಗಿ ಕೆಲಸ ಮಾಡಿದವರು.
ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರ ವಿಧಾನಸಭಾ ಕ್ಷೇತ್ರದಿಂದ 1994ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ತರುವಾಯ 1999ರ ಲೋಕಸಭಾ ಚುನಾವಣೆ ವೇಳೆ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಸಂಸದರಾದರು.
ಸಂಸತ್ ಸದಸ್ಯತ್ವದ ಮೊದಲ ಅವಧಿಯಲ್ಲೇ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸೇರಿ ಹಲವು ಸಂಸದೀಯ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದರು. 1999 ರಿಂದ 2002ರವರೆಗೆ ಸಂಸದೀಯ ಕೈಗಾರಿಕಾ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ್ದರು. ನಂತರ ಸಂಸತ್‌ನ ಕೈಗಾರಿಕಾ ಸಮಿತಿಯ ಸದಸ್ಯರೂ ಆಗಿದ್ದರು. ಇದಲ್ಲದೆ, ಸದಸ್ಯರ ಖಾಸಗಿ ಮಸೂದೆ ರಚನೆ ಸಂಬಂಧ ಮಾಡಲಾಗಿದ್ದ ಸಮಿತಿಯಲ್ಲೂ ಅವರು ಸದಸ್ಯರಾಗಿದ್ದರು.
ಮುಂದೆ, 2002ರಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರುಕೇಂದ್ರ ಸಚಿವರೂ ಆದರು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಅವರಿಗೆ ಜವಳಿ ಖಾತೆ ರಾಜ್ಯ ಸಚಿವ ಸ್ಥಾನ ಒಲಿದು ಬಂದಿತ್ತು. ನಂತರ 2003ರಲ್ಲಿ ರೈಲ್ವೆ ಇಲಾಖೆ ರಾಜ್ಯ ಸಚಿವರಾಗಿಯೂ ಕೆಲಸ ಮಾಡಿದ್ದರು. ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದರಾಗಿ ಯತ್ನಾಳ್ 2004ರಲ್ಲಿ ಪುನರಾಯ್ಕೆಯಾದರು. ಎರಡನೇ ಅವಧಿಯಲ್ಲೂ ಅವರು ಕಾರ್ಮಿಕ ಸಮಿತಿ, ಸ್ಥಳೀಯ ಪ್ರದೇಶಾಭಿವೃದ್ಧಿ ಸಮಿತಿ ಸೇರಿ ಸಂಸತ್‌ನ ಹಲವು ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಿದ್ದರು.
ಇಷ್ಟಾಗ್ಯೂ, 2009ರ ಲೋಕಸಭಾ ಚುನಾವಣೆ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ವಿಜಯಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗಲಿಲ್ಲ. ಹೀಗಾಗಿ ಅವರು 2010ರಲ್ಲಿ ಬಿಜೆಪಿ ಬಿಟ್ಟು ಜೆಡಿಎಸ್‌ಗೆ ಹೋದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಪಡೆದು ಸ್ಪರ್ಧಿಸಿ ಸೋಲು ಅನುಭವಿಸಿದರು. ಅದಾಗಿ, ಅಲ್ಲಿ ಪಕ್ಷದ ರಾಜ್ಯ ಅಧ್ಯಕ್ಷ ಸ್ಥಾನ ಬೇಕು ಎಂದು ಬೇಡಿಕೆ ಇರಿಸಿದರು. ಆದರೆ ಅದು ಸಿಗದ ಕಾರಣ, ಅಸಮಾಧಾನಗೊಂಡು ಮತ್ತೆ ಬಿಜೆಪಿಗೆ ಮರಳಿದರು.
ಪ್ರಬಲ ಹಿಂದೂ ರಾಷ್ಟ್ರೀಯವಾದ ಪ್ರತಿಪಾದಿಸುವ ಬಸನಗೌಡ ಪಾಟೀಲ್ ಯತ್ನಾಳ್, ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುತ್ತಾರೆ ಹಾಗೂ ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿರುವುದು ಅವರ ಮಟ್ಟಿಗೆ ಪ್ಲಸ್ ಪಾಯಿಂಟ್.
ಮುಂದೆ, 2015ರಲ್ಲಿ ವಿಜಯಪುರದ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಸನಗೌಡ ಪಾಟೀಲ್ ಯತ್ನಾಳ್ ಟಿಕೆಟ್ ಬಯಸಿದ್ದರು. ಆದರೆ ಬಿಜೆಪಿ ಟಿಕೆಟ್ ಸಿಗದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಈ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದರೂ ಕೂಡಾ, ಬಿಜೆಪಿ ಅಭ್ಯರ್ಥಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಆರೋಪದ ಮೇಲೆ 6 ವರ್ಷ ಬಿಜೆಪಿಯಿಂದ ಉಚ್ಛಾಟನೆ ಮಾಡಲಾಯ್ತು.
ಇಷ್ಟಾಗ್ಯೂ, 3 ವರ್ಷಗಳ ಬಳಿಕ ಯತ್ನಾಳ್ ಅವರು ಬಿಜೆಪಿಗೆ ಮರುಸೇರ್ಪಡೆಯಾದರು. 2018ರ ಚುನಾವಣೆಯಲ್ಲಿ ವಿಜಯಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಬಸನಗೌಡ ಪಾಟೀಲ್ ಯತ್ನಾಳ್ ಗೆಲುವು ಸಾಧಿಸಿದರು.
ಇತ್ತೀಚೆಗೆ ಮುಖ್ಯಮಂತ್ರಿ ಆಗಬೇಕೆಂಬ ಅವರ ಆಸೆ ಬಹಿರಂಗವಾಗಿತ್ತು. ಅಷ್ಟೇ ಅಲ್ಲ, ಮುಖ್ಯಮಂತ್ರಿ ಗಾದಿ ವಿಚಾರಕ್ಕೆ ಸಂಬಂಧಿಸಿದ ಹಣದ ಲೆಕ್ಕಾಚಾರದ ಬಗ್ಗೆ ನೀಡಿದ ಅವರ ಹೇಳಿಕೆ ವಿವಾದಕ್ಕೆ ಒಳಗಾಗಿತ್ತು. ಪಂಚಮಸಾಲಿ ಮೀಸಲು ಹೋರಾಟದಲ್ಲಿ ಯತ್ನಾಳ್ ಮುಂಚೂಣಿಯಲ್ಲಿದ್ದರು. ಈ ಸಂದರ್ಭದಲ್ಲಿ ಅವರು ಬಿ.ಎಸ್.ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರರ ವಿಚಾರದಲ್ಲೂ ನೀಡಿದ ಹೇಳಿಕೆ ವಿವಾದಕ್ಕೆ ಒಳಗಾಗಿತ್ತು. ಮುರುಗೇಶ್ ನಿರಾಣಿ ಅವರ ಬದ್ಧವೈರಿಯೆಂದೇ ಬಸನಗೌಡ ಪಾಟೀಲ್ ಯತ್ನಾಳ್ ಗುರುತಿಸಿಕೊಂಡಿದ್ದಾರೆ.
ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತ, ಬಿಜೆಪಿ ನಾಯಕರನ್ನೇ ಟೀಕಿಸುತ್ತಿದ್ದರೂ, ಅವರ ಮೇಲೆ ಪಕ್ಷಕ್ಕೆ ವಿಶ್ವಾಸದ ಕೊರತೆ ಉಂಟಾಗಿಲ್ಲ. ವಿಜಯಪುರ ನಗರದಲ್ಲಿ ಅವರನ್ನೇ ಬಿಜೆಪಿ ಮತ್ತೆ ಕಣಕ್ಕೆ ಇಳಿಸಿದೆ.