K Annamalai Profile: ಚುನಾವಣಾ ಅಖಾಡದಲ್ಲಿ ಕರ್ನಾಟಕದ ಸಿಂಗಂ; ಪೊಲೀಸ್ ಹುದ್ದೆಯಿಂದ ರಾಜಕೀಯದವರೆಗೆ ಕೆ ಅಣ್ಣಾಮಲೈ ಬದುಕಿನ ಚಿತ್ರಣ ಇಲ್ಲಿದೆ
May 06, 2023 08:00 AM IST
ರಾಜಕಾರಿಣಿ ಅಣ್ಣಾಮಲೈ (ಎಡಚಿತ್ರ) ಅಣ್ಣಾಮಲೈ ಪೊಲೀಸ್ ಅಧಿಕಾರಿಯಾಗಿದ್ದಾಗ (ಬಲಚಿತ್ರ)
- ಕೃಷಿ ಕುಟುಂಬ ಹಿನ್ನೆಲೆಯಿಂದ ಬಂದ ಕೆ. ಅಣ್ಣಾಮಲೈ ಪೊಲೀಸ್ ಹುದ್ದೆಯಲ್ಲಿ ದಕ್ಷ ಅಧಿಕಾರಿಯಾಗಿದ್ದು ʼಕರ್ನಾಟಕದ ಸಿಂಗಂʼ ಎಂದೇ ಖ್ಯಾತಿ ಪಡೆದವರು. ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡುವ ಇವರು ರಾಜಕೀಯ ರಂಗ ಪ್ರವೇಶ ಮಾಡುತ್ತಾರೆ. ಸದ್ಯ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಅಣ್ಣಾಮಲೈ, ಕರ್ನಾಟಕ ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಕೂಡ ಆಗಿದ್ದಾರೆ.
2011ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ, 2013ರಲ್ಲಿ ಪೊಲೀಸ್ ಹುದ್ದೆಯನ್ನು ಅಲಂಕರಿಸುತ್ತಾರೆ. ಕರ್ನಾಟಕದಿಂದ ವೃತ್ತಿ ಜೀವನ ಆರಂಭಿಸಿದ್ದ ಇವರು ದಕ್ಷ ಅಧಿಕಾರಿಯಾಗಿದ್ದರು. ಅಲ್ಲದೆ, ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಇವರು ʼಕರ್ನಾಟಕದ ಸಿಂಗಂʼ ಎಂದೇ ಖ್ಯಾತಿ ಪಡೆದವರು. ಸುಮಾರು 8 ವರ್ಷಗಳ ಕಾಲ ಪೊಲೀಸ್ ಹುದ್ದೆಯಲ್ಲಿದ್ದು, ನಂತರ ಸ್ವಯಂ ನಿವೃತ್ತಿ ಘೋಷಿಸುತ್ತಾರೆ. ʼವಿ ದಿ ಲೀಡರ್ಸ್ʼ ಎಂಬ ಸಂಘಟನೆಯನ್ನು ಹುಟ್ಟು ಹಾಕುವ ಅಣ್ಣಾಮಲೈ ನಂತರ ರಾಜಕೀಯ ರಂಗ ಪ್ರವೇಶಿಸುತ್ತಾರೆ. 2020ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ, ಸದ್ಯ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಇದೀಗ ಕರ್ನಾಟಕ ವಿಧಾನಸಭಾ ಚುನಾವಣಾ ಕಾರ್ಯದಲ್ಲಿ ಸಕ್ರಿಯರಾಗಿ ತೊಡಗಿರುವ ಅಣ್ಣಾಮಲೈ ಅವರ ವ್ಯಕ್ತಿ ಚಿತ್ರಣ ಇಲ್ಲಿದೆ.
ಹಿನ್ನೆಲೆ
ತಮಿಳುನಾಡಿನ ಕರೂರು ಮೂಲದ ಅಣ್ಣಾಮಲೈ ಕೃಷಿ ಕುಟುಂಬ ಹಿನ್ನೆಲೆಯುಳ್ಳವರು. ಇವರ ತಂದೆ ಕಪ್ಪುಸ್ವಾಮಿ, ತಾಯಿ ಪರಮೇಶ್ವರಿ. 2007ರಲ್ಲಿ ಕೊಯಮತ್ತೂರಿನ ಪಿಎಸ್‌ಜಿ ಕಾಲೇಜ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದ ಇವರು, ಲಕ್ನೋದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾರೆ.
ಇವರ ಮಡದಿ ಅಖಿಲಾ ಎಸ್. ನಾಥನ್ ಕಂಪನಿಯೊಂದರಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದು, ಇವರಿಗೆ ಒಬ್ಬ ಮಗನಿದ್ದಾನೆ.
ʼಕರ್ನಾಟಕದ ಸಿಂಗಂʼ ಅಣ್ಣಾಮಲೈ
2011ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ ಪೊಲೀಸ್ ಅಧಿಕಾರಿಯಾಗಿ ನೇಮಕಗೊಳ್ಳುತ್ತಾರೆ. 2013ರಲ್ಲಿ ಎಸಿಪಿಯಾಗಿ (ಸಹಾಯಕ ಪೊಲೀಸ್ ಅಧೀಕ್ಷಕರು)ಕಾರ್ಯಾರಂಭ ಮಾಡುತ್ತಾರೆ. ಇವರ ಕರ್ಮಭೂಮಿ ಕರ್ನಾಟಕ. ಶಿವಮೊಗ್ಗದಲ್ಲಿ ಎಎಸ್‌ಪಿ ತರಬೇತಿ ಪಡೆಯುವ ಇವರು ಕಾರ್ಕಳದಲ್ಲಿ ಮೊದಲ ಬಾರಿಗೆ ಎಎಸ್‌ಪಿ ಆಗಿ ಹುದ್ದೆ ಆರಂಭಿಸುತ್ತಾರೆ. ನಂತರ ಇವರಿಗೆ ನಂತರ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಜವಾಬ್ದಾರಿ ವಹಿಸಲಾಗುತ್ತದೆ. ಕರ್ನಾಟಕದ ಸಿಂಗಂ ಎಂದೇ ಕರೆಸಿಕೊಳ್ಳುವ ಇವರು ದಕ್ಷ ಪೊಲೀಸ್ ಅಧಿಕಾರಿಯಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2019ರಲ್ಲಿ ವೈಯಕ್ತಿಕ ಕಾರಣಗಳಿಂದ ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡುತ್ತಾರೆ. ಆಗ ಅವರು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದರು. ಅಣ್ಣಾಮಲೈ ರಾಜೀನಾಮೆ ಸುದ್ದಿಯು ಆಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಮಾತ್ರವಲ್ಲ, ಅಂದು ಅಣ್ಣಾಮಲೈ ಮುಂದಿನ ನಡೆಯ ಕುರಿತು ಎಲ್ಲರಲ್ಲೂ ಕುತೂಹಲ ಮೂಡಿದ್ದು ಸುಳ್ಳಲ್ಲ.
ʼವಿ ದಿ ಲೀಡರ್ಸ್ʼ ಸಂಘಟನೆಯ ರೂವಾರಿ
ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡುವ ಅಣ್ಣಾಮಲೈ ವಿ ದಿ ಲೀಡರ್ಸ್ ಫೌಂಡೇಶನ್ (www.wetheleader.org) ಅನ್ನು ಸ್ಥಾಪಿಸುತ್ತಾರೆ. ಈ ಸಂಸ್ಥೆಯು ಕಾಲೇಜು ವಿದ್ಯಾರ್ಥಿಗಳಿಗೆ ಕೌಶಲ ಮತ್ತು ತರಬೇತಿ ನೀಡುವುದು ಹಾಗೂ ಗ್ರಾಮೀಣ ರೈತರನ್ನು ಸಬಲೀಕರಣಗೊಳಿಸುವಲ್ಲಿ ಸಕ್ರಿಯವಾಗಿದೆ.
ಲೇಖಕರೂ ಆಗಿರುವ ಅಣ್ಣಾಮಲೈ ʼದಿ ಏಜೆಂಟ್ಸ್ ಆಫ್ ಚೇಂಜ್ - ಹೌ ಎ ಲೈಫ್ ಇನ್ ಖಾಕಿ ಅನ್‌ಮೇಡ್ ಮಿʼ ಎಂಬ ಶೀರ್ಷಿಕೆಯ ಪುಸ್ತಕವನ್ನು ಸಹ ಬರೆದಿದ್ದಾರೆ.
ರಾಜಕೀಯ ರಂಗದಲ್ಲಿ ʼಸಿಂಗಂʼ
ನಾಗರಿಕ ಸೇವೆಗೆ ರಾಜೀನಾಮೆ ನೀಡಿದ ಅಣ್ಣಾಮಲೈ ಕೆಲ ದಿನಗಳ ನಂತರ ರಾಜಕೀಯ ರಂಗ ಪ್ರವೇಶಿಸುತ್ತಾರೆ. ಮೊದಲು ಎಐಎಡಿಎಂಕೆ ಪಕ್ಷದೊಂದಿಗೆ ಕಾಣಿಸಿಕೊಂಡ ಇವರು ನಂತರ, ಅಂದರೆ 2020 ಆಗಸ್ಟ್ 25ರಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ. ಮೊದಲು ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿದ್ದ ಅಣ್ಣಾಮಲೈ ಸದ್ಯ ರಾಜ್ಯಾಧ್ಯಕ್ಷರಾಗಿದ್ದಾರೆ.
2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕರೂರ್ ಜಿಲ್ಲೆಯ ಅರವಕುರಿಚಿ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸುತ್ತಾರೆ. ಆದರೆ ಡಿಎಂಕೆಯ ಇಲಂಗೋ ವಿರುದ್ಧ ಸೋಲುತ್ತಾರೆ.
ಕರ್ನಾಟಕ ಚುನಾವಣಾ ಅಖಾಡದಲ್ಲಿ ಅಣ್ಣಾಮಲೈ
ಕರ್ನಾಟಕ ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಆಗಿರುವ ಅಣ್ಣಾಮಲೈ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಬೆಂಗಳೂರು, ಶಿವಮೊಗ್ಗ, ಕೋಲಾರ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಅಣ್ಣಾಮಲೈ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಬಿಜೆಪಿ ಗೆಲುವಿನ ಆತ್ಮವಿಶ್ವಾಸ ತೋರುವ ಅಣ್ಣಾಮಲೈ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸುತ್ತಿದ್ದಾರೆ.
ಅಣ್ಣಾಮಲೈ ಇದ್ದ ಸಮಾವೇಶದಲ್ಲಿ ತಮಿಳು ನಾಡಗೀತೆ ಪ್ರಸಾರ
ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 27ರಂದು ಕೆ.ಎಸ್. ಈಶ್ವರಪ್ಪ ಸಮ್ಮುಖದಲ್ಲಿ ಶಿವಮೊಗ್ಗದಲ್ಲಿ ಬಿಜೆಪಿ ಸಮಾವೇಶ ನಡೆದಿತ್ತು. ಶಿವಮೊಗ್ಗದಲ್ಲಿನ ತಮಿಳು ಸಮುದಾಯದವರನ್ನು ಸೆಳೆಯಲು ಸಮಾವೇಶ ಏರ್ಪಡಿಸಲಾಗಿತ್ತು. ಈ ಸಮಾವೇಶದಲ್ಲಿ ಅಣ್ಣಾಮಲೈ ಭಾಗವಹಿಸಿದ್ದರು. ಅಲ್ಲದೆ ಅವರು ಆ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದರು. ಕಾರ್ಯಕ್ರಮದಲ್ಲಿ ಅಂದು ತಮಿಳು ನಾಡಗೀತೆ ಪ್ರಸಾರವಾಗಿ ಈರುಸು ಮುರುಸಾಗಿತ್ತು, ಅಲ್ಲದೆ ಇದು ದೊಡ್ಡ ಸುದ್ದಿಯಾಗಿತ್ತು.
ಅಣ್ಣಾಮಲೈ ಕೈಯಲ್ಲಿ ಅರಳಿದ ಕಮಲ
ಬಿಜೆಪಿಯ 44ನೇ ಸಂಸ್ಥಾಪನಾ ದಿನ (ಏಪ್ರಿಲ್ 6)ರಂದು ಅಣ್ಣಾಮಲೈ ತಮಿಳುನಾಡು ಬಿಜೆಪಿ ಪಕ್ಷದ ಕಚೇರಿಯ ಬಳಿ ಕಮಲದ ಚಿತ್ರ ಬಿಡಿಸಿದ್ದರು. ಚಿತ್ರ ಬಿಡಿಸುತ್ತಿರುವ ಅಣ್ಣಾಮಲೈ ಅವರ ಫೋಟೊ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರು ಪುನಃ ಪ್ರಧಾನಿಯಾಗಿ ಆಯ್ಕೆ ಆಗಲೆಂದು ಬಿಜೆಪಿಯು ಗೋಡೆ ಬರಹದ ಅಭಿಯಾನಕ್ಕೆ ಚಾಲನೆ ನೀಡಿತ್ತು. ಈ ಗೋಡೆ ಬರೆಹಕ್ಕೆ ಅಣ್ಣಾಮಲೈ ಸೇರಿದಂತೆ ಬಿಜೆಪಿಯ ಹಲವು ನಾಯಕರು ಸಾಥ್ ನೀಡಿದ್ದರು.
ಅಣ್ಣಾಮಲೈ ಮೇಲೆ ತಮಿಳುನಾಡಿನ ಬಿಜೆಪಿ ನಾಯಕರ ಅಸಮಾಧಾನ
ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ಕಾರ್ಯವೈಖರಿ ತೀವ್ರ ಟೀಕೆಗೆ ಒಳಗಾಗಿದೆ. ಇದರಿಂದ ತಮಿಳುನಾಡಿನ ಬಿಜೆಪಿ ನಾಯಕರು ಅಸಮಾಧಾನಗೊಂಡಿದ್ದಾರೆ. ಈಗಾಗಲೇ ಹಲವರು ಪಕ್ಷವನ್ನು ತೊರೆದು ಬೇರೆ ಪಕ್ಷ ಸೇರಿದ್ದಾರೆ. ಪಕ್ಷದ ಐಟಿ ವಿಭಾಗದ ಮುಖ್ಯಸ್ಥರು ಸೇರಿ 13 ಪದಾಧಿಕಾರಿಗಳು ಪಕ್ಷ ತೊರೆದು ಮಿತ್ರ ಪಕ್ಷ ಎಐಎಡಿಎಂಕೆ ಕಡೆಗೆ ಹೊರಟಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಇನ್ನಷ್ಟು ನಾಯಕರು, ಕಾರ್ಯಕರ್ತರು ಪಕ್ಷ ತೊರೆಯಲಿದ್ದಾರೆ ಎಂಬ ಸುಳಿವನ್ನು ಪಕ್ಷ ತೊರೆದವರು ನೀಡಿದ್ದಾರೆ. ಇದು ಅಣ್ಣಾಮಲೈ ಮಾತ್ರವಲ್ಲ, ತಮಿಳುನಾಡಿನಲ್ಲಿ ಬಿಜೆಪಿಗೂ ಹಿನ್ನೆಡೆಯಾಗುವ ಸಂಭವವನ್ನು ಸೂಚಿಸುತ್ತಿದೆ.
ರಾಜಕೀಯಕ್ಕೆ ಬರುವ ಮೊದಲ ವೃತ್ತಿಯಲ್ಲಿ ಏನನ್ನಾದರೂ ಸಾಧಿಸಿ ಎಂದು ಕರೆ ಕೊಡುವ ಅಣ್ಣಾಮಲೈ ರಾಜಕೀಯದ ಬದುಕು ಮುಂದೆ ಹೇಗೆ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಹೆಸರು: ಅಣ್ಣಾಮಲೈ ಕುಪ್ಪುಸ್ವಾಮಿ
ವಯಸ್ಸು: 39
ಶಿಕ್ಷಣ: ಇಂಜಿನಿಯರಿಂಗ್ ಪದವಿ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ.
ವೃತ್ತಿ: ಮಾಜಿ ಪೊಲೀಸ್ ಅಧಿಕಾರಿ