Puttur News: ಪುತ್ತೂರಿನಲ್ಲಿ ಹಲಸುಮೇಳ: ಆಕರ್ಷಕ ತಿನಿಸುಗಳು, ಹಲಸಿನ ವೆರೈಟಿಗಳ ವಿಶ್ವರೂಪ
Jun 22, 2023 08:00 AM IST
ಪುತ್ತೂರಿನಲ್ಲಿ ಆಯೋಜಿಸಿದ್ದ ಹಲಸು ಮೇಳ ಬಗೆಬಗೆಯ ಭಕ್ಷ್ಯಗಳಿಂದ ಗಮನ ಸೆಳೆಯಿತು.
- ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಹಲಸು ಮೇಳದಲ್ಲಿ ಆಕರ್ಷಕ ಖಾದ್ಯಗಳು, ಹಲಸು ಹಣ್ಣಿನ ವೈವಿಧ್ಯ ಗಮನ ಸೆಳೆದವು. ಇಲ್ಲಿವೆ ಫೊಟೋಗಳು ಮತ್ತು ಮಾಹಿತಿ.
ಮಂಗಳೂರು: ಹಲಸಿನ ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ಸಿಹಿಪ್ರಿಯರಾದ ಕರಾವಳಿ ಮಂದಿಯಂತೂ ವಿವಿಧ ಬಗೆಯ ಖಾದ್ಯ, ದೋಸೆಗಳನ್ನು ತಯಾರಿಸಿ ಸವಿಯುತ್ತಾರೆ. ಅಂತೆಯೇ ಮುತ್ತಿನ ನಗರಿ ಎಂದೇ ಖ್ಯಾತವಾದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಎರಡು ದಿನಗಳ ಕಾಲ ಹಲಸು ಹಬ್ಬ ಆಯೋಜನೆಗೊಂಡಿತ್ತು.
ಉಂಡು ಮಾವು ತಿನ್ನು ಹಸಿದು ಹಲಸು ತಿನ್ನು ಎನ್ನುವ ಮಾತಿದೆ. ಹಲಸು ಕೇವಲ ಹಣ್ಣಲ್ಲ ಸಂಬಂಧ ನೆನಪಿಸುವ ಹಣ್ಣು. ಅಜ್ಜಿ, ತಾತ ನೆಟ್ಟ ಹಲಸಿನ ಗಿಡ ಮಕ್ಕಳು, ಮೊಮ್ಮಕ್ಕಳು ಕಾಲಕ್ಕೂ ಫಲ ಕೊಡುತ್ತದೆ. ಆ ಮೂಲಕ ಹಿರಿಯರ ನೆನಪನ್ನ ಜೀವಂತವಾಗಿಡುತ್ತದೆ. ಅಂತಹ ಹಣ್ಣನ್ನ ಇಷ್ಟಪಡದವರಿಲ್ಲ. ಎಲ್ಲಾ ವಯಸ್ಸಿನವರಿಗೂ ಇದು ಫೇವರೆಟ್. ಅಂತೆಯೇ ಮುತ್ತಿನ ನಗರಿ ಪುತ್ತೂರಿನಲ್ಲಿ ಹಲಸಿನ ಹಬ್ಬ ನಡೆಯಿತು.
ಬಗೆಬಗೆ ತಿಂಡಿ ಸವಿದರು
ನವತೇಜ ಟ್ರಸ್ಟ್ ಪುತ್ತೂರು, ಬೆಂಗಳೂರು ಭಾರತೀಯ ತೋಟಗಾರಿಕಾ ಸಂಸ್ಥೆ ಹಾಗೂ ಜೆಸಿಐ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮೇಳದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಹಲಸಿನಿಂದ ತಯಾರಾದ ಬಗೆ ಬಗೆಯ ತಿಂಡಿ ಸವಿದು ಹೊಸ ರುಚಿಯ ಅನುಭವ ಪಡೆದರು.
ಎರಡು ದಿನಗಳ ಕಾಲ ಪುತ್ತೂರಿನ ಜೈನ ಭವನದಲ್ಲಿ ಹಲಸಿನ ಹಬ್ಬವನ್ನ ಸಖತ್ ಆಗಿ ಜನರು ಎಂಜಯ್ ಮಾಡಿದರು.
ಸ್ಪರ್ಧೆಯಲ್ಲೂ ಪಾಲ್ಗೊಂಡರು
ಇನ್ನು ಕೇವಲ ಹಲಸಿನಿಂದಲೇ ತಯಾರಾಗಿದ್ದ ತಿಂಡಿಗಳು ಜನರು ಬಾಯಿ ಚಪ್ಪರಿಸುವಂತೆ ಮಾಡಿತ್ತು. ಹಲಸಿನ ಕಾಯಿ ಪಕೋಡ, ಹಲಸಿನ ಕೇಕ್, ವಡೆ, ಹಲ್ವಾ, ಚಿಪ್ಸ್, ದೋಸೆ, ಕಬಾಬ್, ಪಾಯಸ, ಕೊಟ್ಟಿಗೆ, ಪೋಡಿ ಹೀಗೆ ಇದರ ಜೊತೆ ಹಲಸಿನ ಹಣ್ಣಿನ ಐಸ್‌ಕ್ರೀಂಗೆ ಜನ ಕ್ಯೂ ನಿಂತಿದ್ದರು. ಹಲಸಿನ ಹಣ್ಣಿನ ಜೊತೆ ಜೊತೆಗೆ ಕೆಲವು ಆರೋಗ್ಯಕರ ತಿಂಡಿ ತಿನಿಸುಗಳನ್ನು ಮೇಳದಲ್ಲಿ ಇಡಲಾಗಿತ್ತು. ಜೊತೆಗೆ ಹಲಸು ಪ್ರಿಯರಿಗಾಗಿ ವಿವಿಧ ಸ್ಪರ್ಧೆಗಳನ್ನ ಆಯೋಜಿಸಲಾಗಿತ್ತು
ವಿವಿಧ ತಳಿಯ ಹಲಸು
ಇವೆಷ್ಟೇ ಹಲಸಿನ ಹಬ್ಬದ ಹೈಲೈಟ್ಸ್ ಅನ್ಕೊಬೇಡಿ. ಇಲ್ಲಿ ವಿವಿಧ ಜಾತಿಯ ಹಲಸಿನ ಹಣ್ಣಿನ ಹಲವಾರು ತಳಿಗಳನ್ನ ಮಾರಾಟಕ್ಕಿಡಲಾಗಿತ್ತು. ಅಂತಹ ತಳಿಗಳ ಬಗ್ಗೆ ಮಾಹಿತಿ ನೀಡಲು ಮತ್ತು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಲಸಿನ ಹಬ್ಬ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಅಪರೂಪದ ತಳಿಗಳ ಬಗ್ಗೆ ಮಾಹಿತಿ ನೀಡಿದ ಆಯೋಜಕ ಸುಹಾಸ್ ಮರಿಕೆ, ಜನರಿಗೆ ಉಪಯೋಗಗಳ ಬಗ್ಗೆ ತಿಳಿಸಿದರು.
ಕೆಂಪು ಹಲಸು, ತೂಬಗೆರೆ ಹಲಸು, ರುದ್ರಾಕ್ಷಿ ಹಲಸು, ಸರ್ವಋತು ಹಲಸು, ಸಿದ್ಧಾ ಹಲಸು ಹೀಗೆ ಮೂವತ್ತು ಜಾತಿಯ ತಳಿಗಳ ಸಸಿಗಳನ್ನು ಮಾರಾಟಕ್ಕಿಡಲಾಗಿತ್ತು.
ಸಸಿಗಳ ಬಗ್ಗೆ ಮಾಹಿತಿ ಪಡೆದ ಹಲವಾರು ಜನರು ಅವುಗಳನ್ನು ಖರೀದಿಸುವ ಹಲಸು ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು.
ವರದಿ: ಹರೀಶ ಮಾಂಬಾಡಿ ಮಂಗಳೂರು
ವಿಭಾಗ