Rahul Gandhi: ಕರ್ನಾಟಕ ಚುನಾವಣೆ ರಾಲಿಯಲ್ಲಿ ಮಂಗಳೂರಲ್ಲಿ 5ನೇ ಗ್ಯಾರೆಂಟಿ ಘೋಷಿಸಿದ ರಾಹುಲ್; ಲೇವಡಿ ಮಾಡಿದ ನಳಿನ್ ಕುಮಾರ್ ಕಟೀಲ್
Apr 28, 2023 06:30 AM IST
ನಳಿನ್ ಕುಮಾರ್ ಕಟೀಲು (ಮೊದಲ ಚಿತ್ರ) ಮಂಗಳೂರು ರಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
Rahul Gandhi: ಅಧಿಕಾರಕ್ಕೆ ಬಂದ ಒಂದು ಗಂಟೆಯೊಳಗೆ ಕಾಂಗ್ರೆಸ್ ತನ್ನ ಗ್ಯಾರಂಟಿಗಳನ್ನು ಗ್ಯಾರಂಟಿಯಾಗಿ ಅನುಷ್ಠಾನ ಮಾಡುತ್ತೇವೆ ಎಂದು ಉಡುಪಿಯಲ್ಲಿ ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಂಗಳೂರಿನಲ್ಲಿ ಸಂಜೆ ನಡೆದ ಸಭೆಯಲ್ಲಿ ಹೊಸ ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಇದಕ್ಕೆ ಪ್ರತಿಕ್ರಿಯಿಸಿ ಲೇವಡಿ ಮಾಡಿದ್ದಾರೆ.
ಮಂಗಳೂರು: ಅಧಿಕಾರಕ್ಕೆ ಬಂದ ಒಂದು ಗಂಟೆಯೊಳಗೆ ಕಾಂಗ್ರೆಸ್ ತನ್ನ ಗ್ಯಾರಂಟಿಗಳನ್ನು ಗ್ಯಾರಂಟಿಯಾಗಿ ಅನುಷ್ಠಾನ ಮಾಡುತ್ತೇವೆ ಎಂದು ಉಡುಪಿಯಲ್ಲಿ ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಂಗಳೂರಿನಲ್ಲಿ ಸಂಜೆ ನಡೆದ ಸಭೆಯಲ್ಲಿ ಹೊಸ ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಈ ಐದನೇ ಗ್ಯಾರಂಟಿ!
ಮಂಗಳೂರಿಗೆ ಗುರುವಾರ ಇಳಿಸಂಜೆ ಆಗಮಿಸಿ, ಹೊರವಲಯದ ಅಡ್ಯಾರ್ ನ ಸಹ್ಯಾದ್ರಿ ಕಾಲೇಜ್ ಗ್ರೌಂಡ್ ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ʻಮೋದೀಜಿಯವರೇ ನೀವು ಹೇಳಿದ್ರಿ, ನಾಲ್ಕು ಭರವಸೆಗಳು ಪೂರ್ಣ ಆಗೋದಿಲ್ಲ. ಆದರೆ ನಾಲ್ಕು ಭರವಸೆಗಳಲ್ಲ, ಐದು ಭರವಸೆಗಳನ್ನು ನಾವು ಕೊಡುತ್ತಿದ್ದೇವೆ. ಇದು ಗ್ಯಾರಂಟಿ. ಮತ್ತೊಂದು ಮಹತ್ವಪೂರ್ಣವಾದ ಭರವಸೆ ಇದು. ರಾಜ್ಯದ ಮಹಿಳೆಯರಿಗೆ ಈ ಘೋಷಣೆಯಾಗಿದೆ. ಮೋದಿಯವರೇ ಕಿವಿಗೊಟ್ಟು ಕೇಳಿ. ಕಾಂಗ್ರೆಸ್ ಸರಕಾರ ಬಂದ ಮೊದಲನೇ ದಿನವೇ ಎಲ್ಲ ಮಹಿಳೆಯರು ಸರಕಾರಿ ಬಸ್ ನಲ್ಲಿ ಉಚಿತವಾಗಿ ಪ್ರವಾಸ ಮಾಡಲು ಅವಕಾಶ ಕೊಡುತ್ತೇವೆ. ರಾಜ್ಯದ ಮಹಿಳೆಯರಿಗೆ ಅವರ ಹಕ್ಕನ್ನು ಕೊಡುವ ಕೆಲಸವನ್ನು ನಾವು ಮಾಡುತ್ತೇವೆ. ಚುನಾವಣೆ ಗೆದ್ದು ಸರಕಾರ ಬಂದ ನಂತರ ಯಾವುದೇ ಸರಕಾರಿ ಬಸ್ ನಲ್ಲಿ ಸಾಗಿದರೂ ಅದು ಉಚಿತವಾಗಿರುತ್ತದೆ ಇದು ಗ್ಯಾರಂಟಿ’ ಎಂದು ಹೇಳಿದರು.
ಬಿಜೆಪಿ ಸರಕಾರ ಕಳ್ಳತನದಿಂದ ಅಧಿಕಾರಕ್ಕೆ ಬಂದದ್ದು ಎಂದು ಪುನರುಚ್ಛರಿಸಿದ ರಾಹುಲ್, ಇವರು ಶಾಸಕರನ್ನು, ಗುತ್ತಿಗೆದಾರರನ್ನು, ಸಕ್ಕರೆ ಫ್ಯಾಕ್ಟರಿಗಳನ್ನೇ ಕಳವು ಮಾಡುತ್ತಾರೆ ಎಂದರು. ಪೆಟ್ರೋಲ್ ಬೆಲೆ ಏರಿಕೆ, ಅಡುಗೆ ಅನಿಲ ಬೆಲೆ ಏರಿಕೆಯಾಗಿದೆ. ನೋಟ್ ಬ್ಯಾನ್ ಬಳಿಕ ಬಡವರ ಹಣ ಕಡಿಮೆಯಾಗಿದೆ. ಉದ್ಯೋಗವನ್ನೇ ಬಿಜೆಪಿ ಕಲ್ಪಿಸಿಲ್ಲ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬಂದ್ ಆಗಿವೆ. ಇದೇನಾ ಬಿಜೆಪಿಯ ವಿಕಾಸ ಎಂದು ಪ್ರಶ್ನಿಸಿದರು.
ನೋವಿಗೆ ಸ್ಪಂದಿಸಿದ ರಾಹುಲ್: ಡಿಕೆಶಿ
ಈ ಸಂದರ್ಭ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿ ಅವರು ಮಲ್ಪೆಯಲ್ಲಿ ಮೀನುಗಾರರ ಜತೆ ಸಂವಾದ ಮಾಡಿ ಅವರ ಸಮಸ್ಯೆ ಅರಿತಿದ್ದಾರೆ. ಒಬ್ಬ ಮೀನುಗಾರ ಸಮುದ್ರಕ್ಕೆ ಹೋಗುವಾಗ ತಮ್ಮ ಜೀವ ಪಣಕ್ಕಿಟ್ಟು ಹೋಗುತ್ತಾನೆ. ಮೀನು ತಂದ ನಂತರ 10 ಜನರಿಗೆ ಉದ್ಯೋಗ ಸೃಷ್ಟಿ ಮಾಡುತ್ತಾನೆ. ಈ ಮೀನುಗಾರರಿಗೆ ಸರ್ಕಾರ ಏನಾದರೂ ವ್ಯವಸ್ಥೆ ಮಾಡಿದೆಯೇ? ಮೀನುಗಾರರು ಸರ್ಕಾರಕ್ಕೆ ಸಾಕಷ್ಟು ಪತ್ರ ಬರೆದರೂ ಯಾವುದೇ ನೆರವು ನೀಡಲಿಲ್ಲ. ಸೀಮೆಎಣ್ಣೆ ಪೂರೈಕೆ ಸೇರಿದಂತೆ ಅನೇಕ ನೋವು ತೋಡಿಕೊಂಡಿದ್ದಾರೆ ಎಂದರು.
ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜೆಡಿಎಸ್ ಗೆ ಬೇಷರತ್ ಬೆಂಬಲ ನೀಡಿದೆವು. ಅವರಿಗೆ ಅಧಿಕಾರ ಉಳಿಸಿಕೊಳ್ಳಲು ಆಗಲಿಲ್ಲ. ಮಂಗಳೂರಿನಲ್ಲಿ ಒಬ್ಬ ಶಾಸಕರನ್ನು ಬಿಟ್ಟು ಉಳಿದ ಎಲ್ಲ ಕಡೆ ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿದಿರಿ. ಇದರಿಂದ ನಿಮ್ಮ ಜೀವನದಲ್ಲಿ ಬದಲಾವಣೆ ಆಯಿತಾ, ತಮಗೆ ಬೆಂಬಲ ನೀಡಿದ ವರ್ಗಕ್ಕೆ ನೆರವು ನೀಡಲು ಆಗಲಿಲ್ಲ. ಬಿಜೆಪಿಯ ಆಣೆಕಟ್ಟು ಒಡೆದಿದೆ. ನಾನು ಮೊನ್ನೆ ಬೈಂದೂರಿಗೆ ಹೋಗಿದ್ದಾಗ ಅಲ್ಲಿ 3 ಸಾವಿರ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರಿ, ಬಿಜೆಪಿ ತೊಲಗಿಸಲು ಸಂಕಲ್ಪ ಮಾಡಿದರು ಎಂದು ಹೇಳಿದರು.
ರಾಜ್ಯ ಸರ್ಕಾರ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿದೆ ಎಂದು ಹೇಳುತ್ತಿದೆ. ಆದರೆ ಇದರಲ್ಲಿ ಮಂಗಳೂರು ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಎಷ್ಟು ಬಂಡವಾಳ ಹೂಡಿಕೆಯಾಗಿದೆ? ಶೈಕ್ಷಣಿಕವಾಗಿ ಶಕ್ತಿಯುತವಾಗಿರುವ ಈ ಭಾಗದಲ್ಲಿ 500 ಕೋಟಿ ಬಂಡವಾಳ ಹೂಡಿಕೆಯಾಗಿಲ್ಲ ಯಾಕೆ? ಈ ಭಾಗದ ವಿದ್ಯಾವಂತ ಯುವಕರು ಉದ್ಯೋಗ ಹರಸಿ ಬೇರೆ ರಾಜ್ಯ ಹಾಗೂ ದೇಶಗಳಿಗೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ಕಾಂಗ್ರೆಸ್ ಪಕ್ಷ ಮಾತು ನೀಡಿದೆ. ಕರಾವಳಿಯಲ್ಲಿ ಪ್ರತ್ಯೇಕ ನಿಗಮ ಸ್ಥಾಪಿಸುತ್ತೇವೆ. ಕರಾವಳಿ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸಲು, ಪ್ರವಾಸಿ ಕೇಂದ್ರ ಮಾಡಲು ಪ್ರತ್ಯೇಕ ನೀತಿ ರೂಪಿಸಿ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸಲಾಗುವುದು ಎಂದರು. ಮಾಜಿ ಸಿಎಂ ವೀರಪ್ಪ ಮೊಯ್ಲಿ ಸಹಿತ ವಿವಿಧ ಗಣ್ಯರು ಈ ಸಂದರ್ಭ ಭಾಷಣ ಮಾಡಿದರು.
ಐದನೇ ಗ್ಯಾರಂಟಿಗೆ ನಳಿನ್ ಲೇವಡಿ, ಕಾಂಗ್ರೆಸ್ ಗೆಲ್ಲೋದೇ ಗ್ಯಾರಂಟಿ ಇಲ್ಲ!
ಮಂಗಳೂರು: ರಾಹುಲ್ ಗಾಂಧಿಯಿಂದ ಕಾಂಗ್ರೆಸ್ ನ 5 ನೇ ಗ್ಯಾರಂಟಿ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಂಗಳೂರಿನಲ್ಲಿ ವ್ಯಂಗ್ಯವಾಡಿದ್ದು, ಕಾಂಗ್ರೆಸ್ ಗೆಲ್ಲೋದೇ ಗ್ಯಾರಂಟಿ ಇಲ್ಲ,ಕಾಂಗ್ರೆಸ್‌ನದ್ದೇ ಗ್ಯಾರಂಟಿ ಇಲ್ಲ, ಹಾಗಾಗಿ ಗ್ಯಾರೆಂಟಿಗಳನ್ನು ಕೊಡ್ತಾ ಹೋಗ್ತಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನ ಗ್ಯಾರಂಟಿಗಳು ಧಾರವಾಹಿಗಳಿದ್ದ ಹಾಗೆ. ವಾರ ವಾರ ಬಿಡುಗಡೆಯಾಗುತ್ತಾ ಹೋಗುತ್ತವೆ. ರಾಜಸ್ಥಾನ, ಹಿಮಾಚಲದಲ್ಲಿ ಘೋಷಣೆ ಮಾಡಿದ ಭರವಸೆಗಳನ್ನ ಕಾಂಗ್ರೆಸ್ ಈವರೆಗೆ ಈಡೇರಿಸಿಲ್ಲ. ಈ ಹಿಂದೆ ಕರ್ನಾಟಕದಲ್ಲಿ ಘೋಷಣೆ ಮಾಡಿದ ಭರವಸೆಗಳನ್ನು ತಮ್ಮ 5 ವರ್ಷದ ಆಡಳಿತ ಅವಧಿಯಲ್ಲಿ ಈಡೇರಿಸಿಲ್ಲ. ಕರ್ನಾಟಕದಲ್ಲಿ ಈ ಹಿಂದೆ ಕಾಂಗ್ರೆಸ್ ತುಷ್ಟೀಕರಣ ರಾಜನೀತಿ ಅನುಸರಿಸಿತ್ತು ಎಂದು ಅವರು ಹೇಳಿದರು.
(ವರದಿ - ಹರೀಶ್ ಮಾಂಬಾಡಿ, ಮಂಗಳೂರು)