Bhadrachalam Train: ಬೆಳಗಾವಿ-ಭದ್ರಾಚಲಂ ರೋಡ್ ವಿಶೇಷ ರೈಲು ಸಂಚಾರ ಅವಧಿ ಏಪ್ರಿಲ್30ರವರೆಗೆ ವಿಸ್ತರಣೆ
Mar 20, 2024 09:20 PM IST
ಬೆಳಗಾವಿ ಭದ್ರಾಚಲಂ ರೈಲು ಸಂಚಾರ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
- ಭದ್ರಾಚಲಂ ಹಾಗೂ ಬೆಳಗಾವಿ ನಗರಗಳ ನಡುವೆ ಇರುವ ವಿಶೇಷ ರೈಲು ಸಂಚಾರದ ಅವಧಿಯನ್ನು ಒಂದು ತಿಂಗಳ ಕಾಲ ವಿಸ್ತರಣೆ ಮಾಡಿ ನೈರುತ್ಯ ರೈಲ್ವೆ ವಿಭಾಗ ಆದೇಶ ಹೊರಡಿಸಿದೆ.
ಹುಬ್ಬಳ್ಳಿ: ದಕ್ಷಿಣ ಭಾರತದ ಪ್ರಸಿದ್ದ ರಾಮಕ್ಷೇತ್ರವಾಗಿರುವ ತೆಲಂಗಾಣದ ಭದ್ರಾಚಲಂಗೆ ಕರ್ನಾಟಕದಿಂದ ನೇರ ಸಂಪರ್ಕಕಲ್ಪಿಸಲಾಗಿರುವ ವಿಶೇಷ ರೈಲು ಸೇವೆಯನ್ನು ವಿಸ್ತರಿಸಲಾಗಿದೆ..
ಬೆಳಗಾವಿ ಹಾಗೂ ತೆಲಂಗಾಣದ ರಾಮಕ್ಷೇತ್ರ ಭದ್ರಾಚಲಂ ರೋಡ್ ನಡುವೆ ಕಳೆದ ಫೆಬ್ರವರಿಯಲ್ಲಿ ಆರಂಭಿಸಲಾಗಿರುವ ವಿಶೇಷ ರೈಲಿನ ಸಂಚಾರ ಇನ್ನೂ ಒಂದು ತಿಂಗಳು ಇರಲಿದೆ.
ಗಾಡಿ ಸಂಖ್ಯೆ 07335 ರೈಲು ಬೆಳಗಾವಿಯಿಂದ ಭದ್ರಾಚಲಂ ರೋಡ್‌ವರಗೆ ಏಪ್ರಿಲ್ 1ರಿಂದ ಏಪ್ರಿಲ್ 30ರವರೆಗೆ ಸಂಚಾರ ಅವಧಿಯನ್ನು ವಿಸ್ತರಿಸಿ ಭಾರತೀಯ ರೈಲ್ವೆಯ ನೈರುತ್ಯ ವಿಭಾಗವು ಆದೇಶವನ್ನು ಹೊರಡಿಸಿದೆ. ಮಾರ್ಚ್ 31ರವರೆಗೆ ಈ ವಿಶೇಷ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಅದೇ ರೀತಿ ಗಾಡಿ ಸಂಖ್ಯೆ 07336 ಭದ್ರಾಚಲಂ ರೋಡ್‌ನಿಂದ ಬೆಳಗಾವಿ ವರೆಗೂ ಏಪ್ರಿಲ್ 2ರಿಂದ ಮೇ 1ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ರೈಲು ಏಪ್ರಿಲ್ 1 ರವರೆಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿತ್ತು ಎಂದು ಹುಬ್ಬಳ್ಳಿಯಲ್ಲಿರುವ ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಈಗಾಗಲೇ ಬೆಳಗಾವಿ ಹಾಗೂ ಕಾಜಿಪೇಟೆ ನಡುವೆ ಇರುವ ವಿಶೇಷ ರೈಲನ್ನೇ ಭದ್ರಾಚಲಂವರೆಗೂ ವಿಸ್ತರಣೆ ಮಾಡಲಾಗಿದೆ. ಫೆ.4ರ ಭಾನುವಾರದಿಂದಲೇ ವಿಶೇಷ ರೈಲು ಸಂಚಾರ ಶುರುವಾಗಿದೆ. ಫೆಬ್ರವರಿ ಮಾಸಾಂತ್ಯದವರೆಗೂ ಈ ವಿಶೇಷ ರೈಲು ಬೆಳಗಾವಿಯಿಂದ ಭದ್ರಾಚಲಂವರೆಗೆ ಸಂಚರಿಸಲಿದ್ದು, ಆನಂತರ ಪ್ರತಿಕ್ರಿಯೆ ನೋಡಿಕೊಂಡು ವಿಸ್ತರಣೆ ಮಾಡಲಾಗುತ್ತದೆ ಎಂದು ರೈಲ್ವೆ ಹೇಳಿತ್ತು. ಈಗ ಉತ್ತಮ ಸ್ಪಂದನೆ ಇರುವುದರಿಂದ ಸಂಚಾರ ವಿಸ್ತರಣೆ ಮಾಡಲಾಗಿದೆ.
ಸಂಚಾರ ಹೇಗೆ?
ಹೈದ್ರಾಬಾದ್ ಕೇಂದ್ರಿತ ದಕ್ಷಿಣ ಮಧ್ಯೆ ರೈಲ್ವೆಯು ಈಗಾಗಲೇ ಬೆಳಗಾವಿಯಿಂದ ಕಾಜಿಪೇಟ್ ಹಾಗೂ ಕಾಜಿಪೇಟ್ ನಿಂದ ಬೆಳಗಾವಿವರೆಗೂ ಎಕ್ಸ್‌ಪ್ರೆಸ್ ರೈಲು ಸಂಚಾರ ಇದೆ. ಈ ರೈಲು ಕಾಜಿಪೇಟ್‌ನಿಂದ ಭದ್ರಾಚಲಂವರೆಗೆ ತಲುಪಿಲಿದೆ. ಅಲ್ಲಿಂದಲೇ ಹೊರಟು ಕಾಜಿಪೇಟ್ ಮಾರ್ಗವಾಗಿ ಬೆಳಗಾವಿಗೆ ಆಗಮಿಸಲಿದೆ.
ಬೆಳಗಾವಿ ಕಾಜಿಪೇಟ್ ವಿಶೇಷ ರೈಲು( ಗಾಡಿ ಸಂಖ್ಯೆ 07335) ಬೆಳಗಾವಿಯಿಂದ ಮಧ್ಯಾಹ್ನ12:30 ಗಂಟೆಗೆ ಹೊರಡುತ್ತದೆ. ಹೈದ್ರಾಬಾದ್ ಮಾರ್ಗವಾಗಿ ಮರು ದಿನ ಬೆಳಿಗ್ಗೆ 7.33ಕ್ಕೆ ಗಂಟೆಗೆ ಕಾಜಿಪೇಟೆ ನಿಲ್ದಾಣವನ್ನು ತಲುಪುತ್ತದೆ. ಅಲ್ಲಿಂದ ಬೆಳಿಗ್ಗೆ 7.35ಕ್ಕೆ ಹೊರಟು ವಾರಂಗಲ್, ಕೇಸಮುದ್ರಮ್, ಮೆಹಬುಬಾಬಾದ್ ಹಾಗೂ ದೊಮಕಲ್ ಮಾರ್ಗವಾಗಿ ಭದ್ರಾಚಲಂ ರೋಡ್ ಅನ್ನು ಬೆಳಗ್ಗೆ 11:30 ಕ್ಕೆ ತಲುಪಲಿದೆ.
ಅಲ್ಲಿಂದ ಸಂಜೆ 4.35ಕ್ಕೆ ಹೊರಟು ದೊಮಕಲ್, ಮೆಹಬುಬಾಬಾದ್, ಕೆಸಸಮುದ್ರಂ, ವಾರಂಗಲ್ ಮಾರ್ಗವಾಗಿ ಕಾಜಪೇಟ್‌ಗೆ ರಾತ್ರಿ 7.18ಕ್ಕೆ ಆಗಮಿಸಲಿದೆ. ರಾತ್ರಿ 7.20ಕ್ಕೆ ಕಾಜಿಪೇಟ್‌ನಿಂದ ಹೊರಟು ಮರು ದಿನ ಮಧ್ಯಾಹ್ನ 3.55ಕ್ಕೆ ಬೆಳಗಾವಿ ತಲುಪಲಿದೆ.
ಈ ರೈಲು ಬೆಳಗಾವಿ, ಲೋಂಡಾ, ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಮಂತ್ರಾಲಯ, ರಾಯಚೂರು, ಯಾದಗಿರಿ, ಸೇಡಂ ಮಾರ್ಗವಾಗಿ ಸಂಚರಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರೈಲು ನಿಲುಗಡೆ ವಿಸ್ತರಣೆ
ಬೆಂಗಳೂರು ಮೈಸೂರು ನಡುವೆ ಸಂಚರಿಸುವ ಮೆಮು ವಿಶೇಷ ರೈಲುಗಳನ್ನು ನಾಯಂಡಹಳ್ಳಿ ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕವಾಗಿ ನಿಲ್ಲಿಸಲು ಸೂಚಿಸಲಾಗಿದ್ದು. ಈ ಅವಧಿಯೂ ಆರು ತಿಂಗಳು ಮುಂದುವರಿಯಲಿದೆ. ರೈಲು ಗಾಡಿ ಸಂಖ್ಯೆ 06525/ 065256 ರೈಲುಗಳ ನಿಲುಗಡೆಯನ್ನು ಮಾರ್ಚ್ 21ರಿಂದ ಸೆಪ್ಟಂಬರ್ 20ರವರೆಗೆ ವಿಸ್ತರಿಸಲಾಗಿದೆ. ಸಂಚಾರ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.