logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Dams Water Level: ಕ್ಷೀಣಿಸುತ್ತಿರುವ ನೈಋತ್ಯ ಮುಂಗಾರು; ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿತ, ರೈತರಲ್ಲಿ ಹೆಚ್ಚಿದ ಆತಂಕ

Karnataka Dams Water Level: ಕ್ಷೀಣಿಸುತ್ತಿರುವ ನೈಋತ್ಯ ಮುಂಗಾರು; ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿತ, ರೈತರಲ್ಲಿ ಹೆಚ್ಚಿದ ಆತಂಕ

HT Kannada Desk HT Kannada

Oct 30, 2023 08:14 AM IST

google News

ನೈಋತ್ಯ ಮುಂಗಾರು ಕಡಿಮೆ ಹಿನ್ನೆಲೆಯಲ್ಲಿ ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತವಾಗಿದೆ

  • ನೈಋತ್ಯ ಮುಂಗಾರು ಕ್ಷೀಣಿಸುತ್ತಿರುವ ಪರಿಹಣ ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿತವಾಗಿದೆ. ಮುಂದಿನ ಮಳೆಗಾಲದವರೆಗೆ ಕೇವಲ 500 ಟಿಎಂಸಿ ನೀರು ಮಾತ್ರ ಲಭ್ಯ. ಉತ್ತರ ಕರ್ನಾಟಕಕ್ಕೆ ಹೋಲಿಸಿದರೆ ದಕ್ಷಿಣ ಕನಾಟಕದ ಪರಿಸ್ಥಿತಿ ಗಂಭೀರವಾಗಿದೆ. ಈ ಕುರಿತ ವರದಿ ಇಲ್ಲಿದೆ.

ನೈಋತ್ಯ ಮುಂಗಾರು ಕಡಿಮೆ ಹಿನ್ನೆಲೆಯಲ್ಲಿ ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತವಾಗಿದೆ
ನೈಋತ್ಯ ಮುಂಗಾರು ಕಡಿಮೆ ಹಿನ್ನೆಲೆಯಲ್ಲಿ ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತವಾಗಿದೆ

ಬೆಂಗಳೂರು: ರಾಜ್ಯಾದ್ಯಂತ ನೈಋತ್ಯ ಮುಂಗಾರು ಕ್ಷೀಣಿಸಿದ್ದು, ಮುಂದೆ ಬರುವ ದಿನಗಳಲ್ಲಿ ಮಳೆ ಬರುವ ಸಾಧ್ಯತೆಗಳು ಇಲ್ಲವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರಮುಖ 14 ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದ್ದು, ನೀರಿನ ಅಭಾವ ತಲೆದೋರುವ ಸಾಧ್ಯತೆಗಳು ದಟ್ಟವಾಗಿವೆ.

ಅಕ್ಟೋಬರ್ 26ರ ಅಂಕಿಅಂಶಗಳ ಪ್ರಕಾರ 14 ಅಣೆಕಟ್ಟುಗಳಲ್ಲಿ ಒಟ್ಟಾರೆ ಶೇ.56 ರಷ್ಟು ನೀರು ಸಂಗ್ರಹವಿದ್ದು, 2024ರ ಜೂನ್ 24ರವರೆಗೆ 502 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಇಷ್ಟು ನೀರಿನಲ್ಲಿ ಕೃಷಿ, ಕುಡಿಯಲು ಮತ್ತು ಕೈಗಾರಿಕೆಗಳ ಅಗತ್ಯಗಳನ್ನು ಪೂರೈಸಬೇಕಿದೆ.

ಮುಂದಿನ 8 ತಿಂಗಳಿಗೆ ಇಷ್ಟು ಕಡಿಮೆ ಪ್ರಮಾಣದ ನೀರು ಸಾಕೆ ಎಂಬ ಪ್ರಶ್ನೆಯೂ ಉದ್ಭವವಾಗಿದೆ. ಅಧಿಕಾರಿಗಳು ಈ ಪರಿಸ್ಥಿತಿಯನ್ನು ಗಂಭೀರ ಆದರೆ ಬಿಕ್ಕಟ್ಟು ಅಲ್ಲ ಎಂದು ವಿಂಗಡಿಸಿದ್ದಾರೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ತೀವ್ರ ಅಭಾವ:

ಕೃಷ್ಣಾ ಕೊಳ್ಳದಲ್ಲಿ ಶೇ.63 ರಷ್ಟು ನೀರಿನ ಸಂಗ್ರಹವಿದ್ದು, ಅಲ್ಲಿನ ಜನಸಂಖ್ಯೆಗೆ ಹೋಲಿಸಿದರೆ ಕುಡಿಯುವ ನೀರು ಮತ್ತು ಕೃಷಿ ಮತ್ತು ಕೈಗಾರಿಕೆಗಳ ಬೇಡಿಕೆಯನ್ನು ನಿಭಾಯಿಸಬಹುದು. ಆದರೆ ದಕ್ಷಿಣ ಕರ್ನಾಟಕದ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ. ಕಾವೇರಿ ಅಣೆಕಟ್ಟುಗಳಲ್ಲಿ ಒಳಹರಿವು ಶೂನ್ಯ. ಆದರೆ ಪ್ರತಿ ದಿನ 8,117 ಕ್ಯೂಸೆಕ್ಸ್ ನೀರನ್ನು ಹೊರಬಿಡಬೇಕಿದೆ.

ಕಾವೇರಿ ಕೊಳ್ಳದ ನಾಲ್ಕು ಅಣೆಕಟ್ಟುಗಳಾದ ಕೆಆರ್‌ಎಸ್, ಹಾರಂಗಿ, ಕಬಿನಿ ಮತ್ತು ಹೇಮಾವತಿ ಜಲಾಶಯಗಳ ಒಟ್ಟು ಸಂಗ್ರಹದ ಸಾಮರ್ಥ್ಯ 114.6 ಟಿಎಂಸಿಗಳಷ್ಟಿದ್ದರೂ ಪ್ರಸ್ತುತ ಕೇವಲ 61.6 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಇದರಲ್ಲಿ 34 ಟಿಎಂಸಿ ಗೃಹ ಬಳಕೆ ಮತ್ತು ಕೈಗಾರಿಕೆಗಳಿಗೆ ಅವಶ್ಯಕತೆ ಇದ್ದು, ಉಳಿದ ನೀರಿನ ಸಂಗ್ರಹವನ್ನು ಒಂದು ವೇಳೆ ಮತ್ತೆ ಮುಂಗಾರು ಕೈಕೊಟ್ಟರೆ ಆಕಸ್ಮಿಕ ಪರಿಸ್ಥಿತಿಗೆ ಉಳಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಕೃಷಿಗೆ ನೀರಿನ ಅಲಭ್ಯವಾಗುತ್ತದೆ. ಇದರಿಂದ ರೈತರು ಮತ್ತೆ ಸಂಕಷ್ಟಕ್ಕೀಡಾಗಬೇಕಾಗುತ್ತದೆ.

ಮಳೆಯ ಸಾಧ್ಯತೆ ಕ್ಷೀಣ, ಕುಡಿಯುವ ನೀರಿಗೆ ತತ್ವಾರ

ಹವಾಮಾನ ಪರಿಸ್ಥಿತಿಯ ಮುನ್ಸೂಚನೆಯೂ ರಾಜ್ಯಕ್ಕೆ ಆಶಾದಾಯಕವಾಗಿಲ್ಲ. ಕಳೆದ 26 ದಿನಗಳ ಹವಾಮಾನ ಪರಿಸ್ಥಿತಿಯನ್ನು ಅವಲೋಕಿಸಿದರೆ ಶೇ.65ರಷ್ಟು ಈಶಾನ್ಯ ಮುಂಗಾರು ರಾಜ್ಯಕ್ಕೆ ಪ್ರತಿಕೂಲವಾಗಿದೆ. ಈ ತಿಂಗಳ 30ರೊಳಗೆ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ ಎಂದು ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

ಮಳೆಯ ಸಾಧ್ಯತೆಗಳನ್ನು ಅವಲೋಕಿಸುತ್ತಿರುವ ಕಂದಾಯ ಇಲಾಖೆಯು ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಗಳಿಗೆ ಬಳಸಬಾರದು ಎಂದು ಕಂದಾಯ ಮತ್ತು ಕೃಷಿ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದೆ.

ಕಾವೇರಿ ಜಲಾಶಯಗಳ ನೀರಿನ ಸಂಗ್ರಹ ಅತಿ ಹೆಚ್ಚು ಬಳಕೆಯಾಗುವುದು ಕುಡಿಯುವ ನೀರಿಗೆ. ನಂತರದ ಸ್ಥಾನದಲ್ಲಿ ತುಂಗಭದ್ರಾ ಮತ್ತು ಆಲಮಟ್ಟಿ ಜಲಾಶಯಗಳಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರತಿ ಎರಡು ವಾರಗಳಿಗೊಮ್ಮೆ ಕುಡಿಯುವ ನೀರಿನ ನಿರ್ವಹಣೆ ಕುರಿತು ಪರಾಮರ್ಶೆ ನಡೆಸುತ್ತಿದೆ.

ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸಲು ಸ್ಥಳೀಯವಾಗಿ ನೀರಿನ ಮೂಲಗಳನ್ನು ಕಂಡುಕೊಳ್ಳಲು ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದೆ. ಇತ್ತೀಚೆಗೆ ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಕುಡಿಯುವ ನೀರು ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸಲು 554 ಕೋಟಿ ರೂಪಾಯಿಗಳ ಅನುದಾನವನ್ನು ಕೇಳಲಾಗಿದೆ ಎಂದು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಉತ್ತರ ಕರ್ನಾಟಕದ ಅಣೆಕಟ್ಟುಗಳಿಂದ ಇನ್ನೂ ಕೃಷಿಗೆ ನೀರನ್ನು ಹರಿಸಲಾಗುತ್ತಿದೆ. ಆದ್ದರಿಂದ ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಲಾರದು ಎಂದು ಭಾವಿಸಲಾಗಿದೆ. ದಕ್ಷಿಣ ಕರ್ನಾಟಕದ ಪರಿಸ್ಥಿತಿ ಶೋಚನೀಯವಾಗಿದ್ದು ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಈಗಾಗಲೇ ಹಾಹಾಕಾರ ಉಂಟಾಗಿದೆ. ವರುಣ ಕೃಪೆ ತೊರಿದರೆ ಮಾತ್ರ ಪರಿಸ್ಥಿತಿ ಸುಧಾರಿಸಬಲ್ಲದು. (ವರದಿ: ಎಚ್.ಮಾರುತಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ