Karnataka Monsoon: ಕರ್ನಾಟಕಕ್ಕೆ ನೈರುತ್ಯ ಮುಂಗಾರು ಪ್ರವೇಶ; ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ತೀವ್ರ ರೂಪತಾಳಿದ ಚಂಡಮಾರುತ
Jun 11, 2023 06:11 PM IST
ಮುಂಗಾರು ಆಗಮನ (ಸಾಂದರ್ಭಿಕ ಚಿತ್ರ)
- Southwest Monsoon enters Karnataka: ಕೊಡಗು ಜಿಲ್ಲೆಯ ಕೆಲವು ಭಾಗಗಳಲ್ಲಿ ನೈರುತ್ಯ ಮುಂಗಾರು ಹಾದುಹೋಗಿದ್ದು, ಇನ್ನೆರಡು ದಿನಗಳಲ್ಲಿ ಬಹುತೇಕ ರಾಜ್ಯವನ್ನು ಅವರಿಸಲಿದೆ. ಈ ಬಾರಿ ರಾಜ್ಯದಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.
ಬೆಂಗಳೂರು: ಕರ್ನಾಟಕಕ್ಕೆ ನೈರುತ್ಯ ಮುಂಗಾರು (Southwest Monsoon)ಪ್ರವೇಶವಾಗಿದ್ದು, ಮುಂದಿನ ಐದು ದಿನಗಳ ಕಾಲ ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ನಿನ್ನೆ (ಜೂನ್ 10, ಶನಿವಾರ) ಕೊಡಗು ಜಿಲ್ಲೆಯ ಕೆಲವು ಭಾಗಗಳಲ್ಲಿ ನೈರುತ್ಯ ಮುಂಗಾರು ಹಾದುಹೋಗಿದ್ದು, ಇನ್ನೆರಡು ದಿನಗಳಲ್ಲಿ ಬಹುತೇಕ ರಾಜ್ಯವನ್ನು ಅವರಿಸಲಿದೆ. ಈ ಬಾರಿ ರಾಜ್ಯದಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.
ಮಲೆನಾಡು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದ್ದು, ಗಂಟೆಗೆ 30-40 ಕಿ. ಮೀ ವೇಗದಲ್ಲಿ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಗಂಟೆಗೆ 40-55 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಮುಂದಿನ 12-16 ಗಂಟೆಗಳಲ್ಲಿ ಬೆಂಗಳೂರಿನಲ್ಲಿಯೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಜೂನ್ 14ರವರೆಗೆ ಕರಾವಳಿಯ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಅರಬ್ಬಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ನೈಋತ್ಯ ಮುಂಗಾರು ಜೂನ್ 8 ರಂದು ಕೇರಳ ಪ್ರವೇಶಿಸಿದ್ದು, ಈ ಮೂಲಕ ದೇಶದಲ್ಲಿ ಮುಂಗಾರು ಆರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿದೆ. ಕಳೆದ ವರ್ಷ ಮೇ 29ಕ್ಕೆ ಮುಂಗಾರು ಆಗಮನವಾಗಿತ್ತು. 2021ರಲ್ಲಿ ಜೂನ್ 3, 2020ರಲ್ಲಿ ಜೂನ್ 1, 2019ರಲ್ಲಿ ಜೂನ್ 8 ಹಾಗೂ 2018ರಲ್ಲಿ ಮೇ 29ಕ್ಕೆ ದಕ್ಷಿಣ ರಾಜ್ಯವಾದ ಕೇರಳಕ್ಕೆ ಮುಂಗಾರು ಪ್ರವೇಶಿಸಿತ್ತು.
ತೀವ್ರ ರೂಪತಾಳಿದ ಬಿಪರ್ಜಾಯ್ ಚಂಡಮಾರುತ
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಬಿಪರ್ಜಾಯ್ ಚಂಡಮಾರುತ ತೀವ್ರ ರೂಪತಾಳಿದ್ದು, ಉತ್ತರದ ಕಡೆಗೆ ಚಲಿಸುತ್ತಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಪಾಕಿಸ್ತಾನ ಹಾಗೂ ಭಾರತದ ಗುಜರಾತ್ ರಾಜ್ಯಕ್ಕೆ ಹೈ ಅಲರ್ಟ್ ನೀಡಲಾಗಿದೆ. ಇದರ ಪ್ರಭಾವ ಕೇರಳ, ಕರ್ನಾಟಕ ಮತ್ತು ಲಕ್ಷದ್ವೀಪ ಕರಾವಳಿಯ ಮೇಲೂ ಬೀರಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.