logo
ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ಮಳೆಗಾಲದ ಆರಂಭದಲ್ಲೇ ಶಿರಾಡಿ ಘಾಟಿಯಲ್ಲಿ ಅಪಘಾತಕ್ಕೆ ಓರ್ವ ಬಲಿ: ವಾಹನ ಸವಾರರೇ ಎಚ್ಚರ !

Mangalore News: ಮಳೆಗಾಲದ ಆರಂಭದಲ್ಲೇ ಶಿರಾಡಿ ಘಾಟಿಯಲ್ಲಿ ಅಪಘಾತಕ್ಕೆ ಓರ್ವ ಬಲಿ: ವಾಹನ ಸವಾರರೇ ಎಚ್ಚರ !

HT Kannada Desk HT Kannada

Jun 12, 2023 08:16 PM IST

google News

ಮಳೆಗಾಲ ಆರಂಭವಾಗುತ್ತಿದ್ದಂತೆ ಘಟ್ಟಪ್ರದೇಶದಲ್ಲೂ ಅಪಘಾತಗಳು ಹೆಚ್ಚುತ್ತವೆ. ಇದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಹೋಗಬೇಕಾಗಿದೆ.

    • ದಕ್ಷಿಣ ಕನ್ನಡ ಮತ್ತು ಹಾಸನ ಸಂಪರ್ಕಿಸುವ ಮಂಗಳೂರು ಬೆಂಗಳೂರು ಹೆದ್ದಾರಿ ಶಿರಾಡಿ ಘಾಟಿಯ ಗುಂಡ್ಯದಲ್ಲಿ ಭಾನುವಾರ ನಸುಕಿನ ವೇಳೆ ಅಪಘಾತ ಸಂಭವಿಸಿದೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಘಟ್ಟಪ್ರದೇಶದಲ್ಲೂ ಅಪಘಾತಗಳು ಹೆಚ್ಚುತ್ತವೆ. ಇದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಹೋಗಬೇಕಾಗಿದೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಘಟ್ಟಪ್ರದೇಶದಲ್ಲೂ ಅಪಘಾತಗಳು ಹೆಚ್ಚುತ್ತವೆ. ಇದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಹೋಗಬೇಕಾಗಿದೆ.

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಸಮೀಪ ಅಡ್ಡಹೊಳೆ ಸೇತುವೆಯಿಂದ ಕಾರೊಂದು ಹೊಳೆಗೆ ಬಿದ್ದು, ಓರ್ವ ಮೃತಪಟ್ಟರೆ, ಮತ್ತೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಭಾನುವಾರ ಬೆಳಗಿನ ಜಾವ ಈ ದುರ್ಘಟನೆ ಸಂಭವಿಸಿದೆ. ದಟ್ಟ ಹನಿಗಳೊಂದಿಗೆ ಮಳೆಯಾಗುತ್ತಿರುವುದರಿಂದ ಚಾಲಕನ ನಿಯಂತ್ರಣ ತಪ್ಪಿತೇ ಅಥವಾ ಬೇರೇನಾದರೂ ಕಾರಣವಾಯಿತೇ ಎಂಬುದು ಇನ್ನಷ್ಟೇ ತನಿಖೆಯಿಂದ ತಿಳಿದುಬರಬೇಕಾಗಿದೆ.

ತಮಿಳುನಾಡು ಮೂಲಕದ ಹೊಸೂರು ಸಮೀಪದ ಹರಿಪ್ರಸಾದ್ ಸಾವನ್ನಪ್ಪಿದವರು. 50 ವರ್ಷದ ಅವರೇ ವಾಹನ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಗಾಯಗೊಂಡವರನ್ನು ಗೋಪಿ (48) ಎಂದು ಗುರುತಿಸಲಾಗಿದೆ. ಕಾರು ತಮಿಳುನಾಡಿನ ಹೊಸೂರಿನಿಂದ ಮಂಗಳೂರು ಕಡೆಗೆ ಬರುತ್ತಿತ್ತು ಎನ್ನಲಾಗಿದೆ. ಗಾಯಾಳುವಿಗೆ ನೆಲ್ಯಾಡಿಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು, ಚಾಲಕನ ನಿಯಂತ್ರಣ ತಪ್ಪಿ ಹೊಳಗೆ ಬಿದ್ದಿರಬಹುದೆಂದು ಪ್ರಾಥಮಿಕ ವರದಿಯಲ್ಲಿ ಹೇಳಲಾಗಿದೆ. ಸ್ಥಳೀಯ ಪರಶುರಾಮ ಕ್ರೇನ್ ತಂಡ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಕಾರು ಮೇಲೆತ್ತುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡರು. ಸ್ಥಳದಲ್ಲಿ ನೆಲ್ಯಾಡಿ ಹೊರಠಾಣಾ ಸಿಬ್ಬಂದಿ, ಉಪ್ಪಿನಂಗಡಿ ಠಾಣಾಧಿಕಾರಿ ಪರಿಶೀಲನೆ ನಡೆಸಿದರು.

ಸಂಚಾರ ಎಚ್ಚರ

ಯಾವುದೇ ಪ್ರದೇಶವಿರಲಿ, ವೇಗದ ಚಾಲನೆ ಅಪಾಯಕ್ಕೆ ರಹದಾರಿ. ಅದರಲ್ಲೂ ಘಟ್ಟ ಪ್ರದೇಶದ ತಿರುವುಗಳಿರಲಿ, ನೇರ ರಸ್ತೆಯಿರಲಿ, ಆ ಪ್ರದೇಶದ ಕುರಿತ ಸ್ಪಷ್ಟ ಮಾಹಿತಿ ಇಲ್ಲದೇ ಇದ್ದರೆ, ಸಮಸ್ಯೆ ಕಟ್ಟಿಟ್ಟ ಬುತ್ತಿ. ಶಿರಾಡಿ ಘಾಟ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳ ಘಟ್ಟ ಪ್ರದೇಶ ಸಂಪರ್ಕಿಸುವ ಘಾಟ್ ಗಳಲ್ಲಿ ಅತ್ಯಂತ ಸುಲಭವಾಗಿ ಸಂಚರಿಸಬಹುದಾದ ಘಾಟ್ ರಸ್ತೆ. ಚಾರ್ಮಾಡಿ, ಸಂಪಾಜೆ, ಬಾಳೆಬರೆ, ಆಗುಂಬೆಯಂಥ ಘಾಟಿಗಳಲ್ಲಿ ತಿರುವುಗಳು ಜಾಸ್ತಿ ಇರುತ್ತವೆ. ಆದರೆ ಶಿರಾಡಿ ಘಾಟಿ ಹಾಗಲ್ಲ. ಇದನ್ನು ಗಮನಿಸಿಯೇ ವಾಹನ ಸವಾರರು ಯದ್ವಾ ತದ್ವಾ ವೇಗದಲ್ಲಿ ಸಂಚರಿಸುತ್ತಾರೆ. ಅಕಸ್ಮಾತ್ ಯಾವುದಾದರೂ ತಿರುವು ಸಿಕ್ಕಿದರೆ ಗಲಿಬಿಲಿಗೊಳ್ಳುತ್ತಾರೆ. ಮಳೆಗಾಲ ಆರಂಭಗೊಳ್ಳುವ ಸಂದರ್ಭ ರಸ್ತೆಯೂ ಒದ್ದೆಯಾಗಿರುತ್ತದೆ, ಮೋಡ ಕವಿದಿರುತ್ತದೆ. ವಾಹನ ಸಂಚಾರಕ್ಕೆ ಅಡಚಣೆ ನಿಶ್ಚಿತವಾಗಿಯೂ ಇರುತ್ತದೆ. ಅಲ್ಲಲ್ಲಿ ಮರ ಬೀಳುವುದು ಮೊದಲಾದ ಸಮಸ್ಯೆಗಳು ತಲೆದೋರುತ್ತವೆ. ಇತ್ತೀಚಿನ ದಿನಗಳಲ್ಲಿ ಕಾಡಾನೆಗೂ ರಸ್ತೆ ಕಡೆ ಸಂಚಾರ ಮಾಡುತ್ತಿದೆ. ಹೀಗಾಗಿ ಘಟ್ಟ ಪ್ರದೇಶದಲ್ಲಿ ವಾಹನ ಸವಾರರು ಎಚ್ಚರಿಕೆ ವಹಿಸದೇ ಇದ್ದರೆ ಸಮಸ್ಯೆಗಳು ತಲೆದೋರಬಹುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

(ವರದಿ: ಹರೀಶ ಮಾಂಬಾಡಿ, ಮಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ