logo
ಕನ್ನಡ ಸುದ್ದಿ  /  ಕರ್ನಾಟಕ  /  Rat Fever: ಉತ್ತರ ಕನ್ನಡದಲ್ಲಿ ಇಲಿಜ್ವರದ ಕಾಟ, 34 ಮಂದಿ ಅಡ್ಮಿಟ್​​​; ಇಲಿಜ್ವರ ಹೇಗೆ ಹರಡುತ್ತದೆ? ಇದರ ಲಕ್ಷಣಗಳೇನು?

Rat Fever: ಉತ್ತರ ಕನ್ನಡದಲ್ಲಿ ಇಲಿಜ್ವರದ ಕಾಟ, 34 ಮಂದಿ ಅಡ್ಮಿಟ್​​​; ಇಲಿಜ್ವರ ಹೇಗೆ ಹರಡುತ್ತದೆ? ಇದರ ಲಕ್ಷಣಗಳೇನು?

HT Kannada Desk HT Kannada

Sep 23, 2023 10:35 AM IST

google News

ಉತ್ತರ ಕನ್ನಡದಲ್ಲಿ ಇಲಿಜ್ವರ (ಪ್ರಾತಿನಿಧಿಕ ಚಿತ್ರ)

    • Rat Fever in Uttara Kannada: ಕರ್ನಾಟಕ ಕರಾವಳಿಯ ಪ್ರಾಕೃತಿಕ ಸೌಂದರ್ಯವನ್ನು ಉಳಿಸಿಕೊಂಡಿರುವ ಜಿಲ್ಲೆ ಎಂದೇ ಗುರುತಿಸಲ್ಪಡುವ ಉತ್ತರ ಕನ್ನಡದಲ್ಲಿ ಇಲಿಜ್ವರ ಪೀಡಿತರ ಸಂಖ್ಯೆ ಹೆಚ್ಚಳವಾಗಿರುವುದು ಆತಂಕಕ್ಕೀಡುಮಾಡಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 38 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉತ್ತರ ಕನ್ನಡದಲ್ಲಿ ಇಲಿಜ್ವರ (ಪ್ರಾತಿನಿಧಿಕ ಚಿತ್ರ)
ಉತ್ತರ ಕನ್ನಡದಲ್ಲಿ ಇಲಿಜ್ವರ (ಪ್ರಾತಿನಿಧಿಕ ಚಿತ್ರ)

ಕಾರವಾರ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನೂರಕ್ಕೂ ಅಧಿಕ ಮಂದಿ ಡೆಂಗ್ಯೂ ಲಕ್ಷಣ ಉಳ್ಳವರು ಅಡ್ಮಿಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದರೆ, ಉತ್ತರ ಕನ್ನಡ ಜಿಲ್ಲೆಯಲ್ಲೂ ಡೆಂಗ್ಯೂ ಪೀಡಿತರು ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಷ್ಟು ತೀವ್ರವಾಗಿ ಉತ್ತರ ಕನ್ನಡದಲ್ಲಿ ಡೆಂಗ್ಯೂ ಹರಡಿಲ್ಲ. ಆದರೆ ಕರ್ನಾಟಕ ಕರಾವಳಿಯ ಪ್ರಾಕೃತಿಕ ಸೌಂದರ್ಯವನ್ನು ಉಳಿಸಿಕೊಂಡಿರುವ ಜಿಲ್ಲೆ ಎಂದೇ ಗುರುತಿಸಲ್ಪಡುವ ಉತ್ತರ ಕನ್ನಡದಲ್ಲಿ ಇಲಿಜ್ವರ ಪೀಡಿತರ ಸಂಖ್ಯೆ ಹೆಚ್ಚಳವಾಗಿರುವುದು ಆತಂಕಕ್ಕೀಡುಮಾಡಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಒಟ್ಟು 38 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರವಾರ ಮತ್ತು ಹೊನ್ನಾವರ ತಾಲೂಕುಗಳಲ್ಲಿ ಅತಿ ಹೆಚ್ಚು ಅಂದರೆ, ತಲಾ 8 ಪ್ರಕರಣಗಳು ದಾಖಲಾಗಿದ್ದರೆ, ಕುಮಟಾದಲ್ಲಿ 7, ಶಿರಸಿ, ಸಿದ್ಧಾಪುರ, ಭಟ್ಕಳಗಳಲ್ಲಿ ತಲಾ 3 ಮತ್ತು ಅಂಕೋಲಾ, ಜೋಯಿಡಾದಲ್ಲಿ ತಲಾ 1 ಕೇಸ್ ಗಳು ಇಲಿಜ್ವರ ಎಂದು ದೃಢಪಟ್ಟಿವೆ.

ಇದು ಕೆಲವೇ ದಿನಗಳಲ್ಲಿ ಹಬ್ಬಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಕಳೆದ ಎರಡು ತಿಂಗಳಿಂದ ಜ್ವರದ ಪ್ರಕರಣಗಳು ಜಿಲ್ಲೆಯಲ್ಲಿ ಜಾಸ್ತಿಯಾಗುತ್ತಿವೆ. ಕೆಲವು ಜ್ವರ ಪ್ರಕರಣಗಳು ದೃಢಪಟ್ಟ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ, ಮಂಗಳೂರಿಗೆ ಕೊಂಡೊಯ್ದ ಉದಾಹರಣೆಗಳೂ ಇವೆ. ಬಹುತೇಕ ಆಸ್ಪತ್ರೆಗಳಲ್ಲಿ ಡೆಂಗ್ಯೂ, ಇಲಿಜ್ವರ ಪ್ರಕರಣಗಳನ್ನು ಹೊಂದಿದವರು ಹೆಚ್ಚಾಗುತ್ತಿದ್ದಾರೆ. ಮಲೇರಿಯಾ, ಡೆಂಗ್ಯೂ ಪೀಡಿತರ ಜತೆಗೆ ಇಲಿಜ್ವರದಂಥ ಪ್ರಕರಣಗಳು ಪತ್ತೆಯಾಗುತ್ತಿರುವುದು ಆತಂಕಕ್ಕೀಡುಮಾಡಿದೆ.

ಇಲಿಜ್ವರ ಹೇಗೆ ಹರಡುತ್ತದೆ?

ಇಲಿ, ಹಸು, ನಾಯಿ, ಹಂದಿ ಮೂಲಕವೂ ಇಲಿ ಜ್ವರ ಹಬ್ಬುತ್ತದೆ. ಹೆಗ್ಗಣಗಳ ಮಲ ಮತ್ತು ಮೂತ್ರದಿಂದ ರೋಗಾಣು ಮನುಷ್ಯನ ದೇಹವನ್ನು ಪ್ರವೇಶಿಸುತ್ತದೆ. ಬಿರುಕು ಕಾಲು ಇದ್ದಾಗ ರೋಗಾಣು ಸುಲಭವಾಗಿ ದೇಹ ಪ್ರವೇಶಿಸಿ ಖಾಯಿಲೆ ಉಂಟಾಗುತ್ತದೆ. ಮಳೆ ನೀರು ಗುಡ್ಡ ಪ್ರದೇಶದಿಂದ ಹರಿದು ಬಂದಾಗ ಅದರ ಜೊತೆ ಇಲಿ, ಹೆಗ್ಗಣಗಳ ಹಿಕ್ಕೆ ಸೇರಿ ಮನುಷ್ಯ ಕಾಲುಗಳಿಗೆ ನೀರು ತಗುಲುತ್ತದೆ. ನೆರೆಯ ನೀರು, ಹೊಳೆಯ ನೀರು, ವಾಹನ ತೊಳಿಯುವವರು ಇದರ ಸಮಸ್ಯೆಯನ್ನು ಎದುರಿಸುತ್ತಾರೆ. ಕಾಲು ಬಿರುಕು ಇದ್ದರೆ ಈ ಕಾಯಿಲೆ ಸುಲಭವಾಗಿ ಬರುತ್ತದೆ. ಕೃತಕ ನೆರೆ ನೀರು ನಿಂತಾಗಲೂ ರೋಗಾಣು ಪ್ರವೇಶವಾಗುತ್ತದೆ. ನೀರಿನಲ್ಲಿ ಈ ವೈರಸ್‌ಗಳ ಜೀವಿತಾವಧಿ ಜಾಸ್ತಿ ಇರುತ್ತದೆ.

ಪರಿಸರ ನೈರ್ಮಲ್ಯದ ಕೊರತೆ, ನೆರೆಹಾವಳಿ ಇಲಿ ಜ್ವರ ಹರಡಲು ಮುಖ್ಯ ಕಾರಣವಾಗಿದೆ. ರೋಗಾಣು ಪ್ರವೇಶಿಸಿದ 2 ರಿಂದ 25 ದಿನಗಳಲ್ಲಿ ತೀವ್ರತರದ ಜ್ವರ ಕಾಡುತ್ತದೆ. ಮೈಕೈ ನೋವು, ತಲೆನೋವು , ಕೆಲವೊಮ್ಮೆ ವಾಂತಿ ಹೊಟ್ಟೆ ನೋವು ಬರುವುದು, ಈ ಜ್ವರದ ಲಕ್ಷಣವಾಗಿದೆ. ರಕ್ತಸ್ರಾವ, ಕಾಮಾಲೆ ಕಾಣಿಸಿಕೊಂಡರೆ ದೇಹದ ಎಲ್ಲಾ ಅಂಗಗಳಿಗೂ ರೋಗಾಣು ಪ್ರವೇಶವಾಗಿ ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪುವ ಅಪಾಯವೂ ಬರಬಹುದಾಗಿದೆ. ಬೇಸಾಯಗಾರರು, ಮೀನುಗಾರರು, ಹಂದಿ ಸಾಕುವವರು, ಚರಂಡಿ ಕೂಲಿ ಕಾರ್ಮಿಕರು, ಮಾಂಸದ ವ್ಯಾಪಾರಿಗಳಿಗೆ ಹೆಚ್ಚಿನ ಜ್ವರ ಭೀತಿ ಎದುರಾಗುತ್ತದೆ., ಸಕಾಲದಲ್ಲಿ ಚಿಕಿತ್ಸೆ ದೊರೆತರೆ ಗುಣಮುಖವಾಗುವ ಸಾಧ್ಯತೆಗಳಿವೆ.

ಇಲಿಜ್ವರದ ಲಕ್ಷಣಗಳೇನು?

ಜ್ವರ ಮೈ- ಕೈ ನೋವು ಬಂದು ಹೋಗೋದು ಈ ಜ್ವರದ ಸಾಮಾನ್ಯ ಲಕ್ಷಣವಾಗಿದೆ. ಆದರೆ ಜ್ವರ ಮೈ-ಕೈ ನೋವು, ಮಲಮೂತ್ರ ಕಮ್ಮಿ ಹೋಗೋದು, ಪ್ರೋಟೀನ್ ಅಂಶ ಕಡಿಮೆ ಆಗೋದು ಮತ್ತು ಜಾಂಡಿಸ್ ಆಗುವಂತಹ ಸಾಧ್ಯತೆಗಳಿವೆ. ಅತಿಯಾದ ಜ್ವರ, ಮೈಕೈ ನೋವು, ರಕ್ತಸ್ರಾವ, ಮೂಗು ಬಾಯಿಗಳಲ್ಲೂ ರಕ್ತಸ್ರಾವವಾಗುವುದು ಇಲಿಜ್ವರದ ಲಕ್ಷಣಗಳಲ್ಲಿ ಒಂದು. ಇಲಿ ಜ್ವರವನ್ನು ಮಲೇರಿಯಾ ಡೆಂಗ್ಯೂ ಜೊತೆ ಗೊಂದಲ ಮಾಡೋದು ಬೇಡ ಸಾಮಾನ್ಯ ಜ್ವರದಂತೆ ಕಂಡರೂ ಇಲಿ ಜ್ವರ ಮಾರಕವಾಗಿದ್ದು, ನಿರ್ಲಕ್ಷ್ಯ ಮಾಡಿದರೆ ಕಿಡ್ನಿ ,ಮೆದುಳು, ಯಕೃತ್ಗೆ ಹಾನಿಯಾಗಲಿದೆ. ಹೀಗಾಗಿ ಯಾವುದೇ ಜ್ವರದ ಲಕ್ಷಣ ಕಂಡುಬಂದರೂ ತಡಮಾಡದೇ ಸ್ಥಳೀಯ ಆಸ್ಪತ್ರೆ ಗಳಲ್ಲಿ ತಪಾಸಣೆ ಮಾಡಬೇಕು. ಇಲಿಯ ಮೂತ್ರ ನೆರೆ ನೀರು ಸೇರಿ ವೈರಸ್ ಮನುಷ್ಯನ ದೇಹಕ್ಕೆ ಸೇರಿ ಜ್ವರ ಬರಲಿದೆ. ಗದ್ದೆಗಳಲ್ಲಿ ನಿಂತ ನೆರೆ ನೀರಿನಿಂದ ಕೃಷಿಕರಿಗೆ ಇಲಿ ಜ್ವರವ ಸಾಧ್ಯತೆಗಳಿವೆ. ಮನುಷ್ಯನ ಕಾಲಿನಲ್ಲಿರುವ ಬಿರುಕುಗಳಿಂದ ದೇಹ ಪ್ರವೇಶಿಸುವ ರೋಗಾಣುವಿನಿಂದ ಜ್ವರ ಬರಬಹುದು

ಜಿಲ್ಲಾ ಆರೋಗ್ಯಾಧಿಕಾರಿ ಏನಂತಾರೆ?

ಇಲಿಯ ಮೂತ್ರದಿಂದ ಲೆಪ್ಟೋಸ್ಪಿರೋಸಿಸ್ ಹೊರಬಂದಾಗ ಅದು ಕುಡಿಯುವ ನೀರು ಅಥವಾ ಆಹಾರ ಪದಾರ್ಥಗಳ ಜೊತೆ ಸೇರಿದರೆ, ಕಲುಷಿತಗೊಂಡು ಅದನ್ನು ಮನುಷ್ಯ ಸೇವಿಸಿದರೆ, ಇಲಿಜ್ವರ ಬರುತ್ತದೆ. ಅತಿಯಾದ ಜ್ವರ, ಮೈಕೈ ನೋವು, ರಕ್ತಸ್ರಾವ, ಮೂಗು ಬಾಯಿಗಳಲ್ಲೂ ರಕ್ತಸ್ರಾವವಾಗುವುದು ಇಲಿಜ್ವರದ ಲಕ್ಷಣಗಳಲ್ಲಿ ಒಂದು. ಹೀಗಾಗಿ ಇಲಿಜ್ವರದ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯಕೀಯ ಪರೀಕ್ಷೆ ಮಾಡಿಕೊಳ್ಳಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನೀರಜ್ ಬಿ.ವಿ. ತಿಳಿಸಿದ್ದಾರೆ. ನೀರನ್ನು ಕುದಿಸಿ ಕುಡಿಯುವುದು ಹಾಗೂ ಆಹಾರ ಪದಾರ್ಥಗಳನ್ನು ಮುಚ್ಚಿಟ್ಟು ಸೇವನೆ ಮಾಡುವುದು ಒಳ್ಳೆಯದು, ಪಾದರಕ್ಷೆಗಳಿಲ್ಲದೆ ಹೊರಗೆ ಓಡಾಡುವುದು ಬೇಡ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ