Bengaluru Realty: ಬೆಂಗಳೂರಿನಲ್ಲಿ ವಸತಿ ದರ ಹೆಚ್ಚಳ, ಭಾರತದ ಈ 43 ನಗರಗಳಲ್ಲಿ ಸದ್ಯ ಮನೆ ಖರೀದಿಸೋದು ಕಷ್ಟ, ಎನ್‌ಎಚ್‌ಬಿ ವರದಿ
Dec 22, 2023 06:16 PM IST
ಭಾರತದ 43 ನಗರಗಳಲ್ಲಿ 2023-24ರ ಮೊದಲ ತ್ರೈಮಾಸಿಕದಲ್ಲಿ ವಸತಿ ದರಗಳು ಗಗನಕ್ಕೆ ನೆಗೆದಿವೆ (ಸಾಂದರ್ಭಿಕ ಚಿತ್ರ)
Real Estate News: ಉದ್ಯಾನನಗರಿ ಬೆಂಗಳೂರು ಸೇರಿದಂತೆ ಭಾರತದ 43 ನಗರಗಳಲ್ಲಿ 2023-24ರ ಮೊದಲ ತ್ರೈಮಾಸಿಕದಲ್ಲಿ ವಸತಿ ದರಗಳು ಗಗನಕ್ಕೆ ನೆಗೆದಿವೆ ಎಂದು ನ್ಯಾಷನಲ್ ಹೌಸಿಂಗ್ ಬ್ಯಾಂಕ್‌ನ ವರದಿ ತಿಳಿಸಿದೆ. ಇದೇ ಸಮಯದಲ್ಲಿ ರೆಸಿಡೆನ್ಸಿಯಲ್ ಮನೆ ದರ ತುಸು ಇಳಿಕೆಯಾಗಿದೆ.
ಬೆಂಗಳೂರು: ತಲೆ ಮೇಲೆ ಸ್ವಂತ ಸೂರು ಬೇಕೆಂಬ ಕನಸಿನಲ್ಲಿರುವವರಿಗೆ ಈಗ ವಸತಿ ದರ ಆಘಾತ ನೀಡುತ್ತಿದೆ. ಈ ವರ್ಷದ ಮೊದಲ ತ್ರೈಮಾಸಿಕದ ಅಂಕಿಅಂಶಗಳನ್ನು ನೋಡುವುದಾದರೆ ಬೆಂಗಳೂರು ಸೇರಿದಂತೆ ಭಾರತದ 43 ನಗರಗಳಲ್ಲಿ ವಸತಿ ದರಗಳು ಗಮನಾರ್ಹವಾಗಿ ಏರಿಕೆ ಕಂಡಿದೆ. ನ್ಯಾಷನಲ್ ಹೌಸಿಂಗ್ ಬ್ಯಾಂಕ್‌ನ ಇತ್ತೀಚಿನ ವರದಿಯ ಪ್ರಕಾರ ಬೆಂಗಳೂರಿನಲ್ಲಿ 2023-24ರ ಮೊದಲ ತ್ರೈಮಾಸಿಕದಲ್ಲಿ ರೆಸಿಡೆನ್ಶಿಯಲ್ ಪ್ರಾಪರ್ಟಿ ದರ ಶೇಕಡ 8.9ರಷ್ಟು ಹೆಚ್ಚಳವಾಗಿದೆ.
ನ್ಯಾಷನಲ್ ಹೌಸಿಂಗ್ ಬ್ಯಾಂಕ್ (ಎನ್‌ಎಚ್‌ಬಿ)ನ ವಸತಿ ದರ ಸೂಚ್ಯಂಕದ ಪ್ರಕಾರ ಭಾರತದ ವಿವಿಧ ನಗರಗಳಲ್ಲಿ 2023-24ರ ಮೊದಲ ತ್ರೈಮಾಸಿಕದಲ್ಲಿ ವಸತಿ ದರಗಳು ಏರಿಕೆ ಕಂಡಿವೆ. ಆದರೆ, ಈ ಸಮಯದಲ್ಲಿ ಗೃಹಸಾಲ ದರಗಳು ಕಡಿಮೆ ಇದೆ. ಮನೆ ಖರೀದಿಗೆ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರವೂ ಈಗಲೂ ಕೊರೊನಾ ಪೂರ್ವ ಅವಧಿಗಿಂತ ಕಡಿಮೆ ಇದೆ. ವಸತಿ ಸಾಲಗಳು ಈಗಲೂ ಕಡಿಮೆ ದರದಲ್ಲಿ ದೊರಕುತ್ತಿದೆ ಎಂದು ಎನ್‌ಎಚ್‌ಬಿ ತಿಳಿಸಿದೆ.
ಬೆಂಗಳೂರಿನಲ್ಲಿ ಪ್ರಾಪರ್ಟಿ ದರ ಹೆಚ್ಚಳ
ಹೊಸ ಮನೆ ಖರೀದಿದಾರರಿಗೆ ಉದ್ಯಾನನಗರಿ ಬೆಂಗಳೂರು ಅಚ್ಚುಮೆಚ್ಚು. ಇಲ್ಲಿ 1 ಬಿಎಚ್‌ಕೆ, 2 ಬಿಎಚ್‌ಕೆ, 3 ಬಿಎಚ್‌ಕೆ ಸೇರಿದಂತೆ ಗ್ರಾಹಕರಿಗೆ ಬೇಕಾದ ವೈವಿಧ್ಯಮಯವಾದ ವಸತಿಗಳು ದೊರಕುತ್ತಿವೆ. ಇತರೆ ನಗರಗಳಿಗಿಂತ ಕೂಲ್ ನಗರವೆಂದು ಜನಪ್ರಿಯತೆ ಪಡೆದಿರುವ ಬೆಂಗಳೂರಿನಲ್ಲಿ ಹೂಡಿಕೆ ಅಥವಾ ಸ್ವಂತದ ಬಳಕೆಯ ಉದ್ದೇಶದಿಂದ ಮನೆ ಖರೀದಿಸುವವರು ಹೆಚ್ಚಾಗುತ್ತಿದ್ದಾರೆ. ಆದರೆ, ಬೆಂಗಳೂರಿನಲ್ಲಿ 2023-24ರ ಮೊದಲ ತ್ರೈಮಾಸಿಕದಲ್ಲಿ ವಸತಿ ದರ ಹೆಚ್ಚಾಗಿದೆ ಎಂದು ಎನ್‌ಎಚ್‌ಬಿ ಅಂಕಿಅಂಶಗಳಿಂದ ತಿಳಿದುಬಂದಿದೆ.
ಭಾರತದ ಎಂಟು ಪ್ರಮುಖ ವಸತಿ ಮಾರುಕಟ್ಟೆಗಳಲ್ಲಿ ವಸತಿ ದರ ಗಮನಾರ್ಹವಾಗಿ ಏರಿಕೆಯಾಗಿದೆ. ಅಹಮಾದಬಾದ್‌ನಲ್ಲಿ ಪ್ರಾಪರ್ಟಿ ದರ ಶೇಕಡ 9.1ರಷ್ಟು, ಬೆಂಗಳೂರಿನಲ್ಲಿ ಶೇಕಡ 8.9ರಷ್ಟು ಮತ್ತು ಕೋಲ್ಕೋತ್ತಾದಲ್ಲಿ ಶೇಕಡ 7.8ರಷ್ಟು ದರ ಹೆಚ್ಚಳವಾಗಿದೆ. ಇದು ಏಪ್ರಿಲ್-ಜೂನ್ 2023ರಲ್ಲಿ ಪ್ರಾಪರ್ಟಿ ದರ ಹೆಚ್ಚಳದ ಅಂಕಿಅಂಶಗಳಿಂದ ತಿಳಿದುಬಂದ ಮಾಹಿತಿಯಾಗಿದೆ.
ಇದೇ ಸಮಯದಲ್ಲಿ ಇತರೆ ನಗರಗಳಾದ ಚೆನ್ನೈನಲ್ಲಿ ಶೇಕಡ 1.1 ಮತ್ತು ದೆಹಲಿಯಲ್ಲಿ ಪ್ರಾಪರ್ಟಿ ದರ ಶೇಕಡ 0.8ರಷ್ಟು ಹೆಚ್ಚಾಗಿದೆ. ಹೈದರಾಬಾದ್‌ನಲ್ಲಿ ಶೇಕಡ 6.9, ಮುಂಬೈನಲ್ಲಿ ಶೇಕಡ 2.9ರಷ್ಟು, ಪುಣೆಯಲ್ಲಿ ಶೇಕಡ 6.1ರಷ್ಟು ವಸತಿ ದರಗಳು ಹೆಚ್ಚಾಗಿವೆ.
ವಿವಿಧ ಬ್ಯಾಂಕ್‌ಗಳಿಂದ ಮತ್ತು ಹೌಸಿಂಗ್ ಪೈನಾನ್ಸ್ ಸಂಸ್ಥೆಗಳಿಂದ 50 ನಗರಗಳ ಎಚ್‌ಪಿಐ ಆಧರಿತ ವಸತಿ ದರ ವಿವರ ಪಡೆದು ಈ ವರದಿಯನ್ನು ಹೌಸಿಂಗ್ ಫೈನಾನ್ಸ್ ಬ್ಯಾಂಕ್ ತಯಾರಿಸಿದೆ. ಇದರ ಪ್ರಕಾರ ಈ ನಗರಗಳಲ್ಲಿ ವರ್ಷದಿಂದ ವರ್ಷಕ್ಕೆ ವಸತಿ ದರ ಶೇಕಡ 4.8 ರಷ್ಟು ಏರಿಕೆಯಾಗಿದೆ.
ರಿಯಲ್ ಎಸ್ಟೇಟ್ ಹೂಡಿಕೆ ಹೆಚ್ಚಳ
ಕರ್ನಾಟಕದ ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆಗಳು ಗರಿಗೆದರುತ್ತಿವೆ. ಜನರು ಹೂಡಿಕೆಯ ದೃಷ್ಟಿಯಿಂದಲೂ ಭೂಮಿ ಖರೀದಿಸಲು ಆದ್ಯತೆ ನೀಡುತ್ತಿದ್ದಾರೆ. ಬೆಂಗಳೂರಿನಂತಹ ನಗರಗಳಲ್ಲಿ ಸೈಟ್ ಹೊಂದಲು ಬಹುತೇಕರು ಬಯಸುತ್ತಿದ್ದಾರೆ. ಹೊರವಲಯಗಳಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆಗಳು ಗರಿಗೆದರುತ್ತಿವೆ. ಆದರೆ, ಇತ್ತೀಚಿನ ವರದಿಗಳ ಪ್ರಕಾರ ಬಿಡಿಎಯ ಸಾಕಷ್ಟು ಫ್ಲಾಟ್‌ಗಳು ಖಾಲಿ ಇವೆ. ಹೀಗಿದ್ದರೂ, ಬಿಡಿಎ ಹಲವು ಹೊಸ ಪ್ರಾಜೆಕ್ಟ್‌ಗಳನ್ನು ನಡೆಸುತ್ತಿದೆ.