logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ಆಲಮಟ್ಟಿಯ ಜಲಾಶಯದಲ್ಲಿ ಜಲವೈಭವ, ಬಾಗಿನ ಪೂಜೆ, ಕೆಆರ್‌ಎಸ್‌, ಕಬಿನಿ ಜಲಾಶಯದಲ್ಲೂ ತಗ್ಗಿದ ಒಳಹರಿವು

Karnataka Reservoirs: ಆಲಮಟ್ಟಿಯ ಜಲಾಶಯದಲ್ಲಿ ಜಲವೈಭವ, ಬಾಗಿನ ಪೂಜೆ, ಕೆಆರ್‌ಎಸ್‌, ಕಬಿನಿ ಜಲಾಶಯದಲ್ಲೂ ತಗ್ಗಿದ ಒಳಹರಿವು

Umesha Bhatta P H HT Kannada

Aug 21, 2024 10:22 AM IST

google News

ಆಲಮಟ್ಟಿ ಜಲಾಶಯವು ಬೆಳಕಿನಿಂದ ಕಂಗೊಳಿಸುತ್ತಿದೆ.

    • Karnataka Dams ಕರ್ನಾಟಕದಲ್ಲಿ ಮಳೆ ಮತ್ತೆ ನಿಧಾನವಾಗಿ ಚುರುಕುಗೊಂಡಿದ್ದರೂ ಜಲಾಶಯಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಬರುತ್ತಿಲ್ಲ. ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಇಲ್ಲಿದೆ.
ಆಲಮಟ್ಟಿ ಜಲಾಶಯವು ಬೆಳಕಿನಿಂದ ಕಂಗೊಳಿಸುತ್ತಿದೆ.
ಆಲಮಟ್ಟಿ ಜಲಾಶಯವು ಬೆಳಕಿನಿಂದ ಕಂಗೊಳಿಸುತ್ತಿದೆ.

ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕಾಗಿದ್ದರೂ ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಏನೂ ಕಂಡಿಲ್ಲ. ಆದರೂ ಜುಲೈ- ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆ ಕಾರಣಕ್ಕೆ ಕರ್ನಾಟಕದ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಈಗಾಗಲೇ ಕೆಆರ್‌ಎಸ್‌ ಹಾಗೂ ಕಬಿನಿಗೆ ಸಿಎಂ ಸಿದ್ದರಾಮಯ್ಯ ಅವರು ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದು ಈಗ ವಿಜಯಪುರ ಜಿಲ್ಲೆಯ ಆಲಮಟ್ಟಿ ಸರದಿ. ಕಳೆದ ತಿಂಗಳೇ ತುಂಬಿರುವ ಆಲಮಟ್ಟಿ ಜಲಾಶಯಕ್ಕೂ ಒಳ ಹರಿವು ಕಡಿಮೆಯಾಗಿದ್ದರೂ ನೀರಿನ ಮಟ್ಟ ಗರಿಷ್ಠ ಸ್ಥಿತಿಯಲ್ಲಿದೆ. ಅದೇ ರೀತಿ ಕಾವೇರಿ ಕೊಳ್ಳದ ಕೆಆರ್‌ಎಸ್‌, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳು, ಮಲೆನಾಡಿನ ಲಿಂಗನಮಕ್ಕಿ. ಭದ್ರಾ ಜಲಾಶಯಗಳಿಗೆ ಒಳ ಹರಿವು ಪ್ರಮಾಣ ಚೆನ್ನಾಗಿದ್ದರೂ ಭಾರೀ ಏರಿಕೆಯಾಗಿಲ್ಲ.

ಕಬಿನಿ ಜಲಾಶಯ

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲಿ ಒಳ ಹರಿವು ಕಡಿಮೆಯಾಗಿದೆ. ಜಲಾಶಯಕ್ಕೆ ಬುಧವಾರ ಬೆಳಿಗ್ಗೆ 2,676 ಕ್ಯೂಸೆಕ್‌ ನೀರು ಮಾತ್ರ ಹರಿದು ಬರುತ್ತಿದೆ. ಜಲಾಶಯದಿಂದ ನಾಲೆಗಳಿಗೂ ಸೇರಿದಂತೆ 2850 ಕ್ಯೂಸೆಕ್‌ ನೀರನ್ನು ಹರಿ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟವು2282.28 ಅಡಿಯಷ್ಟಿದ್ದು, 18.41 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ 2284 ಅಡಿ. ಜಲಾಶಯದಲ್ಲಿ 19.52 ಟಿಎಂಸಿ ನೀರು ಸಂಗ್ರಹಿಸಬಹುದು.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಬಿನಿ ಜಲಾಶಯ ಈ ಬಾರಿ ಬೇಗನೇ ತುಂಬಿದೆ. ನಿರಂತರವಾಗಿ ಒಂದು ತಿಂಗಳು ತುಂಬಿ ಹೆಚ್ಚಿನ ನೀರು ಹೊರ ಬಿಡಲಾಗಿದೆ. ಈಗ ಕೇರಳದಲ್ಲಿ ಮಳೆ ಕಡಿಮೆಯಾಗಿದ್ದರಿಂದ ಒಳ ಹರಿವು ತಗ್ಗಿದೆ. ಆದರೆ ಜಲಾಶಯ ಬಹುತೇಕ ತುಂಬಿದ ಸ್ಥಿತಿಯಲ್ಲಿಯೇ ಇದೆ. ಕೇರಳದ ವಯನಾಡು ಭಾಗದಲ್ಲಿ ಮತ್ತೆ ಮಳೆಯಾದರೆ ಜಲಾಶಯದ ಒಳ ಹರಿವು ಹೆಚ್ಚಾಗಬಹುದು ಎಂದು ಅಧಿಕಾಋಇಗಳು ಹೇಳುತ್ತಾರೆ.

ಕೆಆರ್‌ಎಸ್‌ ಜಲಾಶಯ

ಕೊಡಗಿನಲ್ಲಿಯೂ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಮಂಡ್ಯದ ಕೆಆರ್‌ಎಸ್‌ ಜಲಾಶಯಕ್ಕೂ ಒಳ ಹರಿವು ಒಂದು ವಾರದಿಂದ ಕಡಿಮೆಯಾಗಿದೆ. ಬುಧವಾರದಂದು ಜಲಾಶಯಕ್ಕೆ 8747 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣವು 7292 ಕ್ಯೂಸೆಕ್‌ ಇದೆ. ಜಲಾಶಯದ ನೀರಿನ ಮಟ್ಟವು 123.64 ಅಡಿ ಇದೆ. ಜಲಾಶಯದ ಗರಿಷ್ಠ ಮಟ್ಟವು 124.80 ಅಡಿ. ಜಲಾಶಯದಲ್ಲಿ 47.844 ಟಿಎಂಸಿ ನೀರು ಸಂಗ್ರಹವಿದೆ.

ಹೇಮಾವತಿ ಜಲಾಶಯ

ಚಿಕ್ಕಮಗಳೂರು ಹಾಗೂ ಹಾಸನ ಭಾಗದಲ್ಲಿ ಮಳೆ ತಗ್ಗಿದ್ದರಿಂದ ಗೊರೂರು ಹೇಮಾವತಿ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದೆ. ಬುಧವಾರ ಜಲಾಶಯಕ್ಕೆ 6483 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ನಾಲೆಗಳೂ ಸೇರಿ 5655 ಕ್ಯೂಸೆಕ್‌ ನೀರು ಹೊರ ಹರಿಸಲಾಗುತ್ತಿದೆ. ಜಲಾಶಯದ ನೀರಿನ ಮಟ್ಟವು 2920.90 ಅಡಿ ಇದ್ದು, 36.040 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ2922 ಅಡಿ.

ಆಲಮಟ್ಟಿ ಜಲಾಶಯ

ಈಗಾಗಲೇ ತುಂಬಿರುವ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಲ್ಲಿ ಬಾಗಿನ ಅರ್ಪಿಸುವ ಸಡಗರ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಮಧ್ಯಾಹ್ನ ಜಲಾಶಯಕ್ಕೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸುವರು. ಕಳೆದ ಬಾರಿ ತುಂಬದ ಜಲಾಶಯ ಈ ಬಾರಿ ಬೇಗನೇ ಭರ್ತಿಯಾಗಿದೆ. ಇದರಿಂದ ಪೂಜೆ ಸಲ್ಲಿಕೆ ನಿಗದಿಯಾಗಿದೆ. ಆಲಮಟ್ಟಿ ಜಲಾಶಯ ಈ ಬಾರಿ ಜುಲೈನಲ್ಲೇ ಭರ್ತಿಯಾಗಿ ಭಾರೀ ಪ್ರಮಾಣದಲ್ಲಿ ನೀರು ಕೃಷ್ಣಾ ನದಿ ಮೂಲಕ ಹರಿದು ಹೋಗಿದೆ.

ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್‌ ಆಗಿದ್ದು. ಅಷ್ಟೇ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಸದ್ಯ ಜಲಾಶಯದಲ್ಲಿ123.081 ಟಿಎಂಸಿ ನೀರು ಇದೆ.

ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಲಭ್ಯ ಇರುವ ನೀರಿನ ಪ್ರಮಾಣ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ