logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ಕೆಆರ್‌ಎಸ್‌ನಿಂದ ಹೊರಹರಿವು ಇಳಿಕೆ, ಕಬಿನಿಯಿಂದ ಮತ್ತೆ ಹೆಚ್ಚಿದ ನೀರು, ರಂಗನತಿಟ್ಟು ಪಕ್ಷಿಧಾಮ ಪುನಾರಂಭ

Karnataka Reservoirs: ಕೆಆರ್‌ಎಸ್‌ನಿಂದ ಹೊರಹರಿವು ಇಳಿಕೆ, ಕಬಿನಿಯಿಂದ ಮತ್ತೆ ಹೆಚ್ಚಿದ ನೀರು, ರಂಗನತಿಟ್ಟು ಪಕ್ಷಿಧಾಮ ಪುನಾರಂಭ

Umesha Bhatta P H HT Kannada

Jul 23, 2024 10:13 PM IST

google News

ಮಂಡ್ಯ ಜಿಲ್ಲೆ ಕೃಷ್ಣರಾಜಸಾಗರದ ನೋಟ

    • ಕಾವೇರಿ ಕೊಳ್ಳದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಜಲಾಶಯಕ್ಕೆ ಬರುವ ಒಳ ಹರಿವಿನ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿದೆ. ಆದರೆ ಕಬಿನಿ ಜಲಾಶಯದಲ್ಲಿ ಹೊರ ಹರಿವು ಹೆಚ್ಚಿಸಿದ್ದರೆ, ಕೆಆರ್‌ಎಸ್‌ನಲ್ಲಿ ತಗ್ಗಿಸಲಾಗಿದೆ.
ಮಂಡ್ಯ ಜಿಲ್ಲೆ ಕೃಷ್ಣರಾಜಸಾಗರದ ನೋಟ
ಮಂಡ್ಯ ಜಿಲ್ಲೆ ಕೃಷ್ಣರಾಜಸಾಗರದ ನೋಟ

ಮೈಸೂರು: ಕೊಡಗಿನಲ್ಲಿ ಮಳೆ( Kodagu Rains) ಪ್ರಮಾಣ ತಗ್ಗಿದ್ದರಿಂದ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರಕ್ಕೆ( KRS Dam) ಬರುತ್ತಿದ್ದ ಒಳಹರಿವಿನ ಪ್ರಮಾಣ ಕಡಿಮೆಯಾಗಿದ್ದು, ಕಾವೇರಿ ನದಿ( Cauvery River) ಮೂಲಕ ಬಿಡುತ್ತಿದ್ದ ಹೊರ ಹರಿವಿನ ಪ್ರಮಾಣವನ್ನು ತಗ್ಗಿಸಲಾಗಿದೆ. ಕಾವೇರಿ ನದಿಯಲ್ಲಿ ಭಾರೀ ನೀರು ಹೊರ ಹೋಗಿದ್ದರಿಂದ ಕಾವೇರಿ ತೀರದ ಪ್ರಮುಖ ಪಕ್ಷಿಧಾಮ ರಂಗನತಿಟ್ಟು( Ranganathittu Bird Sanctuary) ಬಂದ್‌ ಮಾಡಲಾಗಿತ್ತು. ಈಗ ಪುನಾರಂಭ ಮಾಡಲಾಗಿದ್ದು, ದೋಣಿ ವಿಹಾರ ಇರೋಲ್ಲ. ಆದರೆ ಕೇರಳದಲ್ಲಿನ( Kerala Rains) ಉತ್ತಮ ಮಳೆಯಿಂದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ( Kabini Dam) ಒಳ ಹರಿವು ಚೆನ್ನಾಗಿದ್ದು, ಹೊರ ಹರಿವನ್ನು ಮತ್ತೆ ಏರಿಸಲಾಗಿದೆ. ಇದರಿಂದ ನಂಜನಗೂಡು ಭಾಗದಲ್ಲಿ ಪ್ರವಾಹ ಆಗುವ ಆತಂಕ ಎದುರಾಗಿದೆ.

ಕೊಡಗಿನಲ್ಲಿ ಎಡಬಿಡದೇ ಸುರಿದ ಮಳೆಯಿಂದ ಈಗಾಗಲೇ ಕೃಷ್ಣರಾಜ ಸಾಗರ ಜಲಾಶಯ ಬಹುತೇಕ ತುಂಬಿದೆ. ಮಂಗಳವಾರ ರಾತ್ರಿ ಹೊತ್ತಿಗೂ ಜಲಾಶಯದ ನೀರಿನ ಮಟ್ಟವು 123.25 ಅಡಿಯಷ್ಟಿದೆ. ಗರಿಷ್ಠ ಮಟ್ಟವು 124.80 ಅಡಿ. ಜಲಾಶಯಕ್ಕೆ ಸದ್ಯ 33241 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣವನ್ನು 11852 ಕ್ಯೂಸೆಕ್‌ಗೆ ತಗ್ಗಿಸಲಾಗಿದೆ. ಜಲಾಶಯದಲ್ಲಿ ಒಟ್ಟು 47.311 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದಿಂದ ಮೂರು ದಿನದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿತ್ತು. ಈಗ ತಗ್ಗಿಸಲಾಗಿದೆ. ಒಳ ಹರಿವು ಹೆಚ್ಚಾದರೆ ಹೊರ ಹರಿವನ್ನು ನಿರ್ಧರಿಸಲಾಗುತ್ತದೆ ಎನ್ನುವುದು ಅಧಿಕಾರಿಗಳ ಹೇಳಿಕೆ.

ಕಾವೇರಿ ನದಿ ತೀರದ ರಂಗನತಿಟ್ಟು ಪಕ್ಷಿಧಾಮಕ್ಕೆ ಹೆಚ್ಚಿನ ನೀರು ಬಂದಿದ್ದರಿಂದ ಪಕ್ಷಿಧಾಮವನ್ನು ಬಂದ್‌ ಮಾಡಲಾಗಿತ್ತು. ದೋಣಿ ವಿಹಾರ ಕೂಡ ಮೊದಲೇ ನಿಲ್ಲಿಸಲಾಗಿತ್ತು. ಈಗ ನೀರು ಕಡಿಮೆ ಮಾಡಿರುವುದರಿಂದ ರಂಗನತಿಟ್ಟು ಪಕ್ಷಿಧಾಮ ಪುನಾರಂಭಗೊಂಡಿದೆ. ಆದರೆ ಪರಿಸ್ಥಿತಿ ನೋಡಿಕೊಂಡು ದೋಣಿ ವಿಹಾರ ಆರಂಭಿಸುವ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್‌ ಶರಣಬಸಪ್ಪ ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೂ ಒಳ ಹರಿವು ಚೆನ್ನಾಗಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಕೊಂಚ ಕಡಿಮೆಯೇ ಆಗಿದೆ. ಮಂಗಳವಾರ ರಾತ್ರಿ ಜಲಾಶಯದಲ್ಲಿ 2282.82 ಅಡಿ ನೀರು ಸಂಗ್ರಹವಾಗಿದೆ.ಜಲಾಶಯದ ಗರಿಷ್ಠ ಮಟ್ಟವು 2284 ಅಡಿ. ಈಗ ಜಲಾಶಯಕ್ಕೆ 17,877 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಹೊರ ಹರಿವಿನ ಪ್ರಮಾಣವು 25,000 ಕ್ಯೂಸೆಕ್‌ ಇದೆ. ಎರಡು ದಿನದಿಂದ ಹೊರ ಹರಿವು ತಗ್ಗಿಸಲಾಗಿತ್ತು. ಈಗ ಏರಿಸಲಾಗಿದೆ.

ಜಲಾಶಯದಲ್ಲಿ ಈಗಾಗಲೇ 18.75 ಟಿಎಂಸಿ ನೀರು ಸಂಗ್ರಹವಾಗಿರುವುದರಿಂದ ಹೊರ ಹರಿವು ಏರಿಸಲಾಗಿದೆ.

ಕಬಿನಿ ಜಲಾಶಯ ಈ ಬಾರಿ ಬೇಗನೇ ತುಂಬಿದೆ. ಅಲ್ಲದೇ ಸಾಕಷ್ಟು ನೀರು ಕಪಿಲಾ ನದಿ ಮೂಲಕ ಹೊರ ಹೋಗಿದೆ. ಜಲಾಶಯ ತುಂಬಿರುವುದರಿಂದ ನೀರು ಹೊರ ಹರಿಸಲಾಗುತ್ತಿದೆ. ಕೇರಳದಲ್ಲಿ ಮಳೆ ಇರುವುದರಿಂದ ಇನ್ನೂ ಹೆಚ್ಚಿನ ನೀರು ಹರಿಯುವ ಲೆಕ್ಕಾಚಾರವಿದೆ.ನಾಲೆಗಳಿಗೂ ಬುಧವಾರದಿಂದಲೇ ನೀರು ಹರಿಸಲಾಗುತ್ತಿದೆ.

ಕೊಡಗಿನ ಹಾರಂಗಿ ಜಲಾಶಯಕ್ಕೂ ಮಂಗಳವಾರ ರಾತ್ರಿ 16,340 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಹೊರ ಹರಿವಿನ ಪ್ರಮಾಣವನ್ನು 10,700 ಕ್ಯೂಸೆಕ್‌ಗೆ ಏರಿಸಲಾಗಿದೆ. ಜಲಾಶಯದ ನೀರಿನ ಮಟ್ಟವು 2856.64 ಅಡಿ ಇದ್ದು, ತುಂಬಲು ಇನ್ನೂ ಮೂರು ಅಡಿ ಬೇಕು. ಜಲಾಶಯದಲ್ಲಿ 7.70 ಟಿಎಂಸಿ ನೀರು ಸಂಗ್ರಹವಾಗಿದೆ.

ಹಾಸನದ ಹೇಮಾವತಿ ಜಲಾಶಯಕ್ಕೆ 24,200 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಹೊರ ಹರಿವನ್ನು 24,095 ಕ್ಯೂಸಕ್‌ ಗೆ ಏರಿಕೆ ಮಾಡಲಾಗಿದೆ. ತುಮಕೂರು ಭಾಗದ ಹೇಮಾವತಿ ನಾಲೆಗಳಿಗೆ 3295 ಕ್ಯೂಸೆಕ್‌ ನೀರನ್ನು ಹರಿಸಲಾಗುತ್ತಿದೆ. ಜಲಾಶಯದ ನೀರಿನ ಮಟ್ಟವು ಸದ್ಯ 2921.02 ಅಡಿ ಇದ್ದು. ಒಂದು ಅಡಿ ಮಾತ್ರ ತುಂಬಲು ಬಾಕಿಯಿದೆ. ಬಹುತೇಕ ಜಲಾಶ ತುಂಬಿರುವುದರಿಂದ ಹೊರ ಹರಿವು ಏರಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ