Karnataka Dams: ಆಲಮಟ್ಟಿ, ಕಬಿನಿ, ತುಂಗಾ ಜಲಾಶಯದ ಒಳಹರಿವು ಇಳಿಕೆ: ಭದ್ರಾ, ಕೆಆರ್‌ಎಸ್, ತುಂಗಭದ್ರಾ ಡ್ಯಾಂ ತುಂಬಲು ಇನ್ನೂ ಮಳೆ ಬೇಕು
Jul 29, 2023 06:00 AM IST
ಮಲೆನಾಡ ಮಳೆ ಕಾರಣಕ್ಕೆ ತುಂಬಿರುವ ತುಂಗಾ ಜಲಾಶಯದಿಂದ ಶುಕ್ರವಾರ ಸಂಜೆಯೂ ಭಾರೀ ಪ್ರಮಾಣದ ನೀರು ಹೊರಬಿಡಲಾಯಿತು.
- ಕರ್ನಾಟಕದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಜಲಾಶಯಗಳಿಗೆ ಬರುತ್ತಿರುವ ಒಳಹರಿವು ಕಡಿಮೆಯಾಗಿ ಹೊರ ಹರಿವು ತಗ್ಗಿದೆ. ಆಲಮಟ್ಟಿ ತುಂಬಲು ಎರಡು ಮೀಟರ್ ಮಾತ್ರ ಬಾಕಿ ಉಳಿದಿದೆ. ಕರ್ನಾಟಕದ ಜಲಾಶಯಗಳ ನೀರಿನ ಮಟ್ಟದ ವಿವರ ಹೀಗಿದೆ.
ಬೆಂಗಳೂರು: ಕರ್ನಾಟಕ ಮಾತ್ರವಲ್ಲದೇ ಕೇರಳದಲ್ಲೂ ಮಳೆ ಕಡಿಮೆಯಾಗಿದ್ದರಿಂದ ಜಲಾಶಯದ ಒಳಹರಿವಿನ ಪ್ರಮಾಣವೂ ಗಣನೀಯವಾಗಿ ತಗ್ಗಿದೆ. ಆದರೆ ಹೊರಹರಿವಿನ ಪ್ರಮಾಣವನ್ನೂ ಇಳಿಸಲಾಯಿತು. ಆಲಮಟ್ಟಿ ಹಾಗೂ ತುಂಗಭದ್ರಾ ಜಲಾಶಯಗಳಿಗೆ ಒಳಹರಿವು ಕಡಿಮೆಯಾದರೂ ಜಲಾಶಯದ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಕೃಷ್ಣರಾಜಸಾಗರಕ್ಕೂ ಒಳಹರಿವು ಕಡಿಮೆಯಾಗಿದ್ದು, ಜಲಾಶಯದ ಪ್ರಮಾಣ 111 ಅಡಿ ದಾಟಿದೆ.
ಆಲಮಟ್ಟಿ ತುಂಬಲು ಎರಡೇ ಮೀಟರ್
ಮಹಾರಾಷ್ಟ್ರದ ನಿರಂತರ ಮಳೆಯಿಂದಾಗಿ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯ ತುಂಬಲು ಇನ್ನು 2 ಮೀಟರ್ ಮಾತ್ರ ಬಾಕಿಯಿದೆ. ಶುಕ್ರವಾರ ಸಂಜೆ ಜಲಾಶಯದ ನೀರಿನ ಪ್ರಮಾಣ 517.26 ಮೀಟರ್ ಇತ್ತು. ಜಲಾಶಯಕ್ಕೆ 1,38,722 ಕ್ಯೂಸೆಕ್ ನೀರು ಒಳ ಬರುತ್ತಿದ್ದರೆ ಹೊರ ಹರಿವಿನ ಪ್ರಮಾಣ 1,25,000ಕ್ಕೆ ಇಳಿಸಲಾಯಿತು. ಜಲಾಶಯದಲ್ಲಿ 87.737 ಟಿಎಂಸಿ ನೀರು ಸಂಗ್ರಹವಾಗಿದೆ.
ಜಲಾಶಯಕ್ಕೆ ಒಳ ಹರಿವು ಕೊಂಚ ಕಡಿಮೆಯಾಗಿದೆ. ಆದರೂ ನೀರು ಚೆನ್ನಾಗಿ ಬರುತ್ತಿರುವುದರಿಂದ ಬಹುತೇಕ ತುಂಬಿದೆ. ಇನ್ನು ಎರಡು ಅಡಿ ಮಾತ್ರ ಬಾಕಿ ಇದೆ. ಜಲಾಶಯ ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ನೀರುಹೊರ ಹರಿಸಲಾಗುತ್ತಿದೆ. ಒಳ ಹರಿವು ನೋಡಿಕೊಂಡು ಹೊರ ಹರಿವಿನ ಪ್ರಮಾಣ ನಿರ್ಧರಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕೆಆರ್ ಎಸ್ ತುಂಬಲು ಬೇಕು ಇನ್ನು 12 ಅಡಿ
ಈ ಬಾರಿ ತುಂಬುವುದೋ ಇಲ್ಲವೋ ಎನ್ನುವ ಆತಂಕದ ನಡುವೆಯೇ ಕೃಷ್ಣರಾಜಸಾಗರಕ್ಕೆ ಒಂದೇ ವಾರದಲ್ಲಿ ಭಾರೀ ನೀರು ಹರಿದು ಬಂದಿದೆ. ಕೊಡಗಿನಲ್ಲಿ ಸುರಿದ ಮಳೆಯಿಂದಾಗಿ ಕೆಆರ್‌ಎಸ್ ಜಲಾಶಯಕ್ಕೆ ನೀರು ಹರಿದು ಬಂದು 111.54 ಅಡಿ ತಲುಪಿದೆ. 33.299 ಟಿಎಂಸಿ ನೀರು ಸಂಗ್ರಹವಾಗಿದೆ. ಗರಿಷ್ಠಪ್ರಮಾಣ 49.452 ಟಿಎಂಸಿ. ಶುಕ್ರವಾರ ಸಂಜೆ ಹೊತ್ತಿಗೆ ಒಳ ಹರಿವಿನ ಪ್ರಮಾಣ 26135 ಕ್ಯೂಸೆಕ್ ಇತ್ತು. ಕಳೆದ ವರ್ಷ ಇದೇ ದಿನ ಸಂಪೂರ್ಣ ತುಂಬಿ 10540 ನೀರು ಬರುತ್ತಿತ್ತು. ಈ ಬಾರಿ ಹೊರಹರಿವು ಇನ್ನೂ ನಾಲೆ, ಹೊಳೆ ಸೇರಿ 3137 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ದಿನ 12567 ಕ್ಯೂಸೆಕ್ ನಷ್ಟಿತ್ತು.
ಕೊಡಗಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಒಳಹರಿವು ಕಡಿಮೆಯಾಗಿದೆ. ಈಗ ಇರುವ ಹರಿವೇ ಇನ್ನೂ ಎರಡು ದಿನ ಬಂದರೂ ಜಲಾಶಯದ ಮಟ್ಟ 114 ಅಡಿ ತಲುಪಿದೆ. ಮತ್ತೊಮ್ಮೆ ಜೋರು ಮಳೆ ಬಂದರೆ ಜಲಾಶಯ ತುಂಬುವ ಹಂತಕ್ಕೆ ಬರಬಹುದು. ಮಳೆ ಲೆಕ್ಕಾಚಾರದಂತೆ ಆಗಸ್ಟ್ ಎರಡನೇ ವಾರದ ಹೊತ್ತಿಗೆ ತುಂಬಬಹುದು. ಹಿಂದೆಲ್ಲಾ ಸ್ವಾತಂತ್ರ್ಯೋತ್ಸವದಂದು ಕೆಆರ್‌ಎಸ್ ಜಲಾಶಯಕ್ಕೆ ಸಿಎಂ ಪೂಜೆ ಸಲ್ಲಿಸಿದ ಉದಾಹರಣೆಯಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ಕಬಿನಿಗೆ ತಗ್ಗಿದ ಒಳ ಹೊರ ಹರಿವು
ನಾಲ್ಕೈದು ದಿನದಿಂದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ನೀರಿನ ಒಳ ಹರಿವು ತಗ್ಗಿದೆ. ಇದರಿಂದ ಹೊರ ಹರಿವಿನ ಪ್ರಮಾಣವನ್ನೂ ಕಡಿಮೆ ಮಾಡಲಾಗಿದೆ. ಶುಕ್ರವಾರ ಸಂಜೆಗೆ ಕಬಿನಿ ಜಲಾಶಯದ ಮಟ್ಟ 2282.53 ಅಡಿಯಿತ್ತು. 18.57 ಟಿಎಂಸಿ ನೀರು ಈವರೆಗೂ ಸಂಗ್ರಹವಾಗಿದೆ. ಒಳ ಹರಿವು 9,579 ಕ್ಯೂಸೆಕ್ ಇದ್ದರೆ, ಹೊರ ಹರಿವು 6,000 ಕ್ಯೂಸೆಕ್ ನಷ್ಟಿತ್ತು.
ವಿ.ವಿ.ಸಾಗರ: ಒಳಹರಿವು ಸ್ಥಗಿತ
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯಕ್ಕೆ ವೇದಾವತಿ ನದಿಯ ಮೂಲಕ ಹರಿದುಬರುತ್ತಿದ್ದ ನೀರಿನ ಒಳಹರಿವು ಗುರುವಾರ ಸ್ಥಗಿತಗೊಂಡಿದೆ.
ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಮಲೆನಾಡಿನಲ್ಲಿ ಸುರಿಯುತ್ತಿದ್ದ ಮಳೆ ಎರಡು ದಿನಗಳಿಂದ ಕಡಿಮೆಯಾಗಿದೆ. ಜುಲೈ 25ರಂದು ಮೊದಲ ಬಾರಿಗೆ 999 ಕ್ಯುಸೆಕ್ ನೀರು ಹರಿದು ಬಂದಿತ್ತು. ಮೂರು ದಿನದ ಹಿಂದೆ ಒಳಹರಿವಿನ ಪ್ರಮಾಣ 638 ಕ್ಯುಸೆಕ್ ಇಳಿದಿತ್ತು. ಶುಕ್ರವಾರ ನೀರಿನ ಹರಿವು ಸಂಪೂರ್ಣ ಸ್ಥಗಿತಗೊಂಡಿದೆ. ಎರಡು ದಿನಗಳಿಂದ 1,637 ಕ್ಯುಸೆಕ್ ನೀರು ಮಾತ್ರ ಹರಿದು ಬಂದಿದೆ.
ತುಂಗಭದ್ರಾಕ್ಕೂ ಕಡಿಮೆಯಾದ ನೀರು
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯಕ್ಕೂ ಸತತ ನಾಲ್ಕೈದು ದಿನದ ನಂತರ ಒಳಹರಿವಿನ ಪ್ರಮಾಣ ತಗ್ಗಿದೆ. ಶುಕ್ರವಾರ ಸಂಜೆಗೆ 88270 ಕ್ಯೂಸೆಕ್ ಇತ್ತು. ಸದ್ಯ ಜಲಾಶಯದ ಮಟ್ಟ 1620.26 ಅಡಿಯಷ್ಟಿತ್ತು. ಒಟ್ಟು 62.060 ಟಿಎಂಸಿ ನೀರು ಜಲಾಶಯದಲ್ಲಿ ಈವರೆಗೂ ಸಂಗ್ರಹವಾದಂತಾಗಿದೆ. ಹೊರ ಹರಿವು 1078 ಕ್ಯೂಸೆಕ್ ಅನ್ನು ನಾಲೆಗಳಿಗೆ ಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 1633 ಅಡಿ.
ಲಿಂಗನಮಕ್ಕಿಗೂ ಹೆಚ್ಚಿನ ನೀರು
ಮಲೆನಾಡು ಭಾಗದಲ್ಲಿ ಮಳೆಯಾದ ಪರಿಣಾಮ ಸಾಗರ ತಾಲ್ಲೂಕಿನ ಲಿಂಗನಮಕ್ಕಿಗೆ ಶುಕ್ರವಾರವೂ 25631 ಕ್ಯೂಸೆಕ್ ನೀರು ಹರಿದು ಬಂದಿದೆ. ಹೊರ ಹರಿವು 891 ಕ್ಯೂಸೆಕ್ ಮಾತ್ರ ಇತ್ತು. ಜಲಾಶಯದ ಮಟ್ಟ 1785 ಅಡಿಯಷ್ಟಿತ್ತು. ಜಲಾಶಯ ತುಂಬಲು 1819 ಅಡಿ ನೀರು ಬೇಕು,
ತುಂಗಾ ಜಲಾಶಯಕ್ಕೂ ಒಳಹರಿವು ಚೆನ್ನಾಗಿಯೇ ಇದೆ. 32211 ಕ್ಯೂಸೆಕ್ ನೀರು ಹರಿದು ಬಂದರೆ ಹೊರ ಹರಿವು 30117 ಕ್ಯೂಸೆಕ್‌ನಷ್ಟಿತ್ತು. ಜಲಾಶಯದ ಮಟ್ಟ 588. 17 ಅಡಿಯಷ್ಟಿತ್ತು.
ಭದ್ರಾ ಜಲಾಶಯಕ್ಕೆ ಒಳಹರಿವು 16041 ಕ್ಯೂಸೆಕ್ ಇದ್ದರೆ ಹೊರ ಹರಿವು ಬರೀ 185 ಕ್ಯೂಸೆಕ್ ಇತ್ತು. ಜಲಾಶಯದ ಮಟ್ಟ 159.6 ಅಡಿಯಷ್ಟಿತ್ತು.