logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ಭದ್ರಾ, ಕೆಆರ್‌ಎಸ್, ಆಲಮಟ್ಟಿ, ಕಬಿನಿ ಜಲಾಶಯದಿಂದ ಭಾರೀ ನೀರು ಬಿಡುಗಡೆ, ಎಷ್ಟಿದೆ ನೀರಿನ ಮಟ್ಟ

Karnataka Reservoirs: ಭದ್ರಾ, ಕೆಆರ್‌ಎಸ್, ಆಲಮಟ್ಟಿ, ಕಬಿನಿ ಜಲಾಶಯದಿಂದ ಭಾರೀ ನೀರು ಬಿಡುಗಡೆ, ಎಷ್ಟಿದೆ ನೀರಿನ ಮಟ್ಟ

Umesha Bhatta P H HT Kannada

Jul 30, 2024 02:01 PM IST

google News

ಭದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿ ಬಿಡಲಾಗುತ್ತಿದೆ.

  •  Karnataka Dams ಕರ್ನಾಟಕದಲ್ಲಿನ ಉತ್ತಮ ಮಳೆಯಿಂದ ಬಹುತೇಕ ಜಲಾಶಯಗಳಲ್ಲಿ ನೀರು ಸಂಗ್ರಹವಾಗಿದೆ.ಭದ್ರಾ ಜಲಾಶಯ( Bhadra Reservoir) ದಿಂದಲೂ ನೀರನ್ನು ಭಾರೀ ಪ್ರಮಾಣದಲ್ಲಿ ಹರಿ ಬಿಡಲಾಗುತ್ತಿದೆ.

ಭದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿ ಬಿಡಲಾಗುತ್ತಿದೆ.
ಭದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿ ಬಿಡಲಾಗುತ್ತಿದೆ.

ಬೆಂಗಳೂರು: ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಲಾಶಯಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು. ಹೊರ ಹರಿವಿನ ಪ್ರಮಾಣವೂ ಹೆಚ್ಚಾಗಿದೆ. ಕಳೆದ ಬಾರಿ ತುಂಬದೇ ಸೊರಗಿದ್ದ ಮಲೆನಾಡಿನ ಭದ್ರಾ ಜಲಾಶಯವೂ ಬಹುತೇಕ ತುಂಬಿದೆ. ಭದ್ರಾ ಜಲಾಶಯದಿಂದ ಹೆಚ್ಚಿನ ನೀರನ್ನು ಭದ್ರಾ ನದಿ ಮೂಲಕ ಹೊರ ಬಿಡಲಾಗುತ್ತಿದೆ. ಅದೇ ರೀತಿ ತುಂಬಿರುವ ಕೃಷ್ಣರಾಜಸಾಗರ, ಕಬಿನಿ ಜಲಾಶಯಕ್ಕೆ ಬಾಗಿನ ಸಲ್ಲಿಸಿದ ನಂತರ ಹೊರ ಹರಿವಿನ ಪ್ರಮಾಣ ಹೆಚ್ಚಿಸಲಾಗಿದೆ. ಇದರಿಂದ ಕಾವೇರಿ, ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಉತ್ತರ ಕರ್ನಾಟಕದ ದೊಡ್ಡ ಜಲಾಶಯ ಆಲಮಟ್ಟಿಗೂ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಹೊರ ಹರಿವಿನ ಪ್ರಮಾಣವನ್ನೂ ಹೆಚ್ಚಿಸಲಾಗಿದೆ.

ಕೃಷ್ಣರಾಜಸಾಗರ ಜಲಾಶಯ

ಮಂಗಳವಾರದಂದು ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯಕ್ಕೆ ಭಾರೀ ನೀರು ಹರಿದು ಬರುತ್ತಿದೆ. ಕೊಡಗಿನಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಜಲಾಶಯದ ಒಳ ಹರಿವಿನಲ್ಲಿ ಏರಿಕೆ ಕಂಡಿದೆ. ಜಲಾಶಯಕ್ಕೆ 38977 ಕ್ಯೂಸೆಕ್‌ ನೀರು ಹರಿದು ಬರುತಿದ್ದು. ಹೊರ ಹರಿವಿನ ಪ್ರಮಾಣವನ್ನು 55659 ಕ್ಯೂಸೆಕ್‌ ಗೆ ಏರಿಸಲಾಗಿದೆ. ಇದನ್ನು ಒಂದು ಲಕ್ಷವರೆಗೂ ಹೆಚ್ಚಿಸುವ ಸಾಧ್ಯತೆಯಿದೆ. ಇದರಿಂದ ಜಲಾಶಯದ ನೀರಿನ ಮಟ್ಟವೂ ಒಂದು ಅಡಿಯಷ್ಟು ಕಡಿಮೆ ಯಾಗಿದೆ. ಜಲಾಶಯದಲ್ಲಿ 123.75 ಅಡಿ ನೀರಿದೆ. ಗರಿಷ್ಠ ಮಟ್ಟವು 124.80 ಅಡಿ. ಜಲಾಶಯದಲ್ಲಿ 47.994 ಟಿಎಂಸಿ ನೀರು ಸದ್ಯ ಸಂಗ್ರಹವಿದೆ. ಕೆಆರ್‌ಎಸ್‌ ಜಲಾಶಯದಲ್ಲಿ 49.452 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ.

ಕಬಿನಿ ಜಲಾಶಯ

ಕೇರಳದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೂ ಒಳ ಹರಿವು ಏರಿಕೆಯಾಗಿದೆ. ಕಬಿನಿ ಜಲಾಶಯಕ್ಕೆ ಮಂಗಳವಾರದಂದು 30805 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದ ಹೊರ ಹರಿವಿನ ಪ್ರಮಾಣವು 24667 ಕ್ಯೂಸೆಕ್‌ ನಷ್ಟಿದೆ. ಮಧ್ಯಾಹ್ನದ ಹೊತ್ತಿಗೆ ಇದನ್ನು80 ಸಾವಿರ ಕ್ಯೂಸೆಕ್‌ಗೆ ಏರಿಸಲಾಗಿದೆ. ಜಲಾಶಯದಲ್ಲಿ ಗರಿಷ್ಠ ಮಟ್ಟವಾದ 2284 ಅಡಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ ಸದ್ಯ 19.52 ಟಿಎಂಸಿ ನೀರು ಲಭ್ಯವಿದೆ.

ತುಂಗಭದ್ರಾ ಜಲಾಶಯ

ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯವೂ ಬಹುತೇಕ ತುಂಬುವ ಹಂತದಲ್ಲಿದೆ. ಜಲಾಶಯಕ್ಕೆ ಒಳ ಹರಿವಿನ ಪ್ರಮಾಣವು 131821 ಕ್ಯೂಸೆಕ್‌ ಇದೆ. ಹೊರ ಹರಿವು 93684 ಕ್ಯೂಸೆಕ್‌ ನಷ್ಟಿದೆ. ಜಲಾಶಯದಲ್ಲಿ 1631.72 ಅಡಿ ನೀರು ಸಂಗ್ರಹವಾಗಿದೆ. ಗರಿಷ್ಠ ಮಟ್ಟವು 1633 ಅಡಿ. ಜಲಾಶಯದಲ್ಲಿ ಸದ್ಯ 100.679 ಟಿಎಂಸಿ ನೀರು ಸಂಗ್ರಹವಾಗಿದೆ. ಇಲ್ಲಿ 105.788 ಟಿಎಂಸಿ ನೀರು ಸಂಗ್ರಹಿಸಬಹುದು.ಮಲೆನಾಡು ಭಾಗದಲ್ಲಿ ಕಳೆದ ವಾರ ಸುರಿದ ಭಾರೀ ಮಳೆಯಿಂದ ವಾರದ ಅಂತರದಲ್ಲೇ ತುಂಗಭದ್ರಾ ಜಲಾಶಯವು ತುಂಬಿದ್ದು, ನದಿ ಮೂಲಕ ನೀರನ್ನು ಹರಿ ಬಿಡಲಾಗುತ್ತಿದೆ.

ವೇದಾವತಿ ಜಲಾಶಯ

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನಲ್ಲಿರುವ ವೇದಾವತಿ ನದಿಯ ವಾಣಿ ವಿಲಾಸ ಜಲಾಶಯಕ್ಕೂ ಉತ್ತಮ ಪ್ರಮಾಣದಲ್ಲಿ ನೀರು ಬರುತ್ತಿದೆ. ಜಲಾಶಯಕ್ಕೆ 4,737 ಕ್ಯೂಸೆಕ್‌ಗೆ ಏರಿಕೆ ಕಂಡಿದೆ. ಜಲಾಶಯದಲ್ಲಿ ಸದ್ಯ18.35 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಸಂಗ್ರಹ ಸಾಮರ್ಥ್ಯ 30.42 ಟಿಎಂಸಿ.

ತುಂಬಿದ ತಾರಕ

ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ತಾಲ್ಲೂಕಿನ ತಾರಕ ಜಲಾಶಯವೂ ತುಂಬಿದ್ದು. ನೀರನ್ನು ಹೊರ ಬಿಡುವ ಸೂಚನೆಯಿದೆ. ಪ್ರವಾಹದ ಮುನ್ನೆಚ್ಚರಿಕೆಯನ್ನೂ ನೀಡಲಾಗದೆ. ಜಲಾಶಯಕ್ಕೆ 3ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, 1500 ಕ್ಯೂಸೆಕ್‌ ನೀರು ಹರಿ ಬಿಡಲಾಗುತ್ತದೆ. ತಾರಕದಿಂದ ಹೊರ ಹೋಗುವ ನೀರು ಮಟಕೆರೆ ಬಳಿ ಕಪಿಲಾ ನದಿಯನ್ನು ಸೇರಿಕೊಳ್ಳಲಿದೆ.

ಭದ್ರಾದಿಂದಲೂ ನೀರು

ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಟ್ಟಿ ಅದೇ ಜಿಲ್ಲೆಯ ಲಕ್ಕವಳ್ಳಿಯಲ್ಲಿ ಜಲಾಶಯವಾಗಿ ರೂಪುಗೊಂಡಿರುವ ಭದ್ರಾ ನದಿಯಿಂದಲೂ ಭಾರೀ ನೀರು ಹರಿದು ಬರುತ್ತಿದೆ. ಇದರಿಂದ ಭದ್ರಾ ಜಲಾಶಯದ ಮೂಲಕ ಆರು ಸಾವಿರ ಕ್ಯೂಸೆಕ್‌ ನೀರನ್ನು ಹರಿ ಬಿಡಲಾಗುತ್ತಿದೆ.

ಹಾರಂಗಿ ಜಲಾಶಯ

ಕೊಡಗಿನ ಹಾರಂಗಿ ಜಲಾಶಯಕ್ಕೂ 21,000 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಈಗಾಗಲೇ 21,000 ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿದ್ದು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಈ ನೀರು ಕಾವೇರಿ ನದಿ ಸೇರಿಕೊಂಡು ಕೆಆರ್‌ಎಸ್‌ನಲ್ಲಿ ಸೇರಲಿದೆ. ಸದ್ಯ ಜಲಾಶಯದಲ್ಲಿ 2857.03 ಅಡಿ ನೀರಿದೆ. ಗರಿಷ್ಠ ಮಟ್ಟ 2859 ಅಡಿ. ಸದ್ಯ 7.83 ಟಿಎಂಸಿ ನೀರು ಸಂಗ್ರಹವಾಗಿದೆ. ಇಲ್ಲಿ 8.5 ಟಿಎಂಸಿ ನೀರು ಸಂಗ್ರಹಿಸಬಹುದು.

ಹೇಮಾವತಿ ಜಲಾಶಯ

ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ಉತ್ತಮ ಮಳೆಯಿಂದ ಹಾಸನ ಜಿಲ್ಲೆ ಹೇಮಾವತಿ ಜಲಾಶಯಕ್ಕೂ ಭಾರೀ ನೀರು ಬರುತ್ತಿದೆ. ಇದರಿಂದ ಜಲಾಶಯ ಹೊರ ಹರಿವನ್ನು 49,900 ಕ್ಯೂಸೆಕ್‌ಗೆ ಏರಿಕೆ ಮಾಡಲಾಗಿದೆ.

ಆಲಮಟ್ಟಿ ಜಲಾಶಯ

ವಿಜಯಪುರ ಜಿಲ್ಲೆ ಆಲಮಟ್ಟಿ ಜಲಾಶಯಕ್ಕೂ ಭಾರೀ ನೀರು ಹರಿದು ಬರುತ್ತಿದೆ. ಮಂಗಳವಾರದಂದು 3,02,573 ಲಕ್ಷ ಕ್ಯೂಸೆಕ್‌ ನೀರು ಕೃಷ್ಣಾ ನದಿ ಮೂಲಕ ಹರಿದು ಬರುತ್ತಿದೆ. ಇದರಿಂದ ಹೊರ ಹರಿವಿನ ಪ್ರಮಾಣವನ್ನೂ 3,02,573 ಕ್ಯೂಸೆಕ್‌ಗೆ ಏರಿಸಲಾಗಿದೆ. ಜಲಾಶಯದಲ್ಲಿ 515.50 ಮೀಟರ್‌ ನೀರಿದೆ. ಜಲಾಶಯದ ಗರಿಷ್ಠ ಮಟ್ಟವು 519.60 ಮೀಟರ್‌. ಜಲಾಶಯದಲ್ಲಿ 67.859 ಟಿಎಂಸಿ ನೀರಿದೆ. ಗರಿಷ್ಠ ಸಾಮರ್ಥ್ಯ 123.081 ಟಿಎಂಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ