logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ವಾಣಿವಿಲಾಸ, ಕೆಆರ್‌ಎಸ್‌, ಭದ್ರಾಕ್ಕೆ ಬಂತು ನೀರು, ಭಾರೀ ಮಳೆಗೆ ಜಲಾಶಯಗಳ ಒಳಹರಿವಿನಲ್ಲಿ ಏರಿಕೆ

Karnataka Reservoirs: ವಾಣಿವಿಲಾಸ, ಕೆಆರ್‌ಎಸ್‌, ಭದ್ರಾಕ್ಕೆ ಬಂತು ನೀರು, ಭಾರೀ ಮಳೆಗೆ ಜಲಾಶಯಗಳ ಒಳಹರಿವಿನಲ್ಲಿ ಏರಿಕೆ

Umesha Bhatta P H HT Kannada

May 20, 2024 07:07 PM IST

google News

ಚಿಕ್ಕಮಗಳೂರು ಶಿವಮೊಗ್ಗ ಗಡಿ ಭಾಗದ ಭದ್ರಾ ಜಲಾಶಯದ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ.

    • ಕರ್ನಾಟಕದಲ್ಲಿ ಪೂರ್ವಮುಂಗಾರು ಮಳೆ( pre monsoon)ಯಿಂದಾಗಿ ಜಲಾಶಯಕ್ಕೆ ಬರುತ್ತಿರುವ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಹೇಗಿದೆ ಸ್ಥಿತಿಗತಿ.
ಚಿಕ್ಕಮಗಳೂರು ಶಿವಮೊಗ್ಗ ಗಡಿ ಭಾಗದ ಭದ್ರಾ ಜಲಾಶಯದ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ.
ಚಿಕ್ಕಮಗಳೂರು ಶಿವಮೊಗ್ಗ ಗಡಿ ಭಾಗದ ಭದ್ರಾ ಜಲಾಶಯದ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ.

ಬೆಂಗಳೂರು: ಕರ್ನಾಟಕದಲ್ಲಿ ಪೂರ್ವ ಮುಂಗಾರಿನ ಅಬ್ಬರ ಜೋರಾಗಿದೆ. ಹಳೆ ಮೈಸೂರು, ಬೆಂಗಳೂರು, ಮಲೆನಾಡು. ಉತ್ತರ ಕರ್ನಾಟಕ ಭಾಗದಲ್ಲೂ ಮಳೆಯಾಗುತ್ತಲೇ ಇದೆ. ಇದರ ಪರಿಣಾಮ ಬೇಸಿಗೆಯಲ್ಲಿ ಸೊರಗಿ ಹೋಗಿದ್ದ ಜೀವ ತಾಣಗಳಾದ ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ. ಕರ್ನಾಟಕದಲ್ಲಿ ಅತ್ಯಧಿಕ ನೀರು ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಬಂದರೆ, ಕೊಡಗಿನ ಮಳೆಯಿಂದ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯವೂ ನೀರು ಕಂಡಿದೆ. ಉತ್ತರ ಕರ್ನಾಟಕದ ಜಲಾಶಯಗಳಿಗೆ ಮಾತ್ರ ಇನ್ನಷ್ಟೇ ನೀರು ಹರಿಯಬೇಕಿದೆ. ಆಲಮಟ್ಟಿ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ ಜಲಾಶಯದ ಒಳಹರಿವು ಇನ್ನೂ ಶೂನ್ಯ. ಮಲೆನಾಡು ಭಾಗದ ಭದ್ರಾ ಕೂಡ ಚೇತರಿಕೆ ಕಾಣುತ್ತಿದೆ.

ಕೆಆರ್‌ಎಸ್‌ಗೆ ಹೆಚ್ಚು

ಕರ್ನಾಟಕದಲ್ಲಿಯೇ ಅತಿ ಹೆಚ್ಚು ಒಳ ಹರಿವು ಬರುತ್ತಿರುವುದು ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯಕ್ಕೆ. ಕೊಡಗಿನಲ್ಲಿ ಒಂದು ವಾರದಿಂದ ಮಳೆಯಾಗುತ್ತಿದೆ. ಮೂರ್ನಲ್ಕು ದಿನದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಒಳ ಹರಿವು ನಿಧಾನವಾಗಿ ಹೆಚ್ಚಿದೆ. ಸತತ ನಾಲ್ಕು ದಿನದಿಂದ ಜಲಾಶಯಕ್ಕೆ ಒಂದು ಸಾವಿರಕ್ಕೂ ಅಧಿಕ ಕ್ಯೂಸೆಕ್‌ ನೀರು ಒಳ ಬರುತ್ತಿದೆ. ಸೋಮವಾರ ಕೆಆರ್‌ಎಸ್‌ ಜಲಾಶಯದ ಒಳಹರಿವಿನ ಪ್ರಮಾಣ 1416 ಕ್ಯೂಸೆಕ್‌. ಇದರಿಂದ ಜಲಾಶಯದ ನೀರಿನ ಮಟ್ಟ80.72 ಅಡಿ ತಲುಪಿದೆ.

ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಿದೆ. ಎರಡು ಅಡಿಯಷ್ಟು ನೀರು ಬಂದಿದೆ. ಮುಂಗಾರು ಚುರುಕಾದರೆ ಕಳೆದ ಬಾರಿ ತುಂಬದ ಕೆಆರ್‌ಎಸ್‌ ಈ ಬಾರಿ ತುಂಬಬಹುದು ಎನ್ನುವುದು ಅಧಿಕಾರಿಗಳ ವಿವರಣೆ

ಕಬಿನಿಗೆ ಕಡಿಮೆ

ಕೇರಳದಲ್ಲಿ ಮಳೆಯಾಗುತ್ತಿದ್ದರೂ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿಲ್ಲ. ಈಗ ಕೇರಳದ ವಯನಾಡು ಭಾಗದಲ್ಲಿ ಮಳೆ ಪ್ರಮಾಣ ಇನ್ನಷ್ಟು ಹೆಚ್ಚುವುದರಿಂದ ಈ ವಾರದಲ್ಲಿ ನೀರು ಹರಿದು ಬರುವ ನಿರೀಕ್ಷೆಯಿದೆ. ಕಬಿನಿ ಜಲಾಶಯದ ಒಳ ಹರಿವಿನ ಪ್ರಮಾಣ ನೂರು ಕ್ಯೂಸೆಕ್‌ಗಿಂತಲೂ ಕಡಿಮೆಯಿದೆ. ಸೋಮವಾರ ಜಲಾಶಯಕ್ಕೆ 91 ಕ್ಯೂಸೆಕ್‌ ನೀರು ಮಾತ್ರ ಹರಿದು ಬರುತ್ತಿದೆ.

ಅದೇ ರೀತಿ ಕಾವೇರಿ ಕಣಿವೆಯ ಮತ್ತೊಂದು ಜಲಾಶಯ ಹಾಸನ ಜಿಲ್ಲೆಯ ಹೇಮಾವತಿಗೆ 628 ಕ್ಯೂಸೆಕ್‌ ನೀರು ಹರಿದು ಬಂದರೆ, ಕೊಡಗಿನ ಹಾರಂಗಿ ಜಲಾಶಯದ ಒಳಹರಿವಿನ ಪ್ರಮಾಣ 287 ಕ್ಯೂಸೆಕ್‌ ನಷ್ಟಿದೆ.

ಮಲೆನಾಡಿನಲ್ಲಿ ಎಷ್ಟು

ಮಲೆನಾಡಿನ ಪ್ರಮುಖ ಜಲಾಶಯ ಲಿಂಗನಮಕ್ಕಿ ಜಲಾಶಯದ ಒಳಹರಿವು ಶೂನ್ಯದ ಸ್ಥಿತಿಯಲ್ಲಿಯೇ ಇದೆ. ಮಲೆನಾಡು ಭಾಗದಲ್ಲಿ ಮಳೆಯಾದರೂ ಲಿಂಗನಮಕ್ಕಿ ಜಲಾಶಯದ ನೀರಿನಲ್ಲಿ ಏರಿಕೆ ಕಂಡಿಲ್ಲ. ವರಾಹಿ ಜಲಾಶಯದ ಸ್ಥಿತಿಯೂ ಇದೇ ರೀತಿಯಲ್ಲಿಯೇ ಇದೆ. ಆದರೆ ಸೂಪಾ ಆಣೆಕಟ್ಟೆಗೆ 297 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ.

ಭದ್ರಾ ಜಲಾಶಯಕ್ಕೂ ಉತ್ತಮ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಸೋಮವಾರದಂದು ಜಲಾಶಯಕ್ಕೆ 1347 ಕ್ಯೂಸೆಕ್‌ ನೀರು ಬರುತ್ತಿದೆ.

ವಾಣಿವಿಲಾಸಕ್ಕೆ ಅತ್ಯಧಿಕ

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಭಾರೀ ನೀರೇ ಹರಿದು ಬರುತ್ತಿದೆ. ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವುದು ನೀರಿನ ಪ್ರಮಾಣ ಹೆಚ್ಚಿಸಿದೆ. ಸೋಮವಾರದಂದು ಜಲಾಶಯಕ್ಕೆ 3880 ಕ್ಯೂಸೆಕ್‌ ನೀರಿನ ಒಳ ಹರಿವು ಇದೆ. ಜಲಾಶಯದ ನೀರಿನ ಮಟ್ಟ 646.24 ಮೀಟರ್‌ ನಷ್ಟಿದೆ.

ಕೃಷ್ಣಾ ಕಣಿವೆಯಲ್ಲಿ

ಕೃಷ್ಣಾ ಕಣಿವೆಯ ಪ್ರಮುಖ ಜಲಾಶಯ ವಿಜಯಪುರ- ಬಾಗಲಕೋಟೆ ಜಿಲ್ಲೆಗಳ ಆಲಮಟ್ಟಿಯಲ್ಲಿ ಒಣ ಹರಿವು ಶೂನ್ಯದ ಪ್ರಮಾಣದಲ್ಲಿದೆ. ಮಹಾರಾಷ್ಟ್ರದಲ್ಲಿ ಮಳೆಯಾಗಿದ್ದರೂ ಹೆಚ್ಚಿನ ಪ್ರಮಾಣವಿಲ್ಲದೇ ಒಳ ಹರಿವು ತಗ್ಗಿದೆ. ಆದರೆ ಹೊರ ಹರಿವಿನ ಪ್ರಮಾಣ ಹೆಚ್ಚಿರುವುದರಿಂದ ನೆರೆಯ ನಾರಾಯಣಪುರ ಜಲಾಶಯ ನಾಲೆ ಒಳಹರಿವಿನಲ್ಲಿ ಹೆಚ್ಚು ಕಂಡು ಬಂದಿದೆ. 4421 ಕ್ಯೂಸೆಕ್‌ ನೀರು ಹೊರ ಹೋಗುತ್ತಿದ್ದು.ನಾರಾಯಣಪುರ ಜಲಾಶಯದಲ್ಲಿ ಒಳಹರಿವು 2065 ಕ್ಯೂಸೆಕ್‌ನಷ್ಟಿದೆ. ಬೆಳಗಾವಿ ಜಿಲ್ಲೆಯ ಘಟಪ್ರಭಾ ಹಾಗೂ ಮಲಪ್ರಭಾ ಜಲಾಶಯಕ್ಕೂ ಒಳಹರಿವು ಶೂನ್ಯ. ಅದೇ ರೀತಿ ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದ ಒಳಹರಿವು ಇನ್ನೂ ಶುರುವಾಗಿಲ್ಲ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ