ಬೈಕ್ ಚಕ್ರಕ್ಕೆ ವೇಲ್ ಸಿಲುಕಿ ಕೆಳಗುರುಳಿ ಮೃತಪಟ್ಟ ಮಹಿಳೆ; ಬೈಕ್, ಸ್ಕೂಟರ್‌ನಲ್ಲಿ ಹೋಗ್ತೀರಾ ಈ 6 ಅಂಶಗಳನ್ನು ಮರೆತರೆ ಪ್ರಾಣಕ್ಕೆ ತೊಂದರೆ
Dec 11, 2024 11:15 PM IST
ಬೈಕ್ ಚಕ್ರಕ್ಕೆ ವೇಲ್ ಸಿಲುಕಿ ಕೆಳಗುರುಳಿ ಮೃತಪಟ್ಟ ಮಹಿಳೆ; ಬೈಕ್, ಸ್ಕೂಟರ್‌ನಲ್ಲಿ ಹೋಗ್ತೀರಾ ಈ 6 ಅಂಶಗಳನ್ನು ಮರೆತರೆ ಪ್ರಾಣಕ್ಕೆ ತೊಂದರೆಯಾದೀತು. (ಮೆಟಾ ಎಐ ರಚಿತ ಚಿತ್ರಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ)
Road Accident: ಬೈಕ್ ಚಕ್ರಕ್ಕೆ ದುಪ್ಪಟಾ, ಸೀರೆಯ ಸೆರಗು ಸಿಲುಕಿ ಇಬ್ಬರು ಮಹಿಳೆಯರು ಮೃತಪಟ್ಟ ಎರಡು ಪ್ರತ್ಯೇಕ ಕಳವಳಕಾರಿ ಘಟನೆ ನಡೆದಿದೆ. ಒಂದು ದುರಂತ ರಾಮನಗರ ಜಿಲ್ಲೆಯಲ್ಲಾದರೆ, ಇನ್ನೊಂದು ಚಿಕ್ಕಬಳ್ಳಾಪುರದಲ್ಲಾಗಿದೆ. ಬೈಕ್‌ನಲ್ಲಿ ಪ್ರಯಾಣಿಸುವಾಗ ತೆಗೆದುಕೊಳ್ಳಬೇಕಾಗಿದ್ದ ಕ್ರಮಗಳ ವಿಚಾರ ಚರ್ಚೆಗೆ ಒಳಗಾಗಿದೆ.
Road Accident: ಕರ್ನಾಟಕದಲ್ಲಿ ಕಳೆದ ಎರಡು ವಾರಗಳ ಅವಧಿಯಲ್ಲಿ ಬೈಕ್ ಚಕ್ರಕ್ಕೆ ವೇಲು, ಸೀರೆಯ ಸೆರಗು ಸಿಲುಕಿ ಇಬ್ಬರು ಮಹಿಳೆಯರು ಮೃತಪಟ್ಟ ಎರಡು ಪ್ರತ್ಯೇಕ ಕಳವಳಕಾರಿ ಘಟನೆ ನಡೆದಿದೆ. ಒಂದು ದುರಂತ ರಾಮನಗರ ಜಿಲ್ಲೆಯಲ್ಲಾದರೆ, ಇನ್ನೊಂದು ಚಿಕ್ಕಬಳ್ಳಾಪುರದಲ್ಲಾಗಿದೆ. ಬೈಕ್‌ನಲ್ಲಿ ಪ್ರಯಾಣಿಸುವಾಗ ತೆಗೆದುಕೊಳ್ಳಬೇಕಾಗಿದ್ದ ಕನಿಷ್ಠ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದ್ದರೆ ಇಬ್ಬರ ಪ್ರಾಣ ಉಳಿಯಬಹುದಿತ್ತೋ ಏನೋ ಎಂಬ ವಿಷಾದದ ಮಾತುಗಳು ಅವರ ಆಪ್ತವಲಯದಲ್ಲಿ ಕೇಳಿಬಂದಿದೆ.
ಹಲಗೂರು ಬಳಿ ಬೈಕ್‌ನ ಹಿಂಬದಿ ಚಕ್ರಕ್ಕೆ ವೇಲ್ ಸಿಲುಕಿ ರಸ್ತೆ ಬಿದ್ದು ಮೃತಪಟ್ಟ ಮಹಿಳೆ
ಕನಕಪುರ ಸಮೀಪ ಹಲಗೂರಿನಿಂದ ಮುತ್ತತ್ತಿ ರಸ್ತೆಯ ಹೊಸದೊಡ್ಡಿ ಬಳಿ ಇರುವ ಸಂಬಂಧಿಕರ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಬೈಕ್‌ನ ಹಿಂಬದಿ ಚಕ್ರಕ್ಕೆ ವೇಲ್ ಸಿಲುಕಿ ರಸ್ತೆ ಬಿದ್ದ ಮಹಿಳೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಸೋಮವಾರ (ಡಿಸೆಂಬರ್ 9) ಈ ದುರಂತ ಸಂಭವಿಸಿದೆ. ಬೈಕ್ ವೇಗವಾಗಿದ್ದ ಕಾರಣ ವೇಲ್ ಹಿಂಬದಿ ಚಕ್ರಕ್ಕೆ ಸಿಲುಕಿದ ಕೂಡಲೇ ಮಹಿಳೆಯ ಕತ್ತನ್ನು ಬಿಗಿದ ವೇಲ್ ಆಕೆ ರಸ್ತೆಗೆ ಬೀಳುವಂತೆ ಮಾಡಿದೆ. ಬೈಕ್ ವೇಗದಲ್ಲಿದ್ದ ಕಾರಣ ರಸ್ತೆ ಬಿದ್ದ ಮಹಿಳೆಯ ತಲೆಗೆ ಗಂಭೀರ ಏಟು ತಗಲಿದ್ದವು. ಕೂಡಲೇ ಹಲಗೂರು ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗೆ ಕನಕಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ದಾರಿ ಮಧ್ಯೆ ಮಹಿಳೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೃತ ಮಹಿಳೆಯನ್ನು ಗೌರಿ ಬಾಯಿ (35) ಎಂದು ಗುರುತಿಸಲಾಗಿದೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ ಎಂದು ಎಂದು ಸಂಯುಕ್ತ ಕರ್ನಾಟಕ ವರದಿ ಮಾಡಿದೆ.
ಕೇತನಾಯಕನಹಳ್ಳಿಯಲ್ಲಿ ಬೈಕ್‌ನ ಹಿಂಬದಿ ಚಕ್ರಕ್ಕೆ ಸೀರೆ ಸೆರಗು ಸಿಲುಕಿ ಮಹಿಳೆಯ ದುರ್ಮರಣ
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕು ಕೇತನಾಯಕನ ಹಳ್ಳಿಯಲ್ಲಿ ಬೈಕ್‌ನ ಹಿಂಬದಿ ಚಕ್ರಕ್ಕೆ ಸೀರೆ ಸೆರಗು ಸಿಲುಕಿ ಮಹಿಳೆ ದುರ್ಮರಣಕ್ಕೀಡಾದ ಘಟನೆ ನವೆಂಬರ್ 29 ರಂದು ನಡೆದಿದೆ ಎಂದು ವಿಜಯವಾಣಿ ವರದಿ ಮಾಡಿದೆ. ಮೃತ ಮಹಿಳೆಯನ್ನು ಕೇತನಾಯಕ ಹಳ್ಳಿಯ ದ್ಯಾವಮ್ಮ (50) ಎಂದು ಗುರುತಿಸಲಾಗಿದೆ. ಚಿಂತಾಮಣಿ - ಬಾಗೇಪಲ್ಲಿ ರಸ್ತೆಯಲ್ಲಿ ಈ ದುರಂತ ಸಂಭವಿಸಿತ್ತು. ನಾಯಿ ಕಚ್ಚಿದ ಕಾರಣ ಚಿಕಿತ್ಸೆಗಾಘಿ ಗ್ರಾಮಕ್ಕೆ ಸಮೀಪದ ಬಾಗೇಪಲ್ಲಿ ರಸ್ತೆಯ ಗಂಜಿಗುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ಚಲಿಸುತ್ತಿದ್ದ ಬೈಕ್‌ನ ಹಿಂಬದಿ ಚಕ್ರಕ್ಕೆ ದ್ಯಾವಮ್ಮ ಅವರ ಸೀರೆಯ ಸೆರಗು ಸಿಲುಕಿದ ಕೂಡಲೇ ಅವರು ರಸ್ತೆಗೆ ಉರುಳಿದ್ದಾರೆ. ರಸ್ತೆ ಬಿದ್ದ ರಭಸಕ್ಕೆ ಅವರ ತಲೆಗೆ ಬಲವಾದ ಏಟು ತಗುಲಿತ್ತು. ಹಾಗಾಗಿ ಅಲ್ಲೇ ಅವರು ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೈಕ್, ಸ್ಕೂಟರ್‌ನಲ್ಲಿ ಸಂಚರಿಸುವಾಗ ಈ 6 ಅಂಶಗಳು ಗಮನದಲ್ಲಿರಲಿ
ಎರಡು ವಾರಗಳ ಅವಧಿಯಲ್ಲಿ ಬೈಕ್‌ನ ಹಿಂಬದಿ ಚಕ್ರಕ್ಕೆ ವೇಲ್ ಮತ್ತು ಸೆರಗು ಸಿಲುಕಿ ಇಬ್ಬರು ಮಹಿಳೆಯರು ಮೃತಪಟ್ಟ ಎರಡು ಪ್ರತ್ಯೇಕ ಹೃದಯ ವಿದ್ರಾವಕ ಘಟನೆಗಳು ಬೈಕ್, ಸ್ಕೂಟರ್ ಪ್ರಯಾಣದ ವೇಳೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕಡೆಗೆ ಗಮನಹರಿಸುವಂತೆ ಎಚ್ಚರಿಸಿದೆ.
1) ಬೈಕ್ ಅಥವಾ ಸ್ಕೂಟರ್ ಸವಾರಿಗೆ ಹಿಂಬದಿ ಸೀಟ್‌ನಲ್ಲಿ ಕುಳಿತುಕೊಳ್ಳುವ ಮಹಿಳೆಯರು, ಹೆಣ್ಮಕ್ಕಳು ತಮ್ಮ ದುಪ್ಪಟಾ, ಸೀರೆ ಸೆರಗು, ನೆರಿಗೆ ಬೈಕ್ ಅಥವಾ ಸ್ಕೂಟರ್‌ನ ಹಿಂಬದಿ ಚಕ್ರಕ್ಕೆ ತಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇದನ್ನು ಬೈಕ್ ಚಾಲನೆ ಮಾಡುವವರು ಕೂಡ ಎರಡೆರಡು ಸಲ ನೋಡಿಕೊಳ್ಳಬೇಕು.
2) ಬೈಕ್ ಅಥವಾ ಸ್ಕೂಟರ್‌ನಲ್ಲಿ ಹಿಂಬದಿ ಸವಾರಳಾಗಿ ಹೋಗುತ್ತೀರಾದರೆ, ನಿಮ್ಮ ಉಡುಪು ಹೇಗಿರಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ.
3) ಹೆಲ್ಮೆಟ್ ಅನ್ನು ಸರಿಯಾದ ಕ್ರಮದಲ್ಲಿ ಧರಿಸುವುದನ್ನು ಮರೆಯಬೇಡಿ. ರಸ್ತೆ ಬಿದ್ದಾಗ ತಲೆ ರಸ್ತೆಗೆ ಬಡಿದು ಗಂಭೀರ ಗಾಯವಾಗದಂತೆ ಹೆಲ್ಮೆಟ್ ರಕ್ಷಣೆ ಒದಗಿಸಬಲ್ಲದು.
4) ಬೈಕ್ ಅಥವಾ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಚಾಲನೆ ಮಾಡುವವರು ಎಷ್ಟು ಜಾಗೃತರಾಗಿರಬೇಕೋ ಅಷ್ಟೇ ಜಾಗೃತಿ ಹಿಂಬದಿ ಸವಾರರಿಗೂ ಇರಬೇಕು. ಸುತ್ತಮುತ್ತಲಿನ ವಿದ್ಯಮಾನಗಳ ಬಗ್ಗೆ ಅರಿವು ಇರಲಿ.
5) ಬೈಕ್ ಅಥವಾ ಸ್ಕೂಟರ್ ವ್ಹೀಲಿಂಗ್ ಮಾಡುವವರ ಜತೆಗೆ ಹಿಂಬದಿ ಸವಾರರಾಗಿ ಕುಳಿತುಕೊಳ್ಳಬೇಡಿ. ಅದು ಪ್ರಾಣಕ್ಕೇ ಆಪತ್ತು ತರುವಂತಹ ರಿಸ್ಕ್. ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು.
6) ಬೈಕ್ ಅಥವಾ ಸ್ಕೂಟರ್ ಸುಸ್ಥಿತಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಫೂಟ್ ರೆಸ್ಟ್ ಸರಿಯಾಗಿದೆಯೇ ಪರಿಶೀಲಿಸಿ. ಅದರ ಮೇಲೆ ಕಾಲಿಡಿ. ಚಕ್ರಕ್ಕೆ ಸೀರೆ, ದುಪ್ಪಟಾ ತಾಗದಂತೆ ಮುನ್ನೆಚ್ಚರಿಕೆ ವಹಿಸಿ.