logo
ಕನ್ನಡ ಸುದ್ದಿ  /  ಕರ್ನಾಟಕ  /  'ಚೋಟಾ ಪಾಕಿಸ್ತಾನ್​' ವಿಡಿಯೋ ವಿವಾದ: ಮೈಸೂರು ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಸಿಎಂ ಆದೇಶ

'ಚೋಟಾ ಪಾಕಿಸ್ತಾನ್​' ವಿಡಿಯೋ ವಿವಾದ: ಮೈಸೂರು ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಸಿಎಂ ಆದೇಶ

Meghana B HT Kannada

May 06, 2022 05:28 PM IST

google News

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    • ಕವಲಂದೆ ಗ್ರಾಮವನ್ನು 'ಚೋಟಾ ಪಾಕಿಸ್ತಾನ್​' ಕರೆದಿರುವ ಆಡಿಯೋ-ವಿಡಿಯೋ ಪ್ರಕರಣ ಸಂಬಂಧ ಕ್ರಮ ಕೈಗೊಳ್ಳುವಂತೆ ಮೈಸೂರು ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮೈಸೂರು / ಬೆಂಗಳೂರು: ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕವಲಂದೆ ಗ್ರಾಮವನ್ನು 'ಚೋಟಾ ಪಾಕಿಸ್ತಾನ್​' (ಮಿನಿ ಪಾಕಿಸ್ತಾನ) ಎಂದು ಹೇಳಿರುವ ವಿಡಿಯೋ ವೈರಲ್ ಆಗಿದ್ದು, ಇದು ಆಕ್ರೋಶಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರು ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ.

ಮೇ 3ರಂದು, ಅಂದರೆ ರಂಜಾನ್ (ಈದ್-ಉಲ್-ಫಿತರ್‌) ಹಬ್ಬದಂದು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಮುಗಿಸಿ ಹೊರ ಬರುವ ವೇಳೆ 'ಕವಲಂದೆ ಬೋಲೇ ತೋ ಚೋಟಾ ಪಾಕಿಸ್ತಾನ್ (ಕವಲಂದೆ ಎಂದರೆ ಮಿನಿ ಪಾಕಿಸ್ತಾನ), ಠೀಕ್ ಹೈ' ಎಂಬ ಆಡಿಯೋ ಹೊಂದಿರುವ ವಿಡಿಯೋ ಕ್ಲಿಪ್​​ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಯೇ ಈ ಹೇಳಿಕೆ ನೀಡಿದ್ದಾನೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ವಿಡಿಯೋ, ಆಡಿಯೋ ಘಟನೆ ಸಂಬಂಧ ನಂಜನಗೂಡಿನ ಬಿಜೆಪಿ ಕಾರ್ಯಕರ್ತರು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಂಜನಗೂಡು ದೊಡ್ಡಕವಲಂದೆ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಘಟನೆ ಬೆಳಕಿಗೆ ಬಂದ ಕೂಡಲೇ ನಂಜನಗೂಡಿನ ಬಿಜೆಪಿ ನಗರಸಭಾ ಸದಸ್ಯ ಕಪಿಲೇಶ್ ಕವಲಂದೆ ಪೊಲೀಸ್ ಠಾಣೆ ಹಾಗೂ ನಂಜನಗೂಡಿನ ವೃತ್ತನಿರೀಕ್ಷಕ ಲಕ್ಷ್ಮಿಕಾಂತ್ ತಳವಾರ್ ಅವರಿಗೆ ದೂರು ನೀಡಿದ್ದಾರೆ. ಕೂಡಲೇ ದುಷ್ಕರ್ಮಿಗಳ ವಿರುದ್ದ ಕ್ರಮ ಕೈಗೊಂಡು ಬಂಧಿಸುವಂತೆ ಅವರು ಒತ್ತಾಯಿಸಿದ್ದಾರೆ. ದೂರಿನನ್ವಯ ಪೊಲೀಸರು ಎಫ್​ಐಆರ್ ದಾಖಲು ಮಾಡಿದ್ದಾರೆ.

ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಮೈಸೂರು ಎಸ್‌ಪಿಗೆ ಸೂಚಿಸುತ್ತೇನೆ ಎಂದು ಬೊಮ್ಮಾಯಿ ವರದಿಗಾರರಿಗೆ ತಿಳಿಸಿದ್ದಾರೆ.

ಸಿಎಂ ಆದೇಶದ ಬಳಿಕ ಈ ಕುರಿತು ಮಾತನಾಡಿರುವ ಮೈಸೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಆರ್.ಚೇತನ್, ವಿವಾದಿತ ವಿಡಿಯೋ, ಆಡಿಯೋ ವೈರಲ್‌ ಪ್ರಕರಣ ಸಂಬಂಧ ಎಲೆಕ್ಟ್ರಾನಿಕ್ ಸಾಕ್ಷಿಗಳನ್ನು ಕಲೆಹಾಕಲಾಗುತ್ತಿದೆ. ಈಗಾಗಲೇ ವಿಡಿಯೋದಲ್ಲಿ ಇರುವ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಆಕ್ಷೇಪಾರ್ಹ ಹೇಳಿಕೆ ಇದೆ. ಈ ಸಂಬಂಧ ಐಪಿಸಿ ಸಕ್ಷನ್ 153-A, 153-B, 505-2 ಹಾಗೂ 34 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ವಿಡಿಯೋದಲ್ಲಿ ಮಾತುಗಳನ್ನಾಡಿದ ವ್ಯಕ್ತಿಗಳ ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ