RSS Training Camps: ಸರ್ಕಾರಿ ಶಾಲೆಗಳಲ್ಲಿ RSS ಪ್ರಶಿಕ್ಷಾ ವರ್ಗಕ್ಕೆ ಅನುಮತಿ ವಿವಾದ; ಯಾರು ಏನು ಹೇಳಿದ್ದಾರೆ- ಇಲ್ಲಿದೆ ವಿವರ ವರದಿ
Oct 12, 2022 08:48 AM IST
ಆರ್‌ಎಸ್‌ಎಸ್‌ನ ಸ್ವರ್ ಸಂಗಮ್ ಘೋಷ್ ಕ್ಯಾಂಪ್‌ನ ಒಂದು ನೋಟ (ಸಾಂದರ್ಭಿಕ ಚಿತ್ರ) (ANI Photo)
- Explained: ಸರ್ಕಾರಿ ಶಾಲೆಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಪ್ರಶಿಕ್ಷಾ ವರ್ಗ (RSS Training Camps)ಕ್ಕೆ ಅನುಮತಿ ನೀಡಲಾಗಿದೆ ಎಂಬ ವಿಚಾರ ಈಗ ವಿವಾದಕ್ಕೀಡಾಗಿದೆ. ಎಸ್‌ಎಫ್‌ಐ ಮತ್ತು ಇತರೆ ಸಂಘಟನೆಗಳು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದವು. ಶಾಸಕ ಬಂಡೆಪ್ಪ ಖಾಶೆಂಪುರ್ ಕೂಡ ಸಿಎಂಗೆ ಪತ್ರಬರೆದಿದ್ದರು. ಈ ವಿದ್ಯಮಾನದ ಸಮಗ್ರ ವರದಿ ಇಲ್ಲಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಶಿಕ್ಷಾ ವರ್ಗ (RSS Training Camps) ವನ್ನು ಸರ್ಕಾರಿ ಶಾಲೆಗಳಲ್ಲಿ ವಿಶೇಷವಾಗಿ ಮೊರಾರ್ಜಿ ದೇಸಾಯಿ ಸರ್ಕಾರಿ ಶಾಲೆಗಳಲ್ಲಿ ನಡೆಸುವುದಕ್ಕೆ ಸರ್ಕಾರ ಅನುಮತಿ ನೀಡಿದೆ ಎಂಬ ವಿಚಾರ ಈಗ ವಿವಾದಕ್ಕೀಡಾಗಿದೆ.
ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ (SFI) ಮತ್ತು ಇತರೆ ಸಂಘಟನೆಗಳು ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದವು. ಇದರ ಬೆನ್ನಿಗೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದು RSSನ ಪಠ್ಯೇತರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಶಾಸಕ ಬಂಡೆಪ್ಪ ಖಾಶೆಂಪುರ್ ಪತ್ರದಲ್ಲೇನಿದೆ?
ನನ್ನ ವಿಧಾನಸಭಾ ಕ್ಷೇತ್ರದ ಕಮಠಾಣಾ ಗ್ರಾಮದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಶಿಬಿರಕ್ಕೆ ಅನುಮತಿ ನೀಡಿದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಸರ್ಕಾರಿ ಸ್ಥಳಗಳಲ್ಲಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಈ ರೀತಿಯ ಶಿಬಿರಗಳು ನಡೆಯದಂತೆ ತಡೆಗಟ್ಟಬೇಕು
ಇದೇ ಅ. 08 ನೇ ತಾರೀಖಿನಿಂದ 16ನೇ ತಾರೀಖಿನವರೆಗೂ 09 ದಿನಗಳ ಕಾಲ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಮಠಾಣಾ ಗ್ರಾಮದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಶಿಬಿರವನ್ನು ಆಯೋಜಿಸಿ, ಮಕ್ಕಳನ್ನು ಪತ್ಯೇತರ ಚಟುವಟಿಕೆಗಳ ಕಡೆಗೆ ಸೆಳೆಯುವ ಕೆಲಸ ಮಾಡಲಾಗುತ್ತಿದೆ.
ಇದಕ್ಕೂ ಮುನ್ನ ಬೇರೆಡೆ ಇಂತಹ ಶಿಬಿರಗಳನ್ನು ನಡೆಸುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಇತ್ತೀಚೆಗೆ ಸರ್ಕಾರಿ ಶಾಲೆ, ಸರ್ಕಾರಿ ವಸತಿ ಶಾಲೆಗಳಿಗೆ ಲಗ್ಗೆ ಇಡುತ್ತಿದೆ. ನನ್ನ ಕ್ಷೇತ್ರದಲ್ಲಿ ಈ ರೀತಿಯ ಘಟನೆ ನಡೆದಿರುವುದನ್ನು ನಾನು ಖಂಡಿಸುತ್ತೇನೆ.
ಆದುದರಿಂದ, ನನ್ನ ಮತ ಕ್ಷೇತ್ರದ ಕಮಠಾಣಾ ಗ್ರಾಮದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ RSSನವರು ಶಿಬಿರ ನಡೆಸಲು ಅನುಮತಿ ನೀಡಿದ ಬಗ್ಗೆ ತನಿಖೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ರಾಜ್ಯದ ಸರ್ಕಾರಿ ಸ್ಥಳಗಳು, ಸರ್ಕಾರಿ ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಈ ರೀತಿಯ ಶಿಬಿರಗಳಿಗೆ ಅನುಮತಿ ನೀಡಬಾರದು.
ಅನುಮತಿ ಕೊಟ್ಟ ವಿಚಾರ ನೆನಪಿಲ್ಲ ಎಂದ ಸಚಿವ ಪೂಜಾರಿ
ಸರ್ಕಾರಿ ವಸತಿ ಶಾಲೆಗಳಲ್ಲಿ ತರಬೇತಿ ಶಿಬಿರಗಳಿಗೆ ಆರ್‌ಎಸ್‌ಎಸ್‌ಗೆ ಅನುಮತಿ ನೀಡಿದ್ದು ನೆನಪಿಲ್ಲ. ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳಿಗೆ ನಾವು ಬೇರೆ ಸಂಸ್ಥೆಗಳಿಗೆ ಅನುಮತಿ ನೀಡಿದ್ದೇವೆ. ತರಬೇತಿ ಶಿಬಿರ ನಡೆಸುವುದಕ್ಕೆ RSS ಅನುಮತಿ ಕೇಳಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ವಸತಿ ಶಾಲೆಯಲ್ಲಿ ಆರೆಸ್ಸೆಸ್ ಪ್ರಶಿಕ್ಷಾ ವರ್ಗ; ಎಸ್‌ಎಫ್‌ಐ ವಿರೋಧ
ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ (SFI) ಮತ್ತು ಇತರೆ ಸಂಘಟನೆಗಳು ಈ ಕುರಿತು ಆಕ್ಷೇಪ ವ್ಯಕ್ತಪಡಿಸಿವೆ. ಸಚಿವ ಕೋಟಾ ಶ್ರೀನಿವಾಸಪೂಜಾರಿ ಅವರ ನಿರ್ದೇಶನ ಪ್ರಕಾರ ಈ ರೀತಿ ಅನುಮತಿ ನೀಡಲಾಗುತ್ತಿದೆ ಎಂಬ ಆರೋಪವನ್ನೂ ಅವು ಹೊರಿಸಿದ್ದವು.
ಕೋಲಾರದ ಮುಳಬಾಗಿಲು ತಾಲೂಕಿನ ಕೂತಾಂಡ್ಲಹಳ್ಳಿ ಸಮೀಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ, ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯಲ್ಲೂ ಆರ್ಎಸ್ಎಸ್ ಪ್ರಶಿಕ್ಷಾ ವರ್ಗ ನಡೆಸಲು ಸಿದ್ಧತೆ ನಡೆದಿದೆ. ಇದಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಅನುಮತಿ ಕೊಟ್ಟಿದ್ದಾರೆ ಎಂದು ಎಸ್‌ಎಫ್‌ಐ ಆರೋಪಿಸಿತ್ತು.
ಗಮನಸೆಳೆದ THE HINDU ವರದಿ
ಕೋಲಾರ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ತರಬೇತಿ ಶಿಬಿರಗಳನ್ನು ನಡೆಸಲು ಆರ್‌ಎಸ್‌ಎಸ್‌ಗೆ ಸಂಯೋಜಿತವಾಗಿರುವ ಸಂಸ್ಥೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ (ಕೆಆರ್‌ಇಐಎಸ್) ಅನುಮತಿ ನೀಡಿದೆ. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಪೂಜಾರಿ ಅವರ ಶಿಫಾರಸಿನ ಮೇರೆಗೆ ಅನುಮತಿ ನೀಡಲಾಗಿದೆ ಎಂದು ಅಕ್ಟೋಬರ್ 9 ರಂದು THE HINDU ವರದಿ ಮಾಡಿತ್ತು.