MP Shankar: ಕುಲದಲ್ಲಿ ಕೀಳ್ಯಾವುದೋ ಎಂದು ಕುಣಿದು ಮರೆಯಾದ ಗಂಧದಗುಡಿ ಎಂ. ಪಿ. ಶಂಕರ್ ನೆನಪು, ಕಾಲವಾಗಿ ಇಂದಿಗೆ 16 ವರ್ಷ
Jul 17, 2024 08:35 PM IST
MP Shankar: ಕುಲದಲ್ಲಿ ಕೀಳ್ಯಾವುದೋ ಎಂದು ಕುಣಿದು ಮರೆಯಾದ ಗಂಧದಗುಡಿ ಎಂ. ಪಿ. ಶಂಕರ್ ನೆನಪು, ಕಾಲವಾಗಿ ಇಂದಿಗೆ 16 ವರ್ಷ
Sandalwood ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ಎಂ.ಪಿ.ಶಂಕರ್( MP Shankar) ಕಾಲವಾಗಿ ಹದಿನಾರು ವರ್ಷಗಳೇ ಸಂದಿವೆ.
MP shankar Death Annivarsary: ಮೈಸೂರು ಪುಟ್ಟಲಿಂಗಪ್ಪ ಶಂಕರ್ ಎಂದರೆ ಯಾರು ಎಂದು ನೀವು ಕೇಳಬಹುದು. ಅದೇ ಎಂ.ಪಿ.ಶಂಕರ್ ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವಂತದ್ದು ಅಗಾಧ ಪ್ರತಿಭೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಒತ್ತಿ, ವಿಭಿನ್ನ ಚಿತ್ರಗಳಲ್ಲಿನ ಅಭಿನಯ, ನಿರ್ಮಾಣದ ಮೂಲಕ ಮನೆಮಾತಾದವರು ಎಂ.ಪಿ.ಶಂಕರ್. ಅವರು ಕಾಲವಾಗಿ 2024ರ ಜುಲೈ 17ಕ್ಕೆ 16 ವರ್ಷ. ಅಂದರೆ ಎಂ. ಪಿ. ಶಂಕರ್ 2008ರ ಜುಲೈ 17ರಂದು ತೀರಿಹೋದರು. ಅವರು ನೆನಪು ಮಾತ್ರ ಈಗಲೂ ಅಗಾಧವಾಗಿಯೇ ಉಳಿದಿದೆ. ಅರಣ್ಯ,ವನ್ಯಜೀವಿ, ಮೃಗಾಲಯ ಸಹಿತ ಪರಿಸರಕ್ಕೆ ಪೂರಕವಾಗಿ ಹಲವಾರು ಚಿತ್ರಗಳನ್ನು ಮಾಡಿ ಅವರು ಈಗಲೂ ಚಿರಸ್ಥಾಯಿಯೇ ಆಗಿದ್ದಾರೆ. ಮೈಸೂರಿನ ವಿದ್ಯುಚ್ಚಕ್ತಿ ಕಚೇರಿಯಲ್ಲಿ ದಿನಗೂಲಿ ಕಾರ್ಮಿಕನಾಗಿ, ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಿ ಸ್ವಂತ ಪ್ರತಿಭೆಯಿಂದಲೇ ಮೇಲೆ ಬಂದವರು ಶಂಕರ್.
ಎಂಪಿ. ಶಂಕರ್ ಜನಿಸಿದ್ದು ಮೈಸೂರಿನಲ್ಲಿ. 1935ರ ಆಗಸ್ಟ್ 20ರಂದು ಅವರ ಜನನ. ಬಡತನದ ನಡುವೆಯೇ ಶಿಕ್ಷಣ ಅಪೂರ್ಣಗೊಳಿಸಿ ದಿನಗೂಲಿಯಾಗಿ ಕೆಲಸಕ್ಕೆ ಸೇರಿಕೊಂಡವರು ಶಂಕರ್. ಅವರಲ್ಲೊಬ್ಬ ಕಲಾವಿದ ಇದ್ದುದರಿಂದ ಸದಾ ಅದರ ತುಡಿತ ಅವರಲ್ಲಿ ಇತ್ತು. ಅಲ್ಲದೇ ಅಜಾನುಬಾಹು ಆಗಿದ್ದರಿಂದ ಪೈಲ್ವಾನ್ ಆಗಿಯೂ ಅವರು ಗುರುತಿಸಿಕೊಂಡರು.
ಕುಸ್ತಿ ಪೈಲ್ವಾನರಂತಿದ್ದ ಎಂ. ಪಿ. ಶಂಕರ್, ನಿಜಕ್ಕೂ ಪೈಲ್ವಾನರಾಗಿ ಸಾಧನೆ ಮೆರೆದು ಮೈಸೂರು ದಸರಾ ಸ್ಪರ್ಧೆಗಳಲ್ಲಿ ಹಲವಾರು ಸ್ಪರ್ಧೆಗಳನ್ನು ಗೆದ್ದಿದ್ದವರು. ‘ರತ್ನಮಂಜರಿ’ ಚಿತ್ರದಿಂದ ಪ್ರಾರಂಭಗೊಂಡ ಚಿತ್ರಜೀವನದಲ್ಲಿ ಎಂ. ಪಿ. ಶಂಕರ್ ಹೆಚ್ಚು ನಿರ್ವಹಿಸಿದ್ದು ಖಳನಾಯಕ ಪಾತ್ರಗಳನ್ನೇ. ಎಂ. ಪಿ. ಶಂಕರ್ ಅವರ ಪ್ರತಿಭಾ ಸಾಮರ್ಥ್ಯವನ್ನೂ, ಅವರಿಗೆ ಕುಸ್ತಿಯಲ್ಲಿದ್ದ ಹುರುಪುಗಳನ್ನೂ ಅರಿತಿದ್ದ ಪುಟ್ಟಣ್ಣ ಕಣಗಾಲರು ಅವರಿಗೆ ತಮ್ಮ ಪ್ರಸಿದ್ಧ ‘ನಾಗರಹಾವು’ ಚಿತ್ರದಲ್ಲಿ ಕುಸ್ತಿ ಗರಡಿಯ ಮುಖ್ಯಸ್ಥರ ಪಾತ್ರವನ್ನು ಕೊಟ್ಟಿದ್ದರು. ನಾಷ್ಟಾ ಮಾಡಿರೋ ಮುಖ ನೋಡು ಅಂತ ರಾಮಾಚಾರಿ ಪಾತ್ರಧಾರಿ ವಿಷ್ಣುವರ್ಧನ್ ಅವರಿಗೆ ಒಂದು ರಾಶಿ ದೋಸೆ ಮತ್ತು ಅದರ ಮೇಲೆ ದೊಡ್ಡ ಬೆಣ್ಣೆಯ ಗುಡ್ಡೆಯನ್ನು ಇಟ್ಟು ಚೆನ್ನಾಗಿ ತಿನ್ನು, ಕುಸ್ತಿ ಮಾಡೋನು ಚೆನ್ನಾಗಿ ತಿನ್ಬೇಕು” ಎಂದು ನುಡಿದ ಚಿತ್ರದುರ್ಗದ ನಾಯಕನೇ ಎದುರು ಬಂದ ಹಾಗಿದ್ದ ಆ ಪಾತ್ರ ಮರೆಯಲಾಗದು.
ಕನ್ನಡ ಚಿತ್ರರಂಗದ ಅವಿಸ್ಮರಣೀಯ ಚಿತ್ರಗಳಲ್ಲಿ ಪ್ರಮುಖವಾಗಿ ಕಣ್ಮುಂದೆ ಬಂದು ನಿಲ್ಲುವ ಚಿತ್ರ ಹುಣಸೂರು ಕೃಷ್ಣಮೂರ್ತಿಗಳ ‘ಸತ್ಯಹರಿಶ್ಚಂದ್ರ’. ಆ ಚಿತ್ರದಲ್ಲಿ ಎಲ್ಲವೂ, ಎಲ್ಲ ಪಾತ್ರಗಳೂ ಸೊಗಸಿನವೇ. ಆದರೂ ಅವೆಲ್ಲವನ್ನೂ ಮೀರಿ ನಮ್ಮ ಕಣ್ಮುಂದೆ ಬಂದು ನಿಲ್ಲುವುದು ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮತದಲ್ಲಿ ಮೇಲ್ಯಾವುದೋ’ ಎಂಬ ಹಾಡು ಮತ್ತು ಆ ಹಾಡಿಗೆ ವೀರಬಾಹುವಾಗಿ ಕುಣಿದ ಎಂ. ಪಿ. ಶಂಕರ್. ಸತ್ಯ ಹರಿಶ್ಚಂದ್ರನ ಕಾಲದ ವೀರಬಾಹು ಹೇಗಿದ್ದನೋ, ಆದರೆ ಕನ್ನಡ ಚಿತ್ರರಂಗದ ಅವಿಸ್ಮರಣೀಯ ಎಂ. ಪಿ. ಶಂಕರ್ ಮತ್ತು ಆತ ಹಾಡಿ ಕುಣಿದ ‘ಕುಲದಲ್ಲಿ ಕೀಳ್ಯಾವುದೋ’ ಮತ್ತು ‘ನನ್ನ ನೀನು ನಿನ್ನ ನಾನು ಹಾಡಿನಲ್ಲಿ’ ಬತ್ತೀನಿ, ಬತ್ತೀನಿ ಎಂದು ಪೂತ್ಕರಿಸುತ್ತಾ, ‘ವೀರದಾಸ’ ಎಂಗೈತೆ ಎಂದು ಎಂ. ಪಿ. ಶಂಕರ್ ಕೇಳಿದ್ದು, ಅವರ ಕಾಲು ಒತ್ತುತ್ತಿದ್ದ ವೀರದಾಸನಾಗಿದ್ದ ಹರಿಶ್ಚಂದ್ರ ಪಾತ್ರಧಾರಿ ರಾಜ್‍ಕುಮಾರ್ ‘ನಾನು ನೋಡ್ಲಿಲ್ಲ ಮಹಾಸ್ವಾಮಿ ನಾನು ನಿಮ್ಮ ಸೇವೆಯಲ್ಲಿ ನಿರತನಾಗಿದ್ದೆ’ ಎಂದು ನುಡಿದ ಮಾತುಗಳು ಅಜರಾಮರ.
ಎಂ. ಪಿ. ಶಂಕರ್ ಅವರ ನೆನಪಿನಲ್ಲಿ ಮೂಡಿ ಬರುವ ಮತ್ತೊಂದು ಭವ್ಯತೆಯ ಮೇರು ಶಿಖರ, ಕನ್ನಡ ಚಿತ್ರರಂಗದ ಉತ್ಕೃಷ್ಟ ಚಿತ್ರಗಳ ಸಾಲಿನಲ್ಲಿ ಎಂದೆಂದೂ ರಾರಾಜಿಸುವ ‘ಬೂತಯ್ಯನ ಮಗ ಅಯ್ಯು’ ಚಿತ್ರದ ಬೂತಯ್ಯನ ಪಾತ್ರ. ಚಿತ್ರವನ್ನು ನೋಡಲು ಕನ್ನಡದ ಹಿರಿಯಣ್ಣ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜೊತೆ ಆಗಮಿಸಿದ ‘ಬೂತಯ್ಯನ ಮಗ ಅಯ್ಯು’ ಕಥೆಯ ಲೇಖಕರಾದ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು, ‘ಬೂತಯ್ಯ’ ಪಾತ್ರಧಾರಿ ಎಂ. ಪಿ. ಶಂಕರ್ ಅವರ ಬಳಿ ಬಂದು, “ಇದುವರೆಗೆ ‘ಬೂತಯ್ಯ’ ನನ್ನವನಾಗಿದ್ದ ಇನ್ನು ಮುಂದೆ ಆತ ನಿನಗೆ ಸೇರಿದವನು” ಎಂದು ಬೆನ್ನು ತಟ್ಟಿದರಂತೆ. ಕನ್ನಡ ಚಿತ್ರರಂಗದಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಶ್ರೇಷ್ಠ ಪಾತ್ರ ನಿರ್ವಹಣೆಗಳಲ್ಲಿ ಖಂಡಿತವಾಗಿಯೂ ಬೂತಯ್ಯ ಪಾತ್ರ ಕೂಡಾ ಒಂದು.
ಎಂ. ಪಿ. ಶಂಕರ್ ಅವರ ಸಾಧನೆ ಮೇಲ್ಕಂಡ ಕೆಲವು ಪಾತ್ರಗಳು, ಅವರು ಖಳರಾಗಿ ಮತ್ತು ವಯಸ್ಸಾದ ನಂತರದಲ್ಲಿ ನಟಿಸಿದ ಪೋಷಕಪಾತ್ರಗಳಲ್ಲಿ ನಿಂತು ಹೋಗುವುದಿಲ್ಲ. ನಿರ್ಮಾಪಕರಾಗಿ ಅವರು ನೀಡಿದ ಕಾಡಿನ ಬಗೆಗೆ ಪ್ರೀತಿ ಹುಟ್ಟಿಸುವ ಚಿತ್ರಗಳಿಂದಲೂ ಅವರು ಚಿರಸ್ಮರಣೀಯರು. ಅದರಲ್ಲೂ ಡಾ. ರಾಜ್‍ಕುಮಾರ್ ಅವರಿಗೆ ಅಪಾರ ಕೀರ್ತಿ ತಂದು ಕೊಟ್ಟ ಪ್ರಸಿದ್ಧ ಚಿತ್ರ ‘ಗಂಧದಗುಡಿ’ ಮರೆಯಲಾಗದ್ದು. ಆ ಚಿತ್ರದಲ್ಲಿ ರಾಜ್ ಅವರು ಸವಾರಿ ಮಾಡಿ ವಿಜ್ರಂಭಿಸಿದ ಎಂ. ಪಿ. ಶಂಕರ್ ಸ್ವಯಂ ಕಾಪಾಡಿಕೊಂಡಿದ್ದ ಬಿಳಿಕುದುರೆ, ‘ನಾವಾಡುವ ನುಡಿಯೇ ಕನ್ನಡ ನುಡಿ’ ಹಾಡು, ಇವೆಲ್ಲಾ ಎಂ. ಪಿ. ಶಂಕರ್ ಅವರ ನೆನಪನ್ನು ಕನ್ನಡ ನಾಡಿನಲ್ಲಿ ಶಾಶ್ವತವಾಗಿ ಉಳಿಸುವಂತದ್ದಾಗಿದೆ. ಕಾಡಿನ ರಹಸ್ಯ, ಬೆಟ್ಟದ ಹುಲಿ, ನ್ಯಾಯವೇ ದೇವರು, ಬಂಗಾರದ ಮನುಷ್ಯ, ದೂರದ ಬೆಟ್ಟ, ವಸಂತ ಲಕ್ಷ್ಮಿ, ಬಿಳಿಗಿರಿಯ ಬನದಲಿ ಮುಂತಾದ ಹಲವಾರು ಚಿತ್ರಗಳು ಸಹಾ ಎಂ. ಪಿ. ಶಂಕರ್ ಅವರನ್ನು ಸದಾ ನೆನೆಯುವಂತೆ ಮಾಡುತ್ತವೆ.
ಅಜಾನುಬಾಹು ಎಂ. ಪಿ. ಶಂಕರ್ ಕನ್ನಡ ಚಿತ್ರರಂಗದ ಚಿರಸ್ಮರಣೀಯ ಕಲಾವಿದರಲ್ಲಿ ಒಬ್ಬರು. ‘ನಾರದ ವಿಜಯ’ ಎಂಬ ಚಿತ್ರದಲ್ಲಿ ‘ಮಾಂಸಪರ್ವತ’ ಎಂದು ನಾರದ ಪಾತ್ರಧಾರಿಯಾದ ಅನಂತನಾಗ್ ಅವರಿಂದ ಕರೆಯಲ್ಪಟ್ಟ ಈ ಚಿತ್ರರಂಗದ ಅವಿಸ್ಮರಣೀಯ ಪಾತ್ರಧಾರಿ, ಪ್ರತಿಭೆ ಮತ್ತು ಸಾಧನೆಗಳ ಪರ್ವತವೂ ಹೌದು.
ಹಲವಾರು ಚಿತ್ರಗಳನ್ನು ನಿರ್ಮಿಸಿ, ಕೆಲವೊಂದನ್ನು ನಿರ್ದೇಶಿಸಿ, ನೂರಾರು ಚಿತ್ರಗಳಲ್ಲಿ ಅಭಿನಯಿಸಿ ಅವಿಸ್ಮರಣೀಯರಾಗಿದ್ದ ಎಂ. ಪಿ. ಶಂಕರ್ ಅತ್ಯಂತ ಸರಳ ಜೀವಿ ಮತ್ತು ಸಜ್ಜನ ವ್ಯಕ್ತಿ. ಅವರಿಗೂ ಗಾಂಧೀನಗರದ ಬಣ್ಣ ಬಣ್ಣದ ಜೀವನಕ್ಕೂ ಬಹುದೂರ. ಅವರು ಹೆಚ್ಚಿಗೆ ತಮ್ಮ ಬದುಕಿನ ಗಳಿಗೆಗಳನ್ನು ಕಳೆದದ್ದು ಮೈಸೂರಿನಲ್ಲಿ. ಇಂದು ಅವರ ಸಂಸ್ಮರಣೆ ದಿನ. ಈ ಲೋಕದಿಂದ ಕಣ್ಮರೆಯಾದರು. ಆದರೆ ಅವರು ತಮ್ಮ ಪಾತ್ರಗಳಲ್ಲಿ ಮೆರೆದ ಅಗಾಧತೆಯನ್ನೂ, ಅವರ ಪರಿಸರ ಪ್ರೇಮವನ್ನೂ ಮತ್ತು ತಮ್ಮ ನಡೆ ನುಡಿಗಳಿಂದ ಬದುಕಿನಲ್ಲಿ ಉಳಿಸಿ ಹೋದ ಸಜ್ಜನಿಕೆಯನ್ನು ಕನ್ನಡದ ಜನತೆ ಮರೆತಿಲ್ಲ ಎನ್ನುವುದು ಕನ್ನಡ ಸಂಪದ ನೆನಪು ಮಾಡಿಕೊಂಡಿದೆ.
ವಿಭಾಗ