logo
ಕನ್ನಡ ಸುದ್ದಿ  /  ಕರ್ನಾಟಕ  /  ಹಿರಿಯ ಪತ್ರಕರ್ತ ನಂಜುಂಡೇಗೌಡರಿಗೆ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ

ಹಿರಿಯ ಪತ್ರಕರ್ತ ನಂಜುಂಡೇಗೌಡರಿಗೆ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ

HT Kannada Desk HT Kannada

Oct 29, 2023 02:03 PM IST

google News

ಹಿರಿಯ ಪತ್ರಕರ್ತ ಹೊನಕೆರೆ ನಂಜುಂಡಗೌಡ ಅವರಿಗೆ ಬೆಂಗಳೂರಿನಲ್ಲಿ ಶನಿವಾರ (ಅ 28) ಖಾದ್ರಿ ಶಾಮಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    • ಪ್ರಸ್ತುತ ಬಳ್ಳಾರಿಯಲ್ಲಿ 'ಪ್ರಜಾವಾಣಿ' ದಿನಪತ್ರಿಕೆಯ ವಿಶೇಷ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಹೊನಕೆರೆ ನಂಜುಂಡೇಗೌಡ ಅವರು ಈ ಮೊದಲು ದೆಹಲಿ, ಬೆಂಗಳೂರು, ಧಾರವಾಡ ಸೇರಿದಂತೆ ಹಲವೆಡೆ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು
ಹಿರಿಯ ಪತ್ರಕರ್ತ ಹೊನಕೆರೆ ನಂಜುಂಡಗೌಡ ಅವರಿಗೆ ಬೆಂಗಳೂರಿನಲ್ಲಿ ಶನಿವಾರ (ಅ 28) ಖಾದ್ರಿ ಶಾಮಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿರಿಯ ಪತ್ರಕರ್ತ ಹೊನಕೆರೆ ನಂಜುಂಡಗೌಡ ಅವರಿಗೆ ಬೆಂಗಳೂರಿನಲ್ಲಿ ಶನಿವಾರ (ಅ 28) ಖಾದ್ರಿ ಶಾಮಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬೆಂಗಳೂರು: ಹಿರಿಯ ಪತ್ರಕರ್ತ ಹೊನಕೆರೆ ನಂಜುಂಡೇಗೌಡ ಅವರಿಗೆ 2023ನೇ ಸಾಲಿನ 'ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ' ಪ್ರದಾನ ಮಾಡಿ ಗೌರವಿಸಲಾಯಿತು. ಪತ್ರಿಕೋದ್ಯಮದಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಈ ಗೌರವ ಸಿಗುತ್ತದೆ. ನಗರದಲ್ಲಿ ಶನಿವಾರ (ಅ 28) ನಡೆದ ಸಮಾರಂಭದಲ್ಲಿ "ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್" (ಮೇಲುಕೋಟೆ) ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಸ್ತುತ ಬಳ್ಳಾರಿಯಲ್ಲಿ 'ಪ್ರಜಾವಾಣಿ' ದಿನಪತ್ರಿಕೆಯ ವಿಶೇಷ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಹೊನಕೆರೆ ನಂಜುಂಡೇಗೌಡ ಅವರು ಈ ಮೊದಲು ದೆಹಲಿ, ಬೆಂಗಳೂರು, ಧಾರವಾಡ ಸೇರಿದಂತೆ ಹಲವೆಡೆ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. "ಪತ್ರಿಕೋದ್ಯಮ ಎಲ್ಲ ಸ್ವಾತಂತ್ರ್ಯವನ್ನು ಹೊಂದಿರಬೇಕು. ಆದರೆ ಅದು ಮನಬಂದಂತೆ ವರ್ತಿಸುವ ಉದ್ಯಮ ಆಗಬರದು. ಅದಕ್ಕೂ ಸಾಮಾಜಿಕ ಜವಾಬ್ದಾರಿ ಇದೆ" ಎನ್ನುವುದನ್ನು ನಂಜುಂಡೇಗೌಡರ ಅಕ್ಷರಶಃ ಪಾಲಿಸಿಕೊಂಡು ಬಂದವರು. ನಿಷ್ಠುರ ಮಾತಿನ ನಂಜುಂಡೇಗೌಡರು ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಹೊನಕೆರೆ ಗ್ರಾಮದವರು. "ಪತ್ರಕರ್ತ ಒಂದು ತಲೆಮಾರಿನ ಆಗುಹೋಗುಗಳ ಸಾಕ್ಷಿಪ್ರಜ್ಞೆ ಆಗಬೇಕು" ಎಂಬ ದೃಢವಾಗಿ ನಂಬಿರುವ ನಂಜುಂಡೇಗೌಡರು, ತಮ್ಮ ಕೆಲಸದಲ್ಲಿ ಇದನ್ನು ಪಾಲಿಸುತ್ತಿದ್ದಾರೆ.

ವಾಕ್ ಸ್ವಾತಂತ್ರ್ಯಕ್ಕೆ ಅಪಾಯ: ಎಚ್‌ಕೆ ಪಾಟೀಲ

ಮಾಧ್ಯಮಗಳಲ್ಲಿ ಗರ್ವದಿಂದ ಏನೇ ಚರ್ಚೆಗಳಾದರೂ ವಾಕ್ ಸ್ವಾತಂತ್ರ್ಯ ಇಂದು ಅಪಾಯದಲ್ಲಿದೆ. ದೊಡ್ಡ ಜಾತಿ, ಶ್ರೀಮಂತ ವ್ಯಕ್ತಿಗಳು, ಕೈಗಾರಿಕಾ ವಲಯಗಳ ವಿರುದ್ಧ ಬರೆಯಲು ಮಾಧ್ಯಮಗಳಿಗೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ವಿಷಾದಿಸಿದರು.ಮಾಧ್ಯಮಗಳು ಇಂದು ರಾಜಕೀಯ ಶಕ್ತಿ ಕೇಂದ್ರದಲ್ಲಿರುವವರ ವಿರುದ್ಧ ಬರೆಯುವುದನ್ನು ಕಡಿಮೆ ಮಾಡಿವೆ. ಮಾಲೀಕರಿಂದ ಮಾಧ್ಯಮ ಮಿತ್ರರಿಗೆ ಲಗಾಮು ಬಿದ್ದಿದ್ದು, ತನ್ನತನವನ್ನು ಪತ್ರಿಕೋದ್ಯಮ ಮಂದಿ ಕಳೆದುಕೊಂಡಿದ್ದಾರೆ. ಇಷ್ಟೊಂದು ಗಂಭೀರ ಸನ್ನಿವೇಶ ಇದ್ದರೂ ಸಹ ವಾಕ್ ಸ್ವಾತಂತ್ರ್ಯದ ಬಗ್ಗೆ ಪತ್ರಿಕೋದ್ಯಮಿಗಳ ಧ್ವನಿಯೇ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಮ್ಮ ದೇಶದಲ್ಲಿ ಶೇ 50 ರಷ್ಟು ಮಾತ್ರ ವಾಕ್ ಸ್ವಾತಂತ್ರ್ಯ ಉಳಿದಿದ್ದು, ಇದರ ಅನುಭವ ಪ್ರತಿಯೊಬ್ಬರಿಗೂ ಆಗುತ್ತಿದೆ. ಇವೆಲ್ಲವೂ ಗೊತ್ತಿದ್ದರೂ ಸಹ ನಾವೆಲ್ಲರೂ ಮೌನಕ್ಕೆ ಶರಣಾಗಿದ್ದೇವೆ. ಇಂತಹ ಪರಿಸ್ಥಿತಿಯನ್ನು ಗ್ರಹಿಸಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸನ್ನಿವೇಶ ಎದುರಾಗಿದೆ. ಹಿಂದೆ ಪತ್ರಿಕೋದ್ಯಮ ಹೇಗಿತ್ತು. ಈಗ ಹೇಗಿದೆ ಎಂದು ವಿಶ್ಲೇಷಣೆಯನ್ನು ಸದಾ ಮಾಡುತ್ತಿರುತ್ತೇನೆ. ಹಿಂದೆ ಪತ್ರಿಕಾಗೋಷ್ಠಿಗಳಿಗೆ ಬರಬೇಕಾಗಿದ್ದರೆ ತಲೆ ಕೆರೆದುಕೊಂಡು ಬರುತ್ತಿದ್ದೇವು. ಇಂದು ತಲೆ ಬಾಚಿಕೊಂಡು ಧೈರ್ಯದಿಂದ ಬರುತ್ತಿದ್ದೇವೆ. ತಲೆ ಬಾಚಿಕೊಂಡರೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಚೆನ್ನಾಗಿ ಕಾಣುತ್ತೇವೆ. ಹಿಂದಿನ ಮತ್ತು ಈಗಿನ ಸನ್ನಿವೇಶವನ್ನು ನಾವು ಓರೆಗೆ ಹಚ್ಚಬೇಕಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.

ವರ್ಷದ 365 ದಿನಗಳಲ್ಲಿ 100 ದಿನಗಳ ಕಾಲ ಒಬ್ಬರನ್ನೊಬ್ಬರು ದೂಷಣೆ ಮಾಡುವುದನ್ನು ವೃತ್ತ ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿ ಮಾಡಲಾಗುತ್ತಿದೆ. ವಿಚಿತ್ರವೆಂದರೆ ಇಲ್ಲಿ ಇಬ್ಬರೂ ಹೇಳುತ್ತಿರುವುದು ಕೂಡ ಸುಳ್ಳು ಎಂಬುದು ಎಲ್ಲರಿಗೂ ತಿಳಿದಿರುತ್ತದೆ. ವಿದ್ಯುನ್ಮಾನ ಮಾಧ್ಯಮಗಳ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ. ಇಂತಹ ಕಾಲಘಟ್ಟದಲ್ಲಿ ಖಾದ್ರಿ ಶಾಮಣ್ಣ ಟ್ರಸ್ಟ್ ಮೂಲಕ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಜನ ಜಾಗೃತಿ ಮೂಡಿಸಬೇಕು. ಹತ್ತು ಮಂದಿ ಹಿರಿಯ ಪತ್ರಕರ್ತರು ಮುಂದೆ ನಿಂತು ವಾಕ್ ಸ್ವಾತಂತ್ರ್ಯದ ಮೌಲ್ಯಗಳನ್ನು ಎತ್ತಿ ಹಿಡಿಯಲು ನಿಲ್ಲದಿದ್ದರೆ ನಾವೆಲ್ಲರೂ ಕರ್ತವ್ಯ ಲೋಪ ಮಾಡಿಕೊಂಡಂತಾಗುತ್ತದೆ ಎಂದು ಕಿವಿ ಮಾತು ಹೇಳಿದರು.

ಪ್ರಶಸ್ತಿಗಾಗಿ ಅರ್ಜಿಕರೆಯದೇ ಇರುವುದು ಒಳ್ಳೆಯ ಬೆಳವಣಿಗೆ. ಇಲ್ಲವಾಗಿದ್ದಲ್ಲಿ ನನ್ನನ್ನು ಒಳಗೊಂಡಂತೆ ರಾಜಕಾರಣಿಗಳು ಮತ್ತಿತರಿಂದ ನಿಮಗೆ ಶಿಫಾರಸ್ಸುಗಳ ಮಹಾಪೂರವೇ ಹರಿದು ಬರುತ್ತಿತ್ತು. ರಾಜ್ಯೋತ್ಸವ ಪ್ರಶಸ್ತಿಗಾಗಿ ಸರ್ಕಾರಕ್ಕೆ 27 ಸಾವಿರ ಅರ್ಜಿಗಳು ಬಂದಿವೆ. ಹೀಗಿರುವಾಗ ಅರ್ಹರನ್ನು ಹೇಗೆ ಆಯ್ಕೆ ಮಾಡುವುದು ಎಂಬ ಆತಂಕ ಎದುರಾಗಿದೆ. ಆದರೆ ಪ್ರಶಸ್ತಿಗಾಗಿ ಟ್ರಸ್ಟ್ ಆಯ್ಕೆಯನ್ನು ಇಡೀ ಕರ್ನಾಟಕ ಒಪ್ಪುತ್ತದೆ ಎಂದು ಎಚ್.ಕೆ. ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಜಿಟಲ್ ಮೀಡಿಯಾದಿಂದ ಅಪಾಯ: ನಾಗಣ್ಣ

ಪ್ರಜಾಪ್ರಗತಿ ಪತ್ರಿಕೆಯ ಸಂಪಾದಕ ಎಸ್. ನಾಗಣ್ಣ ಮಾತನಾಡಿ, ಯೂಟ್ಯೂಬ್ ಮತ್ತು ಡಿಜಿಟಲ್ ಮೀಡಿಯಾ ಮಾಧ್ಯಮ ಕ್ಷೇತ್ರವನ್ನು ಕಲುಷಿತಗೊಳಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಹಿರಿಯ ಪತ್ರಕರ್ತ ಆರ್.ಪಿ. ಜಗದೀಶ್ ಅವರು ಹೊನಕೆರೆ ನಂಜುಂಡೇಗೌಡ ಅವರ ಒಡನಾಟ ಸ್ಮರಿಸಿಕೊಂಡರೆ, ವಕೀಲ ಬಿ.ಟಿ. ವೆಂಕಟೇಶ್ ಮಾಧ್ಯಮ ದಿಗ್ಗಜರೊಂದಿಗಿನ ಬಾಂಧವ್ಯವನ್ನು ನೆನಪು ಮಾಡಿಕೊಂಡರು.

ಪ್ರಶಸ್ತಿಗೆ ಭಾಜರಾದ ಹೊನಕೆರೆ ನಂಜುಂಡೇಗೌಡ ತಮ್ಮನ್ನು ಪತ್ರಿಕೋದ್ಯಮದ ಆರಂಭದಿಂದ ಮುನ್ನಡೆಸಿದ ಪ್ರತಿಯೊಬ್ಬರಿಗೂ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು. ಸ್ಮಿತಾ ಅಚ್ಯುತನ್ ಅವರು ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು. ಖಾದ್ರಿ ಶಾಮಣ್ಣ ಟ್ರಸ್ಟ್ ನ ಮುಖ್ಯಸ್ಥರಾದ ಎಚ್.ಆರ್. ಶ್ರೀಶಾ ಸ್ವಾಗತಿಸಿದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ