logo
ಕನ್ನಡ ಸುದ್ದಿ  /  ಕರ್ನಾಟಕ  /  ಶಹನಾಯ್ ವಾದಕ ಪಂಡಿತ್ ಬಸವರಾಜ ಭಜಂತ್ರಿಗೆ ಸಂಗೀತ ವಿದ್ವಾನ್ ಪ್ರಶಸ್ತಿ; ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ

ಶಹನಾಯ್ ವಾದಕ ಪಂಡಿತ್ ಬಸವರಾಜ ಭಜಂತ್ರಿಗೆ ಸಂಗೀತ ವಿದ್ವಾನ್ ಪ್ರಶಸ್ತಿ; ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ

Jayaraj HT Kannada

Oct 02, 2024 06:10 PM IST

google News

ಶಹನಾಯ್ ವಾದಕ ಪಂಡಿತ್ ಬಸವರಾಜ ಭಜಂತ್ರಿಗೆ ಸಂಗೀತ ವಿದ್ವಾನ್ ಪ್ರಶಸ್ತಿ

    • ಶಹನಾಯ್ ವಾದಕ ಪಂಡಿತ್ ಬಸವರಾಜ ಭಜಂತ್ರಿ ಹೆಡಿಗ್ಗೊಂಡ ಅವರಿಗೆ, ಈ ಬಾರಿಯ ದಸರಾ ಮಹೋತ್ಸವದಲ್ಲಿ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
ಶಹನಾಯ್ ವಾದಕ ಪಂಡಿತ್ ಬಸವರಾಜ ಭಜಂತ್ರಿಗೆ ಸಂಗೀತ ವಿದ್ವಾನ್ ಪ್ರಶಸ್ತಿ
ಶಹನಾಯ್ ವಾದಕ ಪಂಡಿತ್ ಬಸವರಾಜ ಭಜಂತ್ರಿಗೆ ಸಂಗೀತ ವಿದ್ವಾನ್ ಪ್ರಶಸ್ತಿ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಖ್ಯಾತ ಶಹನಾಯ್ ವಾದಕ ಪಂಡಿತ್ ಬಸವರಾಜ ಭಜಂತ್ರಿ ಹೆಡಿಗ್ಗೊಂಡ ಅವರಿಗೆ 2024-25ರ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಶಸ್ತಿ ಪ್ರಕಟಿಸಿದ್ದು, ಅಕ್ಟೋಬರ್ 3ರಂದು ಆರಂಭವಾಗುವ ದಸರಾ ಮಹೋತ್ಸವದಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅರಮನೆ ಮುಂಭಾಗ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಮೈಸೂರು ದಸರಾ ಉದ್ಘಾಟನಾ ಸಂದರ್ಭದಲ್ಲಿ ಪ್ರತಿ ವರ್ಷವೂ ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸಂಪ್ರದಾಯದಂತೆ ಈ ವರ್ಷ ಈ ಪ್ರತಿಷ್ಠಿತ ಪ್ರಶಸ್ತಿಗೆ ಹಾವೇರಿ ಜಿಲ್ಲೆಯ ಖ್ಯಾತ ಶಹನಾಯಿ ವಾದಕ ಪಂಡಿತ್ ಬಸವರಾಜ ಭಜಂತ್ರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್ ತಂಗಡಗಿ ಹೇಳಿದ್ದಾರೆ.

ಈ ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

ಈ ಬಾರಿಯ ದಸರಾ ಮಹೋತ್ಸವವನ್ನು ಸಾಹಿತಿ ಹಂಪಾ ನಾಗರಾಜಯ್ಯ ಉದ್ಘಾಟಿಸಲಿದ್ದಾರೆ. ಹೀಗಾಗಿ ನಾಗರಾಜಯ್ಯ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿ ಹೆಡಿಗ್ಗೊಂಡ ಗ್ರಾಮದ ಬಸವರಾಜ ಭಜಂತ್ರಿ ಅವರು, ತಿರುಕಪ್ಪ‌ ಹಾಗು ಸಾವಿತ್ರಮ್ಮ ದಂಪತಿಯ ಪುತ್ರ. ಪಂಡಿತ್ ಎಂ ವೆಂಕಟೇಶ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಆಯ್ಕೆ ಸಮಿತಿ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಅಕ್ಟೋಬರ್‌ 3ರಂದು ಸಂಜೆ ಮೈಸೂರು ಅರಮನೆ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರತಿಷ್ಠಿತ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ಪಂಡಿತ್ ಬಸವರಾಜ ಭಜಂತ್ರಿ ಅವರಿಗೆ ಪ್ರದಾನ ಮಾಡಲಿದ್ದಾರೆ ಎಂದು ಅವರು ಸಚಿವ ಶಿವರಾಜ ಎಸ್ ತಂಗಡಗಿ ಹೇಳಿದ್ದಾರೆ.

ಬಸವರಾಜ ಭಜಂತ್ರಿ ಹೆಡಿಗ್ಗೊಂಡ ಬದುಕು ಮತ್ತು ಪ್ರಶಸ್ತಿಗಳು

ಕರ್ನಾಟಕದ ಖ್ಯಾತ ಶಹನಾಯಿ ವಾದಕರಾದ ಬಸವರಾಜ ಭಜಂತ್ರಿಯವರು ಶಹನಾಯಿಯನ್ನು ಬಾಲ್ಯದಿಂದಲೂ ನುಡಿಸುತ್ತಾ ಬಂದವರು. ಕಲೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಅಪರೂಪದ ಸಾಧಕ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಹಡಿಗೊಂಡ ಗ್ರಾಮದ ತಿರುಕಪ್ಪ ಮತ್ತು ಶ್ರೀಮತಿ ಸಾವಿತ್ರಮ್ಮ ದಂಪತಿಗಳ ಪುತ್ರ. 1953ರಲ್ಲಿ ಸಂಗೀತ ಪರಂಪರೆಯ ಮನೆತನದಲ್ಲಿ ಜನಸಿದ ಇವರು, ತಂದೆ ಮತ್ತು ತಾತ ಶಹನಾಯಿ ವಾದಕರಾಗಿದ್ದರಿಂದ ಚಿಕ್ಕಂದಿನಲ್ಲೇ ಸಂಗೀತದತ್ತ ಆಕರ್ಷಿತರಾದರು. ದೂರದರ್ಶನ ಮತ್ತು ಆಕಾಶವಾಣಿಯ 'ಎ' ಶ್ರೇಣಿಯ ಕಲಾವಿದರಾದ ಇವರು, ಕರ್ನಾಟಕ, ಕೇರಳ, ಚೆನ್ನೈ ಗೋವಾ, ಗುಜರಾತ್, ದೆಹಲಿ ದೇಶಾದ ವಿವಿಧ ರಾಜ್ಯಗಳಲ್ಲಿ ತಮ್ಮ ಶಹನಾಯಿಯ ನಿನಾದವನ್ನು ಧ್ವನಿಸಿದ್ದಾರೆ.

ಧಾರವಾಡದ ಕಲಕೇರಿಯ ಸಂಗೀತ ಮಹಾವಿದ್ಯಾಲಯದಲ್ಲಿ ನೂರಾರು ಸ್ಥಳೀಯ ಹಾಗೂ ವಿದೇಶಿ ವಿದ್ಯಾರ್ಥಿಗಳಿಗೆ ಸಂಗೀತ ವಿದ್ಯೆಯನ್ನು ಧಾರೆಯೆರದಿದ್ದಾರೆ. ಪಂ ರಫೀಕ್‌ಖಾನ್ ಅವರೊಂದಿಗೆ ಜುಗಲ್‌ಬಂದಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈವರೆಗೆ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಮಹಾರಾಷ್ಟ್ರ ರಾಜ್ಯದ ಪ್ರಶಸ್ತಿ, ರಾಷ್ಟ್ರೀಯ ಸನಾದಿ ಅಪ್ಪಣ್ಣ ಪ್ರಶಸ್ತಿ, ಹಲವಾರು ಸಂಘ-ಸಂಸ್ಥೆಗಳ ವಿವಿಧ ಪ್ರಶಸ್ತಿ ಬಿರುದುಗಳು ಸಂದಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ