Balkish Banu: ಜೆಎಚ್‌ಪಟೇಲ್‌ರಂತವರನ್ನೇ ಮಾತಿನಲ್ಲಿ ಮೆಚ್ಚಿಸಿದ್ದ ಬಲ್ಕಿಷ್ ಬಾನುಗೆ ಎಂಎಲ್ಸಿ ಸ್ಥಾನ, 3 ದಶಕದ ಕಾಯುವಿಕೆಗೆ ಒಲಿದ ಹುದ್ದೆ
Jun 02, 2024 07:19 PM IST
ಅಂದು ತಮ್ಮ ಮಾತಿನಿಂದ ಜೆಎಚ್‌ಪಟೇಲರನ್ನೇ ಮೆಚ್ಚಿಸಿದ್ದ ಬಲ್ಕಿಷ್ ಭಾನುಗೆ ಈಗ ಎಂಎಲ್ಸಿ ಸ್ಥಾನ ಒಲಿದು ಬಂದಿದೆ.
- Karnataka Politics ಶಿವಮೊಗ್ಗದ ರಾಜಕಾರಣವೇ ಭಿನ್ನ. ಸತ್ವಯುತ ರಾಜಕಾರಣದ ಕೊಂಡಿಗಳು ಗಟ್ಟಿಯಾಗಿವೆ. ಮೂರು ದಶಕದ ಹಿಂದೆಯೇ ರಾಜಕೀಯವಾಗಿ ಪ್ರವರ್ಧನ ಮಾನಕ್ಕೆ ಬಂದ ಬಲ್ಕಿಷ್ ಬಾನು ಅವರಿಗೆ ಈಗ ಎಂಎಲ್ಸಿ ಸ್ಥಾನ ಒಲಿದು ಬಂದಿದೆ. ಅವರ ರಾಜಕೀಯ ಬದುಕಿನ ಚಿತ್ರಣ ಇಲ್ಲಿದೆ.
ಶಿವಮೊಗ್ಗ: ಅದು 90ರ ದಶಕದ ಮಧ್ಯಭಾಗ. ಜೆಎಚ್‌ಪಟೇಲ್ ಎಂಬ ಹಾಸ್ಯಪ್ರಜ್ಞೆಯ, ಸಮಾಜವಾದಿ ಹಿನ್ನೆಲೆಯ ನಾಯಕ ಮುಖ್ಯಮಂತ್ರಿಯಾಗಿದ್ದ ಸಮಯ. ತವರು ಶಿವಮೊಗ್ಗಕ್ಕೆ ಆಗಾಗ ಪಟೇಲರಿಗೆ ಬರುವುದೆಂದರೆ ಪ್ರೀತಿ. ಏನಾದರೂ ಕಾರ್ಯಕ್ರಮವಿದ್ದರೂ ತಪ್ಪಿಸುತ್ತಿರಲಿಲ್ಲ. ಅವರು ಸಿಎಂ ಆಗಿದ್ದ ಅವಧಿಯಲ್ಲಿ ಅಲ್ಪಸಂಖ್ಯಾ ವರ್ಗಕ್ಕೆ ಸೇರಿದ ಯುವನಾಯಕಿಯೊಬ್ಬರು ಅಚ್ಚ ಕನ್ನಡದಲ್ಲಿ ಸುಲಿಲತವಾಗಿ ಭಾಷಣ ಮಾಡುತ್ತಾ ಗಮನ ಸೆಳಯುತ್ತಿದ್ದರು. ಅವರಿಗೆ ಶಿವಮೊಗ್ಗ ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನವೂ ಲಭಿಸಿತ್ತು. ಸಿಎಂ ಅವರು ಬಂದ ಕಾರ್ಯಕ್ರಮಕ್ಕೆ ಶಿಷ್ಟಾಚಾರದ ಜತೆಗೆ ಜನತಾದಳ ಪಕ್ಷದವರು ಎನ್ನುವ ಕಾರಣಕ್ಕೂ ಅವರು ತಪ್ಪಿಸಿಕೊಳ್ಳುತ್ತಿರಲಿಲ್ಲ. ಅಲ್ಲಿನ ಅವರ ಭಾಷಣ ಸಿಎಂ ಅವರ ಮೆಚ್ಚುಗೆಗೆ ಪಾತ್ರವಾಗುತ್ತಿತ್ತು. ಪ್ರಗತಿ ಪರಿಶೀಲನಾ ಸಭೆ, ಸ್ಥಳ ಪರಿಶೀಲನೆವಿದ್ದರೂ ಅಲ್ಲಿ ಆ ಮಹಿಳೆ ನಿಖರವಾಗಿಯೇ ಮಾತನಾಡುತ್ತಿದ್ದರು, ಇವರು ಬೇಗನೇ ಶಾಸಕರೂ ಆಗಿ ಸಚಿವರೂ ಆಗುತ್ತಾರೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಲೇ ಇತ್ತು. ಆದರೆ ಅವರು ಶಾಸಕರಾಗಿ ಕಾದಿದ್ದು ಸತತ ಮೂರು ದಶಕಗಳ ಕಾಲವೇ.
ಅವರ ಹೆಸರು ಬಲ್ಕಿಷ್ ಬಾನು. ಕರ್ನಾಟಕದ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ತನ್ನ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಅದರಲ್ಲಿ ಬಲ್ಕಿಷ್ ಭಾನು ಹೆಸರಿದೆ. ಅದನ್ನು ಬಿಲ್ಕಿಸ್ ಬಾನು ಎಂದು ನಮೂದಿಸುವ ಮೂಲಕ ಗುಜರಾತ್ ಗಲಭೆಯ ದಿಟ್ಟ ಹೋರಾಟಗಾರ್ತಿ ಮಹಿಳೆಯನ್ನು ನೆನಪಿಸಲಾಗಿದೆ. ಆದರೆ ಇವರು ಒಂದು ರೀತಿಯಲ್ಲಿ ರಾಜಕೀಯದಲ್ಲಿ ಹೋರಾಟದ ಮೂಲಕವೇ ಮೇಲೆ ಬಂದು ಸದ್ಯದಲ್ಲೇ ಮೇಲ್ಮನೆ ಪ್ರವೇಶಿಸಿ ಇತಿಹಾಸ ಬರೆಯಲಿದ್ದಾರೆ.
ಸಿಎಂಗಳ ತವರು ಶಿವಮೊಗ್ಗ
ಶಿವಮೊಗ್ಗ ಸಮಾಜವಾದಿ ಹಿನ್ನೆಲೆ ಜತೆಗೆ ರಾಜಕೀಯ ಮುಂಚೂಣಿಯ ಜಿಲ್ಲೆ. ನಾಲ್ಕು ಮಂದಿ ಸಿಎಂಗಳನ್ನು ನೀಡಿದ ಜಿಲ್ಲೆಯೂ ಹೌದು. ಕಡಿದಾಳ್ ಮಂಜಪ್ಪ, ಎಸ್.ಬಂಗಾರಪ್ಪ, ಜೆ.ಎಚ್.ಪಟೇಲ್ ಹಾಗೂ ಯಡಿಯೂರಪ್ಪ ಇದೇ ಭಾಗದಲ್ಲಿ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದು ಉನ್ನತ ಹುದ್ದೆ ಏರಿದವರು.
80ರ ದಶಕದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಅನುಷ್ಠಾನಗೊಂಡ ಪಂಚಾಯತ್‌ರಾಜ್ ವ್ಯವಸ್ಥೆಯಡಿ ಭಿನ್ನ ಭಾಗ, ಹಿನ್ನೆಲೆಯ ಪ್ರತಿಭೆಗಳನ್ನು ರಾಜಕೀಯಕ್ಕ ತರುವ ವೇದಿಕೆಯೂ ಇದಾಗಿತ್ತು.
ಬಲ್ಕಿಷ್ ಭಾನು ಎಂಬ ಪ್ರತಿಭೆ
ಹೀಗೆ ಶಿವಮೊಗ್ಗ ಜಿಲ್ಲೆಯ ಗಟ್ಟಿ ರಾಜಕೀಯ ನೆಲದಲ್ಲಿ ಮೊದಲ ಚುನಾವಣೆಯಲ್ಲಿಯೇ ಗೆದ್ದು ಪರಿಷತ್ ಸದಸ್ಯರಾಗಿ ಗಮನ ಸೆಳೆದವರು ಬಲ್ಕಿಷ್ ಬಾನು. ಭದ್ರಾವತಿ ತಾಲ್ಲೂಕಿನ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬಂದ ಬಲ್ಕಿಷ್ ಬಾನು ಶಿಕ್ಷಕರಾಗಿದ್ದವರು. ಜನತಾದಳದೊಂದಿದಿಗೆ ಗುರುತಿಸಿಕೊಂಡು ಪ್ರವರ್ಧನಕ್ಕೆ ಬಂದವರು ಬಲ್ಕಿಷ್ ಬಾನು.ಜನತಾದಳದಿಂದ 1986 ರಲ್ಲಿ ಅಂದಿನ ಜಿಲ್ಲಾ ಪರಿಷತ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸಕ್ರೀಯ ರಾಜಕಾರಣ ಪ್ರವೇಶಿಸಿದರು. ಎರಡನೇ ಬಾರಿ ಜಿಲ್ಲಾಪಂಚಾಯಿತಿಯಾದಾಗ 1992 ರಲ್ಲಿಯೂ ಗೆಲುವು ಸಾಧಿಸಿದವರು. ಅವರಿಗೆ ಜಿಲ್ಲಾಪಂಚಾಯಿತಿ ಅಧ್ಯಕ್ಷ ಗಾದಿಯೂ ಒಲಿದು ಬಂದಿತು. 30 ತಿಂಗಳ ಮೊದಲ ಅವಧಿಗೆ ಬಲ್ಕಿಷ್ ಬಾನು ಅವರಿಗೆ ಅಧಿಕಾರ ಲಭಿಸಿತು. ಶಿವಮೊಗ್ಗದಲ್ಲಿ ಅವರ ಭಾಷಣ, ಸಭೆಗಳನ್ನು ಆಯೋಜಿಸುವ ರೀತಿ, ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಲು ತೆಗೆದುಕೊಳ್ಳುತ್ತಿದ್ದ ರೀತಿ ಗಮನ ಸೆಳೆಯುತ್ತಿತ್ತು.
ಮೊದಲು ಉಪಮುಖ್ಯಮಂತ್ರಿಯಾಗಿ ಆನಂತರ ಸಿಎಂ ಆದ ಜೆಎಚ್‌ಪಟೇಲರು ಬಂದ ಕಾರ್ಯಕ್ರಮಗಳಲ್ಲಿ ಬಲ್ಕಿಷ್ ಬಾನು ಭಾಷಣ ಸ್ಪಷ್ಟವಾಗಿರುತ್ತಿತ್ತು. ಅದು ಜೆಎಚ್‌ಪಟೇಲರ ಮೆಚ್ಚುಗೆಗೂ ಪಾತ್ರವಾಗುತ್ತಿತ್ತು. ಏನಮ್ಮಾ ಬಲ್ಕಿಷ್ ಬಹಳ ಚೆನ್ನಾಗಿ ಮಾತನಾಡಿದೆ ಎಂದು ಪಟೇಲರು ಪ್ರೀತಿಯಿಂದಲೇ ಹೊಗಳುತ್ತಿದ್ದರು. ಅಷ್ಟೇ ಅಲ್ಲ ಆಗ ಶಾಸಕರಾಗಿದ್ದ ಬಿ.ಎಸ್.ಯಡಿಯೂರಪ್ಪ, ಕಾಗೋಡು ತಿಮ್ಮಪ್ಪ, ಕೆ.ಎಸ್. ಈಶ್ವರಪ್ಪ, ಅರಗಜ್ಞಾನೇಂದ್ರ, ಆಯನೂರು ಮಂಜುನಾಥ್ ಕೂಡ ಮೆಚ್ಚುಗೆ ಮಾತುಗಳನ್ನೇ ಆಡುತ್ತಿದ್ದರು.
ಕಾಯುವಿಕೆಗೆ ಸಿಕ್ಕ ಪ್ರತಿಫಲ
ಬಲ್ಕಿಷ್ ಅವರನ್ನು ಕಂಡವರು ಇವರಿಗೆ ರಾಜಕೀಯ ಭವಿಷ್ಯ ಚೆನ್ನಾಗಿದೆ ಎಂದೇ ಹೇಳುತ್ತಿದ್ದರು. ಭದ್ರಾವತಿಯಿಂದ ಶಾಸಕರಾಗಬಹುದು ಎಂದುಕೊಂಡರು, ಮುಂದೆ ಜನತಾದಳ ಇಬ್ಬಾಗವಾದಾಗ ಅವರು ಕಾಂಗ್ರೆಸ್ ಕಡೆ ಗುರುತಿಸಿಕೊಂಡರು. ಪಕ್ಷದಲ್ಲೇ ಇದ್ದರೂ ಶಾಸಕರಾಗುವ ಅವಕಾಶ ಬಂದಿರಲಿಲ್ಲ.
2013 ರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಬಲ್ಕೀಶ್ ಬಾನು ಅವರು ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ರಾಜ್ಯ ಪ್ರವಾಸ ಮಾಡಿ ಹಲವು ಕಡೆ ಸಭೆಗಳನ್ನೂ ನಡೆಸಿದ್ದರು. ಜೈಲು ಶಿಕ್ಷೆ ಅನುಭವಿಸಿದ ಹಲವಾರು ಅಲ್ಪಸಂಖ್ಯಾತ ಅಮಾಯಕರ ಪರವಾಗಿ ದನಿಯಾಗಿ ಅವರಿಗೆ ಕಾನೂನು ನೆರವು ಕೂಡ ಕೊಡಿಸಿದ್ದರು.
ಈಗ ಹಿಂದೆ ಜನತಾದಳದ ನಂಟಿನ ಹಿನ್ನೆಲೆಯಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರು ಬಲ್ಕಿಷ್ ಅವರಿಗೆ ಪರಿಷತ್ ಸ್ಥಾನಕ್ಕೆ ಅವಕಾಶ ಕಲ್ಪಿಸುವ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ.
ಪರಿಷತ್ ಪ್ರವೇಶಕ್ಕೆ ಅಣಿ
ಕರ್ನಾಟಕ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗುವ ಚುನಾವಣೆಗೆ ಶಿವಮೊಗ್ಗ ದ ಜಿಲ್ಲಾಪಂಚಾಯ್ತಿ ಮಾಜಿ ಅಧ್ಯಕ್ಷರಾದ ಬಲ್ಕೀಷ್ ಬಾನು ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸುವ ಮೂಲಕ ಅಲ್ಪಸಂಖ್ಯಾತ ಸಮುದಾಯ ದ ಮಹಿಳಾ ನಾಯಕತ್ವಕ್ಕೆ ಮಣೆ ಹಾಕಿದ ಮಹತ್ವದ ನಿರ್ಧಾರ ಕೈಗೊಂಡಿದೆ. ವಿಧಾನಪರಿಷತ್ ಗೆ ಕಾಂಗ್ರೆಸ್ ಶಾಸಕರ ಸಂಖ್ಯಾಬಲದಲ್ಲಿ ಏಳು ಜನ ಆಯ್ಕೆಯಾಗಲಿದ್ದು, ಬಲ್ಕೀಷ್ ಬಾನು ಅವರಿಗೆ ಪರಿಷತ್ ಸದಸ್ಯತ್ವ ಭಾಗ್ಯ ಒಲಿದು ಬಂದಿದೆ.ಅವರು ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿ ಇಡೀ ರಾಜ್ತದಲ್ಲೆ ಶಿವಮೊಗ್ಗ ಜಿಲ್ಲಾಪಂಚಾಯ್ತಿ ಗ್ರಾಮೀಣಾಭಿವೃದ್ಧಿ ಆಡಳಿತದಲ್ಲಿ ಮೊದಲನೆ ಸ್ಥಾನ ಗಳಿಸಿದ ಹೆಗ್ಗಳಿಕೆ ಪಾತ್ರವಾಗಿತ್ತು. ಈಗ ಈ ಅವಕಾಶ ನೀಡಿರುವುದು ಖುಷಿಯ ವಿಚಾರ ಎಂದು ಶಿವಮೊಗ್ಗದ ಹಿರಿಯ ಪತ್ರಕರ್ತ ರವಿಕುಮಾರ್ ಟೆಲೆಕ್ಸ್ ಹೇಳುತ್ತಾರೆ.
ಮುಕ್ತರುನ್ನೀಸಾ, ನಫೀಸಾ ನಂತರ
ಪ್ರತಿ ಬಾರಿ ವಿಧಾನಸಭೆ ಚುನಾವಣೆಗೆ ಬಲ್ಕಿಷ್ ಅವರ ಹೆಸರು ಶಿಫಾರಸ್ಸು ಆದರೂ ಭದ್ರಾವತಿಯ ಬಲಾಡ್ಯರ ನಡುವೆ ಅವರಿಗೆ ವಿಧಾನಸಭೆ ಪ್ರವೇಶಿಸುವುದು ಕಷ್ಟ ಎನ್ನುವ ಸ್ಥಿತಿಯಂತೂ ಇತ್ತು. ಈ ಬಾರಿ ಅವರಿಗೆ ಅವಕಾಶವನ್ನು ಮಾಡಿಕೊಡಲಾಗಿದೆ. ಇದೊಂದು ರೀತಿ ಅರ್ಹ ಆಯ್ಕೆಯಷ್ಟೇ ಅಲ್ಲ. ಅಲ್ಪಸಂಖ್ಯಾತ ಮಹಿಳೆಯೊಬ್ಬರು ರಾಜಕೀಯವಾಗಿ ಬೆಳೆಯಲು ದೊರೆತ ಅವಕಾಶವೂ ಹೌದು.
ಈ ಹಿಂದೆ ಕರ್ನಾಟಕದವರೇ ಆದ ಮುಕ್ತರುನ್ನೀಸಾ ಬೇಗಂ, ನಫೀಸಾ ಫಜಲ್ ಅವರೂ ಪರಿಷತ್ ಸದಸ್ಯರಾಗಿದ್ದವರು. ನಫೀಸಾ ಸಚಿವೆ ಕೂಡ ಆಗಿದ್ದರು. ಅವರ ನಡುವೆ ಭಿನ್ನವಾಗಿ ನಿಲ್ಲುವ ಬಲ್ಕಿಷ್ ಭಾನು ಅವರ ಪ್ರತಿಭೆಗೆ ಪರಿಷತ್ ವೇದಿಕೆಯಾಗಲಿ ಎನ್ನುವ ಆಶಯವಂತೂ ಶಿವಮೊಗ್ಗ ಹಾಗೂ ಭದ್ರಾವತಿ ಭಾಗದ ಜನರಲ್ಲಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ)