Shivamogga News: ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ, ಕುಕೃತ್ಯದ ಹಿಂದಿರುವವರಿಗೆ ಕಾನೂನು ಮೂಲಕ ಕಠಿಣ ಶಿಕ್ಷೆ; ಸಿಎಂ ಭರವಸೆ
Aug 22, 2023 04:49 PM IST
ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ, ಕುಕೃತ್ಯದ ಹಿಂದಿರುವವರಿಗೆ ಕಾನೂನು ಮೂಲಕ ಕಠಿಣ ಶಿಕ್ಷೆ; ಸಿಎಂ ಭರವಸೆ
- ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನ ಪ್ರಮುಖ ವೃತ್ತದಲ್ಲಿ ಕಳೆದ ಸುಮಾರು ಎರಡು ದಶಕಗಳ ಹಿಂದೆಯೇ ಗಾಂಧಿ ಪ್ರತಿಮೆಯನ್ನು ನಿರ್ಮಿಸಲಾಗಿತ್ತು. ಆದರೆ, ಭಾನುವಾರ ತಡರಾತ್ರಿ ಕಿಡಿಗೇಡಿಗಳು ಈ ಪ್ರತಿಮೆಯನ್ನು ಧ್ವಂಸಗೊಳಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಶಿವಮೊಗ್ಗ: ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಗ್ರಾಮದಲ್ಲಿ ನಡೆದಿದೆ.
ರಾತ್ರೋರಾತ್ರಿ ಕಿಡಿಗೇಡಿಗಳು ದೇಶಕ್ಕೆ ಸ್ವಾತಂತ್ರ್ಯ ಸಿಗಲು ಮುಂದಾಳತ್ವ ವಹಿಸಿದ್ದ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ಸಾರ್ವಜನಿಕ ವಲಯದಲ್ಲೀ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹೊಳೆಹೊನ್ನೂರಿನ ಪ್ರಮುಖ ವೃತ್ತದಲ್ಲಿ ಕಳೆದ ಸುಮಾರು ಎರಡು ದಶಕಗಳ ಹಿಂದೆಯೇ ಗಾಂಧಿ ಪ್ರತಿಮೆಯನ್ನು ನಿರ್ಮಿಸಲಾಗಿತ್ತು. ಆದರೆ, ಭಾನುವಾರ ತಡರಾತ್ರಿ ಕಿಡಿಗೇಡಿಗಳು ಈ ಪ್ರತಿಮೆಯನ್ನು ಧ್ವಂಸಗೊಳಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಿಡಿಗೇಡಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ 'ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆ ಧ್ವಂಸಗೊಳಿಸಿರುವ ದೇಶವಿರೋಧಿ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ನೆಲದ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆ, ಸಂವಿಧಾನ ಮತ್ತು ಕಾನೂನಿನ ಬಗೆಗೆ ಗೌರವ ಇಲ್ಲದವರು ಮಾತ್ರ ಇಂತಹ ಹೀನ ಕೃತ್ಯ ಎಸಗಲು ಸಾಧ್ಯ ಎಂದು ಅಸಹನೆ ಹೊರಹಾಕಿದ್ದಾರೆ.
ಈ ಕುಕೃತ್ಯದ ಹಿಂದೆ ಯಾರೇ ಇರಲಿ ಅವರನ್ನು ಹಿಡಿದು ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸುತ್ತೇವೆ. ಯಾರೊಬ್ಬರೂ ಈ ಬಗ್ಗೆ ಉದ್ವೇಗಕ್ಕೆ ಒಳಗಾಗಿ ಕಾನೂನು ಕೈಗೆತ್ತಿಕೊಳ್ಳದೆ, ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಲು ಸಹಕರಿಸಬೇಕು ಎಂದು ಮನವಿ ಮಾಡುತ್ತೇನೆ' ಎಂದು ತಿಳಿಸಿದ್ದಾರೆ.