logo
ಕನ್ನಡ ಸುದ್ದಿ  /  ಕರ್ನಾಟಕ  /  Shivamogga News: ಕಾಂಗ್ರೆಸ್ ಗ್ಯಾರಂಟಿ ಜಾರಿಗೆ ತಂದು ದುಡಿದು ತಿನ್ನುವವರ ಹೊಟ್ಟೆ ಮೇಲೆ ಬರೆ ಎಳೆದಿದೆ ಎಂದ ಕೆಎಸ್ ಈಶ್ವರಪ್ಪ

Shivamogga News: ಕಾಂಗ್ರೆಸ್ ಗ್ಯಾರಂಟಿ ಜಾರಿಗೆ ತಂದು ದುಡಿದು ತಿನ್ನುವವರ ಹೊಟ್ಟೆ ಮೇಲೆ ಬರೆ ಎಳೆದಿದೆ ಎಂದ ಕೆಎಸ್ ಈಶ್ವರಪ್ಪ

HT Kannada Desk HT Kannada

Jun 17, 2023 08:36 PM IST

google News

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

    • KS Eshwarappa on Congress Guarantee: ಉಚಿತ ಪ್ರಯಾಣದ ಗ್ಯಾರಂಟಿ ಕೂಡ ಹಲವರ ಬದುಕನ್ನು ಕಿತ್ತುಕೊಂಡಿದೆ. ಖಾಸಗಿ ಬಸ್‌ಗಳು, ಆಟೋ ಚಾಲಕರು, ಕ್ಯಾಬ್‌ಗಳು ಈಗ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅವರ ಹೊಟ್ಟೆಯ ಮೇಲೆ ಬರೆ ಹಾಕಲಾಗಿದೆ ಎಂದು ಕೆ.ಎಸ್.ಈಶ್ವರಪ್ಪ ದೂರಿದರು.
ಮಾಜಿ ಸಚಿವ  ಕೆ.ಎಸ್.ಈಶ್ವರಪ್ಪ
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ಕಾಂಗ್ರೆಸ್ ಇಷ್ಟು ದಿವಸ ಹಿಂದೂ ವಿರೋಧಿ ಎಂಬುದು ಎಲ್ಲರಿಗೂ ತಿಳಿದಿತ್ತು. ಈಗ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದುಡಿದು ತಿನ್ನುವವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವನ್ನೂ ಮಾಡುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಚಿತ ಪ್ರಯಾಣದ ಗ್ಯಾರಂಟಿ ಕೂಡ ಹಲವರ ಬದುಕನ್ನು ಕಿತ್ತುಕೊಂಡಿದೆ. ಖಾಸಗಿ ಬಸ್‌ಗಳು, ಆಟೋ ಚಾಲಕರು, ಕ್ಯಾಬ್‌ಗಳು ಈಗ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅವರ ಹೊಟ್ಟೆಯ ಮೇಲೆ ಬರೆ ಹಾಕಲಾಗಿದೆ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯಿದೆಯನ್ನು ವಾಪಾಸ್ ತೆಗೆದುಕೊಳ್ಳುವ ನಿರ್ಧಾರ ಮಾಡಿರುವುದು ಖಂಡನೀಯ. ಇದರಿಂದ ನಮ್ಮ ಹಿಂದೂ ಹೆಣ್ಣು ಮಕ್ಕಳಿಗೆ ತೊಂದರೆಯಾಗುತ್ತದೆ. ಲವ್ ಜಿಹಾದ್‌ನಂತಹ ಘಟನೆಗಳು ಹೆಚ್ಚುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಡ ಜನರಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಹೊರಟಿದೆ. ಇವರು ಗ್ಯಾರಂಟಿ ಕೊಡುವಾಗ ಮೋದಿಯವರನ್ನು ಕೇಳಿದ್ದರೇನು, ಅವರು ಒಪ್ಪಿದ್ದರೇನು, ಈಗ ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಕೊಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಗ್ಯಾರಂಟಿ ಕೊಡಲಾಗದವರು ಇನ್ನೊಬ್ಬರ ಮೇಲೆ ಆರೋಪ ಹೊರಿಸುವುದಲ್ಲ ಸರಿಯಲ್ಲ. ಹೇಳಿದಂತೆ ಅಕ್ಕಿ ಕೊಡಿ. ಆಗದಿದ್ದರೆ ಅಷ್ಟೇ ಮೊತ್ತದ ಹಣಕೊಡಿ. ಇಲ್ಲದಿದ್ದರೆ ಬಡವರ ಶಾಪ ನಿಮ್ಮನ್ನು ತಟ್ಟದೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ವಿದ್ಯುತ್ ಉಚಿತ ಕೊಡುವುದಾಗಿ ಹೇಳಿದ ಸರ್ಕಾರ ಈಗ ಯದ್ವಾ ತದ್ವಾ ವಿದ್ಯುತ್ ದರ ಏರಿಸಿದೆ. ಇದರಿಂದ ಸಣ್ಣ ಸಣ್ಣ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈಗಾಗಲೇ ಸಣ್ಣ ಕೈಗಾರಿಕೆಗಳ ಸಂಘ ಸರ್ಕಾರವನ್ನು ಎಚ್ಚರಿಸಿದೆ ಎಂದರು.

ಹಾಗೆಯೇ ಮನೆಯ ಯಜಮಾನಿಗೆ 2 ಸಾವಿರ ಕೊಡುವುದಾಗಿ ಹೇಳಿದ್ದ ಸರ್ಕಾರ ಈಗ ಅದನ್ನು ಮುಂದೆ ಹಾಕಿದೆ. ಅರ್ಜಿ ಹಾಕಲು ಕೂಡ ಇನ್ನೂ ಆಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳಿನಲ್ಲಿಯೇ ಜನರು ಗ್ಯಾರಂಟಿಯ ಗೊಂದಲದಲ್ಲಿದ್ದಾರೆ ಎಂದರು.

ಮುಂದೆ ಜಿಲ್ಲಾ ಪಂಚಾಯತ್​, ತಾಲೂಕ್​ ಪಂಚಾಯತ್​ ಹಾಗೂ ಲೋಕಸಭಾ ಚುನಾವಣೆಗಳು ಬರುತ್ತವೆ. ಕಾಂಗ್ರೆಸ್ ಬಗ್ಗೆ ಇಟ್ಟ ನಂಬಿಕೆಗಳೆಲ್ಲಾ ಹುಸಿಯಾಗಿವೆ. ಯಾಕಾದರೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತೋ ಎಂದು ಜನರು ಗೊಣಗುತ್ತಿದ್ದಾರೆ. ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಜಯಭೇರಿ ಬಾರಿಸುತ್ತದೆ. ಕಾಂಗ್ರೆಸ್ ಮತ್ತೆ ಮನೆಗೆ ಹೋಗುತ್ತದೆ ಎಂದು ಭವಿಷ್ಯ ನುಡಿದರು.

ವರದಿ: ಅದಿತಿ, ದಾವಣಗೆರೆ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ