Shivamogga News: ಹೊಸನಗರದಲ್ಲಿ ಮತ್ತೆ ಕಾಣಿಸಿಕೊಂಡ ಮಂಗನ ಕಾಯಿಲೆ, ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಸಾವು
Jan 08, 2024 02:25 PM IST
ಹೊಸನಗರ ತಾಲೂಕಿನ 19 ವರ್ಷದ ಯುವತಿ ಮಂಗನ ಜ್ವರ (ಕ್ಯಾಸನೂರು ಅರಣ್ಯ ಕಾಯಿಲೆ - ಕೆಎಫ್‌ಡಿ)ದ ಕಾರಣ ಮೃತಪಟ್ಟಿರುವುದಾಗಿ ವರದಿಯಾಗಿದೆ. (ಸಾಂಕೇತಿಕ ಚಿತ್ರ)
ಮಂಗನ ಕಾಯಿಲೆ ಅಥವಾ ಕ್ಯಾಸನೂರು ಅರಣ್ಯ ಕಾಯಿಲೆ ಕಾರಣ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿದ್ದ ಹೊಸನಗರ ತಾಲೂಕಿನ 19 ವರ್ಷದ ಯುವತಿ ಸೋಮವಾರ ಮಧ್ಯಾಹ್ನ ಮೃತಪಟ್ಟಿದ್ದಾಳೆ. ಏನಿದು ಕ್ಯಾಸನೂರು ಅರಣ್ಯ ಕಾಯಿಲೆ, ಇಲ್ಲಿದೆ ಮಾಹಿತಿ.
ಶಿವಮೊಗ್ಗ: ಹೊಸನಗರ ತಾಲೂಕಿನ 19 ವರ್ಷದ ಯುವತಿ ಮಂಗನ ಜ್ವರ (ಕ್ಯಾಸನೂರು ಅರಣ್ಯ ಕಾಯಿಲೆ - ಕೆಎಫ್‌ಡಿ)ದ ಕಾರಣ ಸೋಮವಾರ (ಜ.8) ಮಧ್ಯಾಹ್ನ ಮೃತಪಟ್ಟಿದ್ದಾಳೆ. ಕೆಎಫ್‌ಡಿ ಸೋಂಕಿತಳಾಗಿ ಗಂಭೀರ ಅನಾರೋಗ್ಯಪೀಡಿತಳಾಗಿದ್ದ ಯುವತಿಯನ್ನು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಉದಯವಾಣಿ ವರದಿ ಮಾಡಿದೆ.
ಹೊಸನಗರ ತಾಲೂಕಿನ ಸಂಪೆಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಗ್ರಾಮದ ಯುವತಿ ಆಕೆ. ಜಿಲ್ಲಾ ಆರೋಗ್ಯಾಧಿಕಾರಿ ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಈ ತಿಂಗಳು ದೃಢಪಟ್ಟ ಎರಡನೆ ಕೆಎಫ್‌ಡಿ ಪ್ರಕರಣ ಇದು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
ಮೆಗ್ಗಾನ್ ಆಸ್ಪತ್ರೆಗೆ ಜನವರಿ 1ರಂದು ಯುವತಿಯನ್ನು ದಾಖಲಿಸಲಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇತ್ತು. ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯ ಸ್ಥಿತಿ ಸುಧಾರಿಸುವ ಲಕ್ಷಣ ಆರಂಭದಲ್ಲಿ ಗೋಚರಿಸಿತ್ತು. ಆಕೆಗೆ ಕೆಎಫ್‌ಡಿ ಕಾಯಿಲೆ ದೃಢಪಟ್ಟ ಬಳಿಕ, ಮಣಿಪಾಲದ ಕೆಎಂಸಿಗೆ ಸ್ಥಳಾಂತರಿಸಲಾಗಿತ್ತು.
ಇನ್ನೊಂದೆಡೆ, ಯುವತಿಯ ಸಹೋದರಿಗೂ ಜ್ವರ ಬಂದಿದ್ದು ಡೆಂಗ್ಯೂ ಪಾಸಿಟಿವ್ ದೃಢಪಟ್ಟಿದೆ. ಆಕೆಯನ್ನು ತೀರ್ಥಹಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.
ಮಂಗನ ಕಾಯಿಲೆ ಲಸಿಕೆ ಸಂಶೋಧನೆಗೆ ಆರ್ಥಿಕ ನೆರವು; ಸಚಿವ ದಿನೇಶ್ ಗುಂಡೂರಾವ್
ಮಂಗನ ಕಾಯಿಲೆಗೆ ಲಸಿಕೆ ಕಂಡು ಹಿಡಿಯಲು ಸಂಶೋಧನಾ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಳೆದ ತಿಂಗಳು ವಿಧಾನಪರಿಷತ್‌ನಲ್ಲಿ ತಿಳಿಸಿದ್ದರು.
ಪರಿಷತ್ ಕಲಾಪದ ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ ಡಿ.ಎಸ್ ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಷ್ಟು ದಿನ ಕೆಎಫ್‌ಡಿ ರೋಗಕ್ಕೆ ಲಸಿಕೆಯೊಂದನ್ನು ಬಳಸಲಾಗುತ್ತಿತ್ತು. ಆ ಲಸಿಕೆಯಿಂದ ಯಾವುದೇ ರೀತಿಯ ಪ್ರಯೋಜನ ಇಲ್ಲ ಎಂದು ನಿಲ್ಲಿಸಲಾಗಿದೆ. ಮಂಗನ ಕಾಯಿಲೆ ನಿಯಂತ್ರಿಸುವ ಶಕ್ತಿ ಆ ಲಸಿಕೆಯಲ್ಲಿ ಇಲ್ಲ ಎಂಬ ವರದಿ ಹಿನ್ನೆಲೆಯಲ್ಲಿ ಅದನ್ನು ನೀಡಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಈ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಕಡಿಮೆ ಇರುವ ಕಾರಣ ಲಸಿಕೆ ತಯಾರಿಸಲು ಕಂಪನಿಗಳು ಹೆಚ್ಚು ಆಸಕ್ತಿ ತೋರುತ್ತಿಲ್ಲ. ಆದಾಗ್ಯೂ, ಹೊಸ ಲಸಿಕೆ ಪಡೆಯುವ ಪ್ರಯತ್ನ ನಡೆಸಲಾಗಿದ್ದು ಐಸಿಎಂಆರ್ ಜೊತೆ ಮಾತುಕತೆ ನಡೆಸಲಾಗಿದೆ. ಒಂದು ಕಂಪನಿ ಜತೆಗೆ ಲಸಿಕೆ ಸಂಶೋಧನೆಗೆ ಮಾತುಕತೆ ನಡೆಸಿದ್ದು, ಹಣ ಒದಗಿಸುವ ಭರವಸೆ ನೀಡಲಾಗಿದೆ. ಯಶಸ್ಸಿನ ಕುರಿತು ಈಗಲೇ ಏನೂ ಹೇಳಲಾಗದು ಎಂದು ಸಚಿವರು ಸದನಕ್ಕೆ ತಿಳಿಸಿದ್ದರು.
ಮಂಗನ ಜ್ವರ ಅಥವಾ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ) ಎಂದರೇನು
ಕ್ಯಾಸನೂರು ಎಂಬುದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಒಂದು ಊರು. ಪ್ರಪಂಚದಲ್ಲೇ ಅತ್ಯಧಿಕ ಇಳುವರಿ ಮತ್ತು ಉತ್ಕೃಷ್ಟ ಅಡಕೆಯ ಸಸಿಗಳಿಗೆ ಈ ಊರು ಪ್ರಸಿದ್ದಿ ಪಡೆದಿದೆ. 1957ರ ಬೇಸಿಗೆಯಲ್ಲಿ ಮಂಗಗಳು ಸತ್ತು ಹೋದವು. ಆ ನಂತರ ಊರಿನ ಜನರಿಗೆ ಬಂದ ಕಾಯಿಲೆ ಸ್ಥಳೀಯರನ್ನು ತಲ್ಲಣಗೊಳಿಸಿತು. ಮನುಷ್ಯರನ್ನು ಕಾಡಿದ ಈ ಕಾಯಿಲೆಯನ್ನು ಅಂದು ಮಂಗನ ಕಾಯಿಲೆ ಎಂದು ಗುರುತಿಸಿದರು. ಬಳಿಕ ಇದು ಕ್ಯಾಸನೂರಿನಲ್ಲಿ ಮಾತ್ರ ಕಾಣಿಸಿಕೊಂಡ ಕಾರಣ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ) ಎಂದು ಗುರುತಿಸಿದರು.
ಕೆಎಫ್‌ಡಿಯು ಪ್ರಾಣಿಗಳಲ್ಲಿ ಕಾಣುವ ರೋಗವಾಗಿದ್ದು, ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಆದರೆ, ಪ್ರಾಣಿಗಳ ಮೈಮೇಲಿನ ಉಣ್ಣೆಗಳು ಮನುಷ್ಯರನ್ನು ಕಚ್ಚಿದರೆ ಈ ರೋಗ ಹರಡುತ್ತದೆ. ಈ ರೋಗ ಹುಟ್ಟಿ ನಾಲ್ಕಾರು ದಶಕಗಳಾದರೂ ಇದಕ್ಕೆ ಶಾಶ್ವತ ಔಷಧ ಇನ್ನೂ ಅಭಿವೃದ್ಧಿಪಡಿಸಲಾಗಿಲ್ಲ.
ಶಿಕಾರಿಪುರ, ಹೊಸನಗರ, ತೀರ್ಥಹಳ್ಳಿ ಹೀಗೆ ಮಲೆನಾಡಿನ ಕೆಲವೇ ಪ್ರದೇಶಕ್ಕೆ ಇದು ಸೀಮಿತವಾಗಿದ್ದ ಕಾಯಿಲೆ ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೂ ವ್ಯಾಪಿಸಿದೆ. ಆರು ಸಾವಿರ ಚದರು ಕಿಲೋ ಮೀಟರ್ ಪ್ರದೇಶವನ್ನು ಆಕ್ರಮಿಸಿರುವ ಕಾಯಿಲೆ ಪ್ರತಿವರ್ಷದ ಬೇಸಗೆಯಲ್ಲಿ ಮರುಕಳಿಸುತ್ತಿದ್ದು, ಪ್ರತಿವರ್ಷ ನೂರರಷ್ಟು ಬಲಿ ತೆಗೆದುಕೊಂಡು, ಒಂದೆರಡು ಸಾವಿರ ಜನರನ್ನು ಪೀಡಿಸುತ್ತಿದೆ.