Shravana 2023: ಮಳೆ ಸಿಂಚನದಲ್ಲಿಯೂ ಶ್ರೀ ಶರಣಬಸವೇಶ್ವರ ದೇವರ ದರ್ಶನ ಪಡೆದ ಭಕ್ತರು
Sep 04, 2023 08:43 PM IST
ಶ್ರೀ ಶರಣಬಸವೇಶ್ವರ ದೇವರ ದರ್ಶನ ಪಡೆದ ಭಕ್ತರು
- Sharana Basaveshwara Temple: ಶ್ರಾವಣ ಮಾಸ ತಿಂಗಳಲ್ಲಿ ಪ್ರತಿ ಸೋಮವಾರ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಶರಣಬಸವೇಶ್ವರ ದೇವರಿಗೆ ವಿಶೇಷ ಅಲಂಕಾರ ಮತ್ತು ಪೂಜೆ ಮಾಡಲಾಗುತ್ತದೆ. ಪ್ರತಿ ಸೋಮವಾರ ಸಂಜೆ ವೇಳೆ ಪಲ್ಲಕ್ಕಿ ಉತ್ಸವ ನಡೆಯುತ್ತದೆ.
ಕಲಬುರಗಿ: ಶ್ರಾವಣ ಮೂರನೇ ಸೋಮವಾರ ನಗರದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಭಕ್ತರ ದಂಡು ಆಗಮಿಸುತ್ತಿದೆ. ಜಿಟಿ ಜಿಟಿ ಮಳೆಯ ಸಿಂಚನದಲ್ಲಿಯೂ ಭಕ್ತರ ಸಂಖ್ಯೆ ಕಡಿಮೆ ಆಗಿಲ್ಲ. ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿರುವುದು ಕಂಡು ಬಂತು.
ಶ್ರಾವಣ ಮಾಸ ತಿಂಗಳಲ್ಲಿ ಪ್ರತಿ ಸೋಮವಾರ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಶರಣಬಸವೇಶ್ವರ ದೇವರಿಗೆ ವಿಶೇಷ ಅಲಂಕಾರ ಮತ್ತು ಪೂಜೆ ಮಾಡಲಾಗುತ್ತದೆ. ಪ್ರತಿ ಸೋಮವಾರ ಸಂಜೆ ವೇಳೆ ಪಲ್ಲಕ್ಕಿ ಉತ್ಸವ ನಡೆಯುತ್ತದೆ.
ಅದರಲ್ಲೂ ಶ್ರಾವಣ ಮೂರನೇ ಸೋಮವಾರ ಜಿಲ್ಲೆ ಸೇರಿದಂತೆ ಪಕ್ಕದ ಜಿಲ್ಲೆಯ ಯಾದಗಿರಿ, ರಾಯಚೂರು, ಬೀದರ್ ಜಿಲ್ಲೆಗಳಿಂದ ಭಕ್ತರು ಬಸ್, ಇತರ ವಾಹನಗಳ ಮೂಲಕ ಬಂದು ದೇವರ ದರ್ಶನ ಪಡೆಯುತ್ತಿರುವುದು ಕಂಡು ಬಂತು.
ಶಕ್ತಿ ಯೋಜನೆಯಿಂದ ಉಚಿತ ಬಸ್ ಸೌಲಭ್ಯ ಇರುವುದರಿಂದ ಮಹಿಳೆಯರು ವಿವಿಧ ಗ್ರಾಮಗಳಿಗೆ ಬಸ್ ಮೂಲಕ ದೇವಸ್ಥಾನಕ್ಕೆ ಬರುತ್ತಿರುವುದು ಮತ್ತು ಸಾವಿರಾರು ಪಾದಯಾತ್ರಿಗಳು ಭಜನೆ ಮಾಡುತ್ತ ದೇವಸ್ಥಾನಕ್ಕೆ ವಿವಿಧ ಆಹಾರ ಧಾನ್ಯ ಅರ್ಪಣೆ ಮಾಡಿ ಭಕ್ತಿ ಪರಾಕಾಷ್ಟೆ ಮೆರೆದರು.
ಕಲಬುರಗಿ ಜಿಲ್ಲೆಯ ಭಕ್ತರ ಆರಾಧ್ಯ ದೈವವೆಂದೆ ಖ್ಯಾತಿ ಪಡೆದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮೂರನೇ ಸೋಮವಾರ ಸಂಜೆ ದೇವರ ಪಲ್ಲಕ್ಕಿ ಉತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಸರಕಾರಿ, ಖಾಸಗಿ ಶಾಲಾ-ಕಾಲೇಜಿಗಳಿಗೆ ಮತ್ತು ಕೆಲವು ಖಾಸಗಿ ಸಂಸ್ಥೆಗಳಿಗೆ ರಜೆ ನೀಡಿರುವುದರಿಂದ ಎಲ್ಲರ ಮನೆಯಲ್ಲಿ ಹಬ್ಬದ ವಾತಾವರಣ. ಹೊಸ ಬಟ್ಟೆ ಧರಿಸಿಕೊಂಡು ಹೊಳಿಗೆ ನೈವೈದ್ಯದೊಂದಿಗೆ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ನೈವೈದ್ಯ ಅರ್ಪಿಸಿದರು.
ಮಳೆಯ ನಡೆವೆಯೂ ಭಕ್ತರು ಆಟೋ, ಕಾರುಗಳಲ್ಲಿ ಬಂದು ದರ್ಶನ ಪಡೆದರೆ, ಇನ್ನೂ ಸಾವಿರಾರು ಭಕ್ತರು ಕೊಡೆಗಳ ಆಶ್ರಯ ಪಡೆದು ದೇವಸ್ಥಾನಕ್ಕೆ ಬಂದು ದರ್ಶನ ಪಡೆದುಕೊಂಡು ಪುನೀತರಾದರು. ಹಲವಾರು ಭಕ್ತರು ಉಪವಾಸ ವೃತಾಚರಣೆ ಮಾಡಿ ದೇವಸ್ಥಾನಕ್ಕೆ ಬಂದು ಭಕ್ತಿ ಭಾವದಿಂದ ದೇವರನ್ನು ಮನದಲ್ಲಿ ಸ್ಮರಿಸಿ ಸಂಜೆ ದೇವರ ಪಲ್ಲಕ್ಕಿ ಉತ್ಸವದ ಬಳಿಕ ಪ್ರಸಾದ ಸ್ವೀಕರಿಸುವುದು ವಾಡಿಕೆ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನದಲ್ಲಿಯೇ ಕುಳಿತು ದೇವರ ಜ್ಞಾನ ಮಾಡುತ್ತಿರುವುದು ಕಂಡು ಬಂತು.
ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ